• ಮಹೇಶ್ ಪುಚ್ಚಪ್ಪಾಡಿ

ಪರಿಶುದ್ಧ ಜೇನು ಎಲ್ಲಿದೆ? ಈ ಪ್ರಶ್ನೆಯೊಳಗೆ ಹೊಕ್ಕು ಹುಡುಕುತ್ತಾ ಹೋದರೆ, ಇಂದು ನಾವು ‘ಕಾಡಿನ ಒಳಗೆ’ ಸಾಗಬೇಕಾದ ಸ್ಥಿತಿ ಇದೆ. ಕಾಡು ಎಂದಾಕ್ಷಣ ಪ್ರವಾಸೋದ್ಯಮ ನೆನಪಾಗುತ್ತದೆ. ಹಾಗಿದ್ದರೆ ಜೇನು ಮತ್ತು ಪ್ರವಾಸೋದ್ಯಮವನ್ನು ಬೆಸೆಯಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯ. ಈ ಸಂಬಂಧ ಬೆಸೆದುಕೊಂಡರೆ ಕೃಷಿ ಪ್ರವಾಸೋದ್ಯಮ ಬೆಳೆಯುವುದರ ಜತೆಗೆ ಜೇನು ಕೃಷಿಗೂ ಹೊಸ ಮಾರುಕಟ್ಟೆ ಸಿಗಬಹುದು.

ಇದನ್ನೂ ಓದಿ: ಸ್ವಾತಂತ್ರ್ಯದ ಹಳಿಗಳಲ್ಲಿ ಸಾಗುವ ಪ್ರವಾಸ…

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಸಂಪಾಜೆ ಸಮೀಪದ ದೇವರಕೊಲ್ಲಿಯಲ್ಲಿ ವಸುಧಾ ಖಾಸಗಿ ಜೇನು ನರ್ಸರಿ ಇದೆ. ಇದರ ಮಾಲೀಕ ಸುಬ್ರಹ್ಮಣ್ಯ ಭಟ್. ಇಲ್ಲಿನ ವಸುಧಾ ಕ್ಯಾಂಟೀನ್ ಕೂಡ ಗಮನಸೆಳೆಯುತ್ತದೆ. ಒಂದು ಸಣ್ಣ ಕ್ಯಾಂಟೀನ್ ಜನರನ್ನು ಹೇಗೆ ಸೆಳೆಯಬಹುದು ಎಂಬುದಕ್ಕೆ ಇದು ಉದಾಹರಣೆ. ಇಲ್ಲಿ ಜೇನು ಲಭ್ಯವಿದ್ದು, ಗ್ರಾಹಕರು ಬಂದಾಗ ಅವರ ಎದುರೇ ಜೇನು ಪೆಟ್ಟಿಗೆಯಿಂದ ಜೇನು ತೆಗೆದು ನೀಡಲಾಗುತ್ತದೆ.
ಇಂದು ಜಗತ್ತಿನೆಲ್ಲೆಡೆ ಕಲಬೆರಕೆಯದ್ದೇ ಚರ್ಚೆ. ಇಂಥ ಸಂದರ್ಭದಲ್ಲಿ ಗ್ರಾಹಕರ ಕಣ್ಣೆದುರೇ ಜೇನು ಪೆಟ್ಟಿಗೆಯಿಂದ ಜೇನು ತೆಗೆದು ನೀಡುವುದು ವಿಶ್ವಾಸ ಮೂಡಿಸುವ ಸರಳ ವಿಧಾನ. ಖರೀದಿದಾರನಿಗೆ ಜೇನು ಉತ್ಪಾದನೆಯ ಪ್ರಕ್ರಿಯೆಯೊಂದಿಗೆ ನೇರ ಸಂಪರ್ಕ ಸಿಗುತ್ತದೆ. ಇಲ್ಲಿಂದಲೇ ಜೇನು ಕೃಷಿ ಮತ್ತು ಪ್ರವಾಸೋದ್ಯಮದ ಸಂಬಂಧದ ಒಂದು ಮಾದರಿಯನ್ನು ನೋಡಬಹುದು.

Untitled design (89)

ದಕ್ಷಿಣಕನ್ನಡದ ಜೇನು ಕೃಷಿಯ ಸಾಧ್ಯತೆಗೆ ಇಲ್ಲಿನ ಹವಾಮಾನವೂ ಪ್ರಮುಖ ಕಾರಣ. ಕರಾವಳಿ ಮತ್ತು ಮಲೆನಾಡಿನ ತಪ್ಪಲು ಪ್ರದೇಶಗಳ ಹಸಿರು ವಾತಾವರಣ, ವಿವಿಧ ಜಾತಿಯ ಮರಗಳು ಹಾಗೂ ಅವುಗಳ ಹೂ ಬಿಡುವ ಕಾಲ ಜೇನು ಕೃಷಿಗೆ ಅನುಕೂಲಕರವಾಗಿದೆ.
ನೇರಳೆ, ಅಡಿಕೆ, ರಬ್ಬರ್, ಚೇರೆ ಸೇರಿದಂತೆ ಹಲವು ಮರಗಳ ಹೂವುಗಳು ಜೇನುನೊಣಗಳಿಗೆ ಮಕರಂದದ ಪ್ರಮುಖ ಮೂಲವಾಗುತ್ತವೆ. ಒಂದು ಪ್ರದೇಶದಲ್ಲಿ ವಿವಿಧ ಮರಗಳು ಮತ್ತು ಬೆಳೆಗಳು ಬೇರೆ ಬೇರೆ ಅವಧಿಯಲ್ಲಿ ಹೂ ಬಿಡುವುದರಿಂದ ಜೇನುನೊಣಗಳಿಗೆ ನಿರಂತರವಾಗಿ ಆಹಾರ ಲಭ್ಯವಾಗುವ ಅವಕಾಶವೂ ಇದೆ.

ಇದೇ ಕಾರಣದಿಂದ ದಕ್ಷಿಣಕನ್ನಡ ಮತ್ತು ಮಲೆನಾಡಿನ ತಪ್ಪಲು ಪ್ರದೇಶಗಳು ಸ್ಥಳಾಂತರ ಜೇನು ಕೃಷಿಗೂ ಆಕರ್ಷಣೆಯಾಗಿವೆ. ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ಜೇನು ಸಾಕಾಣಿಕೆದಾರರು ಮರಗಳು ಹೂ ಬಿಡುವ ಸಮಯವನ್ನು ಗಮನಿಸಿ ಈ ಭಾಗಗಳಿಗೆ ಆಗಮಿಸುತ್ತಾರೆ. ಪ್ರತೀ ವರ್ಷ ಹತ್ತಾರು ಮಂದಿ ತಮ್ಮ ಜೇನು ಪೆಟ್ಟಿಗೆಗಳೊಂದಿಗೆ ಇಲ್ಲಿಗೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಜೇನು ಸಂಗ್ರಹಿಸುತ್ತಾರೆ. ಈ ಮೂಲಕ ಉತ್ತಮ ಆದಾಯಗಳಿಸುವವರೂ ಇದ್ದಾರೆ.

ಸ್ಥಳಾಂತರ ಜೇನು ಕೃಷಿಯ ಈ ಚಟುವಟಿಕೆ ಜೇನು ಉತ್ಪಾದನೆಯಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಯೊಂದಿಗೂ ಸಂಬಂಧ ಹೊಂದಿದೆ. ಇದೇ ಮಾದರಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸ್ಥಳೀಯ ಜೇನು ಸಾಕಾಣಿಕೆದಾರರೂ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಜೇನು ಸಂಗ್ರಹಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಜೇನು ಕೃಷಿ ಬೆಳೆಯುತ್ತಿದ್ದಂತೆ ಜೇನುನೊಣಗಳು, ಜೇನು ಪೆಟ್ಟಿಗೆಗಳು ಮತ್ತು ಸಂಬಂಧಿತ ಉಪಕರಣಗಳ ಮಾರಾಟವೂ ಒಂದು ಉದ್ಯೋಗವಾಗಿ ರೂಪುಗೊಳ್ಳುತ್ತಿದೆ.

Untitled design (88)

ಹೀಗಾಗಿ ಜೇನು ಕೃಷಿಯ ಸುತ್ತಲೂ ಜೇನು ಉತ್ಪಾದನೆಯಷ್ಟೇ ಅಲ್ಲದೆ, ಪೆಟ್ಟಿಗೆ ತಯಾರಿಕೆ, ಜೇನುನೊಣಗಳ ವಸಾಹತುಗಳು ಮತ್ತು ಜೇನು ಪೆಟ್ಟಿಗೆಗಳ ಮಾರಾಟ, ಜೇನು ಸಂಗ್ರಹ, ಸಂಸ್ಕರಣೆ, ಪ್ಯಾಕಿಂಗ್ ಮತ್ತು ಮಾರುಕಟ್ಟೆಯವರೆಗೆ ಹಲವು ಸಣ್ಣ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ದಕ್ಷಿಣಕನ್ನಡ ಅಥವಾ ಮಲೆನಾಡಿನ ತಪ್ಪಲಿನ ಭಾಗ ಎಂದರೆ ಸಮುದ್ರ, ಕಡಲತೀರ, ದೇವಾಲಯ, ಕಂಬಳ, ಯಕ್ಷಗಾನ, ಭೂತಾರಾಧನೆ ಮಾತ್ರವಲ್ಲ. ಪಶ್ಚಿಮಘಟ್ಟದ ತಪ್ಪಲಿನಿಂದ ಕರಾವಳಿಯವರೆಗೆ ಹರಡಿರುವ ಹಸಿರು ಕೃಷಿಭೂಮಿ, ಅಡಿಕೆ– ತೆಂಗು– ಕಾಳುಮೆಣಸು– ಕೊಕ್ಕೊದ ತೋಟಗಳು, ಕಾಡು ಮತ್ತು ಜೀವವೈವಿಧ್ಯವೂ ಜಿಲ್ಲೆಯ ಪ್ರಮುಖ ಆಸ್ತಿಗಳು. ಈ ಪ್ರಕೃತಿ ಸಂಪತ್ತಿನ ನಡುವೆ ಬೆಳೆಯುತ್ತಿರುವ ಜೇನು ಕೃಷಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿದರೆ ರೈತರಿಗೆ ಹೆಚ್ಚುವರಿ ಆದಾಯದ ಹೊಸ ದಾರಿ ತೆರೆಯಬಹುದು.

ಒಬ್ಬ ರೈತ ತನ್ನ ಅಡಿಕೆ ತೋಟದ ನಡುವೆ ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದರೆ, ಪ್ರವಾಸಿಗರಿಗೆ ಜೇನುನೊಣಗಳ ಜೀವನ, ಜೇನು ಸಂಗ್ರಹಿಸುವ ವಿಧಾನ, ಜೇನು ತೆಗೆಯುವ ಪ್ರಕ್ರಿಯೆ, ಜೇನುತುಪ್ಪದ ಗುಣಮಟ್ಟ ಮತ್ತು ಕೃಷಿಯಲ್ಲಿ ಪರಾಗಸ್ಪರ್ಶದ ಮಹತ್ವವನ್ನು ನೇರವಾಗಿ ತೋರಿಸಬಹುದು. ಮಕ್ಕಳಿಗೆ ಇದು ಕಲಿಕಾ ಅನುಭವ; ವಿದ್ಯಾರ್ಥಿಗಳಿಗೆ ಕೃಷಿ– ಪರಿಸರ ಅಧ್ಯಯನ; ನಗರ ಕುಟುಂಬಗಳಿಗೆ ಗ್ರಾಮೀಣ ಬದುಕಿನ ಪರಿಚಯ.
ದಕ್ಷಿಣಕನ್ನಡದಲ್ಲಿ ಜೇನು ಸಾಕಾಣಿಕೆ ಹೊಸದಲ್ಲ. ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಉತ್ಪಾದನೆ ಮಾಡುತ್ತಿದ್ದಾರೆ. 2022ರಲ್ಲಿ ಜಿಲ್ಲೆಯ ಐದು ತಾಲೂಕುಗಳ 60 ಜೇನು ಸಾಕಾಣಿಕೆದಾರರನ್ನು ಒಳಗೊಂಡ ಅಧ್ಯಯನವೂ ನಡೆದಿದ್ದು, ಕರಾವಳಿ ವಲಯದಲ್ಲಿ ಜೇನು ಸಾಕಾಣಿಕೆಯ ಅವಕಾಶಗಳತ್ತ ಗಮನ ಸೆಳೆದಿದೆ.
2026ರ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ನೀಡಿದ ಕೇಂದ್ರ ಸರಕಾರದ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಜೇನು ಮಂಡಳಿಯ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ಯೋಜನೆಗೆ ಅನುಮೋದನೆ ದೊರೆತಿದ್ದು, ಸುಮಾರು 2,500 ರೈತರು ಹಾಗೂ ಜೇನು ಸಾಕಾಣಿಕೆದಾರರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವೈಜ್ಞಾನಿಕ ಜೇನು ಸಾಕಾಣಿಕೆಯನ್ನು ಉತ್ತೇಜಿಸುವ ರಾಷ್ಟ್ರೀಯ ಜೇನು ಸಾಕಾಣಿಕೆ ಮತ್ತು ಜೇನು ಮಿಷನ್ ಅಡಿಯಲ್ಲಿ ದೇಶಾದ್ಯಂತ ಯೋಜನೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಜೇನು ಕೃಷಿಯನ್ನು ‘ತೋಟದಿಂದ ಜೇನು ಬಾಟಲಿಗೆ’ ಎಂಬ ಪ್ರವಾಸಿ ಅನುಭವವನ್ನಾಗಿ ರೂಪಿಸಬಹುದು. ಪ್ರವಾಸಿಗರು ತೋಟಕ್ಕೆ ಭೇಟಿ ನೀಡಿ, ಜೇನು ಸಂಗ್ರಹಿಸುವುದನ್ನು ವೀಕ್ಷಿಸಿ, ಶುದ್ಧೀಕರಣ ಮತ್ತು ಪ್ಯಾಕಿಂಗ್ ಪ್ರಕ್ರಿಯೆ ತಿಳಿದುಕೊಂಡು, ಅಲ್ಲಿಯೇ ಜೇನುತುಪ್ಪ, ಜೇನುಮೇಣದ ಉತ್ಪನ್ನಗಳು ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಹೀಗೆ ಪ್ರವಾಸಿಗನ ಖರ್ಚಿನ ಒಂದು ಭಾಗ ನೇರವಾಗಿ ರೈತನ ಕೈಗೆ ಸೇರುತ್ತದೆ.

Untitled design (87)

ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೆಲವು ಕುಟುಂಬಗಳು ಕಾಡು ಜೇನು ಸಂಗ್ರಹಿಸಿ ಜೀವನೋಪಾಯ ಕಂಡುಕೊಂಡಿರುವ ಉದಾಹರಣೆಯೂ ಇದೆ. 2026ರ ವರದಿಯೊಂದರ ಪ್ರಕಾರ, ಜೇನುನೊಣಗಳನ್ನು ಕೊಲ್ಲದೆ ಸುಸ್ಥಿರ ರೀತಿಯಲ್ಲಿ ಜೇನು ಸಂಗ್ರಹಿಸಿ ಮಾರುಕಟ್ಟೆ ಮಾಡುತ್ತಿರುವ ಈ ಕುಟುಂಬಗಳ ಉತ್ಪನ್ನಗಳು ಗಲ್ಫ್ ದೇಶಗಳಿಗೂ ತಲುಪುತ್ತಿವೆ. ಇಂಥ ಸ್ಥಳೀಯ ಜ್ಞಾನ ಮತ್ತು ಅನುಭವವನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿದರೆ ‘ಜೇನು ಮತ್ತು ಕಾಡಿನ ಅನುಭವ’, ‘ರೈತನ ತೋಟದ ಒಂದು ದಿನ’ ಮತ್ತಿತರ ಪ್ರವಾಸ ಕಾರ್ಯಕ್ರಮಗಳಿಗೂ ಅವಕಾಶವಿದೆ.

ರೈತರು, ಜೇನು ಸಾಕಾಣಿಕೆದಾರರು, ಕೃಷಿ– ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದರೆ, ದಕ್ಷಿಣಕನ್ನಡದಲ್ಲಿ ‘ಜೇನು ಕೃಷಿ ಪ್ರವಾಸೋದ್ಯಮ’ ವಿಶಿಷ್ಟ ಗ್ರಾಮೀಣ ಆರ್ಥಿಕ ಮಾದರಿಯಾಗಬಹುದು.

ಜೇನುನೊಣಗಳು ಕೇವಲ ಜೇನು ನೀಡುವುದಿಲ್ಲ; ಕೃಷಿಯ ಉತ್ಪಾದಕತೆ, ಪರಿಸರ ಮತ್ತು ಜೀವವೈವಿಧ್ಯಕ್ಕೂ ಅವುಗಳ ಕೊಡುಗೆ ಇದೆ. ಹೀಗಾಗಿ ಒಂದು ಜೇನು ಪೆಟ್ಟಿಗೆ ಕೇವಲ ರೈತನ ಆದಾಯದ ಸಾಧನವಲ್ಲ; ಅದು ಕೃಷಿ, ಪ್ರಕೃತಿ ಮತ್ತು ಪ್ರವಾಸೋದ್ಯಮವನ್ನು ಒಂದೇ ಹಾದಿಯಲ್ಲಿ ಕೊಂಡೊಯ್ಯುವ ಪುಟ್ಟ ದಾರಿಯೂ ಆಗಬಹುದು.

ಲೇಖಕರು: ಕೃಷಿಕ, ಕೃಷಿ ಬರಹಗಾರ