ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಈ ಸಂಘರ್ಷಗಳ ನಡುವೆಯೇ ಮಾನವೀಯತೆಯ ಅಪರೂಪದ ಕಥೆಗಳು ಹೊರಹೊಮ್ಮುತ್ತವೆ. ಅಂಥ ಸ್ಪೂರ್ತಿದಾಯಕ ಕಥೆಯೊಂದರ ನಾಯಕಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ 48 ವರ್ಷದ ಶುಶ್ರೂಷಕಿ ಸಾವಿತ್ರಮ್ಮ. ಅನಾಥವಾಗಿರುವ ಚಿರತೆ ಮರಿಗಳು, ಸಿಂಹದ ಮರಿಗಳಿಗೆ ಅವರು ಬರಿಯ ಆರೈಕೆ ಮಾಡುವವರಾಗಿ ಮಾತ್ರ ಉಳಿಯದೆ, ತಾಯಿಯ ಪ್ರೀತಿ, ಕಾಳಜಿ ಮತ್ತು ಭದ್ರತೆ ಅಪ್ಪುಗೆ ನೀಡಿದ್ದಾರೆ.

ಇದನ್ನೂ ಓದಿ: ಮಿಯಾಂವ್‌.. ಮಿಯಾಂವ್‌ ಬೆಕ್ಕೆ ಕದ್ದು ಹಾಲು ನೆಕ್ಕೆ!

2002ರಲ್ಲಿ ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸಾವಿತ್ರಮ್ಮ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಉದ್ಯೋಗಕ್ಕೆ ಸೇರಿದರು. ಆರಂಭದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅವರು, ಪ್ರಾಣಿಗಳೊಂದಿಗೆ ಸಹಜವಾಗಿ ಬೆರೆಯುವ ಗುಣವನ್ನು ಗಮನಿಸಿದ ಅಧಿಕಾರಿಗಳು ಅವರನ್ನು ನಂತರ ಪ್ರಾಣಿಸಂಗ್ರಹಾಲಯದ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ನೇಮಿಕ ಮಾಡಿಕೊಂಡರು. ಅಲ್ಲಿಂದ ಆರಂಭವಾದ ಅವರ ಬದುಕಿನ ಹೊಸ ಅಧ್ಯಾಯ ಇಂದು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.

ಮಮತೆಯ ಕಡಲು…

ಸಾಮಾನ್ಯವಾಗಿ ಸಿಂಹಗಳೆಂದರೆ ಎಲ್ಲರಲ್ಲೂ ಭಯ ಹುಟ್ಟಿಸುವ ಪ್ರಾಣಿಗಳಾಗಿಯೇ ಗುರುತಿಸಿಕೊಂಡಿವೆ. ಎಷ್ಟೇ ಮುದ್ದಾಗಿ ಕಂಡರೂ ಆ ವನ್ಯ ಜೀವಿಗಳ ಬಗೆಗಿನ ಆತಂಕ ಮಾತ್ರ ಕಡಿಮೆಯಾಗುವುದಿಲ್ಲ. ಆದರೆ ಸಾವಿತ್ರಮ್ಮ ವನ್ಯ ಜೀವಿಗಳ ಬಗೆಗೆ ಎಂದಿಗೂ ಭಯ ಪಟ್ಟುಕೊಂಡವರಲ್ಲ. ಆ ಅನಾಥ ಮರಿಗಳ ಆರೈಕೆಯನ್ನು ತಾಯಿಯ ಮಮತೆಯಿಂದಲೇ ಮಾಡುತ್ತಾರೆ. ಮರಿಗಳಿಗೆ ಸಮಯಕ್ಕೆ ಸರಿಯಾಗಿ ಹಾಲುಣಿಸುವುದು, ದೇಹಕ್ಕೆ ಮಸಾಜ್ ಮಾಡುವುದು, ಮಲಗಿಸುವುದು ಹಾಗೂ ಆರೋಗ್ಯದ ಮೇಲೆ ನಿಗಾ ಇಡುವುದು ಅವರ ದೈನಂದಿನ ಕೆಲಸ. ಅವರು ಪಂಜರದೊಳಗೆ ಕಾಲಿಟ್ಟ ಕೂಡಲೇ ಪುಟ್ಟ ಚಿರತೆ ಹಾಗೂ ಸಿಂಹದ ಮರಿಗಳು ಓಡಿಬಂದು ಅವರನ್ನು ಸುತ್ತುವರಿದು ಬಿಗಿಯಾಗಿ ಅಪ್ಪಿಕೊಳ್ಳುವುದನ್ನು ನೋಡುವುದೇ ಖುಷಿ.

Untitled design (91)

ಸಿಂಹ, ಹುಲಿ, ಚಿರತೆ ಮರಿಗಳ ಜೀವನದ ಮೊದಲ ಆರು ತಿಂಗಳು ಅತ್ಯಂತ ಮಹತ್ವದ್ದಾಗಿರುತ್ತವೆ. ಇದೇ ಅವಧಿಯಲ್ಲಿ ಅವುಗಳಿಗೆ ಸೂಕ್ತ ಆಹಾರ, ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆ ದೊರೆಯಬೇಕು. ನಂತರ ಅವುಗಳನ್ನು ಸಫಾರಿ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಆದರೆ ಈ ವಿದಾಯದ ಕ್ಷಣ ಸಾವಿತ್ರಮ್ಮಗೆ ಅತ್ಯಂತ ನೋವಿನದು. ಹಲವು ತಿಂಗಳುಗಳ ಕಾಲ ತನ್ನ ಮಕ್ಕಳಂತೆ ಬೆಳೆಸಿದ ಮರಿಗಳನ್ನು ಬಿಡುವಾಗ ಅವರಿಗೆ ಕಣ್ಣೀರು ಬರುತ್ತದೆ.

ಸುಮಾರು 731 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕರ್ನಾಟಕದ ಪ್ರಮುಖ ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿದೆ. ಇಲ್ಲಿ 102ಕ್ಕೂ ಹೆಚ್ಚು ಪ್ರಭೇದಗಳಿಗೆ ಸೇರಿದ ಸುಮಾರು 2,300 ಪ್ರಾಣಿಗಳು ಆಶ್ರಯ ಪಡೆದಿವೆ. ಇವುಗಳಲ್ಲಿ ಅನೇಕ ಪ್ರಾಣಿಗಳು ಅಪಘಾತ, ಬೇಟೆ, ಮಾನವ-ವನ್ಯಜೀವಿ ಸಂಘರ್ಷ ಅಥವಾ ತಾಯಿಯನ್ನು ಕಳೆದುಕೊಂಡಂತಹ ಸಂಕಷ್ಟಗಳಿಂದ ರಕ್ಷಿಸಲ್ಪಟ್ಟು ಪುನರ್ವಸತಿಗಾಗಿ ಇಲ್ಲಿಗೆ ತರಲಾಗಿವೆ.

ಸಾವಿತ್ರಮ್ಮ ಇದುವರೆಗೆ ಸುಮಾರು 80ಕ್ಕೂ ಹೆಚ್ಚು ವಿವಿಧ ವನ್ಯಜೀವಿಗಳ ಮರಿಗಳನ್ನು ಆರೈಕೆ ಮಾಡಿ ಬೆಳೆಸಿದ್ದಾರೆ. ಅವರ ನಿಸ್ವಾರ್ಥ ಸೇವೆ, ಪಶುವೈದ್ಯರ ಪರಿಣತಿ ಮತ್ತು ಇಡೀ ತಂಡದ ಶ್ರಮದಿಂದಾಗಿ ಇಂದು ಕರ್ನಾಟಕದ ವಿವಿಧ ಭಾಗಗಳಿಂದ ರಕ್ಷಿಸಲ್ಪಟ್ಟ ಅನೇಕ ಪ್ರಾಣಿಗಳನ್ನು ಬನ್ನೇರುಘಟ್ಟಕ್ಕೆ ಪುನರ್ವಸತಿಗಾಗಿ ತರಲಾಗುತ್ತಿದೆ.

ಸಾವಿತ್ರಮ್ಮ ಅವರ ಜೀವನ ನಮಗೆ ಒಂದು ಅಮೂಲ್ಯ ಪಾಠ ಕಲಿಸುತ್ತದೆ. ಪ್ರಾಣಿಗಳಿಗೆ ಬೇಕಾಗಿರುವುದು ಕೇವಲ ಆಹಾರ ಅಥವಾ ಚಿಕಿತ್ಸೆ ಮಾತ್ರವಲ್ಲ. ಪ್ರೀತಿ, ತಾಳ್ಮೆ ಮತ್ತು ಮಮತೆಯೂ ಅಷ್ಟೇ ಮುಖ್ಯ ಎಂಬ ಅರಿವನ್ನು ಬಿತ್ತುತ್ತದೆ. ಮಾತಿಲ್ಲದ ಜೀವಿಗಳೊಂದಿಗೆ ಅವರು ಬೆಳೆಸಿಕೊಂಡಿರುವ ಬಾಂಧವ್ಯ, ಮಾನವೀಯತೆಯ ಬಂಧ ಎಂಥವರನ್ನೂ ಬೆರಗಾಗಿಸುತ್ತದೆ.

Untitled design (92)

ವನ್ಯಜೀವಿ ಸಂರಕ್ಷಣೆ ಎಂದರೆ ಕೇವಲ ಅರಣ್ಯಗಳನ್ನು ಉಳಿಸುವುದಷ್ಟೇ ಅಂದುಕೊಂಡರೆ ಅದು ತಪ್ಪು ತಿಳುವಳಿಕೆ. ವನ್ಯಜೀವಿಗಳ ಬದುಕನ್ನು ಕಾಪಾಡುವ ಇಂಥ ಎಲೆಮರೆಯ ಸೇವಕರನ್ನು ಗುರುತಿಸಿ ಗೌರವಿಸುವುದೂ ಹೌದು.

--

ನಮ್ಮ ಮಕ್ಕಳಾದರೆ ಆರೋಗ್ಯ ಸಮಸ್ಯೆಯಾಗಲಿ, ಏನೇ ತೊಂದರೆಯಾದರೂ ನಮ್ಮ ಬಳಿ ಹೇಳಿಕೊಳ್ಳುತ್ತವೆ. ಆದರೆ ಈ ಮೂಕ ಪ್ರಾಣಿಗಳಿಗೆ ಯಾವುದನ್ನೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವುಗಳ ಚಟುವಟಿಕೆಗಳಿಂದಲೇ ನಾವು ಎಲ್ಲವನ್ನೂ ಅರ್ಥೈಸಿಕೊಳ್ಳಬೇಕಾಗುತ್ತದೆ. ಈ ವರೆಗೂ 80ಕ್ಕೂ ಹೆಚ್ಚು ವಿವಿಧ ವನ್ಯಜೀವಿಗಳ ಮರಿಗಳನ್ನು ಆರೈಕೆ ಮಾಡಿದ್ದೇನೆ. ಮಕ್ಕಳಂತೆ ನೋಡಿಕೊಂಡಿದ್ದೇನೆ. ಆದರೆ ಆರೈಕೆಯ ನಂತರ ಅವುಗಳನ್ನು ಬೇರೆಡೆಗೆ ಕಳುಹಿಸುವ ದಿನ ನಾನು ಆ ಕಡೆಗೆ ಹೋಗುವುದೇ ಇಲ್ಲ. ಅವುಗಳನ್ನು ಅಲ್ಲಿಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ ಎಂಬ ಆತಂಕ ನನ್ನನ್ನು ಕಾಡುತ್ತದೆ.

- ಸಾವಿತ್ರಮ್ಮ, ವನ್ಯಜೀವಿಗಳ ಶುಶ್ರೂಷಕಿ