ಪ್ರತಿಯೊಬ್ಬನ ಮೊದಲ ಕನಸಿನ ತಾಣ ಈ ಚಂದಿರ
ಒಮ್ಮೆಯಾದರೂ ಚಂದಿರನ ಮೇಲೆ ಪ್ರವಾಸ ಹೋಗಬೇಕು ಎಂದು ಕನಸು ಕಾಣದ ವ್ಯಕ್ತಿ ಯಾರಿದ್ದಾರೆ! ಚಿಕ್ಕಮಕ್ಕಳಿದ್ದಾಗ ಊಟ ಮಾಡಿಸುವಾಗ ಅಮ್ಮ ಹೇಳುವ ಚಂದಮಾಮನ ಕಥೆ ಕೇಳಿದಾಗ, ಸಂಗಾತಿ ಜತೆ ಕುಳಿತು ಫ್ಯಾಂಟಸಿ ಕನಸು ಕಾಣುವಾಗ ಅಥವಾ ಪ್ರಪಂಚವನ್ನು ದೂರದಿಂದ ನೋಡಬೇಕು ಎಂದುಕೊಂಡಾಗೆಲ್ಲಾ ಒಮ್ಮೆಯಾದರೂ ಚಂದಿರನ ಮೇಲೆ ಪ್ರವಾಸ ಹೋದರೆ ಹೇಗಿರಬಹುದು ಅಥವಾ ಅಲ್ಲೊಂದು ಮನೆ ಮಾಡಿದರೆ ಎಷ್ಟು ಚೆಂದ ಎಂದು ಯೋಚಿಸಿರುತ್ತೇವೆ. ಜುಲೈ 20 ಅನ್ನು ಅಂತಾರಾಷ್ಟ್ರೀಯ ಚಂದ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ವಿಶೇಷವಾಗಿ ಈ ಲೇಖನ.
ಸಾವಿರಾರು ವರ್ಷಗಳಿಂದ, ಜಗತ್ತಿನ ಮೂಲೆ ಮೂಲೆಗಳ ಜನರು ರಾತ್ರಿಯ ಆಕಾಶದಲ್ಲಿ ಹೊಳೆಯುವ ಆ ಬೆಳ್ಳಿಯ ಚಂದರಿನನ್ನು ನೋಡುತ್ತಾ, ಅದರ ಆಚೆ ಏನಿರಬಹುದು ಎಂದು ಊಹಿಸುತ್ತಲೇ ಬಂದಿದ್ದೇವೆ. ಕವಿಗಳು ಅದರ ಬಗ್ಗೆ ಕವಿತೆ ಬರೆದರು, ನಾವಿಕರು ಅದರ ಬೆಳಕನ್ನು ನೋಡಿ ದಾರಿ ಕಂಡುಕೊಂಡರು, ವಿಜ್ಞಾನಿಗಳು ಅದರ ರಹಸ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಮಕ್ಕಳು ಅದನ್ನು ಮುಟ್ಟುವ ಕನಸು ಕಂಡರು. ಜಗತ್ತಿನ ಯಾರೊಬ್ಬರೂ ಭೇಟಿ ನೀಡಲು ಸಾಧ್ಯವಿಲ್ಲದ, ಆದರೆ ಪ್ರತಿಯೊಬ್ಬರಿಗೂ ಕಾಣಿಸುವ ಏಕೈಕ ತಾಣ ಅಂದರೆ ಅದು ಚಂದ್ರ ಮಾತ್ರವೇ ಆಗಿತ್ತು. ಆದರೆ ಒಂದು ದಿನ (ಜುಲೈ 20, 1969) ಆ ಕನಸು ನನಸಾಯಿತು. ಅಪೊಲೊ ಅಪೊಲೊ 11 ಮಿಷನ್ ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಗುರುತುಗಳನ್ನು ಮೂಡಿಸಿತು. ಈಗ ಎಲ್ಲ ಜಾಗವೂ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಹೀಗೇ ಮುಂದೊಂದು ದಿನ ಒಂದು ವೇಳೆ ಚಂದ್ರ ಸುಲಭವಾಗಿ ಭೇಟಿ ನೀಡಬಹುದಾದ ಪ್ರವಾಸಿ ತಾಣವಾಗಿದ್ದರೆ ಹೇಗಿರುತ್ತದೆ? ಬಹುಶಃ ಅದನ್ನೂ ಭೂಮಿಯಂತೆಯೇ ನೋಡಲು ಶುರು ಮಾಡಲಾಗುತ್ತದೆ. ಇಲ್ಲಿನ ತಾಣದ ಇನ್ನೊಂದು ರೂಪ ಆಗಬಹುದ ಅಷ್ಟೇ.
ಇದನ್ನೂ ಓದಿ: ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನ ಹರ್ಮಿಟೇಜ್ ಮ್ಯೂಸಿಯಂ : ಅಪೂರ್ವ ಕಲಾ ಖಜಾನೆ
ಡ್ಯೂಟಿ-ಫ್ರೀ ಶಾಪಿಂಗ್
ಭೂಮಿಯ ಮೇಲಿನ ಪ್ರವಾಸಿಗರು ಗೋವಾ ಅಥವಾ ದುಬೈನಿಂದ ಸ್ಮರಣಿಕೆಗಳನ್ನು ತರುವಂತೆ, ಚಂದ್ರನಿಗೆ ಹೋದವರು ಅಲ್ಲಿನ ಕಪ್ಪು ಮಣ್ಣು (Regolith) ಮತ್ತು ಸಣ್ಣ ಉಲ್ಕಾಶಿಲೆಗಳ ಚೂರುಗಳನ್ನು ಬಾಟಲಿಯಲ್ಲಿ ತುಂಬಿಸಿ ತರುತ್ತಿದ್ದರು. ʼಒರಿಜಿನಲ್ ಚಂದ್ರನ ಮಣ್ಣು ಮಾರಾಟಕ್ಕಿದೆʼ ಎಂಬ ಬೋರ್ಡ್‌ಗಳು ನಮ್ಮ ಗಲ್ಲಿ ಗಲ್ಲಿಯಲ್ಲೂ ಕಾಣಿಸುತ್ತಿದ್ದವು! ಇಲ್ಲಿ ಅವುಗಳನ್ನು ಡಬಲ್ ರೇಟ್‌ಗೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿರುತ್ತಿದ್ದವು.

ಲೋ-ಗ್ರಾವಿಟಿ ರೀಲ್ಸ್ ಹಾವಳಿ
ಚಂದ್ರನ ಮೇಲಿನ ಗುರುತ್ವಾಕರ್ಷಣೆ ಭೂಮಿಗಿಂತ ತುಂಬಾ ಕಡಿಮೆ ಇರುವುದರಿಂದ, ಅಲ್ಲಿ ಎಲ್ಲರೂ ತೇಲುತ್ತಿರುತ್ತಾರೆ. ʼನೋಡಿ ಫ್ರೆಂಡ್ಸ್, ನಾನು ಗಾಳಿಯಲ್ಲಿ ಸೂಪರ್‌ಮ್ಯಾನ್ ತರ ಹಾರುತ್ತಿದ್ದೇನೆʼ ಎಂದು ರೀಲ್ಸ್ ಮಾಡುವುದು ದೊಡ್ಡ ಟ್ರೆಂಡ್ ಆಗುತ್ತಿತ್ತು. ಕ್ರಿಕೆಟ್ ಆಡಿದರೆ ಸಿಕ್ಸ್ ಹೊಡೆದ ಬಾಲ್ ಬೌಂಡರಿ ಲೈನ್ ದಾಟುತ್ತಿತ್ತೋ ಇಲ್ಲವೋ ಎನ್ನುವುದನ್ನು ಬಲ್ಲವರೇ ಹೇಳಬೇಕು.
ಮೂನ್-ಲೈಟ್ ಡಿನ್ನರ್
ಭೂಮಿ ಮೇಲೆ ಕುಳಿತು 'ಕ್ಯಾಂಡಲ್ ಲೈಟ್ ಡಿನ್ನರ್' ಮಾಡುವುದು ಹಳೆಯ ಫ್ಯಾಷನ್ ಆಗಿಬಿಡುತ್ತಿತ್ತು. ಜನರು ಚಂದ್ರನ ಮೇಲಿನ ರೆಸ್ಟೋರೆಂಟ್‌ಗಳಲ್ಲಿ ಕುಳಿತು, ಎದುರಿಗೇ ನೀಲಿ ಬಣ್ಣದಲ್ಲಿ ಹೊಳೆಯುವ ನಮ್ಮ ಭೂಮಿಯನ್ನು ನೋಡುತ್ತಾ ಊಟ ಮಾಡುವುದನ್ನು ಇಷ್ಟಪಡುತ್ತಿದ್ದರು. ಆದರೆ ಸ್ಪೇಸ್ ಸೂಟ್ ಒಳಗಡೆಯೇ ಇಡ್ಲಿ-ವಡೆ ಹೇಗೆ ತಿನ್ನುವುದು ಎಂಬುದಕ್ಕೆ ತರಬೇತಿ ನೀಡಬೇಕಾದ ಸನ್ನಿವೇಶ ಎದುರಾಗುತ್ತಿತ್ತು.
ಇಲ್ಲಿ ಉಗುಳಬೇಡಿ ಎಂಬ ಬೋರ್ಡು
ಮಾನವರು ಹೋದ ಕಡೆಯಲ್ಲೆಲ್ಲಾ ಕಸ ಹಾಕುವುದು ಮಾಮೂಲು. ಚಂದ್ರನ ಮೇಲೂ ಲೇಸ್ ಪ್ಯಾಕೆಟ್, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೂಯಿಂಗ್ ಗಮ್‌ಗಳು ಕಾಣಸಿಗುತ್ತಿದ್ದವು. ಗುಟ್ಕಾ ಉಗಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಹೋದರೆ ʼರೆಡ್ ಮೂನ್ʼ ಕಾಣಿಸುವುದು ಸಹಜವಾಗಿಬಿಡುತ್ತಿತ್ತು. ಬಿಳಿ ಚಂದ್ರನ ಮೇಲೆ ಕಪ್ಪು ಅಕ್ಷರಗಳಲ್ಲಿ ʼಇಲ್ಲಿ ಕಸ ಹಾಕಬೇಡಿ, ಉಗುಳಬೇಡಿʼ ಎಂದು ಕನ್ನಡದಲ್ಲೂ ಬೋರ್ಡ್‌ಗಳನ್ನು ಹಾಕಬೇಕಾದ ಪರಿಸ್ಥಿತಿ ಬರುತ್ತಿತ್ತು!
ರಿಯಲ್ ಎಸ್ಟೇಟ್ ಟ್ರೆಂಡ್
ಭೂಮಿಯಲ್ಲಿ ರೆಸಾರ್ಟ್ ಅಥವಾ ಕೆಫೆಗಳನ್ನು ಮಾಡಿ ಬೋರಾದವರು ಚಂದಿರನ ಮೇಲೆ ಕಾಲಿಡುತ್ತಿದ್ದರು. ಸ್ಪೇಸ್ ವ್ಯೂ, ಬ್ಲಾಕ್ ವ್ಯೂ, ಡಾರ್ಕ್ ವ್ಯೂ, ಸ್ಟಾರ್ ವ್ಯೂ ಹೀಗೆ ಥರಥರದ ರೆಸಾರ್ಟ್‌ಗಳು ಹೆಚ್ಚಾಗುತ್ತಿದ್ದವು. ಭೂಮಿಯಲ್ಲಿ ಜಾಗದ ಬೆಲೆ ಗಗನಕ್ಕೇರಿರುವುದರಿಂದ, ರಿಯಲ್ ಎಸ್ಟೇಟ್ ಏಜೆಂಟರು ಚಂದ್ರನ ಕಡೆ ಮುಖ ಮಾಡುತ್ತಿದ್ದರು. ʼಕೇವಲ 10 ಲಕ್ಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ 30x40 ಸೈಟು, ಉಚಿತ ಸ್ಪೇಸ್-ಶಟಲ್ ಪ್ರವಾಸ!ʼ ಎಂಬ ಜಾಹೀರಾತುಗಳು ಟಿವಿ ಮತ್ತು ಪೇಪರ್‌ಗಳಲ್ಲಿ ರಾರಾಜಿಸುತ್ತಿದ್ದವು. ಬಹುಶಃ ರೆಸಾರ್ಟ್ ರಾಜಕೀಯ ಕೂಡ ಚಂದಿರನ ಮೇಲೆ ಆಗುತ್ತಿತ್ತು.
ಬಾಹ್ಯಾಕಾಶದಲ್ಲಿ ಟ್ರಾಫಿಕ್ ಜಾಮ್!
ವೀಕೆಂಡ್ ಬಂತೆಂದರೆ ಸಾಕು, ನಮ್ಮ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ರೀತಿಯಲ್ಲಿ ಭೂಮಿಯಿಂದ ಚಂದ್ರನಿಗೆ ಹೋಗುವ ಹೈವೇಯಲ್ಲಿ ರಾಕೆಟ್‌ಗಳ ಟ್ರಾಫಿಕ್ ಜಾಮ್ ಆಗುತ್ತಿತ್ತು. ʼಅಯ್ಯೋ, ಸಿಗ್ನಲ್ ಸಿಗುತ್ತಿಲ್ಲ, ಇವತ್ತು ಚಂದ್ರನಿಗೆ ತಲುಪುವುದು ಲೇಟ್ ಆಗುತ್ತೆʼ ಎಂದು ಜನರು ಬಾಹ್ಯಾಕಾಶದಲ್ಲೇ ಕಾಯಬೇಕಾಗುತ್ತಿತ್ತು.
ಚಂದ್ರನಿಗೆ ಹೊಸ ʼಲುಕ್ʼ
ಸಮಯ ಕಳೆದಂತೆ ಚಂದ್ರನ ಮುಖವೇ ಬದಲಾಗುತ್ತಿತ್ತು. ಚಂದ್ರನ ಮೇಲಿನ ದೊಡ್ಡ ದೊಡ್ಡ ಕುಳಿಗಳನ್ನು (Craters) ಈಜುಕೊಳಗಳನ್ನಾಗಿ ಅಥವಾ ಗಾಲ್ಫ್ ಮೈದಾನಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಭೂಮಿಯಿಂದ ನೋಡಿದಾಗ ಚಂದ್ರನ ಮೇಲೆ ದೊಡ್ಡ ಲೇಸರ್ ಲೈಟ್‌ಗಳ ಮೂಲಕ ಕಂಪನಿಗಳ ಜಾಹೀರಾತುಗಳು ಕಾಣಿಸುವಂತೆ ಮಾಡುತ್ತಿದ್ದರು.
ನಿಜವಾದ 'ಹನಿಮೂನ್'
ಇಷ್ಟು ದಿನ ಮದುವೆಯಾದವರು ಹನಿಮೂನ್‌ಗಾಗಿ ಊಟಿ, ಕೊಡೈಕೆನಾಲ್ ಅಥವಾ ಮಾಲ್ಡೀವ್ಸ್‌ಗೆ ಹೋಗುತ್ತಿದ್ದರು. ಆದರೆ ಚಂದ್ರ ಪ್ರವಾಸೋದ್ಯಮ ಬೆಳೆದ ಮೇಲೆ, ಶ್ರೀಮಂತರು ಮತ್ತು ಯುವ ಜೋಡಿಗಳು ನಿಜವಾಗಿಯೇ 'ಚಂದ್ರನ' ಮೇಲೆ ಹನಿಮೂನ್‌ಗೆ ಹೋಗಲು ಶುರು ಮಾಡುತ್ತಿದ್ದರು.