Saturday, July 4, 2026
Saturday, July 4, 2026

ಮಳೆಯಲಿ ಜತೆಯಲಿ..ಸಾಗುತಾ ದೂರ ದೂರ ರೇನಥಾನ್‌ ಸ್ಪೆಷಲ್‌!

ಮಳೆಯಿಂದ ರಕ್ಷಿಸಬಹುದಾದ ಕೊಡೆ, ರೇನ್‌ಕೋಟ್, ಟೋಪಿ ಮೊದಲಾದ ಯಾವುದೇ ರಕ್ಷಣಾ ಸಲಕರಣೆ ಇಲ್ಲದೇ ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ ಸುಮಾರು 18-20 ಕಿಮೀನಷ್ಟು ನಿಗದಿತ ದೂರವನ್ನು ನಡೆಯುವುದು. ಇದು ಕೇವಲ ನಡಿಗೆಯಾಗಿರದೆ ಆಟಪಾಠಗಳೂ ಸೇರಿರುತ್ತವೆ.

  • ರಶ್ಮಿ ಗೋಖಲೆ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ- ಎಂಬ ಹಾಡಿನ ಸಾಲು ಎಲ್ಲರಿಗೂ ಮುದನೀಡುವಂಥದ್ದು. ಈ ಮಳೆಯ ಸುಖ, ಖುಷಿ, ಚೆಂದ ಎಲ್ಲವನ್ನೂ ಅನುಭವಿಸಲು ಒಬ್ಬೊಬ್ಬರಿಗೆ ಒಂದೊಂದು ಮಾರ್ಗ. ನಗರ ಪ್ರದೇಶಗಳಲ್ಲಿ ಸುರಿಯುವ ಮಳೆ ಹೆಚ್ಚು ಹೊತ್ತು ಖುಷಿಯನ್ನು ಕೊಡುವುದಿಲ್ಲ. ಏಕೆಂದರೆ ನಗರ ಪ್ರದೇಶಗಳಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಮಳೆ ಬಂದರೆ ಆಗುವ ಅನನುಕೂಲಗಳೇ ಹೆಚ್ಚು. ರಸ್ತೆಯಲ್ಲಿ ನಿಲ್ಲುವ ನೀರಿನಿಂದಾಗಿ ವಾಹನ ಸವಾರರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ, ಹಲವು ಥರದ ವ್ಯಾಪಾರ ವಹಿವಾಟು ಸೂರಿಲ್ಲದೇ ಮಾಡುವವರಿಗೆ ಕಷ್ಟವೇ ಸರಿ. ಮಲೆನಾಡು ಹಾಗೂ ಕರಾವಳಿಗರಿಗೆ ಮಳೆಗಾಲವೆಂಬುದು 4-5 ತಿಂಗಳಷ್ಟು ದೀರ್ಘಕಾಲದ ಅವಧಿ. ಇಡೀ ದಿನ ಅವ್ಯಾಹತವಾಗಿ ಮಳೆ ಸುರಿಯುತ್ತಲೇ ಇರುವ ಕಾರಣ ಮಳೆಗಾಲವನ್ನು ಎದುರಿಸಲು ಒಂದೆರಡು ತಿಂಗಳ ಹಿಂದಿನಿಂದಲೇ ತಯಾರಿ ಶುರುವಾಗುತ್ತದೆ. ಜೂನ್ ತಿಂಗಳಿನಿಂದ ಮೊದಲುಗೊಂಡು ಅಕ್ಟೋಬರ್‌ವರೆಗೂ ಮಳೆಯ ಸಮಯ. ಪ್ರತಿ ವರ್ಷವೂ ಕೊಡುವ ಮೊದಲ ಮಳೆಯ ಪುಳಕ ಅನನ್ಯ.

ಮಳೆಯಲ್ಲಿ ಸ್ವಲ್ಪ ಹೊತ್ತು ನೆನೆದರೂ ಶೀತ ಆಗಬಹುದೆಂಬ ಭಯ ಕೆಲವರಲ್ಲಿರಬಹುದು. ಆದರೆ ಮಳೆಗಾಲದ ದಿನಗಳಲ್ಲಿ ಒಂದು ದಿನ ಸಂಪೂರ್ಣವಾಗಿ ತೊಯ್ದು ತೊಪ್ಪೆಯಾಗಿ ಮಳೆಯಲ್ಲಿ ನಡೆಯುವ ಕಲ್ಪನೆ ಮಾಡಿಕೊಂಡರೆ ಎಷ್ಟು ಅದ್ಭುತ! ಅಂಥ ಕಲ್ಪನೆಯೊಂದಿಗೆ ಬೆಂಗಳೂರಿನ ರೇನಥಾನ್ ತಂಡ ಪ್ರತಿ ಮಳೆಗಾಲದಲ್ಲೂ ಒಂದು ಅಥವಾ ಎರಡು ಆವೃತ್ತಿಗಳಲ್ಲಿ ಮಳೆನಡಿಗೆಯನ್ನು ಹಮ್ಮಿಕೊಳ್ಳುತ್ತದೆ.

ಇದನ್ನೂ ಓದಿ: ಪ್ರವಾಸಿಗಳಿಗೆ ಮಳೆಯನ್ನೇ ಮಾರುವ ದೇಶಗಳ ಬಗ್ಗೆ ಗೊತ್ತಾ?

ರೇನಥಾನ್ ಎಂದರೇನು?

ಮಳೆಯಿಂದ ರಕ್ಷಿಸಬಹುದಾದ ಕೊಡೆ, ರೇನ್‌ಕೋಟ್, ಟೋಪಿ ಮೊದಲಾದ ಯಾವುದೇ ರಕ್ಷಣಾ ಸಲಕರಣೆ ಇಲ್ಲದೇ ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ ಸುಮಾರು 18-20 ಕಿಮೀನಷ್ಟು ನಿಗದಿತ ದೂರವನ್ನು ನಡೆಯುವುದು. ಇದು ಕೇವಲ ನಡಿಗೆಯಾಗಿರದೆ ಆಟಪಾಠಗಳೂ ಸೇರಿರುತ್ತವೆ.

ಕಾಡಿನ ರಸ್ತೆಗಳಲ್ಲಿ ವಾಹನಗಳಲ್ಲಿ ಸಾಗುವಾಗಲೇ ಎಷ್ಟೋ ಉಲ್ಲಾಸಿತ ಭಾವ ನಮ್ಮಲ್ಲಿ ಮೂಡುತ್ತದೆ. ಇನ್ನು ಈ ಪ್ರದೇಶಗಳಲ್ಲಿ ನಡಿಗೆಯಲ್ಲಿ ಕ್ರಮಿಸಿದಾಗ ಆಗುವ ಆನಂದ ಅಂದಾಜು ಮಾಡಲೂ ಸಾಧ್ಯವಿಲ್ಲ. ಇದರ ಅನುಭವ ಪ್ರತಿಯೊಬ್ಬರಿಗೂ ಅವರದೇ ರೀತಿಯಲ್ಲಿರುತ್ತದೆ. ಕಾವ್ಯವನ್ನು ಓದುವಾಗ ಪ್ರತಿಯೊಬ್ಬರೂ ಅವರವರಿಗೆ ಬೇಕಾದಂತೆ ಕಲ್ಪನೆ ಮಾಡಿಕೊಳ್ಳುವಂತೆ ರೇನಥಾನ್‌ನಲ್ಲಿ ಭಾಗವಹಿಸುವವರೆಲ್ಲರೂ ಅವರವರ ರೀತಿಯಲ್ಲಿ ಸಂಭ್ರವಿಸುತ್ತಾರೆ. ಕೆಲವರು ಕಾಡಿನ ಅಗಾಧತೆಯನ್ನು ಅದರ ಸೃಷ್ಟಿ ವಿಶೇಷವನ್ನು ಮೆಚ್ಚಿಕೊಂಡರೆ ಹಲವರಿಗೆ ಪ್ರಕೃತಿಯ ಮಡಿಲಲ್ಲಿ ಫೊಟೋ ತೆಗೆಸಿಕೊಳ್ಳುವುದೇ ಸಂಭ್ರಮ. ಕಾಡು ಹೂವುಗಳ, ಮರ ಬಳ್ಳಿಗಳ, ನದಿ ತೊರೆಗಳ ಫೊಟೋಗ್ರಫಿ ಹವ್ಯಾಸವಿದ್ದವರಿಗಂತೂ ರೇನಥಾನ್ ಒಂದು ಮೃಷ್ಟಾನ್ನ ಭೋಜನವೇ ಸರಿ.

ಕಲಾವಿದರಿಗೆ ಸಿಗುವ ಸ್ಫೂರ್ತಿ

ಕಥೆಗಾರರಿಗೆ ಇಲ್ಲಿ ಸರಕು ಸಿಕ್ಕೀತು. ಕವಿಗಳಿಗೆ ಕಾವ್ಯದ ಒಂದು ಕಣ್ಣು ಸದಾ ಜಾಗೃತವಾಗಿರುವುದರಿಂದ ಮಳೆಕವಿತೆಗಳ ಸಂಕಲನಕ್ಕಾಗುವಷ್ಟು ಬರೆಯುವ ಸ್ಫುರಣೆ ಸಿಗಬಹುದು. ಚಿತ್ರಕಾರರಿಗೆ ಖಾಲಿ ಕಾನ್ವಾಸ್ ಕೊಟ್ಟರೆ ಅದರ ತುಂಬೆಲ್ಲ ಪ್ರಕೃತಿಯೇ ಮೇಳೈಸಬಹುದು. ಭೈರಪ್ಪನವರ ಜಲಪಾತ ಕಾದಂಬರಿಯಲ್ಲಿ ಬರುವ ಚಿತ್ರಕಲೆಯ ಬಗ್ಗೆ ಓದಿಕೊಂಡವರಿಗಂತೂ ಕಾಡು ಇನ್ನಷ್ಟು ಸೆಳೆಯಬಹುದು. ಸಂಗೀತಗಾರರಿಗೆ ಮೂಲ ಶೃತಿಯೇ ಪ್ರಕೃತಿಯಲ್ಲಿರುವ ಓಂಕಾರನಾದ. ನೃತ್ಯವನ್ನು ಅಭ್ಯಾಸ ಮಾಡಿದವರಿಗೆ ಕಾಡಿನ ಗವ್ವೆನ್ನುವ ಮೌನ ಅದರ ನಡುವೆ ಪಕ್ಷಿಗಳ ಕಲರವ, ನೀರಿನ ಜುಳು ಜುಳು ಮಂಜುಳ ನಾದ ರೆಪರ್ಟರಿಗಳಲ್ಲಿ ಕುಣಿದಂತೇ ಭಾಸವಾಗಬಹುದು. ಇಂಥ ಪ್ರಕೃತಿಯ ಶಕ್ತಿಯನ್ನು ಪರಿಭಾವಿಸಿದವರಿಗೆ ಖಂಡಿತವಾಗಿಯೂ ಇವೆಲ್ಲ ದಕ್ಕುತ್ತದೆ.

Rain 13 (4)

ಯಾವುದೇ ವ್ಯಕ್ತಿಗೂ ತನ್ನ ದೈನಂದಿನ ಜೀವನದ ಏಕತಾನತೆಯನ್ನು ಹೋಗಲಾಡಿಸಲು ಪ್ರವಾಸವೆಂಬುದು ನವ ಚೈತನ್ಯ ವನ್ನು ಕೊಡಲು ಶಕ್ತಿ ಕೊಡಬಲ್ಲುದು. ಈಗೀಗ ನಮ್ಮ ಪ್ರವಾಸದ ಸ್ವರೂಪವೇ ಬದಲಾಗಿದೆ. ಮೋಜು ಮಸ್ತಿ ಮಾಡಿ ತಿಂದು ತೇಗಿ ಕಸವನ್ನು ಅಲ್ಲಲ್ಲಿಯೇ ಬಿಸಾಕಿ ಪರಿಸರ ಹಾಳುಮಾಡುವ ದೃಶ್ಯಗಳು ಎಲ್ಲೇ ಹೋದರೂ ಕಣ್ಣಿಗೆ ರಾಚುತ್ತವೆ. ಎಣ್ಣೆ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲ್, ಬಿಸ್ಕತ್ತು, ಚಾಕೊಲೆಟ್ ಕವರ್‌ಗಳು ಒಂದೇ ಎರಡೇ ಈ ಥರದ ಬುದ್ಧಿಗೇಡಿ ಜನರ ವರ್ತನೆ ನಿಜವಾಗಿಯೂ ರೇಜಿಗೆ ಹುಟ್ಟಿಸುತ್ತದೆ.

12 ವರ್ಷಗಳ ನಡಿಗೆ

ನಮ್ಮ ರೈನಥಾನ್ ಕಳೆದ 15 ವರ್ಷಗಳಿಂದ ಅತ್ಯಂತ ಶಿಸ್ತಿನಿಂದ, ಜವಾಬ್ದಾರಿಯಿಂದ ಒಂದು ಒಳ್ಳೆಯ ತಂಡ ಎಂದು ಮನ್ನಣೆ ಗಳಿಸಿದೆ. ಅರಣ್ಯ ಇಲಾಖೆ ನಮ್ಮ ರೇನಥಾನ್ ಆಯೋಜನೆ ಕಂಡು ಬಹಳ ಸಂತೋಷ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಇತರ ತಂಡಗಳಿಗೆ ಉದಾಹರಣೆಯಾಗಿ ನಿಲ್ಲಬಲ್ಲ ತಂಡವೆಂದು ಕರೆಸಿಕೊಂಡಿದೆ ಎಂಬುದೇ ನಮ್ಮ ಹೆಮ್ಮೆ.

ಕಳೆದ 15 ವರ್ಷಗಳಲ್ಲಿ 17 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ರೇನಥಾನ್ ಎಂಬ ಕಲ್ಪನೆ ಹಾಗೂ ಕನಸಿನ ಕೂಸು ಬೆಂಗಳೂರಿನ ಮಲ್ಲೇಶ್ವರದ ಉದ್ಯಮಿ ಕಿಶೋರ್ ಪಟವರ್ಧನ್ ಅವರದ್ದು. 2011ರಲ್ಲಿ ಒಂದು ಸಂಜೆ ಮಳೆಯಲ್ಲಿ ನೆನೆಯುತ್ತಾ ಬೈಕ್ ಓಡಿಸಿಕೊಂಡು ಬರುವಾಗ ಹುಟ್ಟಿದ ಒಂದು ಕಲ್ಪನೆ ರೇನಥಾನ್. ಅವರು ಯಾವಾಗಲೂ ಖುಷಿಯನ್ನು ಹಂಚಲು ಇಷ್ಟಪಡುವುದರಿಂದ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಹೊರಟಿದ್ದಾಗಿತ್ತು. ಮೊದಲ ರೇನಥಾನ್‌ಗೆ ಜೂನ್ 11, 2011 ರಂದು ಕೊಟ್ಟಿಗೆಹಾರದಿಂದ ಚಾರ್ಮಾಡಿವರೆಗಿನ 23 ಕಿಮೀ ದೂರವನ್ನು ರಸ್ತೆ ಬದಿಯ ಜಲಪಾತಗಳಿಗೆ ಮೈಯೊಡ್ಡುತ್ತ, ಆಟವಾಡುತ್ತಾ ಮಳೆಯಲ್ಲಿ ನೆನೆಯುತ್ತಾ ನಡೆದ ದಿನವಂತೂ ಅವಿಸ್ಮರಣೀಯ. ಅದೇ ನಮ್ಮ ಮುಂದಿನ ರೇನಥಾನ್ ಎಂಬ ಪರಿಕಲ್ಪನೆಗೆ ಓನಾಮವಾಯಿತು.

ನಿಯಮಗಳೇನು?

ಕೇವಲ 13 ಜನರ ತಂಡ ಆ ನಮ್ಮ ಮೊದಲ‌ ರೇನಥಾನ್‌ಗೆ ಸಾಕ್ಷಿಯಾಗಿತ್ತು. ಈಗ 16 ಆವೃತ್ತಿಗಳನ್ನು ಪೂರೈಸುವ ವೇಳೆಗೆ ತಂಡದ ಗಾತ್ರ ಹಿರಿದಾಗಿದೆ. ನಂತರದ ರೇನಥಾನ್‌ನಲ್ಲಿ ಹಲವು ಅಂಶಗಳನ್ನು ಸೇರ್ಪಡೆಗೊಳಿಸಲಾಯಿತು. ಉದಾಹರಣೆಗೆ ಗಿಡ ನೆಡುವ, ಬೀಜ ಬಿತ್ತುವ ಕಾರ್ಯಕ್ರಮ, ಅಲ್ಲಿನ ಪ್ರತಿಭೆಗಳು ಎಲೆಮರೆಯ ಕಾಯಿಯಂತಿದ್ದರೆ ಗುರುತಿಸಿ ಸನ್ಮಾನಿಸುವುದು ಇತ್ಯಾದಿ ರಿವಾಜಿನಂತೆ ನಡೆಯುತ್ತಿವೆ. ತಂಡದ ಪ್ರತಿಯೊಬ್ಬರೂ ಮರುಬಳಕೆ ಮಾಡಬಹುದಾದಂಥ ತಟ್ಟೆ, ಲೋಟ, ಚಮಚ ತಂದು ಪರಿಸರ ಕಾಳಜಿಯನ್ನು ತೋರಬೇಕೆಂಬ ನಿಯಮವಿದೆ.

ತಂಡದ ಗುರುತಿಗೆ ಹಾಗೂ ನೆನಪಿಗೆ ಟೀಶರ್ಟ್ ಹಾಗೂ ಬ್ಯಾಗ್ ಎಲ್ಲರಿಗೂ ಕೊಡಲಾಗುತ್ತದೆ ಹಾಗೂ ಎಲ್ಲರೂ ಅವನ್ನು ಧರಿಸಲೇಬೇಕೆಂಬ ನಿಯಮವಿದೆ. ಸುಮಾರು 18-20 ಕಿಮೀನಷ್ಟು ದೂರದ ನಡಿಗೆಯ ದಾರಿ ಮೊದಲೇ ನಿರ್ಧಾರ ಮಾಡಲಾಗುತ್ತದೆ. ಆ ಕಾಡಿನಲ್ಲಿ ಕೂಡ ನಮ್ಮ ಬಾಣಸಿಗರ ತಂಡ ಬಿಸಿ ಚಹಾ, ತಿಂಡಿ ಹಾಗೂ ಮಧ್ಯಾಹ್ನ ದ ಭೋಜನವನ್ನು ಅಲ್ಲಿಗೇ ತಂದು ಬಡಿಸುತ್ತಾರೆ. ಮಳೆಯಲ್ಲಿ ನಡೆಯುವಾಗ ಹೊಟ್ಟೆ ಚುರುಗುಡುವ ವೇಳೆಗೆ ಅವರು ತಂದು ಬಡಿಸುವ ಭೋಜನವಾಗಲಿ, ಚಹಾ ತಿಂಡಿಗಳೇ ಆಗಲಿ ಅತ್ಯಂತ ಖುಷಿ ಹಾಗೂ ಕೃತಜ್ಞತಾಭಾವ ತಂದುಕೊಡುತ್ತವೆ.

ಕೆಲವು ಆವೃತ್ತಿಗಳಲ್ಲಿ ಕಾಡಂಚಿನ ಸೌಲಭ್ಯವಂಚಿತ ಶಾಲೆಗಳಿಗೆ ಬ್ಯಾಗ್, ಪುಸ್ತಕ ಮುಂತಾದ ಅಗತ್ಯ ವಸ್ತುಗಳ ಪೂರೈಕೆ ಕೂಡ ತಂಡದಿಂದ ನಡೆದಿದೆ. ನಮ್ಮ ಈ ಪರಿಸರ ಸ್ನೇಹಿ ನಡಿಗೆಗೆ ಅರಣ್ಯ ಇಲಾಖೆಯ ಸಮ್ಮತಿ ಮತ್ತು ಸಹಕಾರ ನಿರಂತರವಾಗಿ ದೊರೆಯುತ್ತಿದೆ.

ನೀವೂ ಹೋಗಬೇಕೇ?

ಹಲವು ನೆನಪುಗಳ ಸರಮಾಲೆಯನ್ನೇ ಸೃಷ್ಟಿಸಿದಂಥ ಹೊಸ ನೆನಪುಗಳನ್ನು ಕಟ್ಟಿಕೊಡಬಹುದಾದಂಥ ರೇನಥಾನ್ ಮತ್ತೆ ಬಂದಿದೆ. ಇದೇ ಜೂನ್ 27, 2026ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಲು ಇಚ್ಛೆ ಇರುವವರು www.rainathon.com ಸಂಪರ್ಕಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..