• ವಿಷ್ಣುಪ್ರಸಾದ್ ಜೆ.


1998ರಲ್ಲಿ ʼಬಡೇ ಮಿಯಾ ಛೋಟೆ ಮಿಯಾʼ ಸಿನಿಮಾ ಬಂದಾಗ ರೈಲಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿದ್ದವಂತೆ. ಪ್ರಯಾಣಿಕರಿಗೆ ಮೋಡಿ ಮಾಡಿ ಹೇಗೆ ಮೋಸ ಮಾಡುವುದು ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಆದರೆ ಇಂದಿಗೂ ರೈಲು ಪ್ರಯಾಣದ ಸಂದರ್ಭದಲ್ಲಿ ಇಂಥ ನೂರಾರು ಕಳ್ಳತನದ ಪ್ರಕರಣಗಳು ನಡೆಯುತ್ತವೆ. ಇದೇ ಕಾರಣಕ್ಕಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡುವವರು ದುಬಾರಿ ಬೆಲೆಯ ವಸ್ತುಗಳನ್ನು ಕೊಂಡೊಯ್ಯುವುದಿಲ್ಲ. ಅತಿಯಾದ ಜಾಗೃತಿಯಲ್ಲೇ ಪ್ರಯಾಣ ಮಾಡುತ್ತಾರೆ. ಆದಾಗ್ಯೂ ಅದೆಷ್ಟೋ ರೈಲು ಪ್ರಯಾಣಿಕರು ಪರ್ಸ್‌, ಬ್ಯಾಗ್‌, ಮೊಬೈಲ್‌, ಒಡವೆ ಸೇರಿ ಹಲವು ವಸ್ತುಗಳನ್ನು ಕಳೆದುಕೊಂಡಿದ್ದನ್ನು ಕೇಳಿದ್ದೇವೆ. ಈ ಕಳ್ಳತನವೇ ಹಲವು ಮಂದಿಗೆ ಉದ್ಯೋಗವೂ ಆಗಿರಬಹುದು. ಆದರೆ ಈ ಕಳ್ಳತನದಿಂದ ಕಷ್ಟಕ್ಕೆ ಸಿಲುಕಿದವರ ಗೋಳು ಯಾರಿಗೂ ಬೇಡ. ಪರ್ಸ್‌ ಕಳ್ಳತನವಾಗಿದೆ ಎಂದು ಸಹಾಯ ಬೇಡಿದರೂ, ಅವರನ್ನೂ ಮೋಸಗಾರರು ಎಂದು ಜನರು ನೋಡುವಂತಾಗಿದೆ.

ಆದರೀಗ ವಿಪರ್ಯಾಸವೆಂದರೆ ಆರ್ಥಿಕವಾಗಿ ಸಬಲರಾಗಿರುವವರೇ ಓಡಾಡುವ ವಿಮಾನದಲ್ಲೂ ಈ ಕಳ್ಳತನ ಶುರುವಾಗಿದೆ. ಐಷಾರಾಮಿ ಕಳ್ಳರು ದೊಡ್ಡ ಪ್ರಮಾಣದಲ್ಲಿಯೇ ಪ್ರಯಾಣಿಕರ ಜೇಬು ಅಥವಾ ಬ್ಯಾಗ್‌ಗೆ ಬ್ಲೇಡ್‌ ಹಾಕುತ್ತಿದ್ದಾರೆ. ಆಗಸದಲ್ಲಿ ನಡೆಯುವ ಈ ಕಳ್ಳತನವು ಪ್ರಯಾಣಿಕರಿಗೆ ಭಾರಿ ದುಬಾರಿಯಾಗುತ್ತಿದೆ. ಹೀಗಾಗಿ ವಿಮಾನ ಪ್ರಯಾಣ ಕೂಡ ತಲೆನೋವಾಗಿ ಪರಿಣಮಿಸಿದೆ. ವಿಮಾನ ಪ್ರಯಾಣಕ್ಕೆ ಪರ್ಯಾಯ ಇಲ್ಲದಿರುವುದರಿಂದ ನಾವು ಸಾರ್ವಜನಿಕರೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಅಂದ ಹಾಗೆ ಈ ಕಳ್ಳತನವಾಗುತ್ತಿರುವುದು ಲಗೇಜ್‌ ಬ್ಯಾಗಿನಲ್ಲಲ್ಲ. ಬದಲಾಗಿ ಕ್ಯಾಬಿನ್‌ ಬ್ಯಾಗೇಜ್‌ನಲ್ಲಿ. ವಿಶೇಷವೆಂದರೆ ಸಹಪ್ರಯಾಣಿಕರೇ ಕಳ್ಳತನ ಮಾಡುತ್ತಿದ್ದಾರೆ.

ಯಾವ ರೀತಿ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯುವ ಮೊದಲು, ಯಾವೆಲ್ಲ ರೀತಿಯ ಕಳ್ಳತನ ಹಾಗೂ ಮೋಸ ನಡೆಯುತ್ತದೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ತಾಜ್ ಮಹಲ್ ರಕ್ಷಣೆಗೆ ನಿಂತ ತುಳಸಿ ಸಸ್ಯ

ಮನೋಜ್‌ ಶರ್ಮಾ ಎನ್ನುವ ಪ್ರಯಾಣಿಕ ದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ. ಆತನು ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌, ಈಯರ್‌ ಪಾಡ್‌, ಪರ್ಸ್‌ ಹಾಗೂ ಕೆಲವು ಗಿಫ್ಟ್‌ನ್ನು ಇರಿಸಿಕೊಂಡಿದ್ದ. ದೂರದ ಪ್ರಯಾಣ ಆಗಿದ್ದರಿಂದ ಕ್ಯಾಬಿನ್‌ನಲ್ಲಿ ಬ್ಯಾಗ್‌ ಇರಿಸಿ ನಿದ್ರೆಗೆ ಜಾರಿದ್ದ. ಕೆಲ ಹೊತ್ತಿನ ಬಳಿಕ ಎಚ್ಚರವಾದಾಗ ನೋಡಿದರೆ ಆತ ಬ್ಯಾಗ್‌ ಇರಿಸಿದ್ದ ಜಾಗದಲ್ಲಿ ಓರ್ವ ಮಹಿಳೆ ನಿಂತುಕೊಂಡಿದ್ದಳು. ಇದಾದ ಕೆಲ ನಿಮಿಷಗಳ ಬಳಿಕ ಟಾಯ್ಲೆಟ್‌ನಿಂದ ವಾಪಸ್‌ ಬರುವಾಗಲೂ ಆಕೆ ಅಲ್ಲಿರುವುದನ್ನು ದೂರದಲ್ಲಿಯೇ ಗಮನಿಸಿದ. ಸೀಟಿನ ಹತ್ತಿರ ಬಂದು ಬ್ಯಾಗ್‌ ಚೆಕ್‌ ಮಾಡಿದಾಗ, ಆತನ ಬ್ಯಾಗ್‌ನಲ್ಲಿದ್ದ ಪರ್ಸ್‌ ಹಾಗೂ ಲ್ಯಾಪ್‌ಟಾಪ್‌ ಮಿಸ್‌ ಆಗಿತ್ತು. ಬಳಿಕ ಆಕೆಯ ಬ್ಯಾಗೇಜ್‌ ಪರಿಶೀಲಿಸಿದಾಗ ಕಳ್ಳತನವಾಗಿದ್ದ ವಸ್ತುಗಳು ಸಿಕ್ಕವು. ಅದರ ಜೊತೆಗೆ ಆಕೆಯ ಬ್ಯಾಗ್‌ನಲ್ಲಿ ಇನ್ನೊಂದಿಷ್ಟು ಒಡವೆ ಹಾಗೂ ಸ್ಮಾರ್ಟ್‌ವಾಚ್‌ಗಳಿದ್ದವು.

ಸಹನಾ ಶರ್ಮಾ ಎನ್ನುವ ಮಹಿಳೆ ಮುಂಬೈನಿಂದ ದುಬೈಗೆ ಪ್ರಯಾಣಿಸುತ್ತಿದ್ದಳು. ದುಬೈನಲ್ಲಿ ವಿಮಾನದಿಂದ ಇಳಿದು ನೋಡುವಷ್ಟರಲ್ಲಿ ಆಕೆಯ ಬ್ಯಾಕ್‌ಪ್ಯಾಕ್‌ನಲ್ಲಿದ್ದ ಐಪ್ಯಾಡ್‌, ಕಿವಿಯೋಲೆ, ನೆಕ್ಲೇಸ್‌ ಹಾಗೂ ವಾಚ್‌ ಕಾಣಿಸುತ್ತಲೇ ಇರಲಿಲ್ಲ. ವಿಮಾನದಿಂದ ಈಗಾಗಲೇ ಇಳಿದಿದ್ದರಿಂದ ಯಾವುದೇ ವಸ್ತುಗಳು ಸಿಗಲಿಲ್ಲ ಕೂಡ. ತಾನು ಕುಳಿತಿದ್ದ ಸೀಟಿನ ಮೇಲೆ ಜಾಗ ಸಿಗದ ಕಾರಣದಿಂದ ಸ್ವಲ್ಪ ದೂರದಲ್ಲಿ ಆಕೆ ಬ್ಯಾಗ್‌ನ್ನು ಕ್ಯಾಬಿನ್‌ನಲ್ಲಿ ಇರಿಸಿದ್ದಳು. ಇದರಿಂದ ಬ್ಯಾಗ್‌ನ ಮೇಲೆ ಪ್ರಯಾಣದ ಅವಧಿಯಲ್ಲಿ ನಿರಂತರವಾಗಿ ಕಣ್ಣಿಡಲು ಸಾಧ್ಯವಾಗಲಿಲ್ಲ.

Untitled design (29)

ಸಾಮಾಜಿಕ ಜಾಲತಾಣಳನ್ನು ಜಾಲಾಡಿದರೆ ಇಂಥ ಸಾವಿರಾರು ಉದಾಹರಣೆಗಳು ಸಿಗುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಲವತ್ತು ವರ್ಷದ ವ್ಯಕ್ತಿಯನ್ನು ಇದೇ ಕಾರಣದಿಂದ ಪೊಲೀಸರು ಬಂಧಿಸಿದ್ದರು. ಸುಮಾರು ನೂರಾ ಹತ್ತು ದಿನಗಳ ಅವಧಿಯಲ್ಲಿ ಬರೋಬ್ಬರಿ ಇನ್ನೂರು ವಿಮಾನಗಳಲ್ಲಿ ಸರಣಿ ಕಳ್ಳತನವನ್ನು ಈತ ಮಾಡಿದ್ದ. ಕೋಟ್ಯಂತರ ಮೌಲ್ಯದ ವಸ್ತುಗಳನ್ನು ಈತ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿತ್ತು. ಸಾಮಾನ್ಯ ಪ್ರಯಾಣಿಕರಂತೆ ನಗರದಿಂದ ನಗರ ಸುತ್ತಾಡುವ ಈ ವ್ಯಕ್ತಿಗೆ, ವಿಮಾನದಲ್ಲಿ ಕಳ್ಳತನ ಮಾಡುವುದೇ ಶೋಕಿಯಾಗಿತ್ತು.

ಹಾಗಿದ್ದರೆ ವಿಮಾನ ಪ್ರಯಾಣ ಮಾಡುವಾಗ ಕ್ಯಾಬಿನ್‌ ಬ್ಯಾಗೇಜ್‌ಗಳ ಕಳ್ಳತನ ತಡೆಯುವುದು ಹೇಗೆ ಹಾಗೂ ಪ್ರಯಾಣಿಕರು ಯಾವ ರೀತಿಯ ಜಾಗೃತಿ ವಹಿಸಬೇಕು?
* ಆದಷ್ಟು ಸೀಟಿನ ಮೇಲೆ ಬ್ಯಾಗ್‌ ಇರಿಸಿಕೊಳ್ಳುವ ಪ್ರಯತ್ನ ಮಾಡಬೇಕು.
* ನೀವು ಕೊಂಡೊಯ್ಯುವ ಬ್ಯಾಗ್‌ಗಳಿಗೆ ಸ್ಮಾರ್ಟ್‌ ಲಾಕ್‌ ಅಥವಾ ಯಾವುದೇ ರೀತಿಯ ಲಾಕ್‌ಗಳನ್ನು ಹಾಕುವುದು ಒಳ್ಳೆಯದು.
* ಹತ್ತಿರ ಪ್ರಯಾಣವಾಗಿದ್ದರೆ ಬ್ಯಾಗ್‌ಗಳ ಮೇಲೆ ನಿರಂತರ ಗಮನವಿಟ್ಟರೆ ಒಳಿತು.
* ದೂರ ಪ್ರಯಾಣವಾಗಿದ್ದರೆ ಅನಿವಾರ್ಯವಾಗಿ ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಅದನ್ನು ಆದಷ್ಟು ನಿಮ್ಮ ಬಳಿ ಅಥವಾ ಆಸನದ ಕೆಳಗೆ, ಪಕ್ಕಕ್ಕೆ ಇರಿಸಿಕೊಳ್ಳಿ.
* ಟಾಯ್ಲೆಟ್‌ಗೆ ಹೋಗುವಾಗ ಪಕ್ಕದಲ್ಲಿ ಕುಳಿತಿರುವ ಸಹ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಗಮನ ನೀಡುವಂತೆ ಮನವಿ ಮಾಡಿ.
* ವಿಮೆಯ ಸೌಲಭ್ಯವೂ ಇರುವುದರಿಂದ ಆದಷ್ಟು ಅನಿವಾರ್ಯವಾದರೆ ಅದನ್ನು ಉಪಯೋಗಿಸಿಕೊಳ್ಳಿ. ಇದಕ್ಕಾಗಿ ವಿಮಾನ ನಿಲ್ದಾಣದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಮಾಡಿಸುವುದು ಕಡ್ಡಾಯ ಎನ್ನುವುದು ತಿಳಿದಿರಲಿ.