ತಾಜ್ ಮಹಲ್ ರಕ್ಷಣೆಗೆ ನಿಂತ ತುಳಸಿ ಸಸ್ಯ
ತಾಜ್ ಮಹಲ್ ಸುತ್ತಲೂ ತುಳಸಿ ಗಿಡಗಳನ್ನು ನೆಡಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತೀ ಮನೆಯ ಅಂಗಳದಲ್ಲಿ ನೆಟ್ಟು ಪೂಜಿಸುವ ತುಳಸಿ ಗಿಡವನ್ನು ಈ ಸ್ಮಾರಕದ ಸುತ್ತಲೂ ನೆಡಲು ಕಾರಣವೇನು ಎಂದು ನಿಮಗೆ ಒಂದು ಕ್ಷಣ ಅನಿಸಬಹುದು. ಆದರೆ ಸಾವಿರಾರು ತುಳಸಿ ಗಿಡಗಳು ತಾಜ್ ಮಹಲ್ ಸುತ್ತಲೂ ನೆಡಲು ಒಂದು ಮುಖ್ಯ ಕಾರಣವಿದೆ. ಕಾರಣ ಕೇಳಿದರೆ ಅಚ್ಚರಿ ಖಚಿತ.
- ಅಮರ್ ಎಲ್
ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ ಷಹಜಹಾನ್, ತನ್ನ ಪ್ರೀತಿಯ ಮಡದಿಗಾಗಿ ನಿರ್ಮಿಸಿದ ಪ್ರೇಮಸೌಧ ತಾಜ್ ಮಹಲ್. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಈ ತಾಜ್ ಮಹಲ್ ಶತಮಾನಗಳಷ್ಟು ಹಳೆಯದಾಗಿದ್ದರೂ ಕೂಡ ಇಂದಿಗೂ ಅದರ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದೆ. ಬಿಳಿ ಅಮೃತಶಿಲೆಯಿಂದ ನಿರ್ಮಿಸಿದ ಸಮಾಧಿಯನ್ನು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಭವ್ಯ ಸ್ಮಾರಕದ ಇತಿಹಾಸ, ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮತ್ತೆ ಮತ್ತೆ ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ಇದು ಈಗಾಗಲೇ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿದೆ. ಆದರೆ ಮುಸ್ಲಿಂ ಸಾಮ್ರಾಟ ಕಟ್ಟಿದ ಈ ಪ್ರೇಮಸೌಧದ ಸುತ್ತಲೂ ಸಾವಿರಾರೂ ತುಳಸಿ ಗಿಡಗಳಿವೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ.
ಹೌದು ತಾಜ್ ಮಹಲ್ ಸುತ್ತಲೂ ತುಳಸಿ ಗಿಡಗಳನ್ನು ನೆಡಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತೀ ಮನೆಯ ಅಂಗಳದಲ್ಲಿ ನೆಟ್ಟು ಪೂಜಿಸುವ ತುಳಸಿ ಗಿಡವನ್ನು ಈ ಸ್ಮಾರಕದ ಸುತ್ತಲೂ ನೆಡಲು ಕಾರಣವೇನು ಎಂದು ನಿಮಗೆ ಒಂದು ಕ್ಷಣ ಅನಿಸಬಹುದು. ಆದರೆ ಸಾವಿರಾರು ತುಳಸಿ ಗಿಡಗಳು ತಾಜ್ ಮಹಲ್ ಸುತ್ತಲೂ ನೆಡಲು ಒಂದು ಮುಖ್ಯ ಕಾರಣವಿದೆ. ಕಾರಣ ಕೇಳಿದರೆ ಅಚ್ಚರಿ ಖಚಿತ.

ಮಾಲಿನ್ಯಕ್ಕೆ ಮದ್ದು
2009 ರಲ್ಲಿ, ಆಗ್ರಾದ ಅರಣ್ಯ ಇಲಾಖೆಯು ಮಾಲಿನ್ಯವನ್ನು ತಡೆಗಟ್ಟಲು ತಾಜ್ ಮಹಲ್ ಸುತ್ತಲೂ ಸಾವಿರಾರು ತುಳಸಿ ಗಿಡಗಳನ್ನು ನೆಡುವ ಯೋಜನೆಗೆ ಕೈ ಹಾಕಿತು. ಅತಿಯಾದ ಕೈಗಾರಿಕೆಗಳ ಸ್ಥಾಪನೆ ಹಾಗೂ ವಾಹನಗಳು ಉಗುಳುವ ಹೊಗೆಯಿಂದಾಗಿ ಅಮೃತಶಿಲೆಯಿಂದ ನಿರ್ಮಿಸಿದ ಈ ಭವ್ಯ ಸ್ಮಾರಕ ಹೊಳಪನ್ನು ಗಮನಿಸಿದ ಉತ್ತರ ಪ್ರದೇಶ ಸರ್ಕಾರ ಈ ಐತಿಹಾಸಿಕ ಸ್ಮಾರಕಕ್ಕೆ ಆಗುತ್ತಿರುವ ಧಕ್ಕೆ ತಪ್ಪಿಸಲು ಈ ವಿನೂತನ ಪ್ರಯತ್ನಕ್ಕೆ ಕೈಹಾಕಿತು. ಇದರ ಫಲವಾಗಿ ಇಂದು ಸಾವಿರಾರು ತುಳಸಿ ಗಿಡಗಳು ತಾಜ್ ಮಹಲ್ ಅನ್ನು ಸುತ್ತುವರಿದಿರುವುದನ್ನು ಕಾಣಬಹುದು.
ತುಳಸಿ ಗಿಡವೇ ಏಕೆ?
ಸಾಮಾನ್ಯವಾಗಿ ಯಾವುದೇ ಪ್ರವಾಸಿತಾಣಗಳ ಅಂದವನ್ನು ಹೆಚ್ಚಿಸಲು ಬೆಲೆಬಾಳುವ ಅಲಂಕಾರಿಕ ಸಸ್ಯಗಳು(Show plants) ನೆಡಲಾಗುತ್ತದೆ. ಆದರೆ ತಾಜ್ ಮಹಲ್ ನಲ್ಲಿ ತುಳಸಿ ಗಿಡಗಳನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೂ ಕಾರಣವಿದೆ. ಇಲ್ಲಿ ತುಳಸಿ ಗಿಡಗಳನ್ನು ಯಾವುದೇ ಅಲಂಕಾರಕ್ಕಾಗಿ ನೆಟ್ಟಿಲ್ಲ, ಬದಲಾಗಿ ಪರಿಸರದ ರಕ್ಷಣೆ ಹಾಗೂ ಆರೋಗ್ಯದ ದೃಷ್ಟಿಯಿಂದ ನೆಡಲಾಗಿದೆ.
ತುಳಸಿಯನ್ನು ಶತಮಾನಗಳಿಂದಲೂ ಆಯುರ್ವೇದ ಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ತುಳಸಿ ಗಿಡದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ಈಗಾಗಲೇ ತಿಳಿದಿರುವ ವಿಷಯ. ತಾಜ್ ಮಹಲ್ ವಿಷಯಕ್ಕೆ ಬಂದರೆ ತುಳಸಿಯನ್ನು ಅಲ್ಲಿನ ವಾಯು ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ನೆಟ್ಟು ಬೆಳೆಸಲಾಗಿದೆ.

ತಜ್ಞರು ಹೇಳುವಂತೆ, ತುಳಸಿ ಗಿಡಗಳು ಪ್ರತಿದಿನ ಸುಮಾರು 20 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಉಳಿದ ನಾಲ್ಕು ಗಂಟೆಗಳ ಕಾಲ ಅವು ಓಝೋನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ತುಳಸಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಗಳು ಹಾನಿಕಾರಕ ಅನಿಲಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ವಾಯು ಮಾಲಿನ್ಯವು ತಾಜ್ ಮಹಲ್ ಸುತ್ತಲಿನ ಅಮೃತಶಿಲೆಯನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ, ತುಳಸಿ ಗಾಳಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಇದು ತಾಜ್ ಮಹಲ್ ನ ಬಿಳಿ ಮತ್ತು ಹೊಳಪನ್ನು ಹಾಗೆಯೇ ಇಡುತ್ತದೆ. ಇದರಿಂದಾಗಿ ವರ್ಷಗಳು ಉರುಳಿದರೂ ಕೂಡ ಈ ಪ್ರೇಮಸೌಧ ತನ್ನ ಹೊಳಪನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯ.
ಇದಲ್ಲದೇ ತುಳಸಿಯಿಂದ ಬಿಡುಗಡೆಯಾಗುವ ಓಝೋನ್ ಅನಿಲವು ತಾಜ್ ಮಹಲ್ ಅನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಜೊತೆಗೆ ಈ ಸಸ್ಯವು ತನ್ನ ಸುತ್ತಲಿನ 100 ಚದರ ಅಡಿ ಪ್ರದೇಶದ ಗಾಳಿಯನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ. ಇದಲ್ಲದೇ ತುಳಸಿ ಗಿಡಗಳಿಂದಾಗಿ, ಯಾವುದೇ ಸೂಕ್ಷ್ಮಜೀವಿಗಳು ಅಥವಾ ಕೀಟಗಳು ತಾಜ್ ಮಹಲ್ ನ ಹತ್ತಿರವೂ ಕೂಡ ಸುಳಿಯುವುದಿಲ್ಲ. ಇದು ತಾಜ್ ಮಹಲ್ ನ ಗೋಡೆಗಳು ಮತ್ತು ನೆಲ ಎರಡನ್ನೂ ಸ್ವಚ್ಛವಾಗಿಡುತ್ತದೆ. ಈ ಎಲ್ಲಾ ಕಾರಣಗಳಿಂದ ಆಗ್ರಾದ ಅರಣ್ಯ ಇಲಾಖೆಯು ಬೃಹತ್ ಪ್ರಮಾಣದಲ್ಲಿ ತುಳಸಿ ಗಿಡಗಳನ್ನು ನೆಟ್ಟಿದೆ.