• ಮಂಜುನಾಥ ಡಿ. ಎಸ್.

ಹುಬ್ಬಳ್ಳಿಯಿಂದ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಪಯಣಿಸುತ್ತಾ ಸುಮಾರು 20 ಕಿಲೋ ಮೀಟರ್ ಕ್ರಮಿಸಿದ್ದೆ. ಎಡ ಪಾರ್ಶ್ವದಲ್ಲಿ ಹಲವಾರು ಜಿನ ವಿಗ್ರಹಗಳು ಧುತ್ತನೆ ಕಣ್ಣಿಗೆ ಬಿದ್ದವು. ವೀಕ್ಷಣೆಗೆ ಒಂದು ತಾಣ ಸಿಕ್ಕಿತೆಂದು ಖುಷಿಯಾಯಿತು. ಅವುಗಳ ಬಳಿ ಕರೆದೊಯ್ಯುವಂತೆ ಕಾರಿನ ಚಾಲಕರನ್ನು ವಿನಂತಿಸಿಕೊಂಡೆ. ಅರೆಮನಸಿನಿಂದ ಅವರು ಕಾರನ್ನು ಪ್ರವೇಶ ದ್ವಾರದ ಕಡೆಗೆ ತಿರುಗಿಸಿದರು. ಪುರಾತನ ಶೈಲಿಯ ತೆರೆದ ಶಿಲಾದ್ವಾರ ಕೈಬೀಸಿ ಕರೆಯಿತು. ಅಲ್ಲಿದ್ದ ಬರಹವೊಂದರಿಂದ ಅದು ಶ್ರೀ ನವಗ್ರಹ ತೀರ್ಥ ಕ್ಷೇತ್ರ ವರೂರು ಎಂದು ತಿಳಿಯಿತು. ಪ್ರಾಕಾರದೊಳಗೆ ಪ್ರವೇಶಿಸಲು ಇಲ್ಲಿ ಅನುಮತಿ ಇದೆ.

ಇದನ್ನೂ ಓದಿ: ರಾಮ-ಲಕ್ಷ್ಮಣರು ಇಲ್ಲಿ ಪಿತೃತರ್ಪಣ ಕಾರ್ಯ ಮಾಡಿದ್ದರು

ಭಾರತದ ಅತಿ ಎತ್ತರದ ಪಾರ್ಶ್ವನಾಥರ ಪ್ರತಿಮೆ

ನಾನು ನವಗ್ರಹ ತೀರ್ಥಕ್ಕೆ ಹೋದಾಗ ಮಂದಿರ ಮುಚ್ಚಿತ್ತು. ಅದರ ಬದಿಯಲ್ಲಿ ಒಂದು ಕಾಲುದಾರಿ ಇತ್ತು. ಅದೇ ದಾರಿಯಲ್ಲಿ ಸಾಗಿ ನವಗ್ರಹಗಳ ಆವರಣ ಪ್ರವೇಶಿಸಿದೆ. ಬೇರೆ ಬೇರೆ ಅಳತೆ ಮತ್ತು ಬಣ್ಣಗಳ ಎಂಟು ಗೋಲಾಕಾರದ ಮತ್ತು ಒಂದು ಅರ್ಧ ಚಂದ್ರಾಕಾರದ ರಚನೆಗಳು ಅಲ್ಲಿವೆ. ಇವು ಒಂಬತ್ತು ಗ್ರಹಗಳ ಪ್ರತೀಕವಾಗಿವೆ. ಪ್ರತಿ ಗ್ರಹದ ಮೇಲೆ ಕಮಲದ ಹೂವಿನ ವಿನ್ಯಾಸವಿದೆ. ಅವುಗಳ ನಡುವಿನಲ್ಲಿ ಜೈನ ತೀರ್ಥಂಕರರ ಮೂರ್ತಿಗಳಿವೆ. ಅಲ್ಲಿರುವ ಅತಿ ಎತ್ತರದ ಏಕಶಿಲಾ ಪ್ರತಿಮೆ ಕಾಯೋತ್ಸರ್ಗ ಭಂಗಿಯಲ್ಲಿರುವ ಭಗವಾನ್ ಪಾರ್ಶ್ವನಾಥರದೆಂದು ತಿಳಿಯಿತು. ಇದು ಭಾರತದಲ್ಲಿನ ಪಾರ್ಶ್ವನಾಥರ ಅತಿ ಎತ್ತರದ ವಿಗ್ರಹ. 48 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, 61 ಅಡಿ ಎತ್ತರದ ಪೀಠದ ಮೇಲಿದೆ. ಪ್ರತಿಮೆಯ ತೂಕ 185 ಟನ್ ಎನ್ನಲಾಗಿದೆ.

Untitled design - 2026-04-11T150956.623

ನವಗ್ರಹಗಳೊಡನೆ ನವ ತೀರ್ಥಂಕರರು

ನವಗ್ರಹಗಳೊಡನೆ ಗುರುತಿಸಲ್ಪಡುವ ಒಂಬತ್ತು ತೀರ್ಥಂಕರರ ಪಟ್ಟಿ ಹೀಗಿದೆ. ಪದ್ಮಪ್ರಭು-ಸೂರ್ಯ, ಚಂದ್ರಪ್ರಭು- ಚಂದ್ರ, ಮಲ್ಲಿನಾಥ- ಬುಧ, ಪುಷ್ಪದಂತ- ಶುಕ್ರ, ವಾಸುಪೂಜ್ಯ- ಮಂಗಳ, ಮಹಾವೀರ- ಗುರು, ಮುನಿಸುವ್ರತ- ಶನಿ, ನೇಮಿನಾಥ- ರಾಹು, ಪಾರ್ಶ್ವನಾಥ- ಕೇತು. ಈ ನವ ತೀರ್ಥಂಕರರನ್ನು ಪೂಜಿಸುವುದರಿಂದ ಗ್ರಹದೋಷಗಳು ಪರಿಹಾರವಾಗುತ್ತವೆ ಎಂಬುದು ಇಲ್ಲಿನ ನಂಬಿಕೆಯಾಗಿದೆ. ಕೆಲವು ಗೋಲಗಳ ಒಳಗೆ ಆಯಾ ಗ್ರಹದ ಅಧಿಪತಿಯ ಮೂರ್ತಿಗಳಿವೆ. ಸೇತುವೆಯೊಂದು ಈ ಗ್ರಹಗಳ ನಡುವೆ ಓಡಾಟಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಸೇತುವೆಯ ಮೇಲೆ ಸಾಗಿದಂತೆ ತೀರ್ಥಂಕರರ ಪ್ರತಿಮೆಗಳು ಜತೆಗೆ ಮಂದಿರದ ಗೋಪುರ ಮತ್ತು ಸುಮೇರು ಪರ್ವತದ ದರ್ಶನವೂ ಆಯಿತು.

ನವಗ್ರಹ ತೀರ್ಥ ನಿರ್ಮಾಣ ಕಾರ್ಯ

ಈ ನವಗ್ರಹ ತೀರ್ಥವು 45 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. 2005ರ ಜನವರಿಯಲ್ಲಿ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಸುಮಾರು ಒಂದು ವರ್ಷದಲ್ಲಿ ಏಕಶಿಲಾ ಪ್ರತಿಮೆಗಳ ಕೆತ್ತನೆಯು ಪೂರ್ಣಗೊಂಡಿತು. ಶ್ರೀ ಗುಣಧರ ನಂದಿ ಮಹಾರಾಜರು ಈ ಯೋಜನೆಯ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿದ್ದರು. ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಮತ್ತು ಸ್ವಯಂಸೇವಕರು ಇದರ ನಿರ್ಮಾಣ ಕಾರ್ಯದಲ್ಲಿ ನೆರವು ನೀಡಿದ್ದರು. 2009ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಜತೆಗೆ ಈ ಕ್ಷೇತ್ರ ಲೋಕಾರ್ಪಣೆಗೊಂಡಿತು.

ಸುಮೇರು ಪರ್ವತವು ಜೈನ ವಿಶ್ವವಿಜ್ಞಾನದ ಕೇಂದ್ರವಾಗಿದೆ. ಈ ನವಗ್ರಹ ತೀರ್ಥದಲ್ಲಿ, ವಿಶ್ವದಲ್ಲಿಯೇ ಅತಿ ಎತ್ತರದ ಸುಮೇರು ಪರ್ವತದ ಪ್ರತಿಕೃತಿ ಇದೆ. ಇದು 405 ಅಡಿ ಎತ್ತರವಿದ್ದು ಸಾಕಷ್ಟು ದೂರದಿಂದಲೇ ಗೋಚರಿಸುತ್ತದೆ. 2025ರ ಜನವರಿ15-20ರವರೆಗೆ ನಡೆದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು, ನವನಿರ್ಮಾಣದ ಸುಮೇರು ಪರ್ವತವನ್ನು ಲೋಕಾರ್ಪಣೆ ಮಾಡಿದರು.

ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಯಾತ್ರಿ ನಿವಾಸ, ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಒಟ್ಟಾರೆ ವರೂರು ನವಗ್ರಹ ತೀರ್ಥ ನಾನು ನೋಡಿದ ಇತರ ಎಲ್ಲಾ ನವಗ್ರಹ ಕ್ಷೇತ್ರಗಳಿಗಿಂತ ವಿಭಿನ್ನವಾಗಿತ್ತು.

Untitled design - 2026-04-11T150949.120

ಮಾಹಿತಿ ಪೆಟ್ಟಿಗೆ

ವರೂರು ನವಗ್ರಹ ತೀರ್ಥಕ್ಕೆ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಏಳೂವರೆಯ ತನಕ ವೀಕ್ಷಣೆಗೆ ಅವಕಾಶವಿರುತ್ತದೆ. ಪ್ರವೇಶ ಉಚಿತವಾಗಿದ್ದು, ಯಾವುದೇ ಎಂಟ್ರಿ ಫೀಸ್‌ ಇರುವುದಿಲ್ಲ.

ದಾರಿ ಹೇಗೆ?

ಹುಬ್ಬಳ್ಳಿ ಹತ್ತಿರದ ರೈಲು ನಿಲ್ದಾಣವಾಗಿದ್ದು, ಹುಬ್ಬಳ್ಳಿಯಿಂದ ವರೂರು ಕೇವಲ 18 ಕಿಮೀ ದೂರದಲ್ಲಿದೆ. ಸ್ಥಳೀಯ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಬಸ್‌, ಕ್ಯಾಬ್‌, ಆಟೋ ಮೂಲಕವೂ ನವಗ್ರಹ ತೀರ್ಥಕ್ಕೆ ತಲುಪಬಹುದು.