ವೆಂಕಟಾಪುರದ ಸ್ವಯಂಭೂ ಶ್ರೀ ವೆಂಕಟೇಶ
ಸಾಕ್ಷಾತ್ ವೆಂಕಟೇಶ್ವರ ಕನಸಿನಲ್ಲಿ ಬಂದು, ತಾನು ಸೊರಟೂರಿನ ಉತ್ತರ ದಿಕ್ಕಿನಲ್ಲಿರುವ ಗುಡ್ಡದ ತಪ್ಪಲಿನಲ್ಲಿ ಇರುವದಾಗಿಯೂ, ತನ್ನ ಮೇಲೆ ಹುತ್ತ ಬೆಳೆದು ಎಲ್ಲರೂ ಕಸ ಹಾಕುತ್ತಿದ್ದಾರೆಂದು ತಿಳಿಸಿದನು. ಪ್ರತಿದಿನ ಒಂದು ಆಕಳು ತನಗೆ ಕ್ಷೀರಾಭಿಷೇಕ ಮಾಡುತ್ತಿರುವುದಾಗಿಯೂ ವೆಂಕಟೇಶ್ವರ ಸ್ವಾಮಿ ತಿಳಿಸಿದನು. ಆ ಸ್ಥಳಕ್ಕೆ ಹೋಗಿ ಹುತ್ತವನ್ನು ತೆಗೆಸಿದಾಗ ಅಲ್ಲಿ ಚಿಕ್ಕದೊಂದು ಕರೀ ಬಂಡೆ ಇದ್ದು, ರೇಖಾರೂಪದಲ್ಲಿ ಶ್ರೀ ವೆಂಕಟೇಶನ ವಿಗ್ರಹ ಕಂಡು ಬಂದಿತು.
ಗದಗದಿಂದ ಸುಮಾರು 25 ಕಿಮೀ ದೂರದಲ್ಲಿ ವೆಂಕಟಾಪುರ ಹೆಸರಿನ ಗ್ರಾಮವಿದೆ. ಅಲ್ಲಿ ಸ್ವಯಂಭೂ ಶ್ರೀ ವೆಂಕಟೇಶ ದೇವಸ್ಥಾನವಿದೆ. ಸೊರಟೂರು ಗ್ರಾಮದ ಶ್ರೀ ವೆಂಕಪ್ಪಯ್ಯ ದೇಸಾಯಿ ಹೆಸರಿನವರೊಬ್ಬರು ಪ್ರತಿವರ್ಷ ನವರಾತ್ರಿ ಉತ್ಸವಕ್ಕೆ ತಿರುಪತಿಗೆ ಹೋಗುತ್ತಿದ್ದರು. ಕಾಲಾನಂತರದಲ್ಲಿ ಅವರಿಗೆ ವೃದ್ಧಾಪ್ಯದಿಂದಾಗಿ ತಿರುಪತಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅದರಿಂದ ನೊಂದ ವೆಂಕಪ್ಪಯ್ಯನವರು ಉಪವಾಸ ಕೈಗೊಂಡರು. ಅವರ ಭಕ್ತಿಗೆ ಮೆಚ್ಚಿ ವೆಂಕಟೇಶ್ವರ ಕನಸಿನಲ್ಲಿ ಬಂದು ತಾನು ಸೊರಟೂರಿನ ಉತ್ತರ ದಿಕ್ಕಿನಲ್ಲಿರುವ ಗುಡ್ಡದ ತಪ್ಪಲಿನಲ್ಲಿ ಇರುವದಾಗಿಯೂ, ತನ್ನ ಮೇಲೆ ಹುತ್ತ ಬೆಳೆದು ಎಲ್ಲರೂ ಕಸ ಹಾಕುತ್ತಿದ್ದಾರೆಂದು ತಿಳಿಸಿದನು. ಪ್ರತಿದಿನ ಒಂದು ಆಕಳು ತನಗೆ ಕ್ಷೀರಾಭಿಷೇಕ ಮಾಡುತ್ತಿರುವುದಾಗಿಯೂ ವೆಂಕಟೇಶ್ವರ ಸ್ವಾಮಿ ತಿಳಿಸಿದನು. ಅದೇ ಸಮಯದಲ್ಲಿ ದನಕಾಯುವ ವ್ಯಕ್ತಿ ಅವರ ಮನೆಯ ಆಕಳು ಆ ಸ್ಥಳದಲ್ಲಿಯೇ ಪ್ರತಿದಿನ ಹಾಲು ತಾನಾಗಿಯೇ ಕರೆಯುತ್ತಿರುವದಾಗಿ ತಿಳಿಸಿದನು. ಆಗ ಆ ಹುತ್ತವನ್ನು ತೆಗೆಸಿದಾಗ ಅಲ್ಲಿ ಚಿಕ್ಕದೊಂದು ಕರೀ ಬಂಡೆ ಇದ್ದು ರೇಖಾರೂಪದಲ್ಲಿ ಶ್ರೀ ವೆಂಕಟೇಶನ ವಿಗ್ರಹ ಕಂಡು ಬಂದಿತು. ಅಲ್ಲಯೇ ಶ್ರೀ ದೇಸಾಯಿಯವರು ಗುಡಿ ಕಟ್ಟಿಸಿದರು.
ಇದನ್ನೂ ಓದಿ: ಅಮೆಜಾನ್ ಪ್ರೈಮ್‌ನ ಉದ್ಯೋಗಕ್ಕೆ ಗುಡ್ ಬೈ
ಶ್ರೀ ವೆಂಕಟೇಶನಿಗೆ ಸದಾ ಪೂಜೆ ನಡೆಯಲೆಂಬ ಉದ್ದೇಶದಿಂದ ಈ ದೇವಸ್ಥಾನವನ್ನು ಶ್ರೀ ಕೂಡಲಿ ಶೃಂಗೇರಿ ಮಠಕ್ಕೆ ದಾನವಾಗಿ ನೀಡಿದರು. ಮುಂದೆ 1885ರಲ್ಲಿ ಶಿರಹಟ್ಟಿಯ ಸಖುಬಾಯಿ ಜೋಗಳೇಕರ ಎಂಬುವರು ಶ್ರೀ ಮಠದ ಆಜ್ಞೆ ಪಡೆದು ವೆಂಕಟಾಪುರದಲ್ಲಿ ನೆಲೆಸಿ ನಿತ್ಯ ಪೂಜೆ ಮತ್ತು ನವರಾತ್ರಿಯಲ್ಲಿ ಉತ್ಸವಾದಿಗಳನ್ನು ಕೈಕೊಂಡರು. ಅದಲ್ಲದೇ ರೂ.1200 ಸಾಂಗ್ಲಿ ಸಂಸ್ಥಾನದಲ್ಲಿ ಇರಿಸಿ ಅದರ ಬಡ್ಡಿಯಿಂದ ದೇವಸ್ಥಾನದಲ್ಲಿ ನಿತ್ಯ ಪೂಜೆಗೆ ಸಹಕಾರಿಯಾಗುವಂತೆ ನೋಡಿಕೊಂಡರು.

20ನೆಯ ಶತಮಾನದಲ್ಲಿ ಜಾಲಿಹಾಳ ಗ್ರಾಮದ ಶ್ರೀ ಅನಂತಶಾಸ್ರಿಗಳು ಕಪ್ಪತಗುಡ್ಡದಲ್ಲಿ ತಪಸ್ಸು ಆಚರಿಸುತ್ತಿದ್ದರು. ಆಗ ಅವರ ಕನಸಿನಲ್ಲಿ ವೆಂಕಟೇಶ್ವರನು ʻವೆಂಕಟಾಪುರಕ್ಕೆ ಹೋಗಿ ತನ್ನ ಸೇವೆ ಮಾಡುʼ ಎಂದು ಹೇಳಿದನು. ಅದರಂತೆ ಅನಂತಶಾಸ್ರಿಗಳು ವೆಂಕಟಾಪುರಕ್ಕೆ ಬಂದು ಸೇವೆ ಮಾಡಲು ಆರಂಭಿಸಿದರು. ಮತ್ತೆ ವೆಂಕಟೇಶ್ವರನು ಕನಸಿನಲ್ಲಿ ಬಂದು ಅವರಿಗೆ ಉತ್ತರಕ್ಕೆ ಹೋದರೆ ನಿಮ್ಮ ಗುರುವು ದೊರಕುವರೆಂದು ತಿಳಿಸಿದನು. ಅದರಂತೆ ಅನಂತಶಾಸ್ರಿಗಳು ಉತ್ತರಕ್ಕೆ ಹೋದಾಗ ಗೊಂದಾವಲಿಯ ಬ್ರಹ್ಮಚೈತನ್ಯ ಮಹಾರಾಜರ ದರ್ಶನವಾಯಿತು. ಅವರ ಶಿಷ್ಯತ್ವ ಸ್ವೀಕರಿಸಿ ಗುರುಗಳಿಂದ ಬ್ರಹ್ಮಾನಂದರೆಂದು ನಾಮಾಭಿದಾನ ಹೊಂದಿದರು. 1906ರಲ್ಲಿ ಶ್ರೀ ಮಠದ ಅಪ್ಪಣೆ ಪಡೆದು ನಿತ್ಯ ಸೇವೆ ಮುಂದುವರೆಸಿದರು. ಶ್ರೀ ಕೂಡಲಿ ಮಠದ ಶ್ರೀ ಶಂಕರ ಭಾರತಿ ಸ್ವಾಮಿಗಳ ಚಾತುರ್ಮಾಸವನ್ನು ವೆಂಕಟಾಪುರದಲ್ಲಿ ನೆರವೇರಿಸಿದರು. ಆಷಾಢ ಶುದ್ಧ ಪೌರ್ಣಿಮೆಯಿಂದ ಭಾದ್ರಪದ ಶುದ್ಧ ಪೂರ್ಣಿಮೆಯವರೆಗೆ ಇಲ್ಲಿ ಪ್ರತಿನಿತ್ಯ ಪ್ರವಚನ ಮತ್ತು ಅನ್ನಸಂತರ್ಪಣೆ ನಡೆಯುತ್ತಿದೆ.
ಪ್ರವೇಶ ದ್ವಾರದಲ್ಲಿ ಬಲಬದಿಗೆ ಶ್ರೀ ವರಾಹದೇವರ ಮೂರ್ತಿ ಇದೆ, ಎಡಬದಿಗೆ ಶ್ರೀ ಬ್ರಹ್ಮಾನಂದ ಮಹಾರಾಜ ಮತ್ತು ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ಗುಡಿ ಇವೆ. ಮುಂದಕ್ಕೆ ಹೋದರೆ ಸಕ್ಕೂಬಾಯಿ ದ್ವಾರ ಇದೆ. ಒಳಾಂಗಣದಲ್ಲಿ ಗರ್ಭಗುಡಿ ಇದೆ. ಗರ್ಭಗುಡಿಯ ಎದುರಿಗೆ ಶ್ರೀ ವೆಂಕಟೇಶ ದೇವರ ಮೂರ್ತಿ, ಅದರ ಬಲಬದಿಯಲ್ಲಿ ಪದ್ಮಾವತಿ ಮತ್ತು ಎಡಬದಿಯಲ್ಲಿ ಶ್ರೀ ಲಕ್ಷ್ಮಿ ದೇವಿಯ ಮೂರ್ತಿಗಳು ಇದ್ದು ದರ್ಶನವಾಗುತ್ತಲೇ ಮನದಲ್ಲಿ ಧನ್ಯತಾ ಭಾವ ತಾನೇ ತಾನಾಗಿ ಬರುತ್ತದೆ. ಹೊರಗಡೆ ಪ್ರಾಂಗಣದಲ್ಲಿ ಗರ್ಭಗುಡಿಯ ಹಿಂದಿನ ಭಾಗದಲ್ಲಿ ಶ್ರೀ ದತ್ತಾತ್ರೇಯರ ಸುಂದರ ಮೂರ್ತಿ ಇದೆ. ಪ್ರಾಂಗಣದಲ್ಲಿ ಆಂಜನೇಯ, ಕಾಶಿ ವಿಶ್ವನಾಥನ ಚಿಕ್ಕ ಗುಡಿಗಳಿವೆ.
ದಾರಿ ಹೇಗೆ?
ಗದಗ ನಗರ ಆಸುಪಾಸಿನಲ್ಲಿ ಮೂರು ವೆಂಕಟಾಪುರಗಳು ಇವೆ. ಹಾಗಾಗಿ ಮ್ಯಾಪ್ ಹುಡುಕಲು ಗೂಗಲ್‌ನಲ್ಲಿ ವೆಂಕಟೇಶ ದೇವಸ್ಥಾನ ವೆಂಕಟಾಪುರ ಎಂದು ಹುಡುಕಿ ಈ ಸ್ಥಳದ ಮಾರ್ಗವನ್ನು ಕಂಡುಕೊಳ್ಳಬಹುದು. ಗದಗದಿಂದ ಸುಮಾರು 25 ಕಿಮೀ ದೂರದಲ್ಲಿ ಈ ವೆಂಕಟಾಪುರವಿದೆ. ಸರಕಾರಿ ಮತ್ತು ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.