• ಮೋಹನ ಭಟ್ಟ ಅಗಸೂರು

ಅಮರನಾಥ ಯಾತ್ರೆ ಪ್ರತಿ ಶಿವಭಕ್ತನ ಕನಸು. ಇದು ನನಸಾಗಲು ಅಮರನಾಥನ‌ ಆಶೀರ್ವಾದ ಬೇಕು. ಹದಿನೈದು ವರ್ಷಗಳ ಹಿಂದೆ ನಾವು ಅಮರನಾಥ ಯಾತ್ರೆಗೆ ಹೋದಾಗ ಇಂಥ ಪವಿತ್ರ ಕ್ಷೇತ್ರ ಹೇಗೆ ನಿರ್ಮಾಣವಾಯಿತು? ಎಂಬ ಕುತೂಹಲ ಅನಾವರಣವಾಗಿತ್ತು.

ಅಮರನಾಥಕ್ಕೆ ಹೋಗಲು ಎರಡು ಮಾರ್ಗಗಳಿವೆ ಒಂದು ಬಾಲ್ತಾಲ್ ಮೂಲಕ, ಇನ್ನೊಂದು ಪೆಹಲ್ಗಾಮ್‌ ಮೂಲಕ. ನಾವು ಹೋಗಿದ್ದು ಬಲ್ತಾಲ್ ಮೂಲಕ. ಶ್ರೀನಗರದಿಂದ ಕಾರ್ಗಿಲ್‌ಗೆ ಹೋಗುವ ಮಾರ್ಗದಲ್ಲಿ ಬಲ್ತಾಲ್‌ ಇದೆ. ಇಲ್ಲಿಗೆ ಹೋಗುವಾಗ ದಾರಿಯುದ್ದಕ್ಕೂ ಕಾಣುವ ದೃಶ್ಯಗಳು ಮನೋಜ್ಞವಾಗಿವೆ. ಬಲ್ತಾಲ್‌ನಿಂದ ಅಮರನಾಥಕ್ಕೆ ಹೆಲಿಕಾಪ್ಟರ್‌ ಮೂಲಕ ಹೋಗವವರ ಸಂಖ್ಯೆಗಿಂತ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರೇ ಹೆಚ್ಚು. ಬಲ್ತಾಲ್‌ನಿಂದ ಹೋಗುವವರಿಗೆ ಮಾರ್ಗದರ್ಶನ, ಪ್ರಮಾಣಪತ್ರ, ಗುರುತಿನ ಚೀಟಿ ಪರಿಶೀಲನೆ ಹಾಗೂ ಅನುಮತಿ ಚೀಟಿ ಇಲ್ಲಿಯೇ ನೀಡುತ್ತಾರೆ. ಹೀಗಾಗಿ ಹಲವರು ಮುನ್ನದಿನವೇ ಆಗಮಿಸಿ ಟೆಂಟ್‌ನಲ್ಲಿ ಉಳಿದು ಸಾಗುತ್ತಾರೆ.

ಇದನ್ನೂ ಓದಿ: ಹಿಮಾಲಯದ ಎದೆಯಲ್ಲಿ ಭಾರತೀಯ ವೀರರ ಅಮರ ತಾಣ

ಹೆಲಿಕಾಪ್ಟರ್‌ನಲ್ಲಿ ಪಂಚತರಣಿಗೆ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಅಥವಾ ಕುದುರೆ ಮೇಲೆಯೂ ಹೋಗಬಹುದು. ಇಲ್ಲಿಯೂ ಟೆಂಟ್ ಹಾಗೂ ಆಹಾರ ವ್ಯವಸ್ಥೆ ಇದೆ. ಸುಮಾರು ಹದಿನಾಲ್ಕು ಕಿಮೀ ಕ್ರಮಿಸಿದ ನಂತರ ಗುಹೆಯ ದ್ವಾರ ಕಾಣಿಸುತ್ತದೆ. ಅಲ್ಲಿಯವರೆಗೂ ಕಾಲ್ನಡಿಗೆಯಲ್ಲಿ ಸಾಗಬೇಕು. ಮಂಜಿನ ಗಡ್ಡೆಯಲ್ಲಿ ಶಿವಲಿಂಗ ನಿರ್ಮಾಣವಾಗಿದೆ. ಅದನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವುದೇ ಆನಂದ. ನೋಡಲು ಆ ಶಿವಲಿಂಗ ಅಷ್ಟು ಆಕರ್ಷಣೀಯವಾಗಿದೆ. ಈ ಶಿವಲಿಂಗ ದರ್ಶನ ಯಾತ್ರೆಯ ಒಂದು ಪಾಲು ಮಾತ್ರ. ಅಲ್ಲಿಂದ ಮರಳಬೇಕು. ಸಂಜೆಯ ನಂತರ ಅಲ್ಲಿ ಪಾದಯಾತ್ರೆ ಮತ್ತೊಂದು ಮಗದೊಂದು ಎಲ್ಲವೂ ಸ್ಥಗಿತವಾಗುತ್ತವೆ. ಹಾಗಾಗಿ ‌ಸೈನಿಕರ ನೆಲೆಯಲ್ಲಿ ನಿರ್ಮಿಸಲಾದ ಟೆಂಟ್‌ಗಳಲ್ಲಿ ವಾಸ್ತವ್ಯ ಹೂಡಬೇಕು. ಒಂದು ಟೆಂಟ್‌ನಲ್ಲಿ ಹತ್ತಾರು ಜನರಿರುತ್ತಾರೆ. ಅದೂ ಕತ್ತಲೆಯಲ್ಲಿ. ಅಷ್ಟೊತ್ತಿಗೆ ಅಲ್ಲಿ ಬಿಸಿಯಾದ ಚಹಾ, ತಿನ್ನಲು ಅನ್ನ- ಸಾಂಬಾರು ಬಿಟ್ಟು ಏನೂ ಸಿಗದು. ಯಾವುದಕ್ಕೂ ಹಣ ಕೊಡಬೇಕಿಲ್ಲ. ಆಹಾರ ಉಚಿತ. ಅಲ್ಲಿ ಸೈನಿಕರೇ ಯಾತ್ರಿಗಳಿಗೆ ಮಾರ್ಗದರ್ಶನ, ಸಲಹೆ ನೀಡುತ್ತಾರೆ. ಯಾತ್ರಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ತೋರುತ್ತಾರೆ. ನಮಗೆ ಅವರು ರಾತ್ರಿ ಬೀಸುವ ಬಿರುಗಾಳಿ, ಮಳೆ, ಹಿಮಪಾತದ ಬಗ್ಗೆ ಮೊದಲೇ ತಿಳಿಸಿದ್ದರು. ಹಾಗಾಗಿ ನಾವು ಎಚ್ಚರಿಕೆಯಿಂದಿದ್ದೆವು. ಇದು ನಾನಂತೂ ಎಂದಿಗೂ ಮರೆಯಲಾಗದ ಅನುಭವದ ಯಾತ್ರೆ.

Untitled design - 2026-09-10T184028.249

ಮಾಹಿತಿ ಪೆಟ್ಟಿಗೆ:

  • ಅಮರನಾಥ ಗುಹಾಲಯ ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿದೆ.
  • ಪ್ರತಿವರ್ಷ ನಾಲ್ಕೈದು ಲಕ್ಷ ಯಾತ್ರಿಕರು ಅಮರನಾಥ ದರ್ಶನಕ್ಕೆ ಬರುತ್ತಾರೆ.
  • ಪ್ರತಿವರ್ಷ 50- 60 ದಿನಗಳ ಸಮಯ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ. ಹವಾಮಾನಕ್ಕೆ ತಕ್ಕಂತೆ ಈ ಸಮಯ ಬದಲಾಗಬಹುದು.

ದಾರಿ ಹೇಗೆ?

ಅನಂತನಾಗ್ ಜಿಲ್ಲೆಯ ಪೆಹಲ್ಗಾಮ್‌ನಿಂದ‌ 45 ಕಿಮೀ ಹಾಗೂ ಬಲ್ತಾಲ್‌ನಿಂದ 14 ಕಿಮೀ ದೂರದಲ್ಲಿ ಅಮರನಾಥ ಗುಹೆ ಇದೆ.