• ಮಿಥುನ್ ಆಚಾರ್ಯ

ಒಬ್ಬನೇ ಪುರಿಗೆ ಹೋಗಲು ನಿರ್ಧರಿಸಿದೆ. ಯಾಕೆಂದರೆ ನನ್ನ ಮನಸ್ಸು ತುಂಬಾ ವಿಚಲಿತವಾಗಿತ್ತು. ನನ್ನ ಲೈಫ್ ಅಲ್ಲಿ ಯಾರೂ ಇಲ್ಲ ಅಂತನಿಸುತ್ತಿತ್ತು. ಹೋಗುವುದಕ್ಕೆ ಗಟ್ಟಿಮನಸ್ಸು ಮಾಡಿದ್ದೆನೋ ಸರಿ ಆದರೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವಾಗ ಗೆಳೆಯ ಕೌಶಿಕ್‌ ನನಗೆ ಪುರಿಗೆ ಹೋಗಲು ಟ್ರೇನ್‌ ಟಿಕೇಟ್ ಬುಕ್‌ ಮಾಡಿದರು. ವಾಪಸ್‌ ಬರಲು ವೇಟಿಂಗ್‌ ಲಿಸ್ಟ್‌ನಲ್ಲಿತ್ತು. ಒಂದು ವಾರ ರಜೆ ಹಾಕಿ ಮನೆಯಲ್ಲಿ ಒಬ್ಬನೇ ಹೋಗುತ್ತೇನೆ ಎಂದು ಹೇಳಿ, ಗೆಳೆಯರಿಗೆ ಯಾರಿಗೂ ಹೇಳದೇ ಪುರಿಗೆ ಹೊರಟಿದ್ದೆ.

Untitled design - 2026-04-27T123156.421

ಶನಿವಾರ ರಾತ್ರಿ 8:30ಕ್ಕೆ ಹೊರಟ ಟ್ರೇನ್‌ ಸೋಮವಾರ ಪುರಿ ತಲಪಿತು. ಎರಡು ದಿನ ಟ್ರೇನ್‌ನಲ್ಲಿ ಕಳೆದ ನನಗೆ ನನ್ನ ಸೋಲಿನ ನೆನೆಪೆ ಕಾಡುತ್ತಿತ್ತು. ಅದರೊಂದಿಗೆ ಜಗನ್ನಾಥನನ್ನು ನೋಡುವ ತವಕವೂ ನನ್ನಲಿತ್ತು. ಬಂದು ಪುರಿಯಲ್ಲಿ ಇಳಿದಾಗ ಏನು ಗೊತ್ತಿಲ್ಲ ಹೊಸ ಊರು, ಹೊಸ ಭಾಷೆ, ಹೊಸ ಜನ ಮೊದಲೇ ಸಂಕೋಚದ ಸ್ವಭಾವದ ನಾನು ಏನು ಮಾಡುವುದು ಗೊತ್ತಾಗದೆ, ಸ್ಟೇಷನ್‌ ಇಂದ ಹೊರಗೆ ಬಂದೆ. ಅಲ್ಲಿ ಆಟೋದವನು ನನ್ನ ಕರೆದು ಏನಾಗಬೇಕು ಎಂದು ಹಿಂದಿಯಲ್ಲಿ ಕೇಳಿದ. ನನಗೆ ಬರುವ ಅರ್ಧಂಬರ್ಧ ಹಿಂದಿಯಲ್ಲಿ ʼಒಂದು ರೂಮ್ ಬೇಕುʼ ಎಂದೆ. ಅವನು ತಕ್ಷಣ ಒಂದು ಹೋಟೆಲ್‌ಗೆ ಕರೆದುಕೊಂಡು ಹೋದ. ಅಲ್ಲಿ ಒಂದು ರೂಮ್‌ಗೆ 1000ರು. ಎಂದರು.

ಇದನ್ನೂ ಓದಿ: ಸಹಸ್ರಲಿಂಗಗಳಿಗೆ ಶಾಲ್ಮಲೆ ನದಿಯ ನಿತ್ಯಾಭಿಷೇಕ

ನನ್ನ ಹತ್ತಿರ ಅಷ್ಟೊಂದು ಹಣ ಇಲ್ಲವಾಗಿತ್ತು. ಅಲ್ಲಿಂದ ಹೊರಗೆ ಬಂದು ನೋಡಿದರೆ ಸಮುದ್ರದ ಅಲೆಗಳ ಸಪ್ಪಳ ಕೇಳಿಸಿತು. ಅಲ್ಲೆ ಹತ್ತಿರದಲ್ಲಿದ್ದ ಪಬ್ಲಿಕ್‌ ವಾಶ್‌ರೂಂಗೆ ಹೋಗಿ 20ರು.ಗೆ ಸ್ನಾನ ಮಾಡಿ ಪಂಚೆ ಶರ್ಟ್ ಹಾಕಿ ಜಗದೊಡೆಯನ ನೋಡಲು ಹೊರಟೆ. ದೇವಸ್ಥಾನ ಒಳಗೆ ಯಾವುದೇ ಮೊಬೈಲ್‌, ವಾಚ್‌, ಬ್ಯಾಗ್‌ ಅಥವಾ ವಾಚ್‌ ತೆಗೆದುಕೊಂದು ಹೋಗುವಹಾಗಿಲ್ಲ. ಏನು ಗೊತ್ತಿಲ್ಲದ ಊರು, ಜತೆಗೆ ಯಾರೂ ಇಲ್ಲ ಮನಸಲ್ಲಿ ಒಂದು ರೀತಿಯ ಸಂಕೋಚ, ಭಯ ಆದರೂ ನನ್ನೊಡೆಯ ಜಗನಾಥ ಇರುವವನೆಂದು ಧೈರ್ಯವಿತ್ತು. ಜನ ಸಾಗರದ ಸಾಲಿನಲ್ಲಿ ನಿಂತೆ ಒಬ್ಬನೇ.

ಆಗ ನನ್ನ ಹಿಂದೆ ಇಂದ ಒಬ್ಬ ಯುವಕ ಬೆನ್ನು ತಟ್ಟಿ ಕರೆದ. ʼವಾಟ್ಸ್‌ ಯುವರ್‌ ನೇಮ್‌ ಬ್ರೊ?ʼ ಎಂದ. ನನ್ನ ಹೆಸರು ಹೇಳಿ ಅವನನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡೆ. ಹಾಗೆ ಮಾತಾಡುತ್ತ ಇಬ್ಬರೂ ಸ್ನೇಹಿತರಾದೆವು. ದೇವಸ್ಥಾನದ ಬಾಗಿಲು ತೆರೆಯಿತು. ಅಷ್ಟು ಜನರ ಮಧ್ಯೆ ಆತಂಕದಲ್ಲಿ ನಿಂತಾಗ, ಶ್ರವಣ್ ನನ್ನ ಕೈ ಹಿಡಿದು ಆ ಜನರ ಮಧ್ಯೆ ನುಸುಳಿಕೊಂಡು ಎಲ್ಲರನ್ನು ಸರಿಸಿ ದೇವಸ್ಥಾನದ ಒಳಗೆ ಹೋದ. ಎಲ್ಲ ನೂಕುನುಗ್ಗಲುಗಳನ್ನು ದಾಟಿ ಜಗದೊಡೆಯ ಜಗನಾಥನನ್ನು ಕಣ್ತುಂಬಿಕೊಂಡೆ. ಆ ದೇವ ನನ್ನ ಕಣ್ಣೆದುರು, ನಾನು ಅವನೆದುರು- ಮನಸಿಗೆ ಏನೋ ಆನಂದ, ತೃಪ್ತಿ! ಕಳೆದುಕೊಂಡ ಹುಮ್ಮಸ್ಸು ಮತ್ತೆ ಪುನಶ್ಚೇತನಗೊಂಡಿತು. ಆಮೇಲೆ ಶ್ರವಣ್ ಮತ್ತು ನಾನು ಹೊರಗೆ ಬಂದು ಪ್ರಸಾದದ ಮಡಕೆ ನೋಡಿದೆವು. ಗಾಳಿಯ ವಿರುದ್ಧ ದಿಕ್ಕಿಗೆ ಹಾರುವ ಧ್ವಜ, ಕಡಲ ದನಿ ದೇವಸ್ಥಾನಕ್ಕೆ ಕೇಳದಿರುವುದು ಅಲ್ಲಿನ ಅದ್ಭುತಗಳು! ಇವನೆಲ್ಲ ನೋಡಿ ಕಣ್ತುಂಬಿಕೊಂಡು ಆನಂದ ಪಟ್ಟೆವು. ಅಮೇಲೆ ಮನೆಗಳಿಗೆ ಪ್ರಸಾದ ಹಿಡಿದುಕೊಂಡು ದೇವಸ್ಥಾನದಿಂದ ಹೊರಗೆ ಬಂದೆವು. ಅವರು ಬೇಗ ಹೊರಟರು.

Untitled design - 2026-04-27T123147.333

ನಾನು ಒಬ್ಬನೇ ಸಮುದ್ರ ತೀರಕ್ಕೆ ಹೋದೆ. ಬಲೂನ್ ಮಾರುವವರು, ಐಸ್-ಕ್ರೀಮ್‌ ಮಾರುವವರು, ಮುಂತಾದ ಅಂಗಡಿಮುಂಗಟ್ಟು, ಹಳೆಕಾಲದ ಬಸ್, ಅಲ್ಲಿನ ಜನರ ಓಡಾಟ, ಆಟೋ, ಪ್ರವಾಸಿಗರು, ಎಲ್ಲರನ್ನು ನೋಡಿ ನನ್ನ ಮನಸಿನ ದುಗುಡ ಮಾಯವಾಯಿತು. ಮತ್ತೆ ನಿರಾಳವಾಗಿ ಉಸಿರು ಬಿಟ್ಟು ನನ್ನ ಊರಿಗೆ ಪ್ರಯಾಣ ಬೆಳೆಸಲು ರೈಲ್ವೆ ಸ್ಟೇಷನ್‌ಗೆ ಹೊರಟೆ. ಪುರಿಯಿಂದ ಖುರ್ದಾಜಂಕ್ಷನ್‌ಗೆ ಹೊರಟೆ. ಅಲ್ಲಿ ನನಗೆ ಮತ್ತೊಂದು ಆಘಾತ ಕಾದಿತ್ತು. ಅದೇನೆಂದರೆ ಖುರ್ದಾಜಂಕ್ಷನ್‌ನಿಂದ ಬೆಂಗಳೂರಿಗೆ ಇದ್ದ ನನ್ನ ರೈಲು ಟಿಕೆಟ್ ಕ್ಯಾನ್ಸಲ್‌ ಆಗಿತ್ತು. ರೈಲ್ ಬರುವುದು ಕೂಡ ತಡ ಎಂದರು. ಕೈಯಲ್ಲಿ ಹಣ ಇಲ್ಲ, ಭಾಷೆ ಬರಲ್ಲ! ಊಟ ಮಾಡುವ ಮನಸ್ಸಿರಲಿಲ್ಲ. ಆವಾಗ ರೈಲ್ವೆ ಸ್ಟೇಷನ್ ಹೊರಗಡೆ ಬಂದೆ. ಅಲ್ಲಿ ಒಂದು ಮರದ ಬುಡದಲ್ಲಿ ಕುಳಿತಿದ್ದ ಜನರ ಜತೆಗೆ ನಾನು ಕುಳಿತೆ. ಬೇಸರದಲ್ಲಿ ಕುಳಿತಿದ್ದಾಗ ಮತ್ತೆ ಜಗದೊಡೆಯನ ಚಮತ್ಕಾರ ನಡೆಯಿತು. ನನ್ನ ಬ್ಲಾಕ್‌ ಮಾಡಿದ್ದವರು ಒಬ್ಬರು ನನಗೆ ಕಾಲ್‌ ಮಾಡಿದರು. ನನ್ನ ಮಾತು ಕೇಳಿ ಏನೋ ಸಮಸ್ಯೆ ಆಗಿದ್ಯಾ ಅಂತ ಕೇಳಿದರು. ಟಿಕೆಟ್ ಕ್ಯಾನ್ಸಲ್ ಆದ ವಿಷಯ ಹೇಳಿದೆ . ಆ ವಿಷಯ ಕೇಳಿದ ಮರುಕ್ಷಣದಲ್ಲಿ 3000rs ಕಳುಹಿಸಿದರು. ಆಗ ಸ್ವಲ್ಪ ನೆಮ್ಮದಿಯಾಯಿತು. ನನ್ನ ಜೀವನದಲ್ಲಿ ಹೀಗೆ ಆಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಹಾಗೆ ಮರದ ಕೆಳಗೆ ಮಲಗಿದೆ. ಅಮ್ಮನ ಮಡಿಲಲ್ಲಿ ಮಲಗಿದ ಹಾಗೆ ಅನಿಸಿತು. ಅಲ್ಲೇ ನಿದ್ದೆಗೆ ಜಾರಿದೆ. ಎದ್ದು ನೋಡುವಾಗ ಸಂಜೆ. ಎದ್ದು ಮುಖ ತೊಳೆದು ಟಿಕೆಟ್‌ ಖರೀದಿಸಿದೆ. ರಾತ್ರಿ 8:30ಕ್ಕೆ ರೈಲು ಬಂತು. ಬೆಂಗಳೂರು ತಲುಪಿದೆ.

ಆದರೆ ನನ್ನ ತಲೆಯಲ್ಲಿ ಒಂದು ಯೋಚನೆ ಹಾಗೆ ಉಳಿದಿತ್ತು. ಶ್ರವಣ್ ಯಾರಿರಬಹುದು? ನನಗೆ ಯಾಕೆ ಸಂಪೂರ್ಣ ದೇವಸ್ಥಾನ ತೋರಿಸಿ, ದೇವರನ್ನು ದರ್ಶನ ಮಾಡಿಸಿ, ಒಳಗೆ ಹೋಗಿ ಹೊರಗೆ ಬರುವ ತನಕ ಜತೆಗಿದ್ದ? ಇದನ್ನು ಕೌಶಿಕ್‌ಗೆ ಕೇಳಿದಾಗ, ʼ ಮನಸಲ್ಲಿ ನೋವು, ಆತಂಕ, ಕಳವಳ ಇದ್ದವರಿಗೆ ತನ್ನ ಸನ್ನಿಧಿಯಲ್ಲಿ ತಾನೆ ಖುದ್ದಾಗಿ ಬಂದು ಸಹಾಯ ಮಾಡುತ್ತಾನೆ ಎನ್ನುವ ವಾಡಿಕೆ ಇದೆ ನಿನಗೂ ಹಾಗೆ ಆಗಿರಬೇಕುʼ ಎಂದರು. ಇದನ್ನ ಕೇಳಿ ಮತ್ತೆ ಆಶ್ಚರ್ಯ ಹಾಗೂ ಖುಷಿ ಎರಡೂ ಆಯಿತು. ಆತ ಯಾರು ಅಂತ ಗೊತ್ತಿಲ್ಲ ಆದರೆ, ಅಲ್ಲಿಗೆ ಹೋಗುವಾಗ ಇದ್ದ ನೋವು, ತಳಮಳ, ಆತಂಕ, ಎಲ್ಲಾ ನಿವಾರಣೆ ಆದದ್ದಂತೂ ನಿಜ.

ಪುರಿ ಜಗನ್ನಾಥ ಮಾತ್ರ ಭಕ್ತ ಪ್ರಿಯ ಅಂತ ಮತ್ತೆ ಅರಿವಾಗಿತ್ತು. ಮತ್ತೆ ಹಳೆಯದನೆಲ್ಲಾ ಮರೆತು ಹೊಸ ಪ್ರಯಾಣ ಬೆಳಿಸಿದೆ. ಅದಾದ ಮೇಲೆ ನನ್ನ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೆ.

ಲೇಖಕರು: ಹವ್ಯಾಸಿ ಬರಹಗಾರರು