ಶ್ರೀರಂಗಂ ದೇಗುಲದಲ್ಲಿ ರಾಮಾನುಜಾಚಾರ್ಯರು ಅಜರಾಮರ!
ಅವರು ಜೀವಿಸಿದ್ದು ಪೂರ್ಣ 120 ವರ್ಷ. ಅದು ಭಾರತದ ಪುರಾಣಕಾಲದಲ್ಲಿ ಉಲ್ಲೇಖಿಸಲಾಗುವ ಮನುಷ್ಯನ ಪೂರ್ಣ ಆಯಸ್ಸು. 1137 ರಲ್ಲಿ ಅವರು ನಿಧನ ಹೊಂದಿದ ನಂತರ ಅವರ ಮೂಲ ದೇಹವನ್ನು ಶ್ರೀರಂಗಮ್ನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸಂರಕ್ಷಿಸಿಡಲಾಯಿತು. ಈ ದೇವಾಲಯದಲ್ಲಿ ರಾಮಾನುಜರನ್ನೂ ಪೂಜಿಸಲಾಗುತ್ತದೆ. ದೇವಾಲಯದ ಪ್ರಾಂಗಣದಲ್ಲೇ ಅವರ ವಿಶೇಷ ಮಂದಿರವೂ ಇದೆ.
- ವಂದನ ಕೊಮ್ಮುಂಜೆ
ಈಜಿಪ್ಟ್ ಪಿರಮಿಡ್‌ಗಳ ಬಗ್ಗೆ ಕೇಳಿರುತ್ತೀರ ಅಥವಾ ಕೆಲವರಾದರೂ ಪಿರಮಿಡ್‌ಗಳನ್ನು ನೋಡಿಯೂ ಇರುತ್ತೀರಿ. ಸಾವಿನ ನಂತರದ ಜೀವನ ಹಾಗೂ ಶವಗಳನ್ನು ಸಂರಕ್ಷಿಸಿಡಲಿಕ್ಕಾಗಿ ಈ ಪಿರಮಿಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದು ಇತಿಹಾಸ ಹೇಳುತ್ತದೆ. ದೇಹ ಯಾವಾಗ ಉಸಿರಾಟ ನಿಲ್ಲಿಸುತ್ತೋ, ಅದಾದ ನಂತರ ಹೆಚ್ಚು ಹೊತ್ತು ಈ ದೇಹವನ್ನು ಭೂಮಿಯಲ್ಲಿ ಇಡಲಿಕ್ಕೆ ಆಗುವುದಿಲ್ಲ. ದೇಹ ಕೊಳೆಯುವುದಕ್ಕೆ ಶುರುವಾಗುತ್ತದೆ. ಯಾವುದಾದರೂ ರಾಸಾಯನಿಕ ಬಳಸಿ ಸಂರಕ್ಷಿಸಿದರೂ ಹೆಚ್ಚೆಂದರೆ 6 ತಿಂಗಳ ಕಾಲ ರಕ್ಷಿಸಿಡಬಹುದು. ಅಥವಾ 10 ಡಿಗ್ರಿ ಗಿಂತ ಕಡಿಮೆ ಉಷ್ಣಾಂಶದಲ್ಲಿ ಇದ್ದರೂ ದೇಹವನ್ನು ಕೊಳೆಯದಂತೆ ಇಡೋಕೆ ಸಾಧ್ಯವಿದೆ ಇಂಥ ಉಷ್ಣಾಂಶ ಪಿರಮಿಡ್‌ಗಳಿಲ್ಲಿರುತ್ತವೆ. ಆದರೆ ನಾವು ನೀವು ಇರುವ ಮತ್ತು ಬದುಕುತ್ತಿರುವ ಈ ವಾತಾವರಣದಲ್ಲಿ 884 ವರ್ಷಗಳಿಂದ ದೇಹವೊಂದನ್ನು ನಮ್ಮ ದೇಶದ ದೇವಾಲಯವೊಂದರಲ್ಲಿ ಸಂರಕ್ಷಿಸಲಾಗಿದೆ. ನಿಮಗೆ ಆಶ್ವರ್ಯವಾಗಬಹುದು. ಆದರೂ ಇದು ನಿಜ. ದಕ್ಷಿಣ ಭಾರತದ ತಮಿಳುನಾಡಿನ ಪ್ರಸಿದ್ದ ದೇವಾಲಯವಾದ ತಿರುಚರಾಪಳ್ಳಿಯ ಶ್ರೀರಂಗಮ್ನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸಂತರೊಬ್ಬರ ದೇಹವನ್ನು ಸಂರಕ್ಷಿಸಿಡಲಾಗಿದೆ. ಅದೂ ಯಾವುದೇ ರಾಸಾಯನಿಕವನ್ನು ಬಳಸದೆ.

ವಿಷ್ಣುಪಂಥದ ಸಂತನ ದೇಹ
ಇದು ಆಚಾರ್ಯತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರ ದೇಹ. ನೀವೆಲ್ಲ ಇವರ ಬಗ್ಗೆ 6ನೇ ತರಗತಿಯಲ್ಲೋ 7ನೇ ತರಗತಿಯಲ್ಲೋ ಓದಿರುತ್ತೀರಿ. ವಿಶಿಷ್ಟಾದ್ವೈತ ಎನ್ನುವ ಪರಂಪರೆಯ ಪ್ರತಿಪಾದಕರಿವರು. ಜತೆಗೆ ವೈಷ್ಣವ ಪಂಥಕ್ಕೆ ಮೈಲಿಗಲ್ಲು ಹಾಕಿಕೊಟ್ಟ ಸಂತ. ಇವರು ಹುಟ್ಟಿದ್ದು 1017ರಲ್ಲಿ. ತಮಿಳುನಾಡು ಹುಟ್ಟೂರು. ಶ್ರೀ ವೈಷ್ಣವ ಪಂಥದ ಅನುಯಾಯಿಗಳಾದ ಇವರು ವಿಶಿಷ್ಟಾದ್ವೈತ ಅನ್ನುವ ವಿಚಾರ ಪ್ರತಿಪಾದಿಸಿದರು. ಇದಲ್ಲದೆ ಅನೇಕ ಸಮಾಜದ ಮೂಢನಂಬಿಕೆ ವಿರುದ್ಧ ಹೋರಾಡಿದವರು. ಮಹಿಳೆಯರಿಗೆ ದೀಕ್ಷೆ ನೀಡುವುದರ ಜತೆಗೆ ವೇದಾಂತ ಸೂತ್ರಕ್ಕೆ ಹೊಸ ಭಾಷ್ಯ ಬರೆದವರು.
ಅವರು ಜೀವಿಸಿದ್ದು ಪೂರ್ಣ 120 ವರ್ಷ. ಅದು ಭಾರತದ ಪುರಾಣಕಾಲದಲ್ಲಿ ಉಲ್ಲೇಖಿಸಲಾಗುವ ಮನುಷ್ಯನ ಪೂರ್ಣ ಆಯಸ್ಸು. 1137 ರಲ್ಲಿ ಅವರು ನಿಧನ ಹೊಂದಿದ ನಂತರ ಅವರ ಮೂಲ ದೇಹವನ್ನು ಶ್ರೀರಂಗಮ್ನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸಂರಕ್ಷಿಸಿಡಲಾಯಿತು. ಈ ದೇವಾಲಯದಲ್ಲಿ ರಾಮಾನುಜರನ್ನೂ ಪೂಜಿಸಲಾಗುತ್ತದೆ. ದೇವಾಲಯದ ಪ್ರಾಂಗಣದಲ್ಲೇ ಅವರ ವಿಶೇಷ ಮಂದಿರವೂ ಇದೆ. ಇದರಲ್ಲೇ ರಾಮಾನುಜರ ದೇಹವನ್ನು ಸಂರಕ್ಷಿಸಿಟ್ಟುಕೊಳ್ಳಲಾಗಿದೆ.
ಈ ಮಂದಿರದಲ್ಲಿ ರಾಮಾನುಜರ ಪುತ್ಥಳಿಯೊಂದಿದೆ. ಅದರ ಹಿಂಭಾಗದಲ್ಲಿಯೇ ಅವರ ಮೂಲ ಶರೀರವನ್ನು, ಉಪದೇಶ ಮುದ್ರಾ ಭಂಗಿಯಲ್ಲಿ ನೋಡಬಹುದು. ಆದರೆ ಇದು ಸಾಕಷ್ಟು ಜನರಿಗೆ ಗೊತ್ತಿಲ್ಲ ಅನ್ನುವುದು ವಿಷಾದ. ಇಲ್ಲಿ ಬರುವ ಭಕ್ತರ ಪ್ರಕಾರ ಈ ದೇಹದ ಉಗುರುಗಳನ್ನು ನೋಡಿದರೆ ಮಾತ್ರ ಅದು ನಿಜವಾದ ಮಾನವ ದೇಹವೆಂದು ಗೊತ್ತಾಗುತ್ತದೆ.

ದೇಹಕ್ಕೆ ನೈಸರ್ಗಿಕ ಲೇಪ
ರಾಮಾನುಜರ ದೇಹವನ್ನು ರಕ್ಷಿಸಿಡುವ ಸಲುವಾಗಿ ವಿಶೇಷ ಲೇಪಗಳನ್ನು ಬಳಸಲಾಗುತ್ತದೆ. ಹೌದು, ಈ ದೇಹಕ್ಕೆ ವರ್ಷಕ್ಕೆ ಎರಡು ಬಾರಿ ಕೇವಲ ಕರ್ಪೂರ, ಚಂದನ ಮತ್ತು ಕುಂಕುಮ ಮಿಶ್ರಣದ ಲೇಪವನ್ನು ಹಚ್ಚಲಾಗುತ್ತದೆ. ಇದರಿಂದ ದೇಹ ಕೇಸರಿ ಬಣ್ಣಕ್ಕೆ ಪರಿವರ್ತಿತವಾಗುತ್ತದೆ. ಇದು 884 ವರ್ಷಗಳಿಂದ ನಡೆದು ಬರುತ್ತಿದೆ ಎನ್ನುತ್ತದೆ ಸ್ಥಳದ ಇತಿಹಾಸ. ಇದೇ ಲೇಪ ದೇಹವನ್ನು ಕೆಡದಂತೆ ನೋಡಿಕೊಳ್ಳುತ್ತಿದೆ.
ಇನ್ನು ಈ ದೇಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದ್ದಕ್ಕೂ ಕಾರಣವಿದೆ. ರಾಮಾನಾಜರು ರಂಗನಾಥ ಸ್ವಾಮಿ ಪರಮ ಭಕ್ತರಾಗಿದ್ದರು. ತಮ್ಮ ಆಯಸ್ಸಿನ ಸುಮಾರು 50ರಷ್ಟು ಭಾಗವನ್ನು ಇಲ್ಲೇ ಕಳೆದರು. ಹೀಗಾಗಿ ಅವರ ದೇಹವನ್ನು ಇಲ್ಲೇ ಸಂರಕ್ಷಿಸಿಡಲಾಯಿತು. ಇನ್ನು ದೇಹವನ್ನು ದಕ್ಷಿಣ-ಪಶ್ಚಿಮಾಭಿಮುಖವಾಗಿ ಇಡಲಾಗಿದ್ದು, ಇದು ಸ್ವಯಂ ರಂಗನಾಥ ಸ್ವಾಮಿಯ ಆಜ್ಞಾನುಸಾರ ಇಡಲಾಗಿದೆ ಎಂದು ಹೇಳಲಾಗುತ್ತದೆ. ಇನ್ನು ಈ ದೇವಾಲಯಕ್ಕೂ ಸಾವಿರಾರು ವರ್ಷಗಳ ಇತಿಹಾಸವಿದೆ. ಒಬ್ಬ ವ್ಯಕ್ತಿಯ ಮೂಲ ಶರೀರವನ್ನು ಸಂರಕ್ಷಿಸಿ ದೇವಸ್ಥಾನದೊಳಗೆ ಇಡಲಾಗಿರುವ ಜಗತ್ತಿನ ಏಕೈಕ ಉದಾಹರಣೆ ಇದು ಎಂದರೆ ತಪ್ಪಾಗಲಾರದು.
ದಾರಿ ಹೇಗೆ?
ಶ್ರೀರಂಗಂನ ಈ ದೇವಾಲಯ ಬೆಂಗಳೂರಿನಿಂದ 264 ಕಿಲೋ ಮೀಟರ್ ಹಾಗೂ ಮಧುರೈನಿಂದ ಸುಮಾರು 144 ಕಿಲೋ ಮೀಟರ್ ದೂರವಿದೆ. ಶ್ರೀರಂಗಂ ಒಂದು ಅಧ್ಯಾತ್ಮಿಕ ಕೇಂದ್ರವಾಗಿರೋದರಿಂದ ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ಹೊಟೇಲ್ ವ್ಯವಸ್ಥೆ ಲಭ್ಯವಿದೆ. ಇನ್ನು ಇಲ್ಲಿಗೆ ಬರಲು ಬಸ್ ಸೌಲಭ್ಯಗಳು ಸಾಕಷ್ಟಿದ್ದು, ರೈಲು ಹಾಗೂ ವಿಮಾನಗಲ್ಲಿ ಪ್ರಯಾಣ ಮಾಡುವವರಿಗೆ ತಿರುಚನಾಪಲ್ಲಿ ಅತ್ಯಂತ ಹತ್ತಿರದ ಸ್ಥಳವಾಗಿದೆ. ತಿರುಚನಾಪಳ್ಳಿ ಶ್ರೀರಂಗಂನಿಂದ 7 ಕಿಮೀ ದೂರವಿದ್ದು 20 ನಿಮಿಷಗಳಲ್ಲಿ ತಲುಪಬಹುದಾಗಿದೆ.