ಗಡಿ ಪೇಟೆಯಲ್ಲಿ ಕಂಗೊಳಿಸುತ್ತಿದೆ ಗಡಿಯಾರ ಕಂಬ!
ವಿರಾಜಪೇಟೆಯ ಗಣಪತಿ ದೇವಾಲಯದ ಬಳಿ ಪೇಟೆಯ ಹೖದಯಕಂಬಂದಂತೆ ಕಂಗೊಳಿಸುತ್ತಿರುವ ಬೖಹತ್ ಗಡಿಯಾರವನ್ನು ಹಾದು ಪ್ರತಿನಿತ್ಯ ಸಾವಿರಾರು ವಾಹನಗಳು ಸಾಗುತ್ತವೆ. ಕರ್ನಾಟಕ - ಕೇರಳ ಗಡಿಪೇಟೆಯಾದ ವಿರಾಜಪೇಟೆಯಲ್ಲಿ ನೋಡಲು ಏನಿದೆ ಎಂದು ಪ್ರಶ್ನಿಸುವವರಿಗೆ ಯಾಕೆ.. ನಾನಿಲ್ಲವೇ ಎಂದು ಈ ಗಡಿಯಾರ ಕಂಬ ಪ್ರಶ್ನಿಸುವಂತಿದೆ.
- ಕಿಗ್ಗಾಲು ಹರೀಶ್, ಮೂರ್ನಾಡು
ಕೊಡಗಿನ ತಾಲ್ಲೂಕು ಕೇಂದ್ರ ವಿರಾಜಪೇಟೆ. ಈ ಪಟ್ಟಣದಲ್ಲಿ ಗಡಿಯಾರ ಕಂಬ ಕೂಡ ಪ್ರವಾಸಿ ಆಕರ್ಷಣೆಯಾಗಿದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಗಡಿಯಾರ ಕಂಬ ಅರ್ಥಾತ್ ಕ್ಲಾಕ್ ಟವರ್ ವೀಕ್ಷಿಸದೇ ಈ ಹಾದಿಯಲ್ಲಿ ಸಾಗುವ ಪ್ರವಾಸಿಗರು ಮುಂದಕ್ಕೆ ಹೋಗಲಾರರು.
1915 ರಲ್ಲಿ ಅಂದಿನ ಇಂಗ್ಲೆಂಡಿನ ರಾಜ ಐದನೇ ಜಾಜ್೯ ದೆಹಲಿ ಕೊರೊನೇಶನ್ ದರ್ಬಾರ್ (ಪೀಠಾರೋಹಣ) ನೆನಪಿಗಾಗಿ ವಿರಾಜಪೇಟೆ ಸಮೀಪದ ದೇವಣಗೇರಿಯ ಮುಕ್ಕಾಟಿರ ಕೊಡವ ಮನೆತನದವರು ಕಟ್ಟಿಸಿದ ಕ್ಲಾಕ್ ಟವರ್ ಇದಾಗಿದೆ. ವಿರಾಜಪೇಟೆಯ ಹೆಗ್ಗುರುತು ಅಥವಾ ಜನರ ನಾಡಿಮಿಡಿತವೇ ಈ ಕ್ಲಾಕ್ ಟವರ್ ಆಗಿಬಿಟ್ಟಿದೆ.
1914 ಫೆಬ್ರವರಿ 5ರಂದು ಕೊಡಗಿನ ಕಮಿಷನರ್ ಆಗಿದ್ದ ಸರ್ ಹ್ಯೂ ಡೇಲಿ ಗಡಿಯಾರ ಕಂಬಕ್ಕೆ ಶಿಲಾನ್ಯಾಸ ಮಾಡಿದರೆ, 1915 ರ ಜನವರಿ 1 ರಂದು ಜಿಲ್ಲಾ ನ್ಯಾಯಾಧೀಶರಾಗಿದ್ದ ಆರ್.ಕೆ ಎಲ್ಲಿಸ್ ಉದ್ಘಾಟಿಸಿದರು. ಇತಿಹಾಸವೇನೇ ಇದ್ದರೂ ಅಂದಿನಿಂದ ಇಂದಿನವರೆಗೆ ಈ ಗಡಿಯಾರ ಕಂಬ ಪ್ರವಾಸಿ ಆಕರ್ಷಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಗಳೂ ಇಲ್ಲಿ ನಡೆಯುತ್ತಿರುವುದು ವಿಶೇಷ. ವಿರಾಜಪೇಟೆಗೆ ಆಗಮಿಸುವ ಮತ್ತು ಹಾದು ಹೋಗುವ ಪ್ರವಾಸಿಗರೆಲ್ಲರಿಗೂ ಈ ಗಡಿಯಾರ ಕಂಬದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಕೂಡ ಒಂದು ಕ್ರೇಜ್.
ವಿರಾಜಪೇಟೆಯ ಗಣಪತಿ ದೇವಾಲಯದ ಬಳಿ ಪೇಟೆಯ ಹೖದಯಕಂಬಂದಂತೆ ಕಂಗೊಳಿಸುತ್ತಿರುವ ಬೖಹತ್ ಗಡಿಯಾರವನ್ನು ಹಾದು ಪ್ರತಿನಿತ್ಯ ಸಾವಿರಾರು ವಾಹನಗಳು ಸಾಗುತ್ತವೆ. ಕರ್ನಾಟಕ - ಕೇರಳ ಗಡಿಪೇಟೆಯಾದ ವಿರಾಜಪೇಟೆಯಲ್ಲಿ ನೋಡಲು ಏನಿದೆ ಎಂದು ಪ್ರಶ್ನಿಸುವವರಿಗೆ ಯಾಕೆ.. ನಾನಿಲ್ಲವೇ ಎಂದು ಈ ಗಡಿಯಾರ ಕಂಬ ಪ್ರಶ್ನಿಸುವಂತಿದೆ. ಗಡಿಯಾರ ಕಂಬದ ಐತಿಹ್ಯ ತಿಳಿದು ವಿದೇಶಿಯರು ಕೂಡ ಇಲ್ಲಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುವುದುಂಟು. ಅನೇಕ ಕಲಾವಿದರ ಕುಂಚದಲ್ಲಿಯೂ ಗಡಿಯಾರ ಕಂಬ ರಂಗು ಪಡೆದಿದೆ.