Sunday, July 27, 2025
Sunday, July 27, 2025

ಕರಾವಳಿಯ ಸುತ್ತ ಒಂದು ಸುತ್ತು!

ಈ ಕಡಲತೀರಗಳ ಹಿಂದಿರುವ ಸತ್ಯವೆಂದರೆ ಸ್ಥಳೀಯರ ಜೀವನ ಮತ್ತು ಸಮುದ್ರದ ನಡುವಿನ ನಿತ್ಯದ ಸಂಘರ್ಷ.

ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಮಂಗಳೂರಿ (mangalore)ನ ಸಮುದ್ರದ ತಟ(Beach)ದ ಮರಳಿನ ಮೇಲೆ ನಡೆದಾಗ, ಕಾಲುಗಳಿಗೆ ಒಂದು ಬೇರೆಯದ್ದೇ ಅನುಭವ ಸಿಗುತ್ತದೆ. ಬರೀ ಮಂಗಳೂರು ಅಲ್ಲ ಸ್ವಾಮಿ, ರಾಜ್ಯದ ಅಥವಾ ದೇಶದ ಯಾವುದೇ ಕಡಲತೀರಕ್ಕೆ ಹೋದರೂ ಇದೆ ಅನುಭವ. ಕರ್ನಾಟಕದಲ್ಲಿ 320 ಕಿ.ಮೀ ಉದ್ದನೆಯ ಕರಾವಳಿ (Coastal Region) ಇದೆ. ಇದು ಬರೀ ಭೌಗೋಳಿಕ ವೈವಿಧ್ಯತೆಯನ್ನಲ್ಲಷ್ಟೇ ಅಲ್ಲ ಸಾಂಸ್ಕೃತಿಕ ಸಂಪದ್ಭರಿತ ಜೀವನಶೈಲಿಯನ್ನೂ ತೋರಿಸುತ್ತದೆ. ಈ ಪ್ರದೇಶದ ಪ್ರತಿ ಕಡಲತೀರವು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದೆ. ಕೆಲವು ಶಾಂತವಾಗಿ ಮನಸ್ಸಿಗೆ ಮುದ ನೀಡುವಂತಿದ್ದರೆ, ಇನ್ನೂ ಕೆಲವು ಅಲೆಗಳ ಭೋರ್ಗರೆತದಿಂದ ಮನದಲ್ಲಿ ಅಚ್ಚು ಮೂಡಿಸುತ್ತದೆ.

surathkal-beach

ಮಂಗಳೂರಿನಿಂದ ಆರಂಭಿಸಿದರೆ, ಸುರತ್ಕಲ್ ಬೀಚ್ (Suratkal Beach) ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಅಚ್ಚುಮೆಚ್ಚು. ಇಲ್ಲಿ ಸಂಜೆ ವೇಳೆ ನೋಡಬಹುದಾದ ದೃಶ್ಯವೇ ವಿಶೇಷ . ಮೀನುಗಾರರ ಹಡಗುಗಳು ದೂರದಿಂದ ಹಿಂತಿರುಗುವುದು, ಸಮುದ್ರದ ಅಲೆಗಳು ಅವುಗಳನ್ನು ಸ್ವಾಗತಿಸುವುದು, ಮತ್ತು ತಟಯಲ್ಲಿ ಕಾಯುತ್ತಿರುವ ಕುಟುಂಬಗಳ ಸಂತೋಷ ನೋಡುವುದೇ ಚಂದ. ಹತ್ತಿರದಲ್ಲೇ ಇರುವ ಪಣಂಬೂರು ಬೀಚ್ ತನ್ನ ಒಂಟಿತನಕ್ಕೆ ಹೆಸರುವಾಸಿ. ಇಲ್ಲಿ ಸಮುದ್ರದೊಂದಿಗೆ ನೀವು ಮಾತನಾಡುವ ರೀತಿ ಅನ್ನಿಸುತ್ತದೆ. ಅಲೆಗಳ ಶಬ್ದವೇ ಉತ್ತರವಾಗಿ ಕೇಳಿಸುತ್ತದೆ.

2024-07-29T01_19_08.177Z6.1

ಉಡುಪಿ ಜಿಲ್ಲೆಯ ಕಾಪು ಬೀಚ್ (Kapu Beach) ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗ. ಈ ಬೀಚ್ ನ ವಿಶೇಷತೆ ಅಂದರೆ ಎತ್ತರದ ಕಲ್ಲುಗಳು ಮತ್ತು ದಟ್ಟವಾದ ಹಸಿರು ಸಮುದ್ರಕ್ಕೆ ಮುಖಮಾಡಿ ನಿಲ್ಲುತ್ತವೆ. ಹಾಗೆ ಅದೇ ಊರಲ್ಲಿರುವ ಮಲ್ಪೆ ಬೀಚ್ನಲ್ಲಿ ಸಂಜೆ ಸೂರ್ಯಾಸ್ತವನ್ನು ನೋಡುವುದು ಒಂದು ಅನನ್ಯ ಅನುಭವ. ಸೂರ್ಯನ ಕೆಂಪು ಕಿರಣಗಳು ಸಮುದ್ರದ ನೀರಿನಲ್ಲಿ ಕರಗುವಂತೆ ಕಾಣುತ್ತದೆ. ಇಲ್ಲಿ ಸ್ಥಳೀಯರು ಮಾರುವ ತಾಜಾ ತೆಂಗಿನಕಾಯಿ ನೀರು ಮತ್ತು ಖಾರ ಮಸಾಲೆ ಪಕೋಡೆಗಳ ರುಚಿ ಬೇರೆಡೆ ಸಿಗುವುದು ಕಷ್ಟ ಬಿಡಿ.

Murudeshwar_beach

ಮುರುಡೇಶ್ವರದಲ್ಲಿ, (Murudeshwara) ವಿಶ್ವದ ಎರಡನೇ ಅತಿ ಎತ್ತರದ ಶಿವ ಮೂರ್ತಿ ಮತ್ತು ಸಮುದ್ರ, ಎರಡನ್ನೂ ಒಮ್ಮೆಲೇ ನೋಡಬಹುದು. ಇಲ್ಲಿ ಸಮುದ್ರವೇ ಶಿವನ ನಿತ್ಯ ಪೂಜಾರಿಯಂತೆ ಅಲೆಗಳಿಂದ ಅರ್ಚನೆ ಮಾಡುತ್ತಿರುವಂತೆ ಭಾಸವಾಗುತ್ತದೆ. ಗೋಕರ್ಣದ ಓಂ ಬೀಚ್ (Om Beach) ಮತ್ತು ಕೂಡ್ಲಿ ಬೀಚ್ಗಳು (Kudli Beach) ಸಾಹಸಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ಸರ್ಫಿಂಗ್ ಮಾಡುವವರ ನೈಪುಣ್ಯ ಮತ್ತು ಸಮುದ್ರದೊಂದಿಗಿನ ಅವರ ಸಾಹಸವನ್ನು ನೋಡುವುದೇ ಕಣ್ಣಿಗೆ ಇಂಪು.

ಈ ಕಡಲತೀರಗಳ ಹಿಂದಿರುವ ಸತ್ಯವೆಂದರೆ ಸ್ಥಳೀಯರ ಜೀವನ ಮತ್ತು ಸಮುದ್ರದ ನಡುವಿನ ನಿತ್ಯದ ಸಂಘರ್ಷ. ಪ್ರತಿ ಮೀನುಗಾರನ ಕಥೆಯಲ್ಲಿ ಸಮುದ್ರದ ಕರುಣೆ ಮತ್ತು ಕ್ರೂರತೆ ಎರಡೂ ಇದೆ. ಪ್ರತಿ ಮಹಿಳೆಯ ಕಣ್ಣಲ್ಲಿ ಸಮುದ್ರದಿಂದ ಪುತ್ರರನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಆಶಯವಿದೆ. ಪ್ರತಿ ಮಕ್ಕಳ ನಗುವಿನಲ್ಲಿ ಸಮುದ್ರದಂತಹ ಅನಂತ ಸಾಧ್ಯತೆಗಳಿವೆ.

ಕರ್ನಾಟಕದ ಕಡಲತೀರಗಳು ಕೇವಲ ಸುಂದರವಾದ ದೃಶ್ಯಗಳನ್ನು ಮಾತ್ರ ನೀಡುವುದಿಲ್ಲ, ಅವು ನಮ್ಮ ಆಂತರಿಕ ಶಾಂತಿಯನ್ನು ಕಂಡುಹಿಡಿಯುವ ಸ್ಥಳಗಳಾಗಿವೆ. ಇಲ್ಲಿ ಸಮುದ್ರದ ಅಲೆಗಳು ನಮ್ಮ ಮನಸ್ಸಿನ ಎಲ್ಲ ಗೊಂದಲಗಳನ್ನು ತೆಗೆದುಕೊಂಡು ಹೋಗುವಂತೆ ಭಾಸವಾಗುತ್ತದೆ. ಮರಳಿನ ಮೇಲೆ ಬರೆಯುವ ಪ್ರತಿ ಅಕ್ಷರವೂ ಸಮುದ್ರದಿಂದ ಅಳಿಸಿಹೋಗುತ್ತದೆ. ಇದು ನಮಗೆ ಬದುಕಿನ ಅತ್ಯಂತ ದೊಡ್ಡ ಪಾಠವನ್ನು ಕಲಿಸುತ್ತದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..