- ಅನಿಲ್ ಹೆಚ್.ಟಿ.

ಆಧುನಿಕ ಶ್ರವಣ ಕುಮಾರ - 06

ಮೈಸೂರಿನ ಕೃಷ್ಣಕುಮಾರ್ ತನ್ನ ತಾಯಿಯೊಂದಿಗೆ ಮೂರೂವರೆ ವರ್ಷಗಳ ಕಾಲ 1 ಲಕ್ಷ ಕಿಮೀ ಅಂತರದ ಭಾರತ ಪರ್ಯಟನೆ ಮಾಡಿದ್ದು, ಅದೂ ಸ್ಕೂಟರ್ ನಲ್ಲಿಯೇ ದೇಶ ಸಂಚರಿಸಿದ್ದು ಎಲ್ಲೆಲ್ಲೂ ಕುತೂಹಲ, ಅಚ್ಚರಿ, ಮೆಚ್ಚುಗೆಗೆ ಕಾರಣವಾಯಿತು.

ಅದು ಯಾಕೆ ಅಮ್ಮ - ಮಗ ಈ ರೀತಿ ಸ್ಕೂಟರ್ ನಲ್ಲಿ ದೇಶಪರ್ಯಟನೆ ಮಾಡಿದರು ಎಂಬ ಪ್ರಶ್ನೆ ಇಂದಿಗೂ ಅನೇಕರನ್ನು ಕಾಡುತ್ತಿದೆ. ಅಲ್ಲೇ ಇರುವುದು ಗಮ್ಮತ್ತು.!

ಬಜಾಜ್ ಚೇತಕ್ ಸ್ಕೂಟರ್ ತೆಗೆದುಕೊಳ್ಳುವ ಹಿಂದೆ ಒಂದು ಸ್ವಾರಸ್ಯಕರ ಘಟನೆ ಇದೆ ಎಂದು ಸ್ಕೂಟರ್ ಪ್ರಯಾಣದ ರೋಚಕತೆಯನ್ನು ಹೇಳತೊಡಗಿದರು ಕೃಷ್ಣಕುಮಾರ್.

ಇದನ್ನೂ ಓದಿ: ಭವ್ಯ ಅರಮನೆಯೊಳ್ ಮಹಾರಾಜರೊಂದಿಗೆ ಭೋಜನ!

ನಮ್ಮ ಮನೆಯಲ್ಲಿ ಸಾಕುತ್ತಿದ್ದ ನನ್ನ ಸಮವಯಸ್ಕಳಾದ ನಳಿನಿ ಎಂಬಾಕೆಯ ಮದುವೆ ಸಂಬಂಧಿಕರೊಂದಿಗೆ ಆಗಿತ್ತು. ಆಗ ಮನೆಯಲ್ಲಿ ಒಂದು ವ್ಯಾಕ್ಯೂಮ್ ನಿರ್ಮಾಣವಾಗಿತ್ತು. ಚಿಕ್ಕಂದಿನಿಂದಲೂ ನಾವಿಬ್ಬರೂ ಒಟ್ಟಿಗೆ ಬೆಳೆದಿದ್ದರಿಂದ ನಮಗಿಬ್ಬರಿಗೂ ತೀವ್ರವಾಗಿ ಅಗಲಿಕೆಯ ಭಾವ ಕಾಡಿತ್ತು. ನನ್ನ ಮನದ ಬೇಸರ ಗಮನಿಸಿದ ತಂದೆ ದಕ್ಷಿಣಮೂರ್ತಿಯವರು, ಈ ವಾತಾವರಣವನ್ನು ತಿಳಿಗೊಳಿಸಲು ನನಗೆ ಸ್ಕೂಟರನ್ನು ಕೊಡುಗೆಯಾಗಿ ನೀಡಲು ಮನಸು ಮಾಡಿದರು. ಅದುವರೆಗೂ ತಂದೆಯವರು ನನಗಾಗಿ ಏನನ್ನೂ ಕೊಟ್ಟಿರಲಿಲ್ಲ. ಯಾಕೆಂದರೆ ಅವರು ಸಂಬಳ ತಂದು ನಮ್ಮ ಸೋದರತ್ತೆ ಕೈಗೆ ಕೊಡುತ್ತಿದ್ದರು. ನಮ್ಮ ಅತ್ತೆಯೇ ಮನೆಯ ಎಲ್ಲಾ ಖರ್ಚುವೆಚ್ಚಗಳನ್ನು ಸಮಾನವಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಮಗನಿಗೆ ಮನೆಯಲ್ಲಿರುವ ಸಂಪತ್ತು ಗೊತ್ತಾಗಬಾರದು ಅನ್ನುವ ಕಾರಣ ಇದ್ದರೂ ಇರಬಹುದು. ಅದೊಂದು ದಿನ ನಮ್ಮ ತಂದೆಯವರು ನನ್ನನ್ನು ಕರೆದು ನನಗೆ ಸ್ಕೂಟರನ್ನು ಕೊಡಿಸುವ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಪಲ್ಸರ್ ಬೈಕ್ ನ ಜಮಾನ. ನನ್ನ ಊರಿನ ಹುಡುಗರು ಬಾಡಿ ಬಿಲ್ಡಿಂಗ್ ಮಾಡಿ ಟೈಟ್ಸ್ ಹಾಕಿಕೊಂಡು ಪಲ್ಸರ್ ಬೈಕ್ ನಲ್ಲಿ ತಿರುಗುತ್ತಿದ್ದರು.

New Project (22)

ನಾನು ನಾಲ್ಕಾರು ಕಡೆ ವಿಚಾರಿಸಿದೆ. ಪಲ್ಸರ್ ನ ಆನ್ ರೋಡ್ ಪ್ರೈಸ್ 53 ಸಾವಿರ ಇತ್ತು. ಅದೇ ಬಜಾಜ್ ಶೋರೂಮ್ ಗೂ ಹೋಗಿ ವಿಚಾರಿಸಿದೆ. ಅದರ ರೇಟು 23 ಸಾವಿರ ಇತ್ತು. ಎಲ್ಲಾ ಮಾಹಿತಿ ಸಂಗ್ರಹಿಸಿ ತಂದೆಯದುರು ವಿಚಾರ ಮಂಡಿಸಿದೆ. ಕೇವಲ 23 ಸಾವಿರ ರುಪಾಯಿಗಳಿರುವ ಬಜಾಜ್ ಸ್ಕೂಟರ್ ನ್ನೇ ಖರೀದಿಸುವೆ. ಅದು ರಫ್ ಬಳಕೆಗೆ ಓಕೆ. ಹೆಚ್ಚಿನ ಲಗೇಜನ್ನೂ ಕೂಡ ಇಡಬಹುದು. ಗೃಹಬಳಕೆಗೂ ಉಪಯೋಗವಾಗುತ್ತದೆ ಎಂದೆ. ಅಪ್ಪನಿಗೂ ಖುಷಿಯಾಯಿತು. ಆನಂತರ ಬಜಾಜ್ ಸ್ಕೂಟರ್ ಖರೀದಿಸಿದ್ದೂ ಆಯಿತು. ದುಂದುವೆಚ್ಚ ಮಾಡದೇ ಸ್ಕೂಟರ್ ಖರೀದಿಸಿದ್ದು ಮನೆಮಂದಿಗೆಲ್ಲಾ ಸಂತೋಷ ತಂದಿತ್ತು.

ಮನೆಯಲ್ಲಿ ನಾನು ಹಿರಿ ಮೊಮ್ಮಗನಾಗಿರುವುದರಿಂದ ನಾನು ಎಲ್ಲಾ ವಿಚಾರದಲ್ಲೂ ಆದರ್ಶವಾಗಿ ನಡೆದುಕೊಳ್ಳಬೇಕೆಂದು ಎಲ್ಲರೂ ಬಯಸಿದ್ದರು. ಇಂದಿಗೂ ನನಗೆ ಸರಳವಾಗಿ ಬದುಕುವ ಕಲೆ ಸಿದ್ಧಿಸಿದೆ . ಅಲ್ಲದೆ ಬಹುಜನರ ಒಳಿತಿಗಾಗಿ ತನ್ನ ಸ್ವಂತ ಸುಖವನ್ನು ತ್ಯಾಗ ಮಾಡುವುದು ಮಹಾತ್ಮರ ಮಹಾಪುರುಷರ ಮೊದಲನೇ ಲಕ್ಷಣ ಎಂದು ನಂಬಿದ್ದೇನೆ. ನನ್ನ ತಾತ ಹೆಚ್.ರಾಜಾರಾವ್ (ಶಾನುಭೋಗರು)ಅಜ್ಜಿ ಎಚ್.ಎಸ್. ಸುಬ್ಬಲಕ್ಷ್ಮಮ್ಮನವರು ಹಾಗೂ ನನ್ನ ದೊಡ್ಡಪ್ಪ ಎಚ್ ಡಿ ಪ್ರಭಾಕರ್ ರವರು ಈ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ನನ್ನ ಕಣ್ಣ ಮುಂದೆ ಬಾಳಿ ಬದುಕಿ ತೋರಿಸಿದ್ದರು. ಹಾಗಾಗಿ ಇವತ್ತಿಗೂ ನನಗೆ ಎಲ್ಲರಿಗೂ ಒಳಿತಾಗುತ್ತದೆ ಎಂದರೆ ನನ್ನದನ್ನು ತ್ಯಾಗ ಮಾಡುವ ಗುಣ ಬಂದಿದೆ.

New Project (20)

ನಮ್ಮ ತಾಯಿಯವರಿಗೂ ಅದೇ ಗುಣವಿದೆ. ಲೀಡ್ ಬೈ ಎಕ್ಸಾಂಪಲ್ ಅನ್ನೋ ಹಾಗೆ ಜೀವಿಸಿ ತೋರಿಸುವ ಗುಣ ಸಿದ್ಧಿಸಿದೆ. ನನ್ನ ತಾಯಿ ಚೂಡಾರತ್ನಮ್ಮ ಇವತ್ತಿಗೂ ಸರಳವಾಗಿಯೇ ಬದುಕುತ್ತಿದ್ದಾರೆ. ತಂದೆಯವರು ನಮ್ಮನ್ನು ಅಗಲಿದ ಬಳಿಕ ಅವರ ನೆನಪಾಗಿ ನಮ್ಮಲ್ಲಿ ಉಳಿದದ್ದೇ ಈ ಬಜಾಜ್ ಚೇತಕ್ ಸ್ಕೂಟರ್. ಅದನ್ನು ನೋಡಿದಾಗಲೆಲ್ಲಾ ಅಪ್ಪನ ಯೋಚನೆಯಾಗುತ್ತಿತ್ತು. ಹೀಗಾಗಿಯೇ ಮಾತೃಸಂಕಲ್ಪ ಯಾತ್ರೆಯ ಅಂಗವಾಗಿ ಭಾರತ ಯಾತ್ರೆಗೆ ಹೊರಟ ಸಂದರ್ಭ್ ವಿಮಾನ, ರೈಲು, ಬಸ್, ಕಾರ್ ಪ್ರಯಾಣಕ್ಕಿಂತ ಇದೇ ಬಜಾಜ್ ಸ್ಕೂಟರ್ ನಲ್ಲಿಯೇ ಅಮ್ಮನೊಂದಿಗೆ ಪಯಣಿಸಿದರೆ ಸ್ಕೂಟರ್ ಮೂಲಕ ಅಪ್ಪನೂ ನಮ್ಮೊಂದಿಗೆ ಬರುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿತ್ತು. ಹೀಗಾಗಿಯೇ ಅಪ್ಪನ ಪ್ರೀತಿಯ ಬಜಾಜ್ ಚೇತಕ್ ಸ್ಕೂಟರನ್ನೇ ಪ್ರಯಾಣಕ್ಕೆ ಆಯ್ಕೆ ಮಾಡಿಕೊಂಡೆ.

ನಮ್ಮ ತಂದೆ ದಕ್ಷಿಣಮೂರ್ತಿಯವರು ಇಂದು ಭೌತಿಕವಾಗಿ ನಮ್ಮ ಜತೆಯಲ್ಲಿ ಇರದ ಕಾರಣ ಸ್ಕೂಟರನ್ನು ನಮ್ಮ ತಂದೆ ಪ್ರತಿರೂಪದಲ್ಲಿ ಕಾಣುತ್ತಿದ್ದೇನೆ. ಸ್ಕೂಟರ್ ನಲ್ಲಿ ಪ್ರಯಾಣಿಸುವುದರಿಂದ ನಮ್ಮ ತಂದೆ ತಾಯಿ ಇಬ್ಬರೂ ನನ್ನೊಂದಿಗೆ ಇದ್ದಾರೆ ನಾವು ಮೂರು ಜನ ಒಟ್ಟಿಗೆ ಪ್ರಯಾಣಿಸುತ್ತಿರುವ ಒಂದು ಕುಟುಂಬ ಯಾತ್ರೆಯ ಭಾವನೆಗೆ ಕಾರಣವಾಯಿತು.

ಜನವರಿ 16 2018 - ಮೈಸೂರಿನಿಂದ ಅಪ್ಪನ ಅಚ್ಚುಮೆಚ್ಚಿನ ಬಜಾಜ್ ಬಜಾಜ್ ಚೇತಕ್ ನೊಂದಿಗೆ ಅಮ್ಮನನ್ನು ಹಿಂಬದಿ ಸೀಟ್ ನಲ್ಲಿ ಕುಳ್ಳಿರಿಸಿಕೊಂಡು 1 ಲಕ್ಷ ಕಿಲೋಮೀಟರ್ ಗಳ ಮಾತೃಸೇವಾ ಸಂಕಲ್ಪ ಯಾತ್ರೆ ಪೂರೈಸಿದ ಬಳಿಕ ಬಜಾಜ್ ಸಂಸ್ಥೆಯ ಕಛೇರಿಯಿಂದ ಅಧಿಕಾರಿಯೋಬ್ಬರು ಕರೆ ಮಾಡಿದ್ದರು. ನಿಮ್ಮ ದೇಶಪರ್ಯಟನೆ ವಿಚಾರ ತಿಳಿದು ಸಂತೋಷವಾಯಿತು. ನಮ್ಮ ಕಂಪೆನಿಯ ಸ್ಕೂಟರ್ ನಲ್ಲಿ ಅಮ್ಮ-ಮಗ ಭಾರತ ಪರ್ಯಟನೆ ಮಾಡಿದ ರೋಚಕತೆಯ ವಿಡಿಯೋವನ್ನು ಮಾಡಲಿದ್ದೇವೆ. ನೀವು ಬಿಡುವಾಗುವ ದಿನಾಂಕ ತಿಳಿಸಿ ಎಂದರು ಅವರು.

ನಿಗದಿತ ದಿನಾಂಕದಂದು ಬಜಾಜ್ ಚೇತಕ್ ಸ್ಕೂಟರ್ ಕಂಪೆನಿಯ ಅನೇಕರು ಹೊಸ ಸ್ಕೂಟರ್ ನೊಂದಿಗೆ ಬಂದು ಮೂರು ದಿನ ಸಾಕ್ಷ್ಯ ಚಿತ್ರವೊಂದನ್ನು ಚಿತ್ರೀಕರಿಸಿದರು. ಭಾರತ ಪರ್ಯಟನೆ ಮಾಡಿದ ನಮಗೆ ಕಂಪೆನಿಯ ಕೊಡುಗೆಯಾಗಿ ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನ್ನು ಉಡುಗೊರೆಯಾಗಿ ನೀಡಿದರು. ಆ ಸ್ಕೂಟರ್ ನ್ನು ಮನೆಯಲ್ಲಿ ಜೋಪಾನವಾಗಿಟ್ಟುಕೊಂಡಿದ್ದೇನೆ. ದೂರ ಪ್ರಯಾಣದ ಸಂದರ್ಭ ಈ ಎಲೆಕ್ಟ್ರಿಕಲ್ ಸ್ಕೂಟರ್ ಬಳಸುತ್ತಿದ್ದೇನೆ.

New Project (21)

ನಾವು ಅರುಣಾಚಲ ಪ್ರದೇಶದ ಆಲೋ ಭಾಗದಲ್ಲಿ ಸಂಚರಿಸುತ್ತಾ ಟ್ಯಾಟೋ, ಮೆಚುಕ ಕಡೆ ಹೊರಟಿದ್ದೆವು. ಮೆಚುಕ ಬಹಳ ಸುಂದರವಾದ ಕಮಲದ ಹೂ ರೀತಿ ಇರುವ ಭಾರತ ಚೀನಾ ಗಡಿಯ ಕಟ್ಟ ಕಡೆಯ ಗ್ರಾಮ. ರೋಡ್ ಮಾತ್ರ ಅತ್ಯಂತ ಕೆಟ್ಟದಾಗಿದೆ. ಅಪಾಯಕಾರಿ ಪ್ರಯಾಣ ಅದು. ಸ್ವಲ್ಪ ಆಯತಪ್ಪಿದರೂ ಅಮ್ಮ ಮತ್ತುನಾನು ಪ್ರಪಾತದ ಪಾಲಾಗುತ್ತಿದ್ದೆವು.

ಆ ಜಾಗಗಳಿಗೆಲ್ಲಾ ತೆರಳಿ ವಾಪಸ್ ಬರುವುದು 15 ದಿನಗಳಾಗಿತ್ತು. ಅಲ್ಲಿಯವರೆಗೂ ಮೊಬೈಲ್ ನಲ್ಲಿ ಒಂದೇ ಒಂದು ಸಂದೇಶ, ಕರೆ ಗಮನಿಸಲು ನನಗಾಗಿರಲಿಲ್ಲ.

ಆಲೋ ಎಂಬ ಪ್ರದೇಶಕ್ಕೆ ಮತ್ತೆ ವಾಪಸ್ ಆದ ತಕ್ಷಣ ನೆರೆಮನೆಯವರ ವೈಫೈ ಆನ್ ಮಾಡಿಸಿಕೊಂಡು ಇಂಟರ್ ನೆಟ್ ಕನೆಕ್ಷನ್ ಪಡೆದು ಸುಮಾರು 300 ರಿಂದ 400 ಮೆಸೇಜ್ ಗಮನಿಸತೊಡಗಿದ್ದೆ. ಅಚ್ಚರಿಯಾಗುವಂತೆ ಬಹುತೇಕ ಸಂದೇಶಗಳಲ್ಲಿ ಎಲ್ಲರೂ ನನಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಯಾಕಾಗಿ ಅಭಿನಂದನೆ ಎಂದು ಗಮನಿಸಿದರೆ, ಪ್ರತಿಷ್ಟಿತ ಮಹೀಂದ್ರ ಕಂಪೆನಿಯ ಆನಂದ್ ಮಹೀಂದ್ರಾ ಅವರು ನನಗೆ ಒಂದು ಕಾರನ್ನು ಕೊಡುವುದಾಗಿ ಟ್ವೀಟ್ ಮಾಡಿದ್ದರು.

ತಾಯಿ ಪ್ರೇಮ ಜತೆಗೆ ಇದ್ದಲ್ಲಿ ದೇಶಪ್ರೇಮವು ಜತೆಗೂಡುತ್ತದೆ- ಎಂಬ ಸಂದೇಶದೊಂದಿಗೆ, ಈ ವ್ಯಕ್ತಿಯನ್ನು ನನಗೆ ಸಂಪರ್ಕಿಸಿದರೆ ನಾನೊಂದು ಕಾರನ್ನು ಉಡುಗೊರೆ ಕೊಡುವುದಾಗಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು. ಹೀಗಾಗಿ ಎಲ್ಲರೂ ನನ್ನನ್ನು ಸಂಪರ್ಕಿಸಲು 15 ದಿನಗಳೂ ಪ್ರಯತ್ನಿಸಿದ್ದರು! ಆಲೋ ಗ್ರಾಮದಲ್ಲಿ ನಾವಿರುವ ವಿಚಾರ ಪತ್ತೆ ಮಾಡಿದ ಮಾಧ್ಯಮದವರು ನಮ್ಮನ್ನು ಸಂಪರ್ಕಿಸಿದಾಗ ನಾನು ನಮ್ಮ ತಾಯಿಯವರು, ಆನಂದ್ ಮಹೀಂದ್ರಾರವರಿಗೆ ಧನ್ಯವಾದಗಳನ್ನು ತಿಳಿಸಿದೆವು. ತರುವಾಯ ಮಹೀಂದ್ರಾ ಕಂಪೆನಿಯ ಅಧಿಕಾರಿಯೊಬ್ಬರು ಸದಾ ನಮ್ಮ ಸಂಪರ್ಕದಲ್ಲಿರುತ್ತಿದ್ದರು. ಹೀಗೆ ಒಂದೂವರೆ ವರ್ಷ ಕಳೆಯಿತು ಕೋವಿಡ್ ಬಂತು. ಲಾಕ್ ಡೌನ್ ಆಯಿತು. ಪರ್ಯಟನೆಯಿಂದ ವಾಪಸ್ ನಾವು ಮೈಸೂರಿಗೆ ಬಹಳ ಪ್ರಯಾಸ ಪಟ್ಟು ಬಂದೆವು.

ನಾವು ವಾಪಸ್ ಮೈಸೂರಿಗೆ ತಲುಪಿದ ಸುದ್ದಿ ತಿಳಿದೊಡನೇ ಆನಂದ್ ಮಹೀಂದ್ರಾ ಸಂಸ್ಥೆಯ ಅಧಿಕಾರಿ ಮೈಸೂರಿನ ಮನೆ ಬಾಗಿಲಿಗೆ ಕಾರನ್ನು ಬಹಳ ಪ್ರೀತಿಯಿಂದ ತಂದು ನಮಗೆ ಒಪ್ಪಿಸಿದರು.

ಅಮ್ಮನ ಆಸೆ ಈಡೇರಿಸಲು 1 ಲಕ್ಷ ಕಿಮೀ. ಭಾರತ ಪರ್ಯಟನೆ ಪ್ರಾರಂಭಿಸಿದ ಸಂದರ್ಭ ಇಂಥದ್ದೆಲ್ಲಾ ಕೊಡುಗೆಯಾಗಿ ದೊರಕೀತು ಎಂಬ ಯಾವುದೇ ಕಲ್ಪನೆ ಕೂಡ ಇರಲಿಲ್ಲ. ಆದರೆ, ಭಾರತದ ಉದ್ಯಮಿಗಳ ದೊಡ್ಡ ಮನಸ್ಸು ನಮ್ಮ ಪರ್ಯಟನೆಯ ಪ್ರಯತ್ನಕ್ಕೆ ಮೆಚ್ಚುಗೆಯಾಗಿ ಇಂಥ ಕೊಡುಗೆಯನ್ನು ನೀಡುವಂತೆ ಮಾಡಿದ್ದು ಖಂಡಿತಾ ಜೀವನದ ಸಾರ್ಥಕತೆಗೆ ಕಾರಣವಾಯಿತು.

ನನಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಈ ಸ್ಕೂಟರ್ ನಲ್ಲಿ 1 ಲಕ್ಷ ಕಿ.ಮೀ. ದೂರದ ಪ್ರಯಾಣದಲ್ಲಿ ವಯಸ್ಸಾದ ಅಮ್ಮ ಅದು ಹೇಗೆ ಕುಳಿತುಕೊಂಡರು? ಅವರಿಗೆ ಬೆನ್ನು ನೋವು ಬರಲಿಲ್ಲವೇ ಎಂದು.

ಅಮ್ಮನ ಉತ್ತರ ಹೀಗಿತ್ತು- ’ಸ್ಕೂಟರ್ ಸೀಟ್ ಹಿಂಬದಿಯಲ್ಲಿ ಪುಟ್ಟದೊಂದು ದಪ್ಪನೆಯ ಒರಗು ಹಾಸಿತ್ತು. ಅದಕ್ಕೆ ಬಲವಾಗಿ ಒರಗಿ ಕುಳಿತುಕೊಳ್ಳುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಪ್ರಯಾಣಿಸುವಾಗಲೆಲ್ಲಾ ದೂರದೂರದ ದೖಶ್ಯಗಳನ್ನು ಮನಸಾರೆ ಕಣ್ಣು ತುಂಬಿಕೊಳ್ಳುತ್ತಿದ್ದೆ. ನಮ್ಮ ಭಾರತದಲ್ಲಿ ಇಷ್ಟೆಲ್ಲಾ ಸೌಂದರ್ಯ ಇದೆಯಲ್ಲಾ ಎಂದು ಅಚ್ಚರಿಗೊಳ್ಳುತ್ತಿದ್ದೆ. ಇಂಥ ಸೌಂದರ್ಯವನ್ನು ನೋಡಲು ನನ್ನಿಂದ ಸಾಧ್ಯವಾಗಿರುವ ಬಗ್ಗೆ ಹೆಮ್ಮೆ ಪಡುತ್ತಾ ಕೂರುತ್ತಿದ್ದೆ. ಹೀಗಾಗಿ ಸ್ಕೂಟರ್ ಪ್ರಯಾಣ ನನಗೆ ಯಾವುದೇ ಸಮಸ್ಯೆ ಎನಿಸಲೇ ಇಲ್ಲ. ನನ್ನ ಪ್ರಯಾಣದ ಕಡೆ, ಆ ಪ್ರಯಾಣದಲ್ಲಿನ ಸೌಂದರ್ಯದ ಕಡೆ ನನ್ನ ಗಮನ ಇತ್ತೇ ವಿನಾ ಬೇರೆ ಯಾವುದೇ ಸಮಸ್ಯೆಗಳತ್ತ ಗಮನ ನೀಡದಿರುವುದೇ ಮಗನೊಂದಿಗಿನ ನನ್ನ ಸ್ಕೂಟರ್ ಪರ್ಯಟನೆಯ ಯಶಸ್ಸಿನ ನಿಜವಾದ ಗುಟ್ಟು!’

(ಪಯಣ ಮುಂದುವರಿಯಲಿದೆ..)