• ನಂಜನಗೂಡು ಪ್ರದ್ಯುಮ್ನ

ಮೈಸೂರು ನಗರ ಯಾವುದೋ ಒಂದು ವಿಷಯಕ್ಕೆ ಪ್ರಸಿದ್ಧಿ ಪಡೆದಿಲ್ಲ. ಅದು ಒಂದೇ ವಿಚಾರಕ್ಕೆ ಸೀಮಿತವಾಗಿಲ್ಲ. ಈ ಮೈಸೂರು ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಪ್ರವಾಸೋದ್ಯಮದ ಮಹಾ ಸಂಗಮ. ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತ ಮಹಾರಾಜರು, ಅಭಿವೃದ್ಧಿಯ ದೂರದೃಷ್ಠಿತ್ವದ ಮಹನೀಯರಾದ ವಿಶ್ವೇಶ್ವರಯ್ಯ ಸೇರಿದಂತೆ ಅನೇಕರ ಸತತ ಪರಿಶ್ರಮದಿಂದ ಮೈಸೂರು ನಗರ ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ಅವುಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ ಹೆಮ್ಮೆಯ ‘ಕಾವೇರಿ ಎಂಪೋರಿಯಂ’ ಕೂಡ ಒಂದು.

ಇದನ್ನೂ ಓದಿ: ಪ್ರಕೃತಿ, ಸಮುದ್ರ ಮತ್ತು ಕಲೆಯ ಅದ್ಭುತ ಜಗತ್ತು

ಮೈಸೂರು ನಗರ ಕರಕುಶಲ ಕಲೆಗಳ ತವರು. ಇಲ್ಲಿಗೆ ಭೇಟಿನೀಡುವ ಬಹುಪಾಲು ಪ್ರವಾಸಿಗರಿಗೆ ಕಾವೇರಿ ಎಂಪೋರಿಯಂ ಚಿರಪರಿಚಿತ. ಇಲ್ಲಿಯ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಅಂಬಾವಿಲಾಸ ಅರಮನೆ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರು ಕಾವೇರಿ ಎಂಪೋರಿಯಂಗೂ ಭೇಟಿನೀಡುತ್ತಾರೆ. ಮೈಸೂರಿಗೆ ಭೇಟಿಯ ನೆನಪಿನಾರ್ಥ ಏನಾದರೊಂದು ವಸ್ತುವನ್ನು ಖರೀದಿಸಿಯೇ ಹಿಂದಿರುಗುವುದು ವಾಡಿಕೆ.

kaveri emporium

ಹಿನ್ನಲೆ

ಕರಕುಶಲ ಕಲೆಗಳಿಗೆ ಕರ್ನಾಟಕ ರಾಜ್ಯ ಅನಾದಿಕಾಲದಿಂದಲೂ ಹೆಸರುವಾಸಿ. ಹಿಂದೆಲ್ಲಾ ಸ್ಥಳಿಯ ಕುಶಲಕರ್ಮಿಗಳು ಕಲ್ಲು, ಮರಗಳನ್ನು ಬಳಸಿ ಅನೇಕ ಅದ್ಭುತ ಕಲಾಕೃತಿಗಳನ್ನು ರಚಿಸುತಿದ್ದರು. ಅದರಲ್ಲೂ ಹೆಚ್ಚಾಗಿ ಶ್ರೀಗಂಧ ಹಾಗೂ ರೋಸ್‌ವುಡ್‌ ಮರಗಳನ್ನು ಬಳಸಿ ವಿಶೇಷ ಕಲಾಕೃತಿಗಳನ್ನು ರಚಿಸಲಾಗುತ್ತಿತ್ತು. ಸ್ವತಂತ್ರ ಪೂರ್ವದಲ್ಲಿ ರಾಜಮನೆತನದವರು ಈ ಕಲೆಗೆ ಹೆಚ್ಚು ಒತ್ತುನೀಡಿ ಬೆಳೆಸಿದ್ದರು.

ಕಾಲಕಳೆದಂತೆ ಆಧುನಿಕತೆಯ ಪ್ರಭಾವ ಹಾಗೂ ಮಾರುಕಟ್ಟೆಯ ಕೊರತೆಯಿಂದಾಗಿ ಈ ಸಾಂಪ್ರದಾಯಿಕ ಕಲೆ ಹಾಗೂ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಸ್ವತಂತ್ರ ನಂತರ ಪ್ರಜಾಪ್ರಭುತ್ವದ ಅಡಿಯಲ್ಲಿ ಸ್ಥಾಪನೆಯಾದ ಸರಕಾರ, ರಾಜ್ಯದ ಸಾಂಪ್ರದಾಯಿಕ ಕಲೆಗಳನ್ನು ಉಳಿಸಲು 1964ರಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿತು. ಈ ನಿಗಮದ ಅಡಿಯಲ್ಲಿ ಪ್ರಾರಂಭವಾದ ಮಳಿಗೆಗಳಲ್ಲಿ ಅತ್ಯಂತ ಜನಪ್ರೀಯತೆ ಪಡೆದಿದ್ದು ಕಾವೇರಿ ಎಂಪೋರಿಯಂ.

ಇದನ್ನೂ ಓದಿ: ಕಾಲ್ನಡಿಗೆ ಪ್ರವಾಸೋದ್ಯಮ: ಹೆಜ್ಜೆಯಿಡುತ್ತಾ ಜಗತ್ತನ್ನು ಅರಿಯುವ ಅದ್ಭುತ ಕಲೆ

ಕುಶಲಕರ್ಮಿಗಳಿಗೆ ಆಸರೆ

ಮೈಸೂರಿನಲ್ಲಿ ಇರುವ ಕಾವೇರಿ ಎಂಪೋರಿಯಂ ಕೇವಲ ಮಾರಾಟ ಹಾಗೂ ವ್ಯಾಪಾರದ ದೃಷ್ಠಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾವಿರಾರು ಕುಶಲಕರ್ಮಿಗಳ ಜಿವನಕ್ಕೆ ದಾರಿದೀಪವಾಗಿದೆ. ನಗರದ ಮೇಟಗಳ್ಳಿಯಲ್ಲಿ ಕುಶಲಕರ್ಮಿಗಳಿಗಾಗಿ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿಕೊಡಲಾಗಿದೆ.

cauveri emporium

ಗುರುಕುಲ ವ್ಯವಸ್ಥೆ

ಯುವ ಪೀಳಿಗೆಯಲ್ಲಿ ಕರಕುಶಲ ಕಲೆ ಪರಿಚಯಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರವನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಶಿಲಾಪಕಲೆ, ಮರದ ಕೆತ್ತನೆ ಸೇರಿದಂತೆ ಇನ್ನು ಅನೇಕ ಕಲೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನೂ ನೀಡಲಾಗುತ್ತಿದೆ.

ವಿದೇಶಿಗರನ್ನು ಸೆಳೆಯುವ ಸ್ವದೇಶಿ

ಸಾಮಾನ್ಯವಾಗಿ ವಿಶೇಷ ಹಾಗೂ ವಿಶಿಷ್ಠ ಕಲೆ ಮತ್ತು ಕಲಾಕೃತಿಗಳನ್ನು ಹೆಚ್ಚಾಗಿ ಖರೀದಿಸುವ ಆಸಕ್ತಿ ವಿದೇಶಿಗರದ್ದು. ಅದರಲ್ಲೂ ನಮ್ಮ ಮೈಸೂರು ಭಾಗದ ಕಲೆಗಳನ್ನು ಪ್ರತಿನಿದಿಸುವ ಕಲಾತ್ಮಕ ಕೆತ್ತನೆಗಳು ಹಾಗೂ ಚಿತ್ರಕಲೆಗಳನ್ನು ವಿದೇಶಿಗರು ಹೆಚ್ಚು ಖರೀದಿಸುತ್ತಾರೆ. ಹೀಗಾಗಿ ಸ್ವದೇಶಿ ಕಲೆಗಳು ವಿದೇಶಿ ಪ್ರವಾಸಿಗರಿಗೆ ಹೆಚ್ಚು ಅಚ್ಚುಮೆಚ್ಚು.

ಒಟ್ಟಾರೆ ಮೈಸೂರಿನ ಕಾವೇರಿ ಎಂಪೋರಿಯಂ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಧಾರ್ಮಿಕ ಪ್ರವಾಸೋದ್ಯಮದ ಅಧ್ವಾನ, ಆತಂಕ, ಆಶಯ

ಏನೇನು ಲಭ್ಯ:

  • ಗಂಧದ ಮರ ಉಪಯೋಗಿಸಿ ಕೆತ್ತಲಾದ ದೇವರ ಮೂರ್ತಿಗಳು, ವಿಶೇಷವಾಗಿ ತಯಾರಿಸಲಾದ ಆನೆಗಳು, ಕರಕುಶಲ ವಸ್ತುಗಳು
  • ಚಿನ್ನದ ಲೇಪನ ಹೊಂದಿರುವ ಸುಂದರವಾದ ಪೌರಾಣಿಕ ಚಿತ್ರಗಳು, ಚನ್ನಪಟ್ಟಣದ ಗೊಂಬೆಗಳು, ನೈಸರ್ಗಿಕ ಬಣ್ಣಗಳಿಂದ ಕೂಡಿದ ಆಕರ್ಷಕ ಮರದ ಆಟಿಕೆಗಳು
  • ಕಪ್ಪು ಲೋಹದ ಮೇಲೆ ಬೆಳ್ಳಿ ತಂತಿಗಳಿಂದ ತಯಾರಿಸಲ್ಪಟ್ಟಿರುವ ವಿಶಿಷ್ಟ ಕರಕುಶಲ ವಸ್ತುಗಳು
  • ವಿಶ್ವಪ್ರಸಿದ್ಧವಾದ ಮೃದುವಾದ ರೇಷ್ಮೆ ಸೀರೆಗಳು, ಕೈಮಗ್ಗ ಹಾಗೂ ಕಸೂತಿ ಮಾಡಿದ ಬಟ್ಟೆಗಳು
  • ಕಲ್ಲಿನ ಕೆತ್ತನೆಗಳು
  • ಕಂಚಿನ ವಿಗ್ರಹಗಳು
  • ಸಾಂಪ್ರದಾಯಿಕ ಆಭರಣಗಳು
  • ಮೈಸೂರಿನ ವಿಶಿಷ್ಟ ಶೈಲಿಯ ಚಿತ್ರಕಲೆ
  • ಟೆರ್ರಾಕೋಟ ಕಲಾಕೃತಿಗಳು
  • ಗೃಹಾಲಂಕಾರ ವಸ್ತುಗಳು

ಶಾಖೆಗಳು ಎಲ್ಲೆಲ್ಲಿವೆ

ಎಂಜಿ ರಸ್ತೆ, ರಾಜಾ ಕಾಂಪ್ಲೆಕ್ಸ್ ಜಯನಗರ, ಬಿಡಿಎ ಕಾಂಪ್ಲೆಕ್ಸ್ ಜಯನಗರ, ಬೆಂಗಳೂರು. ಸಯ್ಯಾಜಿರಾವ್ ರಸ್ತೆ ಮತ್ತು ಅಂಬಾವಿಲಾಸ ಅರಮನೆ, ಮೈಸೂರು, ಹುಬ್ಬಳ್ಳಿ, ಮಂಗಳೂರು, ನವದೆಹಲಿ, ಗುಜರಾತ್, ಹೈದರಾಬಾದ್, ಕೋಲ್ಕತ್ತಾದಲ್ಲಿ ಕಾವೇರಿ ಎಂಪೋರಿಯಂನ ಶಾಖೆಗಳಿವೆ.

ದಾರಿ ಹೇಗೆ?

ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ದೇವರಾಜ ಅರಸು ರಸ್ತೆ ಕಡೆಗೆ ಬರುವಾಗ ಸಿಗುವ ಕೆಆರ್‌ ಸರ್ಕಲ್‌ನ ಬಲಕ್ಕೆ ತಿರುಗಿದರೆ ಸಿಗುವುದು ಸಯ್ಯಾಜಿರಾವ್ ರಸ್ತೆ. ಅದೇ ರಸ್ತೆಯಲ್ಲಿ ಸಾಗುತ್ತಾ ಕೆಆರ್‌ ಆಸ್ಪತ್ರೆ ವೃತ್ತಕ್ಕೆ ತಲುಪುವ ಮೊದಲು ಬಲಬಾಗದಲ್ಲಿ ಕರ್ನಾಟಕ ರಾಜ್ಯದ ಭವ್ಯ ಕರಕುಶಲ ಪರಂಪರೆಯನ್ನು ಸಾರುವ ಪ್ರತೀಕವಾದ ‘ಕಾವೇರಿ ಎಂಪೋರಿಯಂ’ ಕಾಣಸಿಗುತ್ತದೆ.