ಕಲ್ಲಿನ ಕೋಟೆಯ ದುರ್ಗ, ಕನ್ನಡ ಕಲಿಗಳ ಸ್ವರ್ಗ!
ಮುಂಜಾವಿನ ಹಿತ ಮಿತ ಚುಮು ಚುಮು ಚಳಿಗೆ ದುರ್ಗದ ಪ್ರವೇಶದ್ವಾರ ಸಮೀಪಿಸುತ್ತಲೇ ಮುದ ಗೊಂಡ ಮನಸು, ಅಲ್ಲಿ ಗೋಚರವಾಗುವ ಅನೂಹ್ಯ ವಿಶಿಷ್ಠಾಕಾರದ ಕಲ್ಲುಗಳಿಂದ ಮಂತ್ರ ಮುಗ್ಧವಾಗುತ್ತದೆ. ಐತಿಹಾಸಿಕ ಕನ್ನಡ ಕಲಿಗಳ ಪುರಾತನ ಭವ್ಯ ವಾಸ್ತು ನಿರ್ಮಾಣದ ಚಾಕಚಕ್ಯತೆಯನ್ನು ಕಣ್ಣಾರೆ ಕಾಣುವ ರೋಮಾಂಚಕತೆಯೊಂದಿಗೆ ಕೌತುಕ ಭಾವನೆಯೊಂದಿಗೆ ಕೋಟೆಯೊಳಗೆ ಹೆಜ್ಜೆಯಿರಿಸಬಹುದಾಗಿದೆ.
- ರಮಣ್ ಶೆಟ್ಟಿ ರೆಂಜಾಳ, ಮುಂಬಯಿ.
'ಏಳುಸುತ್ತಿನ ಕೋಟೆ'ಯೆಂದು ಅಭೇದ್ಯವೆನಿಸಿದ ಚಿತ್ರದುರ್ಗ ಕೋಟೆ ಬೆಟ್ಟದ ಕೆಳಗೆ 3 ಸುತ್ತು ಮತ್ತು ಬೆಟ್ಟದ ಮೇಲೆ 4 ಸುತ್ತುಗಳನ್ನು ಹೊಂದಿದೆ. ಕೆಳಗಿನ ಹೊರಸುತ್ತಿನಲ್ಲಿ ನಾಲ್ಕು ಹೆಬ್ಬಾಗಿಲುಗಳಿದ್ದು, ಪೂರ್ವದ ಮುಖ್ಯ ದ್ವಾರ 'ರಂಗಯ್ಯನ ಬಾಗಿಲಿ'ನ ಮೂಲಕ ನೀರ್ತಡಿ ರಂಗನಾಥ ಮಂದಿರಕ್ಕೆ ಹೋಗಬಹುದು. ಇಲ್ಲೊಂದು ವಸ್ತು ಸಂಗ್ರಹಾಲಯವೂ ಇದೆ. ಉತ್ತರದಲ್ಲಿ ಸಿದ್ಧಯ್ಯನ ಬಾಗಿಲು (ಫತೇದರ್ವಾಜಾ) ಅಸ್ತಿತ್ವದಲ್ಲಿದೆ. ಪಶ್ಚಿಮದಲ್ಲಿ ಸಿಹಿನೀರು ಹೊಂಡದ ಬಾಗಿಲಿದೆ. ಲಾಲ್ ಕೋಟೆ ಬಾಗಿಲು ದಕ್ಷಿಣ ದಿಕ್ಕಿನಲ್ಲಿದೆ. ಕೋಟೆಯೊಳಗೆ ಮನಸೆಳೆವ ಬಂಡೆಗಳ ಸರಣಿ, ಬುರುಜುಗಳು ಹಾಗೂ 14 ದೇವಾಲಯಗಳಿವೆ. ಕೋಟೆಗೆ 19 ಹೆಬ್ಬಾಗಿಲು, 35 ದಿಡ್ಡಿ ಬಾಗಿಲು ಹಾಗೂ 35 ಗುಪ್ತ ಬಾಗಿಲುಗಳಿದ್ದು, 'ಒನಕೆ ಓಬವ್ವ'ನ ಕಿಂಡಿಯೂ ಇದೆ.
ಇದನ್ನೂ ಓದಿ: ಮುರುಘಾವನ ಕಂಡು ಮಾರುಹೋಗಬೇಕಷ್ಟೆ
ರಂಗಯ್ಯನ ಬಾಗಿಲಿನ ಮೂಲಕ ಇಲ್ಲಿನ ಮುಖ್ಯ ದೇವಾಲಯವಾಗಿರುವ ಉಚ್ಚಂಗಮ್ಮನ ಮಂದಿರವನ್ನು ಪ್ರವೇಶಿಸಬಹುದು. ಮೂರನೆಯ ಸುತ್ತಿನ ಕಾಮನ ಬಾಗಿಲನೊಳಗೆ ಎಣ್ಣೆಕೊಳ ಹಾಗೂ ಗವಿಯಿದೆ. ಇಲ್ಲಿಂದ ದಕ್ಷಿಣಕ್ಕೆ ಆನೆಗಳ ಸಹಾಯದಿಂದ ಮದ್ದನ್ನು ಅರೆಯಲು ಬಳಸುತ್ತಿದ್ದ ಬೀಸುವ ಕಲ್ಲುಗಳಿವೆ. ನಾಲ್ಕನೆಯ ಬಾಗಿಲ ಬಳಿ ವೀರಭದ್ರ ಕೊತ್ತಳವಿದೆ. 5 ಮತ್ತು 6ನೆಯ ಬಾಗಿಲುಗಳು ಸುಲಭವಾಗಿ ಗೋಚರವಾಗದಂತೆ ನಿರ್ಮಿಸಲಾಗಿದೆ. ಇದರ ಬಳಿ ಗಣೇಶ ಮಂದಿರ, ಎರಡನೆಯ ರಂಗಪ್ಪ ನಾಯಕನ ಕಾಲದಲ್ಲಿ ನಿರ್ಮಿಸಿದ ಗರಡಿಮನೆಯಿದೆ.

7ನೆಯ ಬಾಗಿಲನ್ನು ಪ್ರವೇಶಿಸಿದಾಗ ಏಕನಾಥೇಶ್ವರಿ ದೇವಾಲಯ ಸಿಗುತ್ತದೆ. 8ನೆಯ ಮತ್ತು 9ನೆಯ ಬಾಗಿಲುಗಳಲ್ಲಿ ಸಂಪಿಗೆ ಸಿದ್ಧೇಶ್ವರ, ಹಿಡಿಂಬೇಶ್ವರ, ಫಲ್ಗುಣೇಶ್ವರ, ಗೋಪಾಲಕೃಷ್ಣ, ಸುಬ್ರಹ್ಮಣ್ಯ ಮಂದಿರಗಳಿವೆ. ಹಿಡಿಂಬ ರಥ ಹಾಗೂ ಭೀಮ ರಥಗಳು ಕೂಡ ಕಾಣಬಹುದು. ದುರ್ಗದ ಹೃದಯ ಪ್ರದೇಶವಾಗಿರುವ ಇಲ್ಲಿ ಕಲ್ಲಿನ ಕಣಜಗಳು ಹಾಗೂ ಮುದ್ರಾಶಾಲೆಗಳಿವೆ. ಈ ಪ್ರದೇಶದಲ್ಲಿರುವ ಬೆಟ್ಟಗಳ ಮೇಲೆ ಬತ್ತೇರಿಗಳನ್ನು ನಿರ್ಮಿಸಿ ಶತ್ರುಗಳು ನುಸುಳದಂತೆ ಮಾಡಲಾಗಿದೆ. ಎಲ್ಲ ಗೋಡೆಗಳು 15ರಿಂದ 40 ಅಡಿಗಳಷ್ಟು ಎತ್ತರವಿವೆ.
ಏಕನಾಥೇಶ್ವರಿ ದೇವಾಲಯ
ಚಿತ್ರದುರ್ಗದ ನಾಡದೇವತೆಯ ಗರ್ಭಗೃಹದಲ್ಲಿ ಏಕನಾಥೇಶ್ವರಿಯ ಶಿರೋಭಾಗವಿರುವ ಉಬ್ಬು ಶಿಲ್ಪವಿದೆ. 18ನೇ ಶತಮಾನದಲ್ಲಿ ಈ ದೇವಾಲಯಕ್ಕೆ ಮುಖಮಂಟಪವನ್ನು ಸೇರಿಸಲಾಗಿದೆ. ಇದರ ಕೆಳಭಾಗದಲ್ಲಿ ಬೃಹತ್ ಉಯ್ಯಾಲೆ ಕಂಬವಿದೆ. ಅದರ ಪಶ್ಚಿಮಕ್ಕೆ ಸುಂದರ ಕೊಳವಿದೆ. ಹಬ್ಬಗಳಂದು ಇದರಲ್ಲಿ ಓಕುಳಿ ಆಡಲಾಗುತ್ತಿತ್ತೆಂಬ ಪ್ರತೀತಿಯಿದೆ.
ಪಾಳೇಗಾರನ ಕಚೇರಿಯ ಉತ್ತರ ಮೂಲೆಯಲ್ಲಿ ಮಂಟಪವಿದೆ. ಮಂಟಪದ ಕೆಳಗೊಂದು ನೆಲಮಾಳಿಗೆಯಿದೆ. ಇದನ್ನು ನಾಣ್ಯಗಳನ್ನು ಗುಪ್ತವಾಗಿ ಸಂಗ್ರಹಿಸಿಡುವ ಖಜಾನೆಯಾಗಿ ಬಳಸಲಾಗುತ್ತಿತ್ತು.

ಅಕ್ಕ-ತಂಗಿಯರ ಹೊಂಡ
17ನೇ ಶತಮಾನದಲ್ಲೇ ಕೋಟೆಯ ನಿವಾಸಿಗಳಿಗೆ ನೀರಿನ ಅಭಾವವು ಬಾರದಂತೆ ಸರಬರಾಜು ಪದ್ಧತಿಯನ್ನು ವ್ಯವಸ್ಥಿತಗೊಳಿಸಲಾಗಿತ್ತು. ಅಣೆಕಟ್ಟುಗಳನ್ನು ನಿರ್ಮಿಸಿ, ಮಳೆಯ ನೀರು ಗೋಪಾಲಸ್ವಾಮಿ ಕೆರೆಯಲ್ಲಿ ಶೇಖರವಾಗುವಂತೆ ಮಾಡಲಾಗಿತ್ತು. ಅಲ್ಲಿ ತುಂಬಿ ಹರಿದ ಹೆಚ್ಚುವರಿ ನೀರು, 200 ಮೀಟರ್ ದೂರದಲ್ಲಿ ಕೆಳಭಾಗದಲ್ಲಿರುವ ಅಕ್ಕ-ತಂಗಿಯರ ಹೊಂಡಕ್ಕೆ ಇಳಿಯುತ್ತಿತ್ತು. ಅಲ್ಲಿಂದ ಸಿಹಿನೀರಿನ ಹೊಂಡಕ್ಕೆ ಬಳಿಕ ಸಂತೆ ಹೊಂಡಕ್ಕೆ ಹರಿಯುತ್ತಿತ್ತು. ಹೀಗೆ ಶೇಖರಣೆಯಾದ ನೀರು ಮುಂದಿನ 12 ವರ್ಷಗಳಿಗೆ ಸಾಕಾಗುವಷ್ಟಿತ್ತಂತೆ.
ತಣ್ಣೀರು ದೋಣಿ
ಅಕ್ಕ-ತಂಗಿಯರ ಹೊಂಡದಿಂದ ಒನಕೆ ಓಬವ್ವನ ಕಿಂಡಿಯ ಬಳಿ ಹೋಗುವಾಗ ಸ್ಫಟಿಕದಂಥ ಸ್ವಚ್ಛ ನೀರಿನ ಕೊಳ ಕಾಣಿಸುತ್ತದೆ. ಬಂಡೆಕಲ್ಲುಗಳ ಎಡೆಗಳಿಂದ ಕಿರು ಝರಿಯಾಗಿ ಹರಿಯುವ ನೀರು ಕುಡಿಯಲು ಯೋಗ್ಯವೆನಿಸುತ್ತದೆ. ಹಾಗಂತ ಕುಡಿದೀರೋ..ಜೋಕೆ! ಏಕೆಂದರೆ, ಕೆಲವು ಪ್ರವಾಸಿಗರು ದಾರಿಯ ಬದಿಯಲ್ಲೇ ಬಹಿರ್ದೆಶೆ ಮಾಡಿ ಈ ಕೊಳದ ನೀರಲ್ಲಿ ನಿರ್ಲಜ್ಜರಾಗಿ ತೊಳೆದು ಕೊಳ್ಳುತ್ತಾರೆ!

ಒನಕೆ ಓಬವ್ವನ ಕಿಂಡಿ
ಮದ್ದ ಹನುಮಪ್ಪ ಎಂಬ ಸೈನಿಕನ ಮಡದಿಯಾಗಿದ್ದ ಓಬವ್ವ 1779ರ ಒಂದು ಮಧ್ಯಾಹ್ನ ಊಟದ ವೇಳೆ ತನ್ನ ಪತಿಯ ಬದಲು ಗೋಪುರವನ್ನು ಕಾವಲು ಕಾಯುತ್ತಿದ್ದಳು. ಆಗ ಇಲ್ಲಿ ಗೋಚರಿಸುವ ಹಂಚಿನ ಬಾಗಿಲಿನ ಬಳಿ ನೀರು ತರಲು ಆಗಮಿಸಿದ್ದ ಓಬವ್ವ ಶತ್ರು ಸೈನಿಕರ ಪಿಸುಮಾತುಗಳನ್ನು ಆಲಿಸಿ ಈ ಕಿಂಡಿಯ ಬಳಿ ಮರೆಯಲ್ಲಿ ನಿಂತು, ಕಿಂಡಿಯ ಮೂಲಕ ಕೋಟೆಯ ಒಳಗೆ ಪ್ರವೇಶಿಸಲು ಮುಂದಾದ ಹೈದರಾಲಿಯ ಸೈನಿಕರನ್ನು ಒಬ್ಬೊಬ್ಬರಾಗಿ ಸದೆಬಡಿದಳು.
ಗೋಪಾಲ ಸ್ವಾಮಿ ದೇವಾಲಯ
ಗೋಪಾಲಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದ್ದು ದ್ರಾವಿಡ ಶೈಲಿಯಲ್ಲಿದೆ. ಗರ್ಭಗೃಹದಲ್ಲಿ 1ಮೀ. ಎತ್ತರದ ಹೊಯ್ಸಳ ಶೈಲಿಯ ಗೋಪಾಲಕೃಷ್ಣ ಮೂರ್ತಿಯಿದೆ. ಎರಡೂ ಬದಿಗಳಲ್ಲಿ ಗೋವುಗಳು ಮತ್ತು ಚಾಮರಧಾರಿಣಿಯರು ವೇಣುಗೋಪಾಲನ ಕೊಳಲ ನಾದವನ್ನಾಲಿಸುವಂತೆ ಕೆತ್ತಲಾಗಿದೆ. ರವಿವಾರ ಮತ್ತು ಅಷ್ಟಮಿಯಂದು ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಅರಮನೆ ಸಂಕೀರ್ಣ ಮತ್ತು ಈ ಕೆರೆಯ ನಡುವಿನ ಪ್ರದೇಶವನ್ನು 'ಶೃಂಗಾರ ತೋಟ'ವೆಂದು ಕರೆಯಲಾಗುತ್ತಿತ್ತು.
ಹಿಡಿಂಬೇಶ್ವರ ದೇವಾಲಯ
ಶಿವನಿಗೆ ಸಮರ್ಪಿತವೆನ್ನಲಾಗುವ ಈ ದೇವಾಲಯವನ್ನು 15ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಿಶಿಷ್ಟ ರಚನೆಯ ಈ ಶಿಲಾ ದೇಗುಲಕ್ಕೆ ಎರಡು ನವರಂಗಗಳಿವೆ. ಭೀಮಸೇನನು ಹಿಡಿಂಬಾಸುರನೊಂದಿಗೆ ಯುದ್ಧ ಮಾಡಿ ಹಿಡಿಂಬೆಯನ್ನು ವಿವಾಹವಾದ ಸ್ಥಳವಿದೆನ್ನುವ ಪೌರಾಣಿಕ ಐತಿಹ್ಯವಿದೆ!

ಮುರುಘಾ ಮಠ/ಬೃಹನ್ಮಠ
ದುರ್ಗವನ್ನಾಳಿದ ಪಾಳೆಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನು ಚಿತ್ರದುರ್ಗದ ಬೃಹನ್ಮಠದ ಪರಂಪರೆಯಲ್ಲಿನ 8ನೇ ಪಟ್ಟಾಧಿಕಾರಿಗಳಾಗಿದ್ದ ಮುರುಘೇಂದ್ರ ರಾಜೇಂದ್ರರಿಗೆ ಕಾಣಿಕೆಯಾಗಿ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣ ವಿಸ್ತೀರ್ಣದ ಮಠ ಕಟ್ಟಿಸಿಕೊಟ್ಟ. ಅನಂತರ 1,703ರಲ್ಲಿ ಬೆಟ್ಟದಿಂದ ದೂರದಲ್ಲಿ ಈಗಿರುವ ಮಠವನ್ನು ನಿರ್ಮಿಸಲಾಯಿತು.
ಸಂಪಿಗೆ ಸಿದ್ಧೇಶ್ವರ ದೇವಾಲಯ
ಗಾಳಿಮಂಟಪ ಎಂದು ಕರೆಯಲ್ಪಡುವ ಎರಡಂತಸ್ತಿನ ಮಹಾದ್ವಾರವನ್ನು ಹೊಂದಿರುವ ಸೊಗಸಾದ ಸಿದ್ಧೇಶ್ವರ ದೇವಾಲಯವನ್ನು 14-15ನೇ ಶತಮಾನದಲ್ಲಿ ಮಲ್ಲಣ್ಣ ಒಡೆಯರ್ ನಿರ್ಮಿಸಿದ್ದಾರೆ. ದಕ್ಷಿಣದ ಗೋಡೆಯ ಚಿಕ್ಕ ಗೂಡಲ್ಲಿ 'ಶೂಲಬ್ರಹ್ಮ ಶಿಲ್ಪ' ಈರ್ವರು ನಾಯಕರ ಉಬ್ಬು ಶಿಲ್ಪ ಗಳಿವೆ. ಗುಡಿಯ ಪ್ರಾಂಗಣದಲ್ಲಿ ಚಿಕ್ಕ ಕೊಳ ಹಾಗೂ ಅಗ್ನಿಕುಂಡವಿದ್ದು ಚಿತ್ರದುರ್ಗದ ನಾಯಕರ ಪಟ್ಟಾಭಿಷೇಕ ಮಹೋತ್ಸವ ಇದೇ ತಾಣದಲ್ಲಿ ನಡೆಯುತ್ತಿತ್ತು.
ಕೋಟೆಯೊಳಗಿನ ಮಳೆನೀರು ಸಂಗ್ರಹಣೆಯ ಭಾಗವಾದ ತುಪ್ಪದ ಕೊಳಕ್ಕೆ ತಲುಪುವುದು ಸಾಹಸಮಯ ಹಾಗೂ ಅಪಾಯಕಾರಿ ಕೆಲಸ. ಈ ಬತ್ತೇರಿಯ ತುತ್ತತುದಿಯಿಂದ ಸುತ್ತ ಮುತ್ತಲಿನ ನೆಲ್ಲಿಕಾಯಿ ಸಿದ್ಧೇಶ್ವರ ಬತ್ತೇರಿ, ಝಂಡಾ ಬತ್ತೇರಿ, ಲಾಲ್ ಬತ್ತೇರಿ, ಕಹಳೆ ಬತ್ತೇರಿ, ಬಸವನ ಬತ್ತೇರಿಗಳಿವೆ.
ಅರಮನೆ ಸಂಕೀರ್ಣ
ಅರಮನೆ ಸಂಕೀರ್ಣವು ರಾಜ ಕುಟುಂಬದ ಮುಖ್ಯ ವಾಸಸ್ಥಾನವಾಗಿದ್ದು, ಭದ್ರತಾ ದೃಷ್ಟಿಯಿಂದ ಹಲವು ಗೋಡೆಗಳು ಮತ್ತು ರಹಸ್ಯ ದಾರಿಗಳೊಂದಿಗೆ ರಚನೆಯಾಗಿತ್ತು. ಅರಮನೆಯೊಳಗಿನ ಕಟ್ಟಡಗಳು ಶಿಲ್ಪಕಲೆ ಮತ್ತು ಮರಳು ಕಲ್ಲಿನ ಕಂಬಗಳಿಂದ ಸಮೃದ್ಧವಾಗಿವೆಯೆಂದು ಹೇಳಲಾಗುತ್ತದೆ. ಆದರೆ ಇಲ್ಲಿಗೆ ತಲುಪುವ ಮಾರ್ಗವು ಪ್ರಸಕ್ತ ಮುಳ್ಳು ಕಂಟಿಗಳಿಂದ ಮುಚ್ಚಿ ಹೋಗಿದ್ದು ಪ್ರವಾಸಿಗರ ವೀಕ್ಷಣೆಯಿಂದ ದೂರವೇ ಉಳಿದಿದೆ. ಇಲ್ಲಿನ ವಿಶಾಲ ಪ್ರದೇಶದಲ್ಲಿ ಹಲವು ಕಟ್ಟಡಗಳು ಪಳೆಯುಳಿಕೆ ಸ್ಥಿತಿಯಲ್ಲಿವೆ. ಆನೆ, ಕುದುರೆಗಳ ಲಾಯವಿದೆ. ಪಾಳು ಕಟ್ಟಡಗಳ ನಡುವೆ 'ಬೊಪ್ಪಯ್ಯ ಚಾವಡಿ' ಹಾಗೂ ʼಶೃಂಗಾರ ವನ'ವಿತ್ತು.
ಸಾರ್ಥಕ ಭಾವನೆಯೊಂದಿಗೆ 'ದುರ್ಗ ನಮ್ಮ ಸ್ವರ್ಗ'ವೆಂಬ ಸ್ಥಳೀಯರ ಭಾವನೆಗಳನ್ನು ಮನಸಾರೆ ಅನುಭವಿಸಿ ಈ ಪ್ರವಾಸಕ್ಕೆ ವಿದಾಯ ಹೇಳಬಹುದು.
ದಾರಿ ಹೇಗೆ?
ಬೆಂಗಳೂರಿನಿಂದ ತುಮಕೂರು ಮೂಲಕ ಬಸ್ಸು ಅಥವಾ ರೈಲಿನಲ್ಲಿ ತಲುಪಬಹುದು. ಒಟ್ಟು ದೂರ. 203 ಕಿ.ಮೀ.
ಮುಂಬಯಿಯಿಂದ ದಾವಣಗೆರೆ ತನಕ ರೈಲಿನಲ್ಲಿ ಆಗಮಿಸಿ, ಅಲ್ಲಿಂದ ಬಸ್ ಮೂಲಕ ತಲುಪಬಹುದು. ಒಟ್ಟು ದೂರ.1030 ಕಿ.ಮೀ.