Monday, December 8, 2025
Monday, December 8, 2025

ಮುರುಘಾವನ ಕಂಡು ಮಾರುಹೋಗಬೇಕಷ್ಟೆ

ಇಲ್ಲಿರುವ ಬೃಹತ್ 'ಚಿಂಪಾಂಜಿ'ಯ ತೆರೆದ ಬಾಯಿಯ ಪ್ರವೇಶ ದ್ವಾರವು ಮಕ್ಕಳಾದಿಯಾಗಿ ಹಿರಿಯರನ್ನೂ ಚಕಿತಗೊಳಿಸುತ್ತದೆ. ಈ ದ್ವಾರದ ಒಳಗೆ ಅಡಿಯಿಡುತ್ತಿದ್ದಂತೆ ಆಡಿಯೋದಲ್ಲಿ ಚಿಂಪಾಂಜಿಯ ಸ್ವರವನ್ನೂ ಆಲಿಸಬಹುದು. ಇದು ಮಕ್ಕಳಲ್ಲಿ ಕುತೂಹಲ ಮೂಡಿಸುತ್ತದೆ. ಅದರ ಬಲಬದಿಯ ಮಾರ್ಗದಲ್ಲಿ ಮುನ್ನಡೆದರೆ ಮನರಂಜನೆಯಲ್ಲೂ ನೈತಿಕತೆಯನ್ನು ಸಾರುವ ಹಲವು ಅದ್ಭುತಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ.

  • ರಮಣ್ ಶೆಟ್ಟಿ ರೆಂಜಾಳ

ಚಿತ್ರದುರ್ಗವನ್ನು ಆಳಿದ ಪ್ರಸಿದ್ಧ ಪಾಳೆಯಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ಅವರು ಒಬ್ಬರಾಗಿದ್ದು, ಕ್ರಿಶ1689ರಿಂದ 1721ರವರೆಗೆ ಆಳಿದ್ದಾರೆ. ಇಲ್ಲಿ ಹೇಳಲಾಗುವಂತೆ ಭರಮಣ್ಣ ನಾಯಕರು ಕುರಿಗಾಹಿಯಾಗಿದ್ದ ಕಾಲದಲ್ಲಿ ಒಮ್ಮೆ ಕಾಡಿನಲ್ಲಿ ವಿಶ್ರಮಿಸುತ್ತಿದ್ದ ವೇಳೆ ಸರ್ಪವೊಂದು ತನ್ನ ಹೆಡೆಯನ್ನು ಅವರ ತಲೆಯ ಮೇಲೆ ಹರಡಿ ಆಶ್ರಯ ನೀಡಿತ್ತು ಎನ್ನಲಾಗಿದೆ. ಈ ಅಪೂರ್ವ ದೃಶ್ಯವನ್ನು ಕಂಡು ಮುಂದಿನ ಮೂರು ತಿಂಗಳಲ್ಲಿ ನೀನು ಚಿತ್ರದುರ್ಗದ ರಾಜನಾಗುವೆ ಎಂದು ಚಿತ್ರದುರ್ಗದ ಬೃಹನ್ಮಠದ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರುಘೇಂದ್ರ ರಾಜೇಂದ್ರರು ಭವಿಷ್ಯ ನುಡಿದಿದ್ದರು. ನಂತರ ಅವರು ತಮ್ಮ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣ ನಾಯಕರು ಚಿತ್ರದುರ್ಗದ ರಾಜರಾಗಿದ್ದರು. ಪ್ರವಾಸದಿಂದ ಹಿಂದಿರುಗಿದ ಗುರುಗಳನ್ನು ಸಂತೋಷದಿಂದ ಸ್ವಾಗತಿಸಿದರು. ಕಾಣಿಕೆಯಾಗಿ ಏಳು ಸುತ್ತಿನ ಕೋಟೆಯ ಬೆಟ್ಟದ ಮೇಲಿನ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ಮಠವೊಂದನ್ನು ಕಟ್ಟಿಸಿಕೊಟ್ಟರು.

Untitled design (2)

ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನೂ ನಿರ್ಮಿಸಿದರು. ಆದ್ದರಿಂದ ಈಗ ಬೆಟ್ಟದ ಮೇಲಿನ ಮಠವು ಬಳಕೆಯಾಗದೆ ಒಂದು ಸ್ಮಾರಕವಾಗಿ ಉಳಿದುಕೊಂಡಿದೆ. ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗ ಪಟ್ಟಣದಿಂದ ಸುಮಾರು 3 ಕಿಮೀ ದೂರದಲ್ಲಿದೆ. ವಿಶಾಲವಾದ ಸ್ಥಳದಲ್ಲಿ ನೆಲೆಗೊಂಡಿರುವ ಈ ಬೃಹನ್ಮಠ ಭವ್ಯವಾದ ಅರಮನೆಯನ್ನು ಹೋಲುವ ಕಟ್ಟಡದಿಂದ ಕೂಡಿದೆ. ಪ್ರಸಕ್ತ ಲಿಂಗಾಯತ ಧರ್ಮದ ಪ್ರಮುಖ ಪೀಠಗಳಲ್ಲಿ ಇದು ಒಂದಾಗಿದ್ದು, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದೆ. ಪ್ರವಾಸಿಗರಿಗೆ ಮಧ್ಯಾಹ್ನ ಉಚಿತ ಅನ್ನ ದಾಸೋಹ, ಮ್ಯೂಸಿಯಂ ಹಾಗೂ 'ಮುರುಘಾವನ' ಹೆಸರಿನ ಥೀಮ್ ಪಾರ್ಕ್, ಅನೇಕ ವಿದ್ಯಾಸಂಸ್ಥೆಗಳನ್ನೂ ಈ ಮಠ ನಿರ್ವಹಿಸುತ್ತಿದೆ.

ಮುರುಘಾವನವು ಸುಮಾರು 25 ಎಕರೆಯಷ್ಟು ವಿಶಾಲವಾದ ಸುಂದರ ಉದ್ಯಾನವಾಗಿದೆ. ಇಲ್ಲಿ ನೈಸರ್ಗಿಕ ಶಿಲೆಗಳ ಜತೆಗೆ ವಿವಿಧ ಶಿಲ್ಪಗಳು, ಟ್ಯಾಬ್ಲೋಗಳು ಮತ್ತು ವೈವಿಧ್ಯ ಗಿಡ-ಮರಗಳು ನಳನಳಿಸುತ್ತಿವೆ.

murughavana

ಬೃಹತ್ 'ಚಿಂಪಾಂಜಿ'ಯ ತೆರೆದ ಬಾಯಿಯ ಪ್ರವೇಶ ದ್ವಾರವು ಮಕ್ಕಳಾದಿಯಾಗಿ ಹಿರಿಯರನ್ನೂ ಚಕಿತಗೊಳಿಸುತ್ತದೆ. ಈ ದ್ವಾರದ ಒಳಗೆ ಅಡಿಯಿಡುತ್ತಿದ್ದಂತೆ ಆಡಿಯೋದಲ್ಲಿ ಚಿಂಪಾಂಜಿಯ ಸ್ವರವನ್ನೂ ಆಲಿಸಬಹುದು. ಇದು ಮಕ್ಕಳಲ್ಲಿ ಕುತೂಹಲ ಮೂಡಿಸುತ್ತದೆ. ಅದರ ಬಲಬದಿಯ ಮಾರ್ಗದಲ್ಲಿ ಮುನ್ನಡೆದರೆ ವಿವಿಧ ಸೂಕ್ತಿಗಳನ್ನು ಬಿಂಬಿಸುವ ಲೋಹದ ಪ್ರತಿಮೆಗಳ ಕಲಾಕೃತಿಗಳಿದ್ದು, ಒಂದಕ್ಕಿಂತ ಒಂದು ಹೆಚ್ಚು ಅರ್ಥಗರ್ಭಿತವಾಗಿವೆ!

ಇಲ್ಲಿನ ತಕ್ಕಡಿಯ ರಚನೆಯ ಒಂದು ತುದಿಯಲ್ಲಿ ಪುಸ್ತಕ ಓದುವ ಹುಡುಗಿಯ ಪ್ರತಿಮೆಯಿದ್ದರೆ ಇನ್ನೊಂದು ತುದಿಯಲ್ಲಿ ಹುಡುಗನೋರ್ವ ಮೊಬೈಲ್‌ನ್ನು ಕೈಯಲ್ಲಿ ಹಿಡಿದು ಸಮಯ ಹಾಳು ಮಾಡುತ್ತಿರುವಂತೆ ಬಿಂಬಿಸುವ ಪ್ರತಿಮೆಯಿದೆ. ದೊಡ್ಡ ದೇಹವನ್ನು ಹೊಂದಿದ್ದರೂ ಈತನ ಬೆಲೆ ಕಡಿಮೆ (ಹಗುರ) ಎಂಬಂತೆ. ಓದುತ್ತಿರುವ ಪುಟ್ಟ ಹುಡುಗಿಯ ಬಳಿ ಪುಸ್ತಕಗಳನ್ನು ಪೇರಿಸಿಟ್ಟಿದ್ದು ಅವಳ ಬೆಲೆ ಅಧಿಕ (ಭಾರ)ವೆಂಬಂತೆ ಈ ಶಿಲ್ಪವು ತೋರಿಸುತ್ತಿದೆ. ಈ ರಚನೆಯಲ್ಲಿ ಯಾವುದೇ ಸೂಚನೆ ಅಥವಾ ಸೂಕ್ತಿಯನ್ನು ಬರೆಯಲಾಗಿಲ್ಲ. ಆದರೂ ಹೇಳತಕ್ಕದ್ದನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಸುವಂತಿದೆ.

ʻಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ, ಲಿಂಗಾನುಪಾತ ಸಮನಾಗಿರಲಿʼ ಎಂಬ ಘೋಷಣೆ ಹೊತ್ತ ಪ್ರತಿಮೆಯಲ್ಲಿ ಎರಡು ಹೋಳಾಗಿಸಿದ ಪಪ್ಪಾಯಿ ಕಾಯಿಯೊಳಗೆ ಹೆಣ್ಣು ಭ್ರೂಣವನ್ನು ಇರಿಸಲಾಗಿದೆ.

Untitled design (4)

ಮದ್ಯಪಾನ ಮಾಡುತ್ತಿರುವ ವ್ಯಕ್ತಿಯ ಕಾಲ ಕೆಳಗೆ ಕರಿ ಚೇಳು ತನ್ನ ಬಾಲವೆತ್ತಿ ಕುಟುಕುವಂತೆ, ಬೆಳೆಹಾನಿಯ ನಷ್ಟ ಕಾಲಿಗೆ ತೊಡರಿಕೊಂಡಿರುವ ರೈತನ ತಲೆ ಮೇಲೆ ಸಾಲಬಾಧೆಯ ಭಾರ ಅಂಟಿಕೊಂಡಿರುವಂತೆ ನಿರ್ಮಿಸಿರುವ ಶಿಲ್ಪಗಳು ಮನಕಲಕುವಂತಿವೆ.

ಸೋಮಾರಿಯಾಗಿ ಮನೆಯಲ್ಲಿರುವ ಮನುಷ್ಯ ಬೆಳೆಸಿಕೊಂಡಿರುವ ಹೊಟ್ಟೆಯ ಗಾತ್ರ ಶ್ರಮವಹಿಸಿ ಹೊಲದಲ್ಲಿ ಬೆಳೆಸಿದ ಕುಂಬಳಕಾಯಿಯ ಗಾತ್ರ ಸಮನಾಗಿರುವ ಕಲಾಕೃತಿಯೊಂದು ಮೆಲುಹಾಸ್ಯದೊಂದಿಗೆ ಗಂಭೀರ ಸಂದೇಶ ಬೀರುತ್ತದೆ. ಧೂಮಪಾನ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂದು ಸಾರುವ ಅಸ್ಥಿಪಂಜರ, ದೌರ್ಜನ್ಯ / ಮಾನಸಿಕ ಒತ್ತಡ ಇನ್ನಿತರ ಸೂಕ್ತಿಗಳನ್ನು ಸಾರುವ ಪ್ರತಿಮೆಗಳನ್ನೂ ಇಲ್ಲಿ ವೀಕ್ಷಿಸಿ ಮನದೊಳಗೆ ಸುವಿಚಾರಗಳನ್ನು ತುಂಬಿಕೊಳ್ಳುತ್ತಾ ಬೃಹತ್ ಚಿಂಪಾಂಜಿ ವಿಗ್ರಹದ ಬಾಯೊಳಗಿಂದಾಗಿ ಪ್ರವೇಶಿಸಿ ವನದೊಳಗಿನ ಇತರ ಆಶ್ಚರ್ಯಜನಕ ಪ್ರಪಂಚದೊಳಗೆ ಕಾಲಿರಿಸಬಹುದು.

Untitled design (1)

ಬತ್ತಿಹೋದ ನದಿಯಲ್ಲಿ ಬೋಳುಮರದ ಮೇಲೆ ಕುಳಿತಿರುವ ಬೆಳ್ಳಕ್ಕಿಗಳ ಕಲಾಕೃತಿ ನಿಜವೋ ಏನೋ ಎಂಬ ಭ್ರಮೆ ಹುಟ್ಟಿಸುತ್ತದೆ. ಮುಂದೆ ವಿವಿಧ ಗಾತ್ರ, ವಿನ್ಯಾಸಗಳ ಡೈನೋಸಾರ್ ಪ್ರತಿಮೆಗಳನ್ನು ಒಳಗೊಂಡಿರುವ ವಿಶಾಲ ತೋಟ ಪ್ರವಾಸಿಗರನ್ನು ಟ್ರಯಾಸಿಕ್- ಜುರಾಸಿಕ್ ಕಾಲಕ್ಕೆ ಕೊಂಡೊಯ್ಯುತ್ತದೆ. ನೆರಳು ಚೆಲ್ಲುವ ಅನೇಕ ವಿಶಾಲ ವೃಕ್ಷಗಳನ್ನೊಳಗೊಂಡಿರುವ ಈ ಉದ್ಯಾನದುದ್ದಕ್ಕೂ ಕಲ್ಲು, ಮಣ್ಣು, ಸಿಮೆಂಟ್, ಲೋಹ ಇತ್ಯಾದಿ ವಿವಿಧ ವಸ್ತುಗಳಿಂದ ನಿರ್ಮಿಸಿರುವ ಆದಿಯುಗದ ಮಾನವರು ಹಾಗೂ ವಿವಿಧ ಧರ್ಮಗಳು ಮತ್ತು ಶರಣರ ಪ್ರಾತ್ಯಕ್ಷಿಕೆಗಳನ್ನು ಯಥೇಚ್ಛವಾಗಿ ಕಾಣಬಹುದು. ಅವುಗಳಲ್ಲಿ ಬುದ್ಧ, ಮಹಾವೀರ, ಏಸುಕ್ರಿಸ್ತ, ಮಹಮ್ಮದ್ ಪೈಗಂಬರರ ಧಾರ್ಮಿಕ ಪ್ರವಚನಗಳ ದೃಶ್ಯಗಳನ್ನು ಒಂದೆಡೆ ಕಾಣಬಹುದು. ಇನ್ನೊಂದೆಡೆ ಕಲ್ಯಾಣದ ಬಸವಣ್ಣ, ಅಕ್ಕಮಹಾದೇವಿ, ಡಕ್ಕೆಯ ಮಾರಯ್ಯ, ಮಡಿವಾಳ ಮಾಚಯ್ಯ, ಮರುಳು ಶಂಕರದೇವ, ಅಂಬಿಗರ ಚೌಡಯ್ಯ ಮುಂತಾದವರ ವಿವರಗಳನ್ನೊಳಗೊಂಡ ಶಿಲ್ಪಕಲಾ ಪ್ರಾತ್ಯಕ್ಷಿಕೆಗಳೂ, ಕಲ್ಯಾಣ ಕ್ರಾಂತಿಗೆ ಕಾರಣವಾದ ಶೀಲವಂತ ಮತ್ತು ಲಾವಣ್ಯವತಿಯರ ಅಂತರ್ಜಾತೀಯ ವಿವಾಹದ ಸನ್ನಿವೇಶಗಳೂ ಪ್ರಮುಖವೆನಿಸುತ್ತವೆ. ಆನೆ, ಜಿರಾಫೆ, ಚಿಂಪಾಂಜಿ ಮುಂತಾದ ಪ್ರಾಣಿಗಳ ಬೃಹತ್ ಪ್ರತಿಮೆಗಳು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ವಿಗ್ರಹಗಳೂ ಮನಸೆಳೆಯುತ್ತವೆ. ಈ ವನದಲ್ಲಿ ಆನೆ, ಬಾತುಕೋಳಿ ಇತ್ಯಾದಿ ವಿವಿಧ ಸಜೀವ ಪ್ರಾಣಿ ಪಕ್ಷಿಗಳೂ ಇವೆ. ಮಕ್ಕಳಿಗಾಗಿ ವಿವಿಧ ಆಟೋಪಕರಣಗಳ ಜತೆಗೆ ಕುಟುಂಬ ಸಹಿತ ಮನರಂಜನೆಗಾಗಿ ದೋಣಿ ವಿಹಾರವೂ ಇಲ್ಲಿದೆ. ವಾರಾಂತ್ಯದ ಸಂಜೆಗಳಲ್ಲಿ ಸಂಗೀತ ಕಾರಂಜಿಯನ್ನೂ ವಿಶೇಷ ಆಕರ್ಷಣೆಯಾಗಿ ಏರ್ಪಡಿಸಲಾಗುತ್ತದೆ. ಪ್ರಶಾಂತತೆ ಮತ್ತು ಮನರಂಜನೆಗೆ ಪ್ರಸಿದ್ಧವಾಗಿರುವ ಸದ್ರಿ ವನದ ರಮಣೀಯ ಹಾದಿಗಳು ಮತ್ತು ನೈಸರ್ಗಿಕ ಪರಿಸರದಲ್ಲಿ ಅಡ್ಡಾಡಬಹುದು.

ಮುರುಘಾ ವನವು ಅದರ ಅತ್ಯುತ್ತಮ ಸೌಲಭ್ಯಗಳಿಗಾಗಿ ಹೆಸರುವಾಸಿಯಾಗಿದ್ದು, ಕಾರ್ ಪಾರ್ಕಿಂಗ್, ವೀಲ್ ಛೇರ್, ವಾಶ್ ರೂಮ್, ತಿಂಡಿ/ ಪಾನಿಯಗಳ ಕ್ಯಾಂಟೀನ್, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಹೊಂದಿದೆ. ನಿಸರ್ಗ ಪ್ರೇಮಿಗಳಿಗೆ, ಶಾಂತಿ ಪ್ರಿಯರಿಗೆ, ಜ್ಞಾನ ದಾಹಿಗಳಿಗೆ, ಮಕ್ಕಳಾದಿ ಕುಟುಂಬ ಸದಸ್ಯರಿಗೆ ಮುರುಘಾವನವು ಉದ್ಯಾನವನಕ್ಕೂ ಮೀರಿ ಮರೆಯಲಾಗದ ಚೇತೋಹಾರಿ ರಜೆಯ ಮಜದ ಅನುಭವ ನೀಡುತ್ತದೆ. ಬೆಳಗ್ಗೆ 9 : 00ರಿಂದ ಸಂಜೆ 7:30ರವರೆಗೆ ತೆರೆದಿರುವ ಮುರುಘಾವನವನ್ನು ಪೂರ್ತಿ ವೀಕ್ಷಿಸಲು ಕನಿಷ್ಠ 2 ಗಂಟೆಗಳ ಅವಧಿ ಬೇಕು ಮತ್ತು ಪ್ರವೇಶ ಶುಲ್ಕವೂ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..