Saturday, July 26, 2025
Saturday, July 26, 2025

ಅಲ್ಲೊಬ್ಬಳು ಮನವ ಕಾಡುವ ರೂಪಸಿ ಇದ್ದಾಳೆ!

“ಜುಳು ಜುಳು ಎಂಬ ಆಕೆಯ ಶೃತಿಬದ್ಧ ದನಿ ನಮ್ಮನ್ನು ಸೆಳೆಯುತ್ತಲೇ ಇತ್ತು. ನಾವುಗಳು "ಎಲ್ಲಿರುವೆ ಮನವ ಕಾಡುವ ರೂಪಸಿಯೇ" ಎಂದು ನಮ್ಮದೇ ಮಧುರವಲ್ಲದ ದನಿಯಲ್ಲಿ ಹಾಡನ್ನು ಗುನುಗುತ್ತಾ ಅವಳ ಮೋಹಕ ದನಿಯ ಜಾಡನ್ನು ಹಿಂಬಾಲಿಸಿ ಹೊರಟೆವು. ಆಕೆ ಇರುವ ದಾರಿ ನಿಜಕ್ಕೂ ರೋಚಕ. ಹೆಜ್ಜೆ ಇಟ್ಟಲ್ಲೆಲ್ಲ ಕೊರೆಯುವ ನೀರು. ಅಲ್ಲಲ್ಲಿ ಕಾಲಿಗೆ ಸಿಗುವ ಶತಮಾನದಷ್ಟು ಹಳೆಯದಾಗಿರುವ ಕಲ್ಲುಗಳು. ಬೇಕಂತಲೇ ಕಾಟ ಕೊಡಲು ಬರುವ ಹುಳು ಹುಪ್ಪಟೆಗಳು. ಉಹುಂ ಅಷ್ಟು ಸುಲಭವಾಗಿ ದಾರಿ ಸವೆಯುವುದಿಲ್ಲ”

ನಿಸರ್ಗದ ಸೃಷ್ಟಿಯ ಚಮತ್ಕಾರಗಳಿಗೆ ನಾವು ಬೆರಗಾಗಲೇಬೇಕು. ಬಹುಶಃ ನಮ್ಮ ಸುತ್ತಲಿನ ಸೃಷ್ಟಿ ಇಷ್ಟು ಅದ್ಭುತವಾಗಿ ಇರದೆ ಹೋಗಿದ್ದರೆ ನಮ್ಮ ಬದುಕು ನೀರಸವೆನಿಸುತ್ತಿತ್ತು. ನಮಗೆ ಆನಂದದ ಅನುಭೂತಿ ನೀಡುತ್ತಾ ತನ್ನ ಮೋಹಕ ಸೌಂದರ್ಯದಿಂದ ನಮ್ಮನ್ನು ಹಿಡಿದಿಟ್ಟುಕೊಂಡಿರುವ 'ಸೃಷ್ಟಿ' ಎಂಬ ವಿಶಿಷ್ಟ ಮಾಂತ್ರಿಕತೆಗೆ ಒಂದು ಸಲಾಂ.

ಮೊನ್ನೆ ನಮ್ಮ ಸ್ನೇಹಿತರ ದಂಡು ತುಸು ತಣ್ಣಗಾಗಿ ಬರಲು ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದೆವು. ಹುಡುಗಾಟದ ವಯಸ್ಸಿನವರಾದ ನಾವು ದೇವಸ್ಥಾನಕ್ಕೆ ಮಾತ್ರ ಪ್ರದಕ್ಷಿಣೆ ಹಾಕಿ ಬಂದರೆ ಸರಿ ಹೋದೀತೆ? ಅದರಲ್ಲೂ ನಾವು ಅಡ್ವೆಂಚರ್ ಇಷ್ಟಪಡುವ ಆಸಾಮಿಗಳು. ಹಾಗಾಗಿ ಧರ್ಮಸ್ಥಳದ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರನ್ನು ತಕ್ಷಣಕ್ಕೆ ಬೆಳ್ತಂಗಡಿಯ ದಿಡುಪೆಯತ್ತ ತಿರುಗಿಸಿದೆವು. ಆಕಾಶದಿಂದ ಸಣ್ಣಗೆ ನೆಲದ ಮೇಲೆ ಮಳೆಯ ಪ್ರೋಕ್ಷಣೆಯಾಗುತ್ತಿತ್ತು. ಮಣ್ಣಿನ ಘಮ ನಮ್ಮ ಮೂಗಿಗೆ ಬಡಿಯುತ್ತಿತ್ತು. ತುಸು ಹೊತ್ತಿಗೆ ಚಳಿ ಕೂಡ ಶುರುವಾಯಿತು. ನಾವಂತೂ ಎರಡು ಕೈಗಳನ್ನು ಉಜ್ಜಿ ಬೆಚ್ಚಗೆ ಮಾಡಿಕೊಂಡು ಅನಾಮಿಕ ಸೌಂದರ್ಯವತಿಯನ್ನು ನೋಡಲು ತಯಾರಾದೆವು.

kadamagundi falls

ಜುಳು ಜುಳು ಎಂಬ ಆಕೆಯ ಶೃತಿ ಬದ್ಧ ದನಿ ನಮ್ಮನ್ನು ಸೆಳೆಯುತ್ತಲೇ ಇತ್ತು. ನಾವುಗಳು "ಎಲ್ಲಿರುವೇ... ಮನವ ಕಾಡುವ ರೂಪಸಿಯೇ" ಎಂದು ನಮ್ಮದೇ ಮಧುರವಲ್ಲದ ದನಿಯಲ್ಲಿ ಹಾಡನ್ನು ಗುನುಗುತ್ತಾ ಅವಳ ಮೋಹಕ ದನಿಯ ಜಾಡನ್ನು ಹಿಂಬಾಲಿಸಿ ಹೊರಟೆವು. ಆಕೆ ಇರುವ ದಾರಿ ನಿಜಕ್ಕೂ ರೋಚಕ. ಹೆಜ್ಜೆ ಇಟ್ಟಲ್ಲೆಲ್ಲ ಕೊರೆಯುವ ನೀರು. ಅಲ್ಲಲ್ಲಿ ಕಾಲಿಗೆ ಸಿಗುವ ಶತಮಾನದಷ್ಟು ಹಳೆಯದಾಗಿರುವ ಕಲ್ಲುಗಳು. ಬೇಕಂತಲೇ ಕಾಟ ಕೊಡಲು ಬರುವ ಹುಳು ಹುಪ್ಪಟೆಗಳು. ಉಹುಂ ಅಷ್ಟು ಸುಲಭವಾಗಿ ದಾರಿ ಸವೆಯುವುದಿಲ್ಲ. ಬರೋಬ್ಬರಿ ಅರ್ಧ ಗಂಟೆಯ ನಡಿಗೆ. ಚಾರಣದ ಹುಚ್ಚು ಇರುವವರು ಖುಷಿಯಿಂದ ಹೆಜ್ಜೆ ಹಾಕುತ್ತಾರೆ. ಕಾಲು ದಾರಿಯಲ್ಲಿ ಏದುಸಿರು ಬಿಡುತ್ತಾ ನಿಜ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ನಡೆದರೆ ಒಂದು ತೆರನಾದ ದಿವ್ಯ ಅನುಭವ ನಮಗೆ ಪ್ರಾಪ್ತವಾಗುತ್ತದೆ. ಅಲ್ಲಿ ಹುಡುಕಿದರೆ ಸುತ್ತಮುತ್ತ ಒಂದೆರಡು ಮನೆಗಳು ಸಿಗಬಹುದು. ಮನುಷ್ಯ ಸಂಚಾರ ತೀರಾ ವಿರಳ. ನಸುಗತ್ತಲಾದರೆ ಅಲ್ಲಿನ ಜಾಗ ಭಯ ಹುಟ್ಟಿಸದಿರಲಾರದು. ಆಕೆಯನ್ನು ನೋಡುವ ವ್ಯಾಮೋಹ ಇರುವವರು ಸಾಹಸಿಗರಂತೆ ಧೈರ್ಯವಾಗಿ ಅವಳು ಇರುವತ್ತ ಹೋಗುತ್ತಾರೆ. ಕಷ್ಟವಾದರೂ ಸರಿ ಭರಪೂರ ಜೋಶ್ ಇಟ್ಟುಕೊಂಡು ಹೆಜ್ಜೆ ಇರಿಸಿದರೆ ಅವಳು ವಿಸ್ಮಯಕಾರಿಯದ ಜಾಗದಲ್ಲಿ ಎದುರಾಗುತ್ತಾಳೆ. ವ್ಹಾವ್! ಆಕೆ ಬೆಳ್ಳನೆಯ ಹಾಲಿನ ನೊರೆಯಂತೆ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಆಕೆ ಜೀವ ಕಳೆಯ ಬೆಡಗುಗಾತಿ. ನಮ್ಮ ಕಾತರದ ಕಣ್ಣುಗಳು ಅಚ್ಚರಿಗೆ ಫಳಫಳ ಎನ್ನುತ್ತವೆ. ಮನಸ್ಸು ಸಂತಸದ ಉಯ್ಯಾಲೆಯಲ್ಲಿ ಜೀಕುತ್ತದೆ. ಕಾಲುಗಳು ನೆಲದ ಮೇಲೆ ನಿಲ್ಲುವುದೇ ಇಲ್ಲ. ಹೌದು ಆಕೆ ಥೇಟ್ ಸ್ವರ್ಗದ ಸುಂದರಾಂಗಿ.

ಹಾಗಿದ್ದರೆ ಅವಳು ಯಾರು? ಇಷ್ಟು ಹೊತ್ತು ನಾನು ಹೇಳಿದ್ದು ದಕ್ಷಿಣ ಕನ್ನಡದ ಬೆಳ್ತಂಗಡಿಯಿಂದ ಅನತಿ ದೂರದಲ್ಲಿರುವ ದಿಡುಪೆ ಬಳಿಯ 'ಕಡಮಗುಂಡಿ' ಜಲಪಾತದ ಬಗ್ಗೆ. ಜಗದ ಸೌಂದರ್ಯವನ್ನೇ ತನ್ನ ಒಡಲಿನೊಳಗಿರಿಸಿಕೊಂಡಿರುವ ಆ ಜಾಗ ನಿಜಕ್ಕೂ ಮನಮೋಹಕವಾಗಿದೆ. ಚಾರ್ಮಾಡಿ ಘಾಟ್‌ ಮಧ್ಯೆ ಇರುವ ಆ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿ ರಣ ಬಿಸಿಲಿನಲ್ಲೂ ಎತ್ತರದಿಂದ ನೀರು ಬೀಳುತ್ತದೆ. ಯಾವ ತಿಂಗಳಿನಲ್ಲಿ ಹೋದರೂ ಅಲ್ಲಿ ನೀರಿರುತ್ತದೆ. ಮಳೆಗಾಲದಲ್ಲಂತೂ ಅಕ್ಷರಶಃ ಹಾಲ್ನೊರೆ. ಜಲಪಾತದ ಕೆಳಗೆ ನಿಂತರೆ ಸಂಭ್ರಮದ ಮುಸಲಧಾರೆ. ಇನ್ನು ಈಗಾಗಲೇ ಹೇಳಿದಂತೆ ಜಲಪಾತ ಇರುವ ಸುತ್ತಲಿನ ಜಾಗವೂ ಬೆರಗಿನಿಂದ ಕೂಡಿದೆ. ಚಾರಣ ಮತ್ತು ನೀರನ್ನು ಇಷ್ಟಪಡುವವರನ್ನು ಆ ಜಾಗ ಹೊಸ ಲೋಕದತ್ತ ಕೊಂಡೊಯ್ಯುತ್ತದೆ. ಗೊಂದಲದ ಬದುಕಿನಲ್ಲಿ ಹತಾಶರಾಗಿರುವವರಿಗೆ ಕೆಲ ಕಾಲ ನೆಮ್ಮದಿಯ ವಾತಾವರಣವನ್ನು ಕಡಮಗುಂಡಿ ಜಲಪಾತ ನಿರ್ಮಿಸಿ ಕೊಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೊರತಾಗಿ ಹೊರ ಜಿಲ್ಲೆ ಮತ್ತು ರಾಜ್ಯದ ಜನರಿಗೆ ಅಷ್ಟಾಗಿ ಈ ಜಲಪಾತದ ಬಗ್ಗೆ ಗೊತ್ತಿಲ್ಲ. ಜಗದ ವಿಸ್ಮಯದೊಳಗೆ ಕಳೆದು ಹೋಗಲು ಬಯಸುವವರು ಒಮ್ಮೆ ಭೇಟಿ ಕೊಡಬಹುದು. ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ತುಟಿಯ ತುದಿಯಲ್ಲಿ ನಗು ಮೂಡುತ್ತದೆ.

ಕಡಮಗುಂಡಿ ಜಲಪಾತ

ಸ್ಥಳ: ದಿಡುಪೆ, ಉಜಿರೆಯಿಂದ 23 ಕಿ.ಮೀ, ಚಿಕ್ಕಮಗಳೂರಿನಿಂದ 95 ಕಿ.ಮೀ

ಇತರೆ ಹೆಸರುಗಳು: ದಿಡುಪೆ ಫಾಲ್ಸ್‌, ಅನಡ್ಕ ಫಾಲ್ಸ್‌

ಬೆಸ್ಟ್‌ ಸೀಸನ್:‌ ಜೂನ್ ನಿಂದ ಮಾರ್ಚ್ ತನಕ

ಹೋಗುವ ಬಗೆ: ದಿಡುಪೆಯಿಂದ ಸ್ಥಳೀಯ ವಾಹನ(ಸ್ವಂತ ವಾಹನವಿದ್ದರೆ ಉತ್ತಮ) ಅಲ್ಲಿಂದ ಜಲಪಾತಕ್ಕೆ ಕಾಲ್ನಡಿಗೆ(ಚಾರಣ)

ಭೇಟಿಯ ಸಮಯ: ಬೆಳಗ್ಗೆ 7 ರಿಂದ ಸಂಜೆ 5 ಗಂಟೆ‌

ಪ್ರವೇಶ ಶುಲ್ಕ: 200

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..