ರೆಡ್ ಅಲರ್ಟ್ ಸುಳಿಯಲ್ಲಿ ಕೊಡಗು ಪ್ರವಾಸೋದ್ಯಮ
ದಕ್ಷಿಣದ ಕಾಶ್ಮೀರ ಎಂಬ ಹೆಗ್ಗಳಿಕೆಯ ಕೊಡಗು ಜಿಲ್ಲೆಗೆ ವಷ೯ದ 5-6 ತಿಂಗಳು ವರುಣನ ಕಾಟ. ಸ್ಥಳೀಯರಿಗೆ ಮಲೆನಾಡು - ಮಳೆನಾಡಾಗಿ ಕಾಡಿದರೆ, ಹೊರನಾಡಿನಿಂದ ಬರುವ ಪ್ರವಾಸಿಗರಿಗೆ ಮಳೆಯ ವೈಭವ ನೋಡುವ ಸದಾವಕಾಶ.
- ಅನಿಲ್ ಹೆಚ್.ಟಿ.
ಕೊಡಗು ಜಿಲ್ಲೆಯನ್ನು ಖ್ಯಾತ ಕವಿ ಪಂಜೆ ಮಂಗೇಶರಾಯರು.. ದೇವಸನ್ನಿಧಿ ಬಯಸಿ ಭಿಮ್ಮನೆ ಬಂದ ನಾಡು ಎಂದು ವರ್ಣಿಸಿದ್ದರು. ಸದಾ ಹಸಿರಿನಿಂದ ಕಂಗೊಳಿಸುವ ಕೊಡಗು ಜಿಲ್ಲೆ ಮಳೆಗಾಲದಲ್ಲಂತೂ ಮತ್ತಷ್ಟು ನಿಸರ್ಗ ಸಿರಿಯಿಂದ ಮೈಮರೆಸುತ್ತದೆ. ಈ ಮಳೆನಾಡಿನಲ್ಲಿ ಕೊಡಗಿನಾದ್ಯಂತ ಇರುವ ಜಲಧಾರೆಗಳು ಮೈದುಂಬಿಕೊಂಡು ನೋಡುಗರ ಕಣ್ಣುಗಳಿಗೆ ರಸದೌತಣ ನೀಡುತ್ತವೆ. ಮಳೆ ನಿಂತ ಬಳಿಕ ಮಂಜು ಆವರಿಸಿಕೊಂಡ ಮಡಿಕೇರಿಯ ಬೆಡಗು ನಯನ ಮನೋಹರ.!

ಮಡಿಕೇರಿ ಬಳಿಯ ಅಬ್ಬಿಫಾಲ್ಸ್, ಸೋಮವಾರಪೇಟೆ ಬಳಿಯ ಮಲ್ಲಳ್ಳಿ ಫಾಲ್ಸ್, ನಾಪೋಕ್ಲು ಬಳಿಯ ಚೇಲಾವರ ಫಾಲ್ಸ್, ನಾಗರಹೊಳೆ ವ್ಯಾಪ್ತಿಯಲ್ಲಿನ ಇರ್ಪು ಫಾಲ್ಸ್, ಮಾದಾಪುರ ಬಳಿಯ ಕೋಟೆ ಅಬ್ಬಿ, ಹಟ್ಟಿಹೊಳೆ ಫಾಲ್ಸ್, ಚೆಟ್ಟಳ್ಳಿ ಬಳಿಯ ಅಭ್ಯಾಲ ಫಾಲ್ಸ್, ಹೀಗೆ ಕೊಡಗಿನ ಹಲವೆಡೆಗಳಲ್ಲಿನ ಜಲಧಾರೆಗಳು ಮಳೆಯೊಂದಿಗೆ ತಾವೂ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳುತ್ತವೆ. ಭಾಗಮಂಡಲದಿಂದ ಕೇರಳ ಗಡಿಗ್ರಾಮವಾದ ಕರಿಕೆಗೆ ಹೋಗುವ ರಸ್ತೆಯಲ್ಲಿ ಕಾಣಸಿಗುವ 12 ಜಲಧಾರೆಗಳು ಕೂಡ ಸಂದರ್ಶನಯೋಗ್ಯ.
ಮಳೆಗಾಲದಲ್ಲಿ ಕೊಡಗಿಗೆ ಬರುವ ಪ್ರವಾಸಿಗರಿಗೆ ಮಳೆಗಾಲದ ವಿಶೇಷ ತಿನಿಸುಗಳ ಸವಿಯೂ ಲಭ್ಯ. ಕಣಿಲೆ ಸಾರು - ಅಕ್ಕಿರೊಟ್ಟಿಯ ಸ್ವಾದಿಷ್ಟತೆ, ಪತ್ರೊಡೆಯ ರುಚಿ, ಕಸದ ಪಲ್ಯ, ಮಳೆಯಲ್ಲಿ ರುಚಿ ಹೆಚ್ಚಿಸಿಕೊಳ್ಳುವ ಏಡಿ, ಮೀನು, ಮರಗೆಸದ ಪತ್ರೊಡೆ, ಹಲಸಿನ ಹಪ್ಪಳ, ಹಲಸಿನ ಬೀಜ, ಹಲಸಿನ ಕಡುಬು.. ಹೀಗೆ ಸಾಕಷ್ಟು ಖಾದ್ಯಗಳು ಮಳೆಗಾಲದಲ್ಲಿ ಪ್ರವಾಸಿಗರ ರುಚಿಗೆ ನಿಲುಕಬಲ್ಲವು.
ರೇನ್ ಕೋಟ್ ಧರಿಸಿ ಅಥವಾ ಕೊಡೆ ಹಿಡಿದುಕೊಂಡು ಕೊಡಗಿನ ಪ್ರವಾಸಿ ತಾಣಗಳಿಗೆ ತೆರಳುವ ಮಜವೇ ಬೇರೆ. ಧೋ ಎಂದು ಸುರಿಯುವ ಮಳೆಯಲ್ಲಿ ಕೈಕೈ ಹಿಡಿದುಕೊಂಡು ದಂಪತಿ ಸಾಗಿದರೆ ಆಗಷ್ಟೇ ಮದುವೆಯಾಗಿ ಮಧುಚಂದ್ರಕ್ಕೆ ಬಂದ ಮಧುರ ಅನುಭವ ಆಗದೇ ಇದ್ದೀತೆ!

ಐಟಿ ಕ್ಷೇತ್ರದಲ್ಲಿನ ಯುವಕ, ಯುವತಿಯರಿಗೆ ಮಳೆಗಾಲದ ಪ್ರವಾಸಕ್ಕೆ ಕೊಡಗು ಹೇಳಿಮಾಡಿಸಿದ ಸ್ಥಳ. ಮಳೆಯಲ್ಲಿಯೇ ನೆನೆಯುತ್ತಾ ಹೆಜ್ಜೆ ಹಾಕಿ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳಿದರೆ ಮಳೆಯ ವೈಭವದ ಜತೆ ಮಳೆಯಲ್ಲಿ ನೆನೆಯುವ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಅನುಭವ ಜೀವನಪರ್ಯಂತ ನೆನೆಯುವಂತಾಗುತ್ತದೆ.
ಕಾಡಿನತ್ತ ಹೆಜ್ಜೆ ಹಾಕಿದರೆ, ಜಿಗಣೆ ಅಥವಾ ಉಂಬಳ ಎಂಬ ಪುಟ್ಟ ಜೀವಿ, ಮೈಗೆ, ಕಾಲಿಗೆ ಏರಿಕೊಂಡು ರಕ್ತ ಹೀರುತ್ತಾ ಕೊಡುವ ಕಾಟವಂತೂ ಮರೆಯಲಸಾಧ್ಯ. ಗೊತ್ತೇ ಆಗದಂತೆ ರಕ್ತ ಹೀರುವ ಜಿಗಣೆ ಮಳೆಗಾಲದಲ್ಲಿ ಸ್ಥಳೀಯರ ರಕ್ತಹೀರುವುದರಲ್ಲಿ ನಿಸ್ಸೀಮ. ಈ ಅನುಭವ ಕೂಡ ಪ್ರವಾಸಿಗರ ಪಾಲಿಗೆ ವಿಶೇಷವೇ ಹೌದು.
ಈ ವರ್ಷ ಮೇ ವಾರಾಂತ್ಯದಲ್ಲಿಯೇ ಮಹಾಮಳೆ ಕೊಡಗಿಗೂ ಕಾಲಿಟ್ಟ ಹಿನ್ನಲೆಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದವು. 2018, 2019ರ ಪ್ರಾಕೃತಿಕ ವಿಕೋಪಗಳಿಂದಾಗಿ ನೂರಾರು ಮನೆಗಳು ಧರೆಗುರುಳಿದ್ದು, ಭೂಕುಸಿತದ ದುರಂತಗಳನ್ನು ಕೊಡಗಿನವರು ಮರೆತಿಲ್ಲ. ಈ ವರ್ಷದ ಮಹಾಮಳೆ ಕೂಡ ಅಂದಿನ ದುರಂತವನ್ನು ನೆನಪಿಸಿಕೊಂಡು ಭಯಪಡುವಂತಾಗಿತ್ತು.

ಆಗಸ್ಟ್ ಅಂತ್ಯದಲ್ಲಿರಬೇಕಾದ ಮಳೆ ಪ್ರಮಾಣ ಜೂನ್ ಎರಡನೇ ವಾರದೊಳಕ್ಕೆ ಬಂದಿತ್ತು. ಮೇ ಮತ್ತು ಜೂನ್ ತಿಂಗಳಿನಲ್ಲಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಶಾಲೆಗಳು ಪ್ರಾರಂಭವಾಗುವುದರೊಳಗಾಗಿ ಪ್ರವಾಸೀ ತಾಣ ವೀಕ್ಷಿಸಲೆಂದು ಮೇ ಮಾಸಾಂತ್ಯದಲ್ಲಂತೂ ಕೊಡಗಿನಲ್ಲಿ ಪ್ರವಾಸಿಗರ ದಟ್ಟಣೆ ಸಾಮಾನ್ಯವಾಗಿರುತ್ತದೆ. ಹೀಗಿರುವಾಗ ಮೇ ತಿಂಗಳ ಕೊನೇ ವಾರದಲ್ಲಿಯೇ ಭಾರೀ ಮಳೆ ಸುರಿದದ್ದು ಕೊಡಗಿನ ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಪೆಟ್ಟನ್ನೇ ನೀಡಿದೆ. ಹೊಟೇಲ್, ಹೋಂಸ್ಟೇ, ರೆಸಾರ್ಟ್ ರೂಮ್ ಗಳು ಕೊನೇ ಕ್ಷಣದಲ್ಲಿ ಕ್ಯಾನ್ಸಲ್ ಆಗಿ ಪ್ರವಾಸೀ ತಾಣಗಳೂ ಬಿಕೋ ಎನ್ನತೊಡಗಿದವು.
ಜೂನ್ ತಿಂಗಳಿನಲ್ಲಿಯೂ ಮಳೆ ಮುಂದುವರೆದಿರುವುದು ಕೊಡಗಿನ ಪ್ರವಾಸೋದ್ಯಮಿಗಳ ಆರ್ಥಿಕತೆಯ ಮೇಲೇ ತಣ್ಣೀರೆರಚಿದಂತಾಗಿದೆ. ರೆಡ್ ಅಲರ್ಟ್ ಎಂಬ ಹವಾಮಾನ ಎಚ್ಚರಿಕೆಯ ಸಂದೇಶ ಕೊಡಗಿನ ಪ್ರವಾಸೋದ್ಯಮದ ಪಾಲಿಗೂ ರೆಡ್ ಅಲರ್ಟ್ ಆಗಿ ಪರಿವರ್ತನೆಯಾಗಿದೆ.
ಮಳೆಗಾಲದಲ್ಲಿ ಕೊಡಗಿನ ಅನೇಕ ಹೋಂಸ್ಟೇಗಳು ಮುಚ್ಚಿರುತ್ತವೆ. ಅತಿಥಿಗಳಿಗೆ ಮಳೆಯ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಆತಿಥ್ಯ ನೀಡುವುದು ಕಷ್ಟಕರವಾದ ಹಿನ್ನಲೆಯಲ್ಲಿ ಕಾಫಿ ತೋಟದ ಮಧ್ಯೆಯ ಅನೇಕ ಹೋಂಸ್ಟೇಗಳು ಮಳೆಗಾಲದಲ್ಲಿ ಕದಮುಚ್ಚುತ್ತವೆ. ಸಿಬ್ಬಂದಿಗೂ ರಜೆ ನೀಡುವುದು, ನಿರ್ವಹಣೆಯ ಕಾರಣದಿಂದಾಗಿಯೂ ಶೇ 50 ರಷ್ಟು ಹೋಂಸ್ಟೇಗಳಲ್ಲಿ ಮಳೆಗಾಲದ ವಹಿವಾಟು ನೀರಸವಾಗಿರುತ್ತದೆ. ರೆಸಾರ್ಟ್, ಲಾಡ್ಜ್, ಕಾಟೇಜ್ ಗಳಲ್ಲಿಯೂ ಹೆಚ್ಚಿನ ಬುಕಿಂಗ್ ಗಳಿರುವುದಿಲ್ಲ.

ಮುಖ್ಯವಾಗಿ, ಮಳೆ ಹೆಚ್ಚಿರುವ ದಿನಗಳಲ್ಲಿ ಕೊಡಗಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪಕ೯ ಕಡಿತಗೊಂಡಿರುತ್ತದೆ. ವಿದ್ಯುತ್ ಇಲ್ಲದಿದ್ದರೆ ಅತಿಥಿಗಳ ನಿರ್ವಹಣೆ ಕಷ್ಟಕರ. ಜನರೇಟರ್ ಬಳಸಿದರೆ ಉಂಟಾಗುವ ವೆಚ್ಚ ದುಬಾರಿಯಾಗಲಿದೆ. ಹೀಗಾಗಿ, ಮಳೆಯಲ್ಲಿ ಅತಿಥಿಗಳನ್ನು ನಾವು ಸ್ವೀಕರಿಸುವುದೇ ಇಲ್ಲ ಎನ್ನುತ್ತಾರೆ ಮೈಥಿಲಿ ಹೋಂಸ್ಟೇ ಮಾಲೀಕರಾದ ಶಶಿಮೊಣ್ಣಪ್ಪ.
ಮಳೆಗಾಲ ಎಂದರೆ ಮೊದಲೇ ಕೊಡಗಿನ ಪ್ರವಾಸೋದ್ಯಮಿಗಳು ಬೆಚ್ಚಿಬೀಳುತ್ತಾರೆ. ವಹಿವಾಟು ತೀರಾ ಕುಸಿತದ ಕಾರಣ, ರೂಮ್ ಗಳನ್ನು ಮಳೆಯ ದಿನಗಳಲ್ಲಿ ನಿವ೯ಹಿಸುವ ಕಷ್ಟಕರ ಪರಿಸ್ಥಿತಿಯಿಂದಾಗಿ ಆತಿಥ್ಯ ವಲಯದವರು ಬಸವಳಿಯುತ್ತಾರೆ. ಕೆಲವೊಂದು ಪ್ರವಾಸೀ ತಾಣಗಳಿಗೆ ತೆರಳಿ ಜಾರುತ್ತಾ, ಏರುತ್ತಾ ಸಾಗುವುದು, ನದಿ ನೀರಿನಲ್ಲಿ ಈಜಾಡಲು ಮುಂದಾಗುವುದು, ಜಲಧಾರೆಗಳಲ್ಲಿ ಕೆಳಕ್ಕಿಳಿಯುವುದು, ನದಿ ತೀರದಲ್ಲಿ ನಿಂತು ಆಕಸ್ಮಿಕ ಜಾರಿ ಸಾವನ್ನಪ್ಪುವುದು ಮುಂತಾದ ಅಪಾಯದ ಸನ್ನಿವೇಶಗಳು ಇಲ್ಲದಿಲ್ಲ. ಜಿಲ್ಲಾಡಳಿತ ಕೂಡ ಮಳೆಗಾಲದಲ್ಲಿ ಪ್ರವಾಸೀ ತಾಣಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಸಂದೇಶವನ್ನು ರವಾನಿಸಿರುತ್ತದೆ. ಭಾರಿ ಮಳೆ, ಗಾಳಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಬೀಳುವುದು ಕೂಡ ಸರ್ವೇಸಾಮಾನ್ಯ. ರಸ್ತೆಯಲ್ಲಿ, ಮನೆಯೊಳಗೆ ಮರಬೀಳುವ ಅಪಾಯವೂ ಇದ್ದೇ ಇದೆ. ಮೇ ಮತ್ತು ಜೂನ್ ಎರಡನೇ ವಾರದವರೆಗೆ ಮಳೆಯ ದಿನಗಳಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಕೊಡಗಿಗೆ ಸದಾ ಜನ ಬರಲು ಇಷ್ಟಪಡುತ್ತಾರೆ.. ಆದರೆ ಮಳೆಯ ದಿನಗಳನ್ನು ಹೊರತುಪಡಿಸಿ ಎಂಬ ಮಾತು ಎಷ್ಟು ಸತ್ಯವೋ.. ಕೊಡಗಿನಲ್ಲಿ ಮಳೆಗಾಲ ಎಂಬುದು ವರ್ಷದ ಅರ್ಧ ಭಾಗವನ್ನು ಆಕ್ರಮಿಸುತ್ತದೆ ಎಂಬುದು ಕೂಡ ವಾಸ್ತವ.
ದುಬಾರೆ, ಸೇರಿದಂತೆ ಕೆಲವೊಂದು ಪ್ರವಾಸೀ ತಾಣಗಳು ಮಳೆ ಹೆಚ್ಚಿರುವ ದಿನಗಳಲ್ಲಿ ಬಂದ್ ಆಗಿರುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ತಾಣಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ಆದರೂ ಜಲವೈಭವ ವೀಕ್ಷಣೆಗೆ ಮಳೆಗಾಲ ಅತ್ಯಂತ ಸೂಕ್ತ ಎಂಬುದನ್ನೂ ಮರೆಯುವಂತಿಲ್ಲ.