ಈ ಕೆರೆತೂಗಿನ ಮೇಲೆ ನಿಂತು ಒಮ್ಮೆ ಕೂಗಿ ನೋಡಿ..!
ಆ ಜಾಗ ನನಗೆ ಅವಿಸ್ಮರಣೀಯ ತಾಣ. ಎಷ್ಟೋ ಸಲ ಒಬ್ಬಳೇ ಹೋಗಿದ್ದೇನೆ, ಹತ್ತಾರು ಗೆಳೆಯರನ್ನು ಜತೆಗೆ ಕರೆದುಕೊಂಡು ಹೋಗಿದ್ದೇನೆ, ಕೆರೆಯ ತೂಗಿನಲ್ಲಿ ನಿಂತು ಕೂಗಿದ್ದೇನೆ. ನಕ್ಕಿದ್ದೇನೆ, ಅತ್ತಿದ್ದೇನೆ. ಕೆರೆ ಮಾತ್ರ ನನ್ನನ್ನು ಮೋಹಿಸುತ್ತಲೇ ಇದೆ.
- ಸ್ಫೂರ್ತಿ ಚಂದ್ರಶೇಖರ್
ಎಲ್ಲ ಜಾಗಗಳೂ ವಿಶ್ವವಿಖ್ಯಾತವೇ ಆಗಿರಬೇಕಿಲ್ಲ. ಹೆಚ್ಚು ಪ್ರವಾಸಿಗಳು ಬರುವ ತಾಣಗಳು ಮಾತ್ರವೇ ಅದ್ಭುತ ಅಂತೇನಿಲ್ಲ. ನಮ್ಮ ಸುತ್ತಮುತ್ತಲೇ ಆಪ್ತವೆನಿಸುವ ಪ್ರವಾಸಿ ತಾಣಗಳಿರುತ್ತವೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಅವುಗಳನ್ನು ನಿರ್ಲಕ್ಷಿಸಿಬಿಟ್ಟಿರುತ್ತೇವೆ. ಅವುಗಳ ಮಹತ್ವ ನಮಗೆ ಅರಿವಾಗಿಯೇ ಇರುವುದಿಲ್ಲ. ಆದರೆ ಒಮ್ಮೆ ಅಂಥ ಸ್ಥಳ ಮನಸಿಗೆ ಹತ್ತಿರವಾಗಿಬಿಟ್ಟರೆ, ಯಾವ ವಿದೇಶವೂ ಬೇಕಿಲ್ಲ, ಯಾವ ಜಗತ್ಪ್ರಸಿದ್ಧ ತಾಣವೂ ಬೇಕಿಲ್ಲ ಅದೊಂದೇ ಜಾಗ ಸಾಕು ಅನಿಸಿಬಿಡುತ್ತದೆ. ಅಂಥ ಒಂದು ಜಾಗ ಹುಲಿಗುಂದಿರಾಯನ ಕೆರೆ. ಈ ಸ್ವಾನುಭವದ ಬರಹ ಆ ಪ್ರಶಾಂತಸ್ಥಳದ ಬಗ್ಗೆ.
ಮಲೆನಾಡಿನಲ್ಲಿ ಮಳೆಗಾಲ ಬಂತು ಅಂದರೆ ಸಾಕು ರೈತರಿಗೆ ಬೆಳೆ ಚೆನ್ನಾಗಿ ಆಗುತ್ತೆ, ನೆಲ ಸಮೃದ್ಧವಾಗುತ್ತೆ, ಕೆರೆಕಟ್ಟೆ, ಝರಿ ತುಂಬಿ ಹರಿಯುತ್ತೆ ಅನ್ನೋ ಸಂಭ್ರಮ. ಮಲೆನಾಡಿನ ಹಳ್ಳಿಗಳಲ್ಲಿ, ಎಸ್ಟೇಟ್‌ಗಳಲ್ಲಿ ಗೊತ್ತಿಲ್ಲದೆ ಇರೋ ಕೆರೆ, ಹಳ್ಳಕೊಳ್ಳ ತುಂಬಿ ಹರಿಯುತ್ತೆ. ಹೀಗೇ ಒಮ್ಮೆ ದಾರಿ ತಪ್ಪಿದಾಗ ಎಲ್ಲೋ ದೂರದಲ್ಲಿ ನದಿ ಹರಿಯೋದು, ಜಲಪಾತದಿಂದ ನೀರು ಧುಮುಕೋದು ಕೇಳಿದಾಗ ಅಥವಾ ದೊಡ್ಡ ಕೆರೆ ನೋಡಿದಾಗ ಅಬ್ಬಬ್ಬಾ! ಇದು ನಿಜಕ್ಕೂ ನಮ್ಮೂರಾ? ಅಂತ ಅನಿಸೋಕೆ ಶುರುವಾಗುತ್ತೆ.
2020 ರಲ್ಲಿ ಕೊರೋನಾ ಬಂದು ಮನೆಯಿಂದ ಹೊರಗೆ ಬರೋದೇ ಸಾಧನೆ ಆಗಿತ್ತು. ಅ ವರ್ಷದ ವರ್ಷಧಾರೆಯ ಅನುಭವ ರೋಮಾಂಚಕಾರಿ. ಹೀಗೇ ಒಂದು ಸೋಮವಾರ ಫ್ರೆಂಡ್ಸ್ ಎಲ್ಲರೂ ಊರಿನ ಲೈಬ್ರರಿ ಮುಂದೆ ಭೇಟಿಯಾದೆವು. ಎಲ್ಲ ಒಟ್ಟಿಗೆ ಸಿಕ್ಕು ತುಂಬ ತಿಂಗಳುಗಳೇ ಆಗಿತ್ತು. ಹಾಗಾಗಿ ಮಧ್ಯಾಹ್ನ ಲಂಚ್ ಡೇಟ್ ಅಂತ ಪ್ಲಾನ್ ಮಾಡಿ, ಊರಿನ ಹೊರಗೆ ಇರುವ ಡಾಬಾಗೆ ಹೋಗಿ ಎಲ್ಲ ಗಾಸಿಪ್ ಮತ್ತು ಸಂತಸದ ಮಾತುಗಳ ಜೊತೆ ಕಂಠ ಪೂರ್ತಿ ತಿಂದು ತೇಗಿದೆವು. ಸಮಯ ನೋಡಿದಾಗ ಸಂಜೆ 4:30. ಚಿಕ್ಕಮಗಳೂರಿನಲ್ಲಿ ಎಸ್ಟೇಟ್ ಮಧ್ಯ ಕುಳಿತು ಹಬೆಯಾಡುವ ಕಾಫಿ ಹೀರಿದರೆ ಅದು ನೆಮ್ಮದಿ. ಅದರಲ್ಲೂ ಮಳೆಗಾಲದಲ್ಲಿ ಕುಡಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ. ಇಂಥ ಚಾನ್ಸ್ ಯಾರಿಗೂ ಸಿಗಲ್ಲ ಅಂದುಕೊಂಡು ತಕ್ಷಣವೇ ಸೋನೆ ಮಳೆಯಲ್ಲಿ ಎಸ್ಟೇಟ್ ಕಡೆ ನಮ್ಮ ಪಯಣ ಶುರುವಾಯಿತು. ಜೊಳ್ದಳ್ ಊರು ಬರೋದಕ್ಕೂ ಮುನ್ನ ನನ್ನ ಗೆಳೆಯನೊಬ್ಬ "ಇಲ್ಲಿ ಒಂದು ಕೆರೆ ಇದೆ ಅಂದ್ರೆ ನೀವುಗಳು ನಂಬುತ್ತಿರಾ" ಅಂದ. ನಾನು "ಸುಮ್ನೆ ಡವ್ ಮಾಡ್ಬೇಡ ನಮಗೆ ಯಾರಿಗೂ ಗೊತ್ತಿಲ್ಲದೆ ಇರೋದು ನಿಂಗೆ ಹೇಗೆ ಗೊತ್ತು" ಅಂದೆ. ಅದಕ್ಕವನು "ಫಾಲೋ ಮೀ" ಅಂತ ಹೇಳಿ ಮುಂದೆ ಸಾಗಿದ.
ಗಾಡಿಯನ್ನು ಕೆಳಗೆ ನಿಲ್ಲಿಸಿ ಕೆರೆ ಏರಿಯ ಮೇಲೆ ಕೊಂಚ ದೂರ ನಡೆದ ಕೂಡಲೇ ಸುತ್ತಲೂ ಮೌನ. ಮಲೆನಾಡಿನ ಮಂಜು ಹನಿಗಳು ಬೆಟ್ಟವನ್ನು ಆವರಿಸಿಕೊಂಡಿತ್ತು. ಮೋಡಗಳು ಬೆಟ್ಟಕ್ಕೆ ಮುತ್ತಿಟ್ಟಿದ್ದವು. ಸೂರ್ಯ ಮಾಯವಾಗಿದ್ದ. ಹಚ್ಚ ಹಸಿರಿನ ಮಧ್ಯದಲ್ಲಿ ಜಲಮಾತೆ ಶುಭ್ರವಾಗಿ ನಿಂತಿದ್ದಾಳೆ. ಮನೋಹರವಾದ ದೃಶ್ಯ. ಒಂದು ಕಡೆ ಮೀನುಗಾರ ಮೀನಿಗೆ ಬಲೆ ಹಾಕುತ್ತಿದ್ದ. ಇನ್ನೊಂದೆಡೆ ಅಂಬಿಗ ದೋಣಿಯನ್ನು ಹೊರತೆಗೆಯುತ್ತಿದ್ದ. ಈ ರೀತಿಯ ದೃಶ್ಯವನ್ನು ನಾನು ಯಾವುದೋ ಕ್ಯಾಲೆಂಡರ್‌ನಲ್ಲಿ, ಫ್ರೇಮ್‌ಗಳಲ್ಲಿ ನೋಡಿದ್ದೆ. ಆದರೆ ಅದನ್ನೇ ನಿಜವಾಗಿ ನೋಡಿ ಆ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಇಂಥ ಒಂದು ಕೆರೆ ಚಿಕ್ಕಮಗಳೂರಿನಲ್ಲಿ ಇದೆ ಅಂತ ಎಷ್ಟೋ ಜನಕ್ಕೆ ಗೊತ್ತಿಲ್ಲ. ಆದರೆ ಒಮ್ಮೆ ಇಲ್ಲಿ ಬಂದರೆ ವಾಪಸ್ ಹೋಗಕ್ಕೆ ಮನಸ್ಸು ಒಪ್ಪುವುದಿಲ್ಲ. ಆ ಜಾಗ ನನ್ನ ಪಾಲಿಗೆ ಅವಿಸ್ಮರಣೀಯ ತಾಣ. ಎಷ್ಟೋ ಸಲ ಒಬ್ಬಳೇ ಹೋಗಿದ್ದೇನೆ, ಹತ್ತಾರು ಗೆಳೆಯರನ್ನು ಜತೆಗೆ ಕರೆದುಕೊಂಡು ಹೋಗಿದ್ದೇನೆ, ಕೆರೆಯ ತೂಗಿನಲ್ಲಿ ನಿಂತು ಕೂಗಿದ್ದೇನೆ, ನಕ್ಕಿದೇನೆ, ಅತ್ತಿದ್ದೇನೆ. ಕೆರೆ ಮಾತ್ರ ನನ್ನನ್ನು ಮೋಹಿಸುತ್ತಲೇ ಇದೆ. ಅದೇ "ಹುಲಿಗುಂದಿರಾಯನ ಕೆರೆ".
ಚಿಕ್ಕಮಗಳೂರಿನಿಂದ ಸುಮಾರು 8-10ಕಿ.ಮೀ ಮಲ್ಲಂದೂರು ಹೋಗುವ ರಸ್ತೆಯ ಬಲ ಭಾಗದಲ್ಲಿ ಇದೆ. ಕೆರೆ ಏರಿಯನ್ನು ಹತ್ತಿ ಮೇಲೆ ಹೋದರೆ ಪ್ರಕೃತಿಯ ಸೊಬಗು ಕಾಣಸಿಗುತ್ತದೆ.
ಜಾಗ: ಹುಲಿಗುಂದಿರಾಯನ ಕೆರೆ
ಜಿಲ್ಲೆ: ಚಿಕ್ಕಮಗಳೂರು
ದೂರ: ಚಿಕ್ಕಮಗಳೂರಿನಿಂದ 8-10ಕಿ.ಮೀ