ಕರ್ನಾಟಕ ಪ್ರವಾಸೋದ್ಯಮದಲ್ಲಿ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಇದೀಗ ಬಹುದೊಡ್ಡ ಹೆಸರು. ಎಕೋ ಟೂರಿಸಂ ಮತ್ತು ವೈಲ್ಡ್ ಲೈಫ್ ಟೂರಿಸಂಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಜೆ ಎಲ್ ಆರ್ ಗೆ ಈಗ ಭರ್ತಿ ನಲವತ್ತೈದು ವರ್ಷ. 1980 ರಲ್ಲಿ ಖಾಸಗಿಯಾಗಿ ಪ್ರಾರಂಭವಾದ ಈ ಸಂಸ್ಥೆ ಏಳು ವರ್ಷಗಳ ನಂತರ ಸರ್ಕಾರದ ಒಡೆತನಕ್ಕೆ ಸೇರಿಕೊಂಡಿತು. ಸರಕಾರದಿಂದ ಸಿಕ್ಕ ಬಲದಿಂದ ಇನ್ನಷ್ಟು ಗಟ್ಟಿಗೊಂಡ ಜೆ ಎಲ್ ಆರ್ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರಕೃತಿ ಮತ್ತು ವನ್ಯಜೀವಿಗಳ ವೀಕ್ಷಣೆಗೆ, ಆತಿಥ್ಯಕ್ಕೆ ರಾಜ್ಯದ ನಂಬರ್ ಒನ್ ಜಾಗ ಇದಾಗಿದೆ. ಕೋವಿಡ್ ಅವಧಿಯ ನಂತರ ಹೆಚ್ಚಾದ ಪ್ರವಾಸಾಸಕ್ತಿಗೆ ಉತ್ತರವಾಗಿ ಜೆ ಎಲ್ ಆರ್ ಅತಿಥಿಗಳನ್ನು ಸೆಳೆಯುತ್ತಿದೆ. ಕಳೆದ ಒಂದು ವರ್ಷದಿಂದ ಜೆ ಎಲ್ ಆರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಐಎಫ್ ಎಸ್ ಅಧಿಕಾರಿ ಪ್ರಶಾಂತ್ ಶಂಖಿನಮಠ ಅವರ ಪಾತ್ರವೂ ಇದರಲ್ಲಿ ಬಹಳ ಮಹತ್ವವಾದುದು.

ಮೂಲತಃ ಪ್ರಕೃತಿಪ್ರಿಯರೂ ಹಾಗೂ ಕಾಡುಮೇಡು ಅಧ್ಯಯನಮಾಡುವ ಸಾಹಸಿಗರೂ ಆಗಿರುವ ಪ್ರಶಾಂತ್ ಶಂಖಿನಮಠ ಅವರಿಗೆ ಜೆ ಎಲ್ ಆರ್ ನ ಜವಾಬ್ದಾರಿ ದೊರೆತಿದ್ದು ಆಕಸ್ಮಿಕವಲ್ಲ. ಅದು ಅವರ ಅತೀವ ಆಸಕ್ತಿ ಮತ್ತು ಅಧ್ಯಯನ ಹಾಗೂ ಅನುಭವದ ಫಲ. ಡಾಕ್ಟರ್ ಇಂಜಿನಿಯರ್ ಟ್ರೆಂಡ್ ನಡೆಯುತ್ತಿದ್ದ ವೈಟುಕೆ ಕಾಲದಲ್ಲಿ ಪ್ರಶಾಂತ್ ಶಂಖಿನಮಠ ಫಾರೆಸ್ಟ್ ಸರ್ವಿಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಟೇಟ್ ಫಾರೆಸ್ಟ್ ಸರ್ವಿಸ್ ನಲ್ಲಿ ತೇರ್ಗಡೆಯಾಗಿ ತರಬೇತಿ ಪಡೆದು 2007ರಲ್ಲಿ ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ಎಸಿಎಫ್) ಆಗಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿಂದ ಮುಂದೆ ಡಿಸಿಎಫ್ ಹುದ್ದೆಯನ್ನೂ ನಿರ್ವಹಿಸುವ ಪ್ರಶಾಂತ್ ಅವರನ್ನು 2014ರಲ್ಲಿ ಐ ಎಫ್ ಎಸ್ ಅಧಿಕಾರಿಯಾಗಿ ಪರಿಗಣಿಸಲಾಯಿತು.

ಬಾಗಲಕೋಟೆ ಮೂಲದ ಶಂಖಿನಮಠರವರಿಗೆ ತಮ್ಮ ಸ್ವಂತ ಜಿಲ್ಲೆಯಲ್ಲೇ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. 2015ರಲ್ಲಿ ಯಡಹಳ್ಳಿ ಚಿಂಕಾರಾ ವನ್ಯಜೀವಿ ಅಭಯಾರಣ್ಯವನ್ನು ಬಲಗೊಳಿಸಿದ ಪ್ರಶಾಂತ್, ಇಂಡಿಯನ್ ಗ್ಯಸೆಲ್ ಎಂಬ ಅಪರೂಪದ ವನ್ಯಜೀವಿಗೆ ಅಭಯ ನೀಡಿದರು. ಇದು ರಾಜ್ಯದ ಮೊದಲ ಇಂಡಿಯನ್ ಗ್ಯಸಲ್ ಫಾರೆಸ್ಟ್ ಎಂದು ಹೆಸರಾಗಿದೆ.

ನಂತರ 2022ರಲ್ಲಿ ಚಿಕ್ಕಸಂಗಂ ಪಕ್ಷಿಧಾಮ ಅಭಿವೃದ್ಧಿಗೆ ಶ್ರಮಿಸಿದ ಇವರು ಅಲ್ಲಿಗೆ ಮೂವತ್ತಾರು ಜಾತಿಯ ಪಕ್ಷಿಗಳು ವಲಸೆಗೆ ಬರುವ ಸೌಕರ್ಯ ನಿರ್ಮಿಸಿದರು.

prashanth shankinamatt 2

ಬನ್ನೇರುಘಟ್ಟ ಸೇರಿದಂತೆ ವಿವಿಧೆಡೆ ತಮ್ಮ ಕಾರ್ಯದ ಮೂಲಕ ಛಾಪು ಮೂಡಿಸಿರುವ ಪ್ರಶಾಂತ್ ಕಳೆದ ಒಂದು ವರ್ಷದಲ್ಲಿ ಜೆ ಎಲ್ ಆರ್ ನಲ್ಲಿ ಕೂಡ ತಮ್ಮ ಇರುವಿಕೆಯನ್ನು ಕೆಲಸದ ಮೂಲಕವೇ ತೋರ್ಪಡಿಸಿದ್ದಾರೆ. ಪ್ರವಾಸಿ ಪ್ರಪಂಚದೊಂದಿಗಿನ ಅವರ ಚುಟುಕು ಮಾತುಕತೆ ಇಲ್ಲಿದೆ.

ನಾಯಕತ್ವ ಮತ್ತು ದೃಷ್ಟಿಕೋನ

ಒಂದು ವರ್ಷದ ನಿಮ್ಮ ಜೆ ಎಲ್ ಆರ್ ಅವಧಿಯನ್ನು ಹೇಗೆ ನೋಡುತ್ತೀರಿ?

ಖಂಡಿತ ತೃಪ್ತಿ ಇದೆ. ಮೂಲಸೌಕರ್ಯ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಇನ್ನಷ್ಟು ಯೋಜನೆಗಳು ಶೀಘ್ರದಲ್ಲೇ ಕಾರ್ಯಗತವಾಗುತ್ತವೆ. ಅತಿಥಿಗಳು ಸಂತುಷ್ಠರಾಗಿದ್ದಾರೆ. ಪ್ರಾಪರ್ಟಿಗಳು ಸುಸ್ಥಿತಿಯಲ್ಲಿವೆ. ಸಂಸ್ಥೆ ಲಾಭದಲ್ಲಿದೆ. ಗಳಿಕೆ ವೃದ್ಧಿಯಾಗಿದೆ. ಇದು ಸಮಾಧಾನ ತರುವ ವಿಚಾರ.

ಆರ್ಥಿಕವಾಗಿಯೂ ಲಾಭವಾಗಬೇಕು. ಪರಿಸರ ಸಂರಕ್ಷಣೆಯೂ ಮುಖ್ಯವಾಗಬೇಕು. ಜೆ ಎಲ್ ಆರ್ ಇದನ್ನು ಹೇಗೆ ಬ್ಯಾಲೆನ್ಸ್ ಮಾಡ್ತಿದೆ?

ಜೆ ಎಲ್ ಆರ್ ನ ಶಿಷ್ಟಾಚಾರಗಳನ್ನು ಪಾಲಿಸಿದರೆ ಪರಿಸರ ಸಂರಕ್ಷಣೆ ಬಗ್ಗೆ ಆತಂಕಕ್ಕೆ ಕಾರಣವೇ ಇಲ್ಲ. ಜತೆಗೆ ನಮ್ಮ ಪ್ರವಾಸಿಗರು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಅರಿತಿದ್ದಾರೆ. ಜೆ ಎಲ್ ಆರ್ ಗೆ ಬರುವ ಪ್ರವಾಸಿಗರು ನಿಜಕ್ಕೂ ಸಭ್ಯರು. ಮೇಲಾಗಿ ನಮ್ಮ ಸಿಬ್ಬಂದಿವರ್ಗದ ಕಾರ್ಯಕ್ಷಮತೆ ಮತ್ತು ಮೇಲ್ವಿಚಾರಣೆ ಅದ್ಭುತವಾಗಿದೆ. ಇದರಿಂದಾಗಿ ನಾವು ಗೆದ್ದಿದ್ದೇವೆ.

ಜಂಗಲ್ ಲಾಡ್ಜಸ್ ಇತರ ರೆಸಾರ್ಟ್‌ಗಳಿಂದ ಹೇಗೆ ವಿಭಿನ್ನವಾಗಿದೆ?

ಇಲ್ಲಿ ಸಿಗುವ ಆತಿಥ್ಯ ಇನ್ನೆಲ್ಲೂ ಸಿಗುವ ಸಾಧ್ಯತೆ ಇಲ್ಲ. ಇದನ್ನು ಬಹಳ ಆತ್ಮವಿಶ್ವಾಸದಿಂದ ಹೇಳಬಲ್ಲೆ. ನಮ್ಮ ಬಹುತೇಕ ಅತಿಥಿಗಳು ತಮ್ಮ ಬುಕಿಂಗ್ ಮತ್ತು ವಾಸ್ತವ್ಯದ ಅವಧಿ ವಿಸ್ತರಿಸುವುದೇ ಇದಕ್ಕೆ ಸಾಕ್ಷಿ. ಇಲ್ಲಿನ ಆಹಾರ ಮನೆ ಆಹಾರದಷ್ಟು ಸತ್ವಯುತ ಮತ್ತು ಸ್ವಾದಿಷ್ಠ. ನಮ್ಮ ಗೈಡ್ ಗಳು ನುರಿತವರು ಹಾಗೂ ನಾಡಿಮಿಡಿತ ಬಲ್ಲವರು. ಇನ್ನು ನಮ್ಮ ಅಭಯಾರಣ್ಯ ಭೇಟಿಗಳಲ್ಲಿ ಪ್ರಾಣಿಗಳ ಸೈಟಿಂಗ್ ಸಾಧ್ಯತೆ ಹೆಚ್ಚಿರುತ್ತದೆ. ಇವೆಲ್ಲವೂ ನಮ್ಮನ್ನು ವಿಶೇಷವಾಗಿಸಿದೆ.

ಪರಿಸರಸ್ನೇಹಿ ಮನೋಭಾವ ಹೊಂದಿರುವ ಸಿಬ್ಬಂದಿಯನ್ನು ತರಬೇತಿ ನೀಡಿ, ಉಳಿಸಿಕೊಳ್ಳುವುದು ಹೇಗೆ ಸಾಧ್ಯವಾಗುತ್ತಿದೆ?

ಸ್ಥಳೀಯರು, ಪರಿಸರ ಪ್ರೇಮ ಉಳ್ಳವರು ಸಿಬ್ಬಂದಿಯಾಗಿ ಬರುತ್ತಾರೆ. ಅವರನ್ನು ತರಬೇತಿ ಮಾಡುವುದು ಕಷ್ಟವಾಗುವುದಿಲ್ಲ. ನಮ್ಮ ಪ್ರಮುಖ ಉದ್ದೇಶ ಅತಿಥಿಗಳನ್ನು ಸಂತುಷ್ಠಗೊಳಿಸುವುದು ಹಾಗೂ ಪ್ರಾಪರ್ಟಿಯ/ಪರಿಸರದ ಸಂರಕ್ಷಣೆ. ಉತ್ತಮ ವೇತನವೂ ಇರುವುದರಿಂದ ನಮ್ಮ ಗೈಡ್ ಹಾಗೂ ಸಿಬ್ಬಂದಿ ಕೆಲಸ ಚೆನ್ನಾಗಿ ಕಲಿತು ಇಲ್ಲೇ ಬೆಳೆಯುತ್ತಾರೆ.

ರಾಜ್ಯದಲ್ಲಿ ಇನ್ನಷ್ಟು ಹೊಸ ಜೆ ಎಲ್ ಆರ್ ರೆಸಾರ್ಟ್‌ಗಳು ಬರಲಿವೆಯೇ?

ಹೌದು ಇನ್ನೂ ನಾಲ್ಕು ಸೇರ್ಪಡೆಯಾಗಲಿವೆ. ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ತೇನೆ.

ರಾಜ್ಯದಿಂದ ಹೊರಗೆ ಜೆ ಎಲ್ ಆರ್ ವಿಸ್ತಾರಗೊಳ್ಳುವ ಆಲೋಚನೆ ಇದೆಯೇ?

ಇಲ್ಲ. ಸದ್ಯಕ್ಕಿಲ್ಲ. ರಾಜ್ಯದ ಕಡೆಯೇ ಹೆಚ್ಚು ಫೋಕಸ್ ಮಾಡುತ್ತಿದ್ದೇವೆ.

ತಂತ್ರಜ್ಞಾನ ಮತ್ತು ಇಂದಿನ ಆನ್ ಲೈನ್ ಸೌಲಭ್ಯವನ್ನು ಜೆ ಎಲ್ ಆರ್ ಎಷ್ಟು ಬಳಸಿಕೊಳ್ಳುತ್ತಿದೆ?

ನಾವು ಕೂಡ ಸಾಕಷ್ಟು ಅಪ್ ಡೇಟ್ ಆಗಿದ್ದೇವೆ. ಕಸ್ಟಮರ್ ಕೇರ್ ಬಹಳ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ದೂರುಗಳ ಸಂಖ್ಯೆ ಬಹಳ ಕಮ್ಮಿ ಇರುತ್ತದೆ. ಆನ್ ಲೈನ್ ಬುಕಿಂಗ್ ವಿಚಾರದಲ್ಲಿ ಮಾತ್ರ ಕೊಂಚ ಸ್ಟ್ರಾಂಗ್ ಆಗಬೇಕಿದೆ. ಪ್ರವಾಸಿಸ್ನೇಹಿ ಆಗಬೇಕಿದೆ. ಈ ನಿಟ್ಟಿನಲ್ಲಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕೆಲಸಗಳು ಆಗಿರುತ್ತವೆ.

ಜೆ ಎಲ್ ಆರ್ ನ ಯಾವ ಯೋಜನೆ ಸದ್ಯದಲ್ಲಿ ನಾವೆಲ್ಲ ಸಂಭ್ರಮಿಸಬಹುದು?

ಬೆಂಗಳೂರಿನಲ್ಲಿ ಪ್ರವಾಸಿ ಸೌಧ ಎಂಬ ಅದ್ಭುತ ಪರಿಕಲ್ಪನೆಯ ಕಟ್ಟಡ ನಿರ್ಮಾಣವಾಗಲಿದೆ. ಇದು ಇಂಜಿನಿಯರ್ಡ್ ಬ್ಯಾಂಬೂವಿನಿಂದ ನಿರ್ಮಾಣವಾಗಲಿದ್ದು, ಪ್ರಕೃತಿ ನಿರ್ಮಿತ ಸೌಧದಂತೆ ಕಂಗೊಳಿಸಲಿದೆ. ಇದು ಕೂಡ ಒಂದು ಪ್ರವಾಸಿ ತಾಣವಾಗಿ ಪರಿಣಮಿಸಲಿದ್ದು, ದೇಶಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸಲಿದೆ.

ಜೆ ಎಲ್ ಆರ್ ಸುವರ್ಣ ಮಹೋತ್ಸವದ ಹತ್ತಿರದಲ್ಲಿದೆ. ಅದರ ಪ್ಲಾನ್ ಏನಾದ್ರೂ ಇದೆಯಾ?

ನಾವು ಪ್ರತಿ ವರ್ಷ ಇಲ್ಲಿ ಸಾಧಕರನ್ನು ಶ್ರಮಿಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದೇವೆ. ಈ ವರ್ಷದ ಸಮಾರಂಭದಲ್ಲಿ ನಾವು ತಳಮಟ್ಟದ ನೌಕರರನ್ನೂ ಗುರುತಿಸಿ ಗೌರವಿಸುವ ಸತ್ಕಾರ್ಯ ಮಾಡಿದ್ದೇವೆ. ಡ್ರೈವರ್, ಹೌಸ್ ಕೀಪರ್ ಹೀಗೆ ಎಲ್ಲ ವರ್ಗದ ಉದ್ಯೋಗಿಗಳನ್ನು ಸನ್ಮಾನಿಸಿರುವುದು ಮನಸಿಗೆ ಸಮಾಧಾನ ಕೊಟ್ಟ ವಿಚಾರ.