ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದರೋಜಿಯ ಕರಡಿಧಾಮವು ಉತ್ತರ ಕರ್ನಾಟಕದ ಏಕೈಕ ಮತ್ತು ಏಷ್ಯಾದಲ್ಲೇ ಮೊಟ್ಟಮೊದಲ ಕರಡಿಧಾಮವಾಗಿದೆ. ಸರಕಾರಿ ಮಾಹಿತಿಯ ಪ್ರಕಾರ ಈ ಅಭಯಾರಣ್ಯವು 5,587.30 ಎಕರೆಯಷ್ಟು ವಿಶಾಲವಾಗಿದೆ. ಇಲ್ಲಿನ ಕರಡಿ ಗುಡ್ಡ ಪ್ರದೇಶವು ಗವಿಗಳು (ಗುಹೆಗಳು) ಬೃಹದಾಕಾರದ ಬಂಡೆಗಳಿಂದ ಕೂಡಿದ್ದು ಕರಡಿಗಳ ಆವಾಸ ತಾಣವಾಗಿದೆ.

ಇಲ್ಲಿವೆ ವಿಶೇಷ ಕರಡಿಗಳು

ಭಾರತೀಯ ಕರಡಿ ಎಂದು ಕರೆಯಲ್ಪಡುವ ಇವು ಕತ್ತಿನ ಭಾಗದಲ್ಲಿ ಆಭರಣದಂತೆ ಭಾಸವಾಗುವ ಬಿಳಿ ಪಟ್ಟೆ ಹೊಂದಿದ ವಿಶೇಷ ಪ್ರಜಾತಿಯ ಕರಡಿಗಳಾಗಿವೆ. ಇವು ಭಾರತ, ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಉಷ್ಣ ವಲಯದ ಕಾಡುಗಳಲ್ಲಿ ಅತಿಯಾಗಿ ಕಂಡುಬರುವ ಕರಡಿಗಳಾಗಿವೆ. 'ಸೋಮಾರಿ'ಯಂತೆ ಕಂಡುಬರುವ ಹಾವಭಾವ, ದೇಹ ರಚನೆಯಿಂದ 'ಮೆಲುರ್ಸಸ್ ಉರ್ಸಿನಸ್' ಎಂಬ ಹೆಸರು ಹೊಂದಿವೆಯಾದರೂ ಇವು ಆಲಸಿಗಳಲ್ಲ.

Karadi dhama Ballari

ಅರಣ್ಯಧಾಮದ ಜೈವಿಕ ವೈವಿಧ್ಯ

ಅಂದಾಜಿನ ಪ್ರಕಾರ ಧಾಮದಲ್ಲಿ 37 ಕುಟುಂಬಕ್ಕೆ ಸೇರಿದ 85 ಪ್ರಭೇದದ ಸಸ್ಯವರ್ಗ, 150ಕ್ಕಿಂತ ಹೆಚ್ಚು ಕರಡಿಗಳು ಇದ್ದು ಜತೆಗೆ ಚಿರತೆ ಮೀಸಲು ಪ್ರದೇಶ ಹಾಗೂ ಪ್ರಾಥಮಿಕ ವರದಿಗಳಂತೆ 90 ಕ್ಕಿಂತ ಹೆಚ್ಚು ಪಕ್ಷಿ, 27 ಕ್ಕಿಂತ ಅಧಿಕ ಪಾತರಗಿತ್ತಿ ಪ್ರಜಾತಿಗಳು, ವೈವಿಧ್ಯ ಪ್ರಭೇದದ ಸರೀಸೃಪಗಳು, ಕತ್ತೆಕಿರುಬ, ನರಿ, ಕಾಡುಹಂದಿ, ಮುಳ್ಳುಹಂದಿ, ಪ್ಯಾಂಗೊಲಿನ್‌ಗಳು, ನಕ್ಷತ್ರ ಆಮೆ, ಚಿಪ್ಪುಹಂದಿ, ಮುಂಗುಸಿಗಳು ಇಲ್ಲಿ ಆಸರೆ ಕಂಡುಕೊಂಡಿವೆ.

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ

ರಾಮಾಯಣ ಕಾಲದ ಪೌರಾಣಿಕ ಹಿನ್ನೆಲೆಯನ್ನು ಈ ಪ್ರದೇಶ ಹೊಂದಿದ್ದು, ಹಂಪಿ ಸಮೀಪದ ಕಿಷ್ಕಿಂದೆಯಲ್ಲಿದ್ದ ರಾಮನ ವಾನರ ಸೈನ್ಯದಲ್ಲಿ ಜಾಂಬವಂತ ಎಂಬ ಕರಡಿ ಇತ್ತು. ಇವರ ಪರಿವಾರದ ಕುರುಹು ಇಲ್ಲಿನ ಬಂಡೆಗಳ ಗುಹೆಗಳಲ್ಲಿ ವಾಸಿಸುತ್ತಿರುವ ಕರಡಿಗಳು ಎಂಬುದು ಸ್ಥಳೀಯರ ನಂಬಿಕೆ.

ಯುನೆಸ್ಕೋ ವಿಶ್ವ ಪ್ರಸಿದ್ಧ ಪಾರಂಪರಿಕ ತಾಣ ಹಂಪಿಯಿಂದ ಕೇವಲ 25 ಕಿಮೀ ಅಂತರದಲ್ಲೇ ಇದ್ದು, ವಿಜಯನಗರ ಸಾಮ್ರಾಜ್ಯದ ದ್ವಾರ ಎಂದು ಹೇಳಲಾಗಿದೆ. ಅದರಂತೆ ಈ ಧಾಮವು ಹಂಪಿಯ ಪರಿಧಿಯಲ್ಲಿ ಚಾಚಿಕೊಂಡಿದ್ದು, ಸಾಮ್ರಾಜ್ಯ ಕಾಲದಲ್ಲಿ ನೈಸರ್ಗಿಕ ತಡೆಗೋಡೆಯಾಗಿತ್ತು ಎನ್ನಲಾಗಿದೆ. ಮೀಸಲು ಅರಣ್ಯದಲ್ಲಿ ವನ್ಯ ಜೀವಿಗಳು ಸ್ವತಂತ್ರವಾಗಿ ಅಲೆದಾಡುವಂತಿದ್ದು, ಪ್ರವಾಸಿಗರಿಗೆ ಅರಣ್ಯದ ವಿಹಂಗಮ ದೃಶ್ಯಗಳನ್ನು ಅನುಭವಿಸಲು ಕರಡಿ ಗುಡ್ಡ ಪ್ರದೇಶದ ಸುತ್ತಲೂ ಅಲ್ಲಲ್ಲಿ ವೀಕ್ಷಣಾ ಗೋಪುರಗಳು ತಲೆ ಎತ್ತಿ ನಿಂತಿವೆ. ಸಂಜೆ ಸಮಯದಲ್ಲಿ ಜೀಪ್ ಸಫಾರಿ ವ್ಯವಸ್ಥೆ ಇದ್ದು, ಉಷ್ಣ ವಲಯದ ಕಾಡಿನ ಅನುಭವ, ಬೃಹದಾಕಾರದ ಬಂಡೆಗಳ ಮಧ್ಯೆ ಕರಡಿ, ಚಿರತೆ, ನವಿಲು, ಸರೀಸೃಪಗಳು ಜತೆಗೆ ವಿಶಾಲ ಕೆರೆಯು ಇದ್ದು ನೀರುನಾಯಿ, ಮೊಸಳೆಗಳು ಹೀಗೆ ವೈವಿಧ್ಯ ಅರಣ್ಯ ವಾಸಿಗಳ ವಿಹಾರದ ದೃಶ್ಯಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ.

asia's first Karadidhama

ವೀಕ್ಷಣೆಗೆ ಸೂಕ್ತ ಕಾಲ

ಆಗಸ್ಟ್‌ ನಿಂದ ಏಪ್ರಿಲ್ ವರೆಗೆ ದರೋಜಿ ಕರಡಿಧಾಮ ಭೇಟಿಗೆ ಉತ್ತಮ ಕಾಲವಾಗಿದ್ದು, ಈ ಸಮಯದಲ್ಲಿ ಅರಣ್ಯ ಪ್ರದೇಶವು ಮೈಯೆಲ್ಲ ಹಸಿರೊದ್ದು ಆಕರ್ಷಣೀಯವಾಗಿರುತ್ತದೆ. ಉಳಿದಂತೆ ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 9:00 ರಿಂದ ಸಂಜೆ 6.00 ರವರೆಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಸನ್ನಿವೇಶಗಳನ್ನು ಸೆರೆಹಿಡಿಯಲು ಕ್ಯಾಮೆರಾ, ವೀಕ್ಷಣೆಗಾಗಿ ಬೈನಾಕುಲಾರ್‌ಗಳನ್ನೂ ಜತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ನೈಸರ್ಗಿಕ, ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಈ ತಾಣ, ಇರುವ ಇಷ್ಟು ಪ್ರದೇಶದಲ್ಲೇ ಹಾರುವ ಬಾನಾಡಿ, ಈಜಾಡುವ ಜಲಚರ, ಓಡಾಡುವ ವನ್ಯಮೃಗ, ಉಭಯವಾಸಿಗಳು, ಸರೀಸೃಪಗಳು ನಿಂತಲ್ಲೇ ಬೆಳೆದರಳುವ ಮರಗಳು ಎಲ್ಲವೂ ತನ್ನಲ್ಲಿಗೆ ಬರುವ ಪ್ರವಾಸ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

Karadi dhama in Ballari


ದಾರಿ ಹೇಗೆ?

ಅಭಯಾರಣ್ಯದಿಂದ 20 ಕಿಮೀ ಗಳ ಅಂತರದಲ್ಲಿಯೇ ಅಂದರೆ ಹೊಸಪೇಟೆ, ಪಾಪಿ ನಾಯಕನ ಹಳ್ಳಿ, ತೋರಣಗಲ್ಲು, ದರೋಜಿಗೆ ರೈಲು ಸಂಪರ್ಕ ವ್ಯವಸ್ಥೆ ಇದೆ. ಹೊಸಪೇಟೆಯಿಂದ ಕಮಲಾಪುರ ಮಾರ್ಗವಾಗಿ ಸಾಗಿದರೆ 25 ಕಿಮೀ ಅದರಂತೆ ಬಳ್ಳಾರಿಯಿಂದ ತೋರಣಗಲ್ಲು ಮಾರ್ಗವಾಗಿ 65 ಕಿಮೀ ಸಾಗಿ ದರೋಜಿ ಕರಡಿಧಾಮವನ್ನು ತಲುಪಬಹುದು. ಉತ್ತಮ ಸರಕಾರಿ ಸಾರಿಗೆ ಬಸ್ ವ್ಯವಸ್ಥೆಯು ಇದೆ.