-ಡಾ. ಪದ್ಮಿನಿ ನಾಗರಾಜು

ಕರ್ನಾಟಕದಲ್ಲಿ ಆಳಿದ ಅರಸು ಮನೆತನಗಳು ಭಾರತದ ಚರಿತ್ರೆಯ ಮೇಲೆ ಅಗಾಧ ಪ್ರಭಾವ ಬೀರಿದ್ದಾವೆ ಎಂಬುದರಲ್ಲಿ ಸಂದೇಹವಿಲ್ಲ. ಬಾದಾಮಿಯ ಚಾಲುಕ್ಯರ ನಂತರ ಕರ್ನಾಟಕವನ್ನು ಆಳಿದ ರಾಜಮನೆತನಗಳಲ್ಲಿ ರಾಷ್ಟ್ರಕೂಟರು ಪ್ರಮುಖರು. ಇವರು ಸುಮಾರು ಎರಡೂವರೆ ಶತಮಾನಗಳ ಕಾಲ ರಾಜ್ಯಭಾರ ನಡೆಸಿದರು. ಅವರ ರಾಜಧಾನಿ ಮಾನ್ಯಖೇಟವಾಗಿತ್ತು. ಅವರ ಲಾಂಛನ ಗರುಡವಾಗಿತ್ತು.

ಅಂದಿನ ಮಾನ್ಯಖೇಟ ಇಂದು ಮಳಖೇಡವಾಗಿದೆ. ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಹತ್ವದ ಐತಿಹಾಸಿಕ ಸ್ಥಳವಾಗಿದೆ. ಕಲಬುರ್ಗಿಯಿಂದ 40 ಕಿಲೋಮೀಟರ್‌ ದೂರವಿರುವ ಈ ಊರಿಗೆ ರಸ್ತೆ ಮೂಲಕ ತಲುಪಬಹುದು. ಕಲಬುರ್ಗಿಗೆ ವಿಮಾನ, ರೈಲು, ರಸ್ತೆ ಮೂಲಕ ಬರಬಹುದು. ಕಾಗಿನಾ ನದಿಯ ದಡದಲ್ಲಿರುವ ಈ ಸ್ಥಳ ತನ್ನ ಅಭೂತಪೂರ್ವ ಕೋಟೆಯಿಂದಾಗಿ ಪ್ರಸಿದ್ಧಿ ಪಡೆದಿದೆ.ಕಾಗಿನಾ ದಡದಲ್ಲಿಉತ್ತರಾಧಿಮಠವಿದೆ. ಮಧ್ವಾಚಾರ್ಯರ ದೈತ ತತ್ವವನ್ನು ಪ್ರತಿಪಾದಿಸಿದ ಶ್ರೀ ಜಯತೀರ್ಥರ ಬೃಂದಾವನವಿದೆ. ಇಲ್ಲಿ ಈಶ್ವರ ಹಾಗೂ ಹನುಮಂತನ ಗುಡಿಗಳೂ ಇವೆ. ಅಂದಿನ ಜೈನರ ಪವಿತ್ರ ಕ್ಷೇತ್ರವಾಗಿದ್ದ ಇಲ್ಲಿ ಮಲ್ಲಿನಾಥನ ಬಸದಿಯಿದೆ. ಜತೆಗೆ ಜುಮ್ಮಾ ಮಸೀದಿ ಹಾಗೂ ದರ್ಗಾಗಳಿಗೂ ಪ್ರಸಿದ್ಧಿಯಾಗಿದೆ.

malakheda

ಮಾನ್ಯಖೇಟ ಅಮೋಘವರ್ಷನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅವನ ಆಸ್ಥಾನದಲ್ಲಿ ಶ್ರೀವಿಜಯ ಬರೆದಿರುವ ʻಕವಿರಾಜಮಾರ್ಗʼದಲ್ಲಿ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್" ಎಂದು ತಿಳಿಸಿರುವಂತೆ, ಅಮೋಘವರ್ಷ ರಾಜನ ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿವರೆಗೆ ವಿಸ್ತರಿಸಿತ್ತು.

ಮಳಖೇಡ ಕೋಟೆಯು ಇಂದಿಗೂ ನೋಡಲೇಬೇಕಾದ ಸ್ಮಾರಕವಾಗಿದೆ. ಈ ಕೋಟೆಗೆ ನಾಲ್ಕು ದ್ವಾರಗಳಿವೆ. 52 ಬುರುಜುಗಳಿವೆ. ಈ ಕೋಟೆಯ ಹೊರಗೋಡೆ 20 ಅಡಿ ಎತ್ತರವಿದ್ದು ಶಾಬಾದಿ ಕಲ್ಲಿನಿಂದ ನಿರ್ಮಾಣವಾಗಿದೆ. ಮುಖ್ಯದ್ವಾರಕ್ಕೆ ಮರದ ಬಾಗಿಲುಗಳಿದ್ದು, ಕಿರಿದಾದ ಹಾಗೂ ತಿರುವಿನ ಮೆಟ್ಟಿಲುಗಳ ಮೂಲಕ ವಾಚ್‌ಟವರ್‌ಗಳನ್ನು ತಲುಪಬಹುದು.

ruined fort

ಈ ಎಲ್ಲಾ ಐತಿಹಾಸಿಕ ಕುರುಹುಗಳನ್ನು ಅರಿಯಲು ಮಳಖೇಡಕ್ಕೆ ಕಾಲಿರಿಸಿದರೆ ನಿರಾಸೆಯಾಗುತ್ತದೆ. ಅಂದಿನ ವೈಭವಯುತ ಇಂದ್ರನ ಸಾಮ್ರಾಜ್ಯವನ್ನೇ ನಾಚಿಸುವ ಸಾಮ್ರಾಜ್ಯವಾಗಿದ್ದ ಈ ಊರು ಇಂದು ಸಾಮಾನ್ಯ ಊರಾಗಿದೆ. ಇಲ್ಲೊಂದು ಸಾಮ್ರಾಜ್ಯ ಇತ್ತು ಎಂಬುದು ತಿಳಿಯುವುದು ಇಲ್ಲಿನ ಕೋಟೆಯೊಳಗೆ ಕಾಲಿಟ್ಟಾಗ ಮಾತ್ರ. ಚಿತ್ರದುರ್ಗ, ಹಂಪೆಗೆ ಸಿಕ್ಕಂಥ ಪ್ರಚಾರ ಈ ಊರಿಗೆ ಸಿಕ್ಕಿಲ್ಲ. ಇಲ್ಲಿ 7-8 ಶಾಸನಗಳು ಸಿಕ್ಕಿದ್ದರೂ ಅವು ರಾಷ್ಟ್ರಕೂಟರ ಕಾಲದವಲ್ಲ. ಅದಕ್ಕಾಗಿ ಹಂಪಿಯಲ್ಲಿ ನಡೆದಂತೆ ಉತ್ಖನನವಾಗಬೇಕಿದೆ, ರಾಷ್ಟ್ರಕೂಟರ ಕುರುಹುಗಳನ್ನು ಹೊರತೆಗೆಯಬೇಕಿದೆ.

ಅತ್ಯಂತ ಭವ್ಯ ಇತಿಹಾಸ ಹೊಂದಿರುವ ಈ ಕೋಟೆ ನೋಡಲು ನಾನು ಗೆಳತಿಯರೊಂದಿಗೆ ಹೋದಾಗ ನಮಗೆ ಇಡೀ ಕೋಟೆಯೊಳಗೇ ಊರಿದಿಯೇನೋ ಅನ್ನಿಸಿತು. ಇಲ್ಲಿ ಮಾರ್ಗದರ್ಶಕರು ಸಿಗಲಿಲ್ಲ. ಆದ್ದರಿಂದ ನಾವೇ ಇತಿಹಾಸದ ಪುಟಗಳನ್ನು ತೆರೆದು ಸುತ್ತಾಡಿಕೊಂಡು ಕೋಟೆಯನ್ನು ಕಣ್ಣು ತುಂಬಿಕೊಂಡೆವು.

ಕನ್ನಡದ ಪ್ರಥಮ ಕೃತಿ ಕವಿರಾಜಮಾರ್ಗ ನೀಡಿದ ಹೆಗ್ಗಳಿಕೆಯು ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟಕ್ಕೆ ಸಲ್ಲುತ್ತದೆ. ಇಂದಿನ ಮಳಖೇಡಕ್ಕೆ ಭೇಟಿ ನೀಡಿದರೆ ಕನ್ನಡಿಗರ ಈ ಹೆಮ್ಮೆಯ ಕೋಟೆ ಮತ್ತು ಸ್ಮಾರಕಗಳು ಅಳಿವಿನಂಚಿನಲ್ಲಿವೆಯೆಂಬ ಅರಿವಾಗುತ್ತದೆ. ಕೋಟೆ ಮುಕ್ಕಾಲುಭಾಗ ನಶಿಸಿ ಹೋಗಿದೆ. ಬಿದ್ದ ಕಲ್ಲುಗಳು, ಚಪ್ಪಡಿಗಳು ಅನೇಕರ ಮನೆಯ ಕಟ್ಟಡಗಳಾಗಿವೆ. ತೋಪುಗಳು, ಶಿಲ್ಪಗಳು ಎಲ್ಲೆಡೆ ಚದುರಿ ಹೋಗಿವೆ.

khandar fort

ಐತಿಹಾಸಿಕ ಚರಿತ್ರೆಯುಳ್ಳ ಮಳಖೇಡ ಕೋಟೆಯನ್ನು ಸರ್ಕಾರ ಅನುದಾನ ನೀಡಿ ರಿಪೇರಿ ಮಾಡಿಸುತ್ತಲೇ ಇದೆ. ಒಂದು ಸಣ್ಣ ಮಳೆಗೂ ಇಲ್ಲಿನ ಕೋಟೆಯ ಗೋಡೆಗಳು ಕುಸಿದು ಬೀಳುತ್ತಿವೆ. ಅದನ್ನು ಮತ್ತೆ ಮತ್ತೆ ರಿಪೇರಿ ಮಾಡಲಾಗುತ್ತಿದೆ. ಕೇವಲ ಸರ್ಕಾರ ಮಾತ್ರವಲ್ಲದೆ ಊರಿನ ಜನರಿಗೂ ಅಭಿಮಾನ ಈ ಕೋಟೆಯ ಮೇಲಿರಬೇಕಿತ್ತು. ನಾವು ಅಲ್ಲಿ ಸುತ್ತಾಡುವಾಗ ಕೋಟೆಯ ಅಂಚಿನಲ್ಲಿದ್ದ ಕಸದ ರಾಶಿ, ಅಲ್ಲಿಯ ಕಲ್ಲಿನಲ್ಲಿ ಮನೆ ಕಟ್ಟಿಕೊಂಡ ಜನರ ನಿರ್ಲಕ್ಷಕ್ಕೇನು ಎನ್ನುವುದು? ಕೋಟೆಯ ಒಳಗೆ ಸುತ್ತಾಡಲು ಹೊರಟರೆ ಅದೊಂದು ಭವ್ಯ ಇತಿಹಾಸವನ್ನು ನೆನಪಿಸುತ್ತದೆ. ಅಲ್ಲಿನ ಗೋಡೆ ಗೋಡೆಯೂ ಆ ಕಾಲದ ಐತಿಹಾಸಿಕ ಕುರುಹನ್ನು ಬಿಚ್ಚಿಡುತ್ತದೆ.

ಪುರಾತನ ಜೈನ ಭಟ್ಟಾರಕ ಕ್ಷೇತ್ರವಾಗಿ ಪ್ರಸಿದ್ಧವಾಗಿದ್ದ ಇಲ್ಲಿ 9ನೇ ಶತಮಾನದ ಪುರಾತನ ಜೈನ ಬಸದಿಯಿದೆ.ಮಲ್ಲಿನಾಥ ತೀರ್ಥಂಕರರ ಮೂರ್ತಿಯಿದೆ. ಬಸದಿಯು ಗರ್ಭಗೃಹ, ನವರಂಗ ಮತ್ತು ಹಜಾರವನ್ನು ಹೊಂದಿದೆ. ಈ ಬಸದಿಯಲ್ಲಿ ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದ ಸುಮಾರು 59 ಹಸ್ತಪ್ರತಿಗಳು ದೊರಕಿವೆ. ಇಲ್ಲೊಂದು ವಿಶೇಷತೆಯನ್ನು ಗಮನಿಸಬಹುದು. ಕ್ರಿ.ಶ. 9ನೇ ಶತಮಾನದ ಆಚಾರ್ಯ ಜಿನಸೇನರ ಕಾಲದ್ದಾದ ಮಳಖೇಡ ಬಸದಿಯಲ್ಲಿರುವ ಕಂಬದ ಮೇಲೆ ರಾವಣ ಕೈಲಾಸ ಪರ್ವತವನ್ನು ಎತ್ತುವ ಕಿರುಶಿಲ್ಪವಿದೆ. ಮುಂದೆ 10ನೇ ಶತಮಾನದಲ್ಲಿ ಎಲ್ಲೋರದಲ್ಲಿ ರಚನೆಯಾದ ಕೈಲಾಸ ಮಂದಿರದಲ್ಲಿನ ಎರಡನೇ ಮಹಡಿಯ ಹೊರಗೋಡೆಯಲ್ಲಿ ಉತ್ತರಾಭಿಮುಖವಾಗಿ ಕೆತ್ತಿರುವ ರಾವಣ ಕೈಲಾಸ ಪರ್ವತ ಅಲುಗಿಸುವ ಬೃಹತ್ ಗಾತ್ರದ ಸುಂದರ, ಶ್ರೇಷ್ಠ ಶಿಲ್ಪಕ್ಕೆ ಮಾನ್ಯಖೇಟದ ಬಸದಿಯಲ್ಲಿನ ಕಿರುಶಿಲ್ಪ ಪ್ರೇರಣೆಯಾದದ್ದು ಅಚ್ಚರಿ ಹಾಗೂ ಅಭಿಮಾನವೆನಿಸುತ್ತದೆ.

Amoghavarsha

ಜೈನರ ಪವಿತ್ರ ಗ್ರಂಥಗಳಾದ ಧವಲಾದಿ ಗ್ರಂಥಗಳು ರಚಿತವಾಗಿದ್ದು ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ. ಗಣಿತಶಾಸ್ತ್ರಜ್ಞ ಮಹಾವೀರಾಚಾರ್ಯರು ಇಲ್ಲಿಯೇ ʻಗಣಿತ ಸಾರಸಂಗ್ರಹʼ ಕೃತಿ ರಚಿಸಿದ್ದು. ಅಪಭ್ರಂಶ ಕವಿ ಪುಷ್ಪದಂತ ಇಲ್ಲಿಯೇ ನೆಲೆಸಿದ್ದನು. ಉತ್ಕೃಷ್ಟ ಕಾವ್ಯಗಳನ್ನು ರಚಿಸಿದ್ದ ಕವಿ ಪಡೆಯೇ ಅಲ್ಲಿತ್ತು. ಅಂಥ ಪವಿತ್ರ ಸ್ಥಳ ಇಂದು ಅಸಡ್ಡೆಗೆ ಒಳಗಾಗಿದೆ. ಸುತ್ತಮುತ್ತ ಹೊಲಗದ್ದೆಗಳಲ್ಲಿ ಸಿಕ್ಕಿರುವ ಜೈನ ಮೂರ್ತಿಗಳನ್ನು ಬಸದಿಯಲ್ಲಿ ಜೋಡಿಸಿಡಲಾಗಿದೆ. ಇಲ್ಲಷ್ಟೆ ಅಲ್ಲದೆ ಕಮಠಾಣ, ಬಂಕೂರು, ಹುಣಸಿ, ಹಡಗಿಲೆ ಕ್ಷೇತ್ರಗಳೂ ಜೈನ ಕೇಂದ್ರಗಳಾಗಿದ್ದವು ಎಂಬುದಕ್ಕೆ ಶಾಸನಗಳ ಆಧಾರ ಇವೆ. ನಾಗಾವಿಯು ಜೈನಧರ್ಮದ ಘಟಿಕಾಲಯವಾಗಿತ್ತು ಎಂಬುದಕ್ಕೆ ಅಲ್ಲಿ ಸಿಕ್ಕಂಥ ಅವಶೇಷಗಳಿಂದ ತಿಳಿದುಬರುತ್ತದೆ. ನಾಗಾವಿಯ ಈಗಿನ ಮಧುಸೂದನ ದೇವಾಲಯದ ಹಿಂಬದಿಯ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಪಾಳುಬಿದ್ದ ಕಟ್ಟಡಗಳ ಅವಶೇಷಗಳು ಎಲ್ಲಾ ಕಡೆ ಹರಡಿದ್ದು, ಅಲ್ಲಿ ಜೈನ ತೀರ್ಥಂಕರರ ವಿಗ್ರಹ ಹಾಗೂ ಇನ್ನಿತರ ಕುರುಹುಗಳು ದೊರೆಯುತ್ತವೆ. ಆದರೆ ಇಂದು ಈ ಜಾಗಗಳು ಸ್ಥಳೀಯ ಜನರ ಹಾಗೂ ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿವೆ.

ಪ್ರವಾಸಿ ತಾಣವಾಗಿ ಜನರ ಗಮನ ಸೆಳೆಯಬೇಕಾಗಿದ್ದ ಈ ಸ್ಥಳವನ್ನು ತಕ್ಷಣ ಸರ್ಕಾರಗಳು ಮುತುವರ್ಜಿವಹಿಸಿ ಮಾರ್ಗದರ್ಶಿಗಳನ್ನು ನೇಮಿಸಿ, ಸೂಚನಾ ಫಲಕವನ್ನು ಅಳವಡಿಸಿ ಭವ್ಯ ಇತಿಹಾಸವನ್ನು ತಿಳಿಸುವ ಕ್ರಮ ಕೈಗೊಳ್ಳಬೇಕಿದೆ. ಹಾಗಾದಲ್ಲಿ ಸ್ಥಳೀಯರಿಗೂ, ಪ್ರವಾಸಿಗರಿಂದ ಆರ್ಥಿಕವಾಗಿ ಸಬಲತೆ ಸಿಕ್ಕಂತಾಗುತ್ತದೆ.

ಮಳಖೇಡಕ್ಕೆ ಪ್ರವಾಸ ಹೋಗುವ ಮುನ್ನ ಮೇಲಿನ ಐತಿಹಾಸಿಕ ಅಂಶವನ್ನು ತಿಳಿದುಕೊಂಡು ಹೋಗಿದ್ದೇ ಆದಲ್ಲಿ ಭವ್ಯ ಪರಂಪರೆಯೊಂದನ್ನು ನೋಡಿದ ಆನಂದ ಪ್ರವಾಸಿಗರಿಗಾಗುತ್ತದೆ. ಈ ಕೋಟೆಯೊಂದಿಗೆ ಕಲಬುರ್ಗಿಯ ಕೋಟೆ, ಸನ್ನತಿ, ಬೀದರ್‌ ಅನ್ನು ಕೂಡ ಪ್ರವಾಸಿಗರು ವೀಕ್ಷಿಸಬಹುದು.