ಮಂಜೂಷಾ ಆ್ಯಂಟಿಕ್ ಮ್ಯೂಸಿಯಂ
ಡಾ.ಹೆಗ್ಗಡೆ ಅವರ ಪುರಾತನ ಕಾರುಗಳ ಸಂಗ್ರಹವು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಪಾಂಟಿಯಾಕ್, ಚೆವ್ರೊಲೆಟ್, ಕ್ಯಾಡಿಲಾಕ್, ಮೋರಿಸ್ ಮತ್ತು ಆಸ್ಟಿನ್ ಇತ್ಯಾದಿ ಹಲವಾರು ಕ್ಲಾಸಿಕ್ ಕಾರುಗಳಿವೆ. ಇಲ್ಲಿ ಇರುವ ಕಾರುಗಳ ಪೈಕಿ ಮೈಸೂರಿನ ಹಿಂದಿನ ರಾಜರಾದ ಜಯಚಾಮರಾಜೇಂದ್ರ ಒಡೆಯರ್‌ಗೆ ಸೇರಿದ್ದ ಮತ್ತು ಯು.ಕೆ ತಯಾರಿಸಿದ ಡೈಮ್ಲರ್ ಡಬಲ್ ಸಿಕ್ಸ್, ಗಾಂಧೀಜಿಯವರು ತಾವು ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದಾಗ ಬಳಸಿದ್ದ ದಂತದ ಬಣ್ಣದ ಸ್ಟೂಡ್‌ಬೇಕರ್ 1929 ಕಾರ್‌ಗಳು ಇಲ್ಲಿವೆ.
- ಸಂತೋಷ್ ರಾವ್ ಪೆರ್ಮುಡ
ಪುರಾತನ ವಸ್ತುಸಂಗ್ರಹಾಲಯಗಳು ಒಂದು ಪ್ರದೇಶದ ಅಥವಾ ದೇಶದ ಸಾಂಸ್ಕೃತಿಕ, ವೈಜ್ಞಾನಿಕ, ಕಲಾತ್ಮಕ ಅಥವಾ ಚಾರಿತ್ರಿಕ ವಿಚಾರಗಳಿಗೆ ಸಂಬಂಧಿತ ಮಹತ್ವದ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅಧ್ಯಯನ ಮಾಡುವ, ಶೈಕ್ಷಣಿಕ ಉದ್ದೇಶಗಳಿಗೆ ಒದಗಿಸುವ ಮತ್ತು ಮುಂದಿನ ಪೀಳಿಗೆಗೆ ಪ್ರದರ್ಶಿಸುವ ಒಂದು ವ್ಯವಸ್ಥೆಗಳೆಂದರೆ ತಪ್ಪಾಗದು. ಇದು ಕಲೆ, ವಿಜ್ಞಾನ, ನೈಸರ್ಗಿಕ ಮತ್ತು ಸ್ಥಳೀಯ ಇತಿಹಾಸ ಇತ್ಯಾದಿ ನಿರ್ದಿಷ್ಟ ವಿಷಯಗಳ ಮೇಲೆ ಕೇಂದ್ರೀಕೃತ ಆಗಿರಬಹುದು. ಇಂತಹ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಮನುಷ್ಯನ ಆಸಕ್ತಿಯು ಅವನಷ್ಟೇ ಪ್ರಾಚೀನವೂ ಹೌದು.
ದೇಶವಿದೇಶಗಳಲ್ಲಿ ಇಂಥ ಹಲವಾರು ವಸ್ತುಸಂಗ್ರಹಾಲಯಗಳ ಪೈಕಿ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಹೆಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ, ಗಾಂಧಿ ಭವನ., ದೆಹಲಿಯ ನ್ಯಾಶನಲ್ ಮ್ಯೂಸಿಯಂ, ಕಲ್ಕತ್ತಾದ ಇಂಡಿಯನ್ ಮ್ಯೂಸಿಯಂ, ಹೈದರಾಬಾದಿನ ಸಲಾರ್ ಜಂಗ್ ಮ್ಯೂಸಿಯಂ, ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ, ಕೇರಳದ ನೇಪಿಯರ್ ಮ್ಯೂಸಿಯಂ ಇತ್ಯಾದಿ ಪ್ರಮುಖವಾದವುಗಳು. ಈ ಪೈಕಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಧಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರಾಚೀನ ವಸ್ತುಗಳ ವಿಭಿನ್ನವಾದ ಸಂಗ್ರಹಾಲಯ ಮಂಜೂಷಾವೂ ಒಂದಾಗಿದೆ. ಇಲ್ಲಿ ಪುರಾತನ (ವಿಂಟೇಜ್) ಕಾರುಗಳು, ಪುರಾತನ ದೇವಾಲಯದ ರಥಗಳು ಮತ್ತು ಪ್ರಾಚೀನ ಕಲಾಕೃತಿಗಳನ್ನು ವೀಕ್ಷಣೆಗೆ ಇಡಲಾಗಿದೆ.

ಈ ಮ್ಯೂಸಿಯಂನ್ನು 1989 ರಲ್ಲಿ ಡಾ.ಹೆಗ್ಗಡೆಯವರು ಪ್ರಾರಂಭಿಸಿದರು. ಇಲ್ಲಿ ಸುಮಾರು ಹದಿನೇಳು ಸಾವಿರಕ್ಕೂ ಮಿಕ್ಕಿದ ಪುರಾತನ ಕಲಾಕೃತಿಗಳು, ಪ್ರಾಚೀನ ವಸ್ತುಗಳು ಮತ್ತು ಅವಶೇಷಗಳ ಅಪರೂಪದ ಬೃಹತ್ ಸಂಗ್ರಹವೇ ಇಲ್ಲಿದೆ. ಇಲ್ಲಿನ ಕೆಲವೊಂದು ಸಂಗ್ರಹಗಳು ಕೆಲವು ಶತಮಾನಗಳಷ್ಟು ಹಳೆಯದಾಗಿದ್ದು, ಇನ್ನೂ ಕೆಲವು ಸಂಗ್ರಹಗಳ ಮೂಲವೇ ತಿಳಿದಿಲ್ಲ ಎನ್ನುವುದು ಅಚ್ಚರಿ.
ವಸ್ತುಸಂಗ್ರಹಾಲಯ ಪ್ರಾರಂಭವಾದ ಬಗೆ:
ಪೂಜ್ಯ ಹೆಗ್ಗಡೆಯವರ ಹಿಂದಿನ ಬೀಡಿನ (‘ಬೀಡು’ ಎಂದರೆ ಹಲವಾರು ತಲೆಮಾರುಗಳು ವಾಸ್ತವ್ಯವಿದ್ದ ಮನೆ ಅಥವಾ ಹಳೆಯ ಮನೆತನದ ಮನೆ ಎಂಬರ್ಥವಿದೆ) ಸ್ಥಾಪನೆಯ ಸಂದರ್ಭದಲ್ಲಿ ಬೀಡಿನ ಅಟ್ಟದಲ್ಲಿ (ಮಾಳಿಗೆ) ಸಂಗ್ರಹಿಸಿಟ್ಟಿದ್ದ ಪ್ರಾಚೀನ ಮತ್ತು ಅಪರೂಪದ ಸಂಗ್ರಹಗಳೇ ವೈಯಕ್ತಿಕ ಸಂಗ್ರಹವಾಗಿ ಪ್ರಾರಂಭವಾಯಿತು. ಒಮ್ಮೆ ವಿದೇಶೀ ಸಂದರ್ಶಕರು ಈ ಸಂಗ್ರಹಗಳನ್ನು ವೀಕ್ಷಿಸುತ್ತಾ ಒಂದಷ್ಟು ವಿಧದ ಪುರಾತನ ವಸ್ತುಗಳನ್ನು ಒಟ್ಟುಗೂಡಿಸಲು ಪಟ್ಟಿಯನ್ನು ಮಾಡಲು ಸೂಚಿಸಿದ್ದರು. ಅದರಂತೆ ಹವ್ಯಾಸವಾಗಿ ಪ್ರಾರಂಭವಾದ ಈ ಪಟ್ಟಿ ಮಾಡುವಿಕೆ ಮತ್ತು ಸಂಗ್ರಹಣೆಯು ಮುಂದಕ್ಕೆ ಒಂದು ವಿಭಿನ್ನ ಮತ್ತು ವಿಶಾಲವಾದ ದೃಷ್ಟಿಕೋನವಾಗಿ ಬದಲಾಯಿತು. ಇದಕ್ಕೆ ಮತ್ತಷ್ಟು ಬೆಂಬಲ ಮತ್ತು ಸಹಕಾರ ನೀಡಿದವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ವಸ್ತುಗಳ ತಜ್ಞ ಪ್ರೊಫೆಸರ್ ತಿಪ್ಪೇಸ್ವಾಮಿ. ಇವರ ಸಹಾಯದಿಂದ ಪೂಜ್ಯ ಹೆಗ್ಗಡೆಯವರು ಅಮೂಲ್ಯವಾದ ವೈವಿಧ್ಯಮಯ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಸಂಕಲ್ಪ ಮಾಡಿದರು. ಸಣ್ಣದಾಗಿ ಪ್ರಾರಂಭವಾದ ಸಂಗ್ರಹಣೆಯ ಈ ಹವ್ಯಾಸದಿಂದ ಸಂಗ್ರಹವು ಹೆಚ್ಚಾದಂತೆ ಹಾಗೂ ದೊಡ್ಡ ಗಾತ್ರದ ವಸ್ತುಗಳನ್ನು ನಿರ್ವಹಿಸಲು ಹೆಚ್ಚಿನ ಸ್ಥಳಾವಕಾಶದ ಅಗತ್ಯ ಕಂಡುಬಂದಾಗ ವಸಂತ ಮಹಲ್ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿ ಅದಕ್ಕೆ 'ಮಂಜುಷಾ ಆಂಟಿಕ್ ಮ್ಯೂಸಿಯಂ' ಎಂದು ಹೆಸರಿಸಲಾಯಿತು.

ಡಾ.ಹೆಗ್ಗಡೆಯವರ ವಿಭಿನ್ನ ದೃಷ್ಟಿಕೋನ:
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಪುರಾತನ ಮತ್ತು ಪ್ರಸ್ತುತ ಅಷ್ಟಾಗಿ ಉಪಯೋಗಕ್ಕೆ ಬರದೇ ಇರುವ ವಸ್ತುಗಳನ್ನು ಎಲ್ಲೋ ಎಸೆದು ಅಥವಾ ಗುಜರಿಗೆ ಹಾಕಿಯೋ ಆ ವಸ್ತುವಿನ ಅಸ್ತಿತ್ವ ಮತ್ತು ಅದರೊಂದಿಗಿನ ನಂಟೇ ಇಲ್ಲದಂತೆ ಮಾಡಿಬಿಡುತ್ತೇವೆ. ಇದರಿಂದ ಆ ಒಂದು ವಸ್ತುವಿನ ಅಸ್ತಿತ್ವವು ಈ ಭೂಮಿಯಲ್ಲಿ ಇತ್ತು ಎನ್ನುವುದನ್ನು ಮುಂದಿನ ಪೀಳಿಗೆಯೂ ಮರೆತುಬಿಡುತ್ತದೆ. ಆದರೆ ಅಂಥ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಯೂ ಅವುಗಳನ್ನು ವಿಕ್ಷಿಸಲು ಅನುಕೂಲವಾಗುವಂತೆ ಮಾಡಿರುವುದು ಪೂಜ್ಯರ ವಿಭಿನ್ನ ಆಸಕ್ತಿ ಮತ್ತು ಅಭಿರುಚಿಗೆ ಉತ್ತಮ ಉದಾಹರಣೆ. ಅದೇ ರೀತಿ ಕೆಲವೊಂದು ವಸ್ತುಗಳನ್ನು ತಾವೇ ದೇಶವಿದೇಶದಾದ್ಯಂತ ಪ್ರಯಾಣಿಸಿ ಸಂಗ್ರಹಿಸಿ ತಮ್ಮ ಅಗಾಧ ಸಂಗ್ರಹಗಳ ವ್ಯಾಪ್ತಿಗೆ ತಂದಿದ್ದಾರೆ. ಡಾ.ಹೆಗ್ಗಡೆಯವರ ಈ ವಿಭಿನ್ನ ಅಭಿರುಚಿಗೆ ಪೂರಕವಾಗಿ ಕೆಲವರು ತಮ್ಮಲ್ಲಿ ಇದ್ದ ಪುರಾತನ ಮತ್ತು ಅಳಿದೇ ಹೋಗಲಿರುವ ವಸ್ತುಗಳನ್ನು ಹೆಗ್ಗಡೆಯವರ ಸಂಗ್ರಹಕ್ಕೆ ನೀಡಿ ಅವುಗಳು ಮುಂದಿನ ತಲೆಮಾರಿಗೂ ಲಭ್ಯವಾಗುವಂತೆ ಮಾಡುವಲ್ಲಿ ಸಹಕಾರ ನೀಡುತ್ತಿದ್ದಾರೆ. ಈ ಮೂಲಕ ಪುರಾತನ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ವೀಕ್ಷಿಸಲು ಸಾಧ್ಯವಾಗಿಸುವ ವಿಭಿನ್ನ ಕೈಂಕರ್ಯಕ್ಕೆ ಕೈಜೋಡಿಸಲು ಪ್ರೇರಣೆ ನೀಡುತ್ತಿದ್ದಾರೆ.
ಮಂಜೂಷಾದಲ್ಲಿ ಏನೇನಿವೆ?:
ಇಲ್ಲಿನ ಸಂಗ್ರಹಾಲಯದಲ್ಲಿ ಪ್ರಾಚೀನ ದೇವಾಲಯಗಳಲ್ಲಿ ಬಳಸಲಾಗುತ್ತಿದ್ದ ತಾಮ್ರ, ಹಿತ್ತಾಳೆ ಮತ್ತು ಕಂಚಿನ ಬೃಹತ್ ಗಾತ್ರದ ಹಂಡೆಗಳು, ಶಿಲಾಯುಗ ಕಾಲದ ಕಲ್ಲಿನ ಆಯುಧಗಳು, ಕಲ್ಲಿನ ಪಳೆಯುಳಿಕೆಗಳು, ಮಣ್ಣಿನ ಪಾತ್ರೆಗಳು, ಹಿಂದಿನ ಕಾಲದಲ್ಲಿ ಶುಭ ಸಮಾರಂಭದಲ್ಲಿ ಬಳಸುತ್ತಿದ್ದ ಶಂಖಗಳು, ಕಂಚಿನ ಗಂಟೆ, ಪೂಜಾ ಸಾಮಾಗ್ರಿಗಳು, ಬೃಹತ್ ಗಾತ್ರದ ತಿಮಿಂಗಿಲದ ಬೆನ್ನುಮೂಳೆ, ನಾಲ್ಕು ದಿಕ್ಕುಗಳಿಗೂ ಮುಖಮಾಡಿರುವ ಶಿವಲಿಂಗ ಕವಚ, ಹಳೆಯ ಕಾಲದ ಎತ್ತಿನ ಬಂಡಿ, ರಥ, ಪುರಾತನ ಹಸ್ತಪ್ರತಿಗಳ ಸಂಗ್ರಹ, ಪುರಾತನ ವರ್ಣಚಿತ್ರಗಳ ಸಂಗ್ರಹ, ಪ್ರಾಚೀನ ಬೃಹತ್ ಗಾತ್ರದ ವೀಣೆ, ವೈವಿಧ್ಯಮಯ ಸಂಗೀತ ವಾದ್ಯಗಳು, ಬೃಹತ್ ಗ್ರಾಮಫೋನ್, ಹಳೆಯ ರೇಡಿಯೋ, ಎಡಿಸನ್ಸ್ ಫೋನೋಗ್ರಾಫ್, ಹಳೆಯ ಕಾಲದ ಟೇಪ್ ರೆಕಾರ್ಡರ್ಸ್ ಮತ್ತು ರೇಡಿಯೋಗಳು, ಹಳೆಯ ಸಿನಿಮಾ ಪ್ರೊಜೆಕ್ಟರ್, ಚಲನಚಿತ್ರ ಚಿತ್ರೀಕರಣದ ಟ್ರಾಕ್ ಸಹಿತ ಕ್ಯಾಮರಾ, ವಿವಿಧ ಕಾಲಘಟ್ಟದ ಫೋಟೋ ಕ್ಯಾಮರಾಗಳು, ಹಳೆಯ ಕಾಲದ ಪ್ರದರ್ಶನ ಕಲೆಗಳ ಪೈಕಿ ದೈವಗಳ ಪ್ರಭಾವಳಿ, ಮುಖವಾಡ, ದೈವಗಳ ಮುಖವರ್ಣಿಕೆಗಳು, ಇಲ್ಲಿ ಕ್ರಿ.ಪೂ 1ನೇ ಶತಮಾನದಷ್ಟು ಹಳೆಯ ಮೌರ್ಯರ ಕಾಲದಿಂದ ಟೆರಾಕೋಟಾ ನಾಣ್ಯಗಳು, 300 ವರ್ಷ ಹಳೆಯ ವೀಣೆ, ವಿಧ್ವಾನ್ ವೀಣೆ ಶೇಷಣ್ಣರ ಸಂಗೀತ ವಾದ್ಯಗಳ ವಿವರಗಳಿರುವ ಪುರಾತನ ಪುಸ್ತಕ, ವಿವಿಧ ತಲೆಮಾರುಗಳ ಆಯುಧಗಳು, ಕತ್ತಿ, ಈಟಿ, ಭರ್ಚಿ, ಯುದ್ಧದಲ್ಲಿ ರಾಜರು ಬಳಸುತ್ತಿದ್ದ ಕಿರುಗತ್ತಿ, ಖಡ್ಗಗಳು, ಬೃಹತ್ ಗಾತ್ರದ ತುಪಾಕಿ (ಬಂದೂಕು)ಗಳು ಇವೆ. ಇಲ್ಲಿ ಬರೋಬ್ಬರಿ 6,000ಕ್ಕೂ ಹೆಚ್ಚು ತಾಳೆ ಗರಿ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವೂ ಇದೆ.

ಇಷ್ಟೇ ಅಲ್ಲದೇ ಹಳೆಯ ಟೈಪ್‌ರೈಟರ್, ದುರ್ಬೀನು, ವಿವಿಧ ಗಾತ್ರಗಳ ದೂರರ್ದರ್ಶಕ, ಸಮಯ ಅಳೆಯಲು ಬಳಸುತ್ತಿದ್ದ ಮಾಪಕಗಳು, ಗಡಿಯಾರ, ಹಾರ್ಮೋನಿಯಂ, ವೈವಿಧ್ಯಮಯ ಕೆತ್ತನೆಯ ಬಾಗಿಲುಗಳು, ಬಾಗಿಲಿನ ಫ್ರೇಂ, ಮಂಚಗಳು, ಕರ್ಚಿ, ಪುರಾತನ ರಾಜರ ಕಾಲದ ಕುಸುರಿ ಕೆತ್ತನೆಯ ಬಾಗಿಲು, ಮರದ ಊಟದ ಟೇಬಲ್‌ಗಳು, ಆನೆಯ ದಂತದಿಂದ ಮಾಡಿದ ಕಂಠಹಾರ, ದಂತದ ಕೆತ್ತನೆಗಳು, ದಂತದ ಅಲಂಕಾರಿಕ ವಸ್ತುಗಳು, ಗಾಜಿನ ಅಲಂಕಾರಿಕ ವಸ್ತುಗಳು, ಬರ್ಮಾ ದೇಶದ ಸಾಂಪ್ರದಾಯಿಕ ವಸ್ತುಗಳು, ಪುರಾತನ ಕಾಲದ ಕಲ್ಲಿನ ಕೆತ್ತನೆಗಳು, ಮರದ, ಕಂಚು, ಹಿತ್ತಾಳೆ ಹಾಗೂ ತಾಮ್ರದ ಗೃಹೋಪಯೋಗಿ ವಸ್ತುಗಳು, ಭತ್ತ ಮತ್ತು ಅಕ್ಕಿ ಅಳತೆ ಮಾಡುವ ಕಳಸೆ, ಅನ್ನ ಬಸಿಯುವ ಮರದ ಮರಾಯಿ, ಮರದ ಮತ್ತು ಮಣ್ಣಿನ ಸೌಟು, ಮರದ ಮತ್ತು ಕಲ್ಲಿನ ಕೃಷಿ ಉಪಕರಣಗಳು, ಕಂಬಳದ ಕೋಣಗಳಿಗೆ ಕಟ್ಟುವ ಲಗಾಮು, ಹಳೆಯ ಕಾಲದ ಚೆನ್ನೆ ಆಟದ ಮಣೆ, ಪಗಡೆ ಆಟದ ಮಣೆ ಮತ್ತು ಕಂಚಿನ ಅಲಂಕಾರಿಕ ಮಾದರಿಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಇವುಗಳನ್ನು ಅಧ್ಯಯನಾತ್ಮಕವಾಗಿ ವೀಕ್ಷಿಸುವ ಇರಾದೆ ನಿಮ್ಮಲ್ಲಿದ್ದರೆ ಇವೆಲ್ಲವನ್ನೂ ವೀಕ್ಷಿಸಲು ನಿಮಗೆ ಕನಿಷ್ಟ ಒಂದು ದಿನವಾದರೂ ಪೂರ್ತಿ ಬೇಕು. ಹೆಗ್ಗಡೆಯವರು ಸಂಗ್ರಹಿಸಿದ ಈ ಬೃಹತ್ ಸಂಗ್ರಹದಲ್ಲಿ ಭಾರತದ ವಿವಿಧ ಭಾಗಗಳ ಮತ್ತು ಸಾಗರೋತ್ತರ ದೇಶಗಳಿಂದ ಸಂಗ್ರಹಿಸಿದ ವಸ್ತುಗಳೂ ಸೇರಿರುವುದು ವಿಶೇಷ. ಇಲ್ಲಿನ ಬೃಹತ್ ಸಂಗ್ರಹವು ಭಾರತದ ಶ್ರೀಮಂತ ಐತಿಹಾಸಿಕ, ಸಾಂಪ್ರದಾಯಿಕ, ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಭವಿಷ್ಯದ ಪೀಳಿಗೆಗೆ ತೋರಿಸುವಲ್ಲಿನ ಹೆಗ್ಗಡೆಯವರ ಸಮರ್ಪಣೆಗೆ ಜ್ವಲಂತ ಸಾಕ್ಷಿಯಾಗಿದೆ.
ಪುರಾತನ ಕಾರುಗಳ ಸಂಗ್ರಹ:
ಡಾ.ಹೆಗ್ಗಡೆ ಅವರ ಪುರಾತನ ಕಾರುಗಳ ಸಂಗ್ರಹವು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಪಾಂಟಿಯಾಕ್, ಚೆವ್ರೊಲೆಟ್, ಕ್ಯಾಡಿಲಾಕ್, ಮೋರಿಸ್ ಮತ್ತು ಆಸ್ಟಿನ್ ಇತ್ಯಾದಿ ಹಲವಾರು ಕ್ಲಾಸಿಕ್ ಕಾರುಗಳಿವೆ. ಇಲ್ಲಿ ಇರುವ ಕಾರುಗಳ ಪೈಕಿ ಮೈಸೂರಿನ ಹಿಂದಿನ ರಾಜರಾದ ಜಯಚಾಮರಾಜೇಂದ್ರ ಒಡೆಯರ್‌ಗೆ ಸೇರಿದ್ದ ಮತ್ತು ಯು.ಕೆ ತಯಾರಿಸಿದ ಡೈಮ್ಲರ್ ಡಬಲ್ ಸಿಕ್ಸ್, ಗಾಂಧೀಜಿಯವರು ತಾವು ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದಾಗ ಬಳಸಿದ್ದ ದಂತದ ಬಣ್ಣದ ಸ್ಟೂಡ್‌ಬೇಕರ್ 1929 ಕಾರ್‌ಗಳು ಇಲ್ಲಿವೆ. ಪುರಾತನ ಕಾಲದ ಈ ಎಲ್ಲಾ ಕಾರುಗಳು ಸುಸ್ಥಿತಿಯಲ್ಲಿದ್ದು, ಎಲ್ಲವೂ ರಸ್ತೆಯಲ್ಲಿ ಚಲಿಸುವ ಸ್ಥಿತಿಯಲ್ಲಿವೆ. ಈ ಎಲ್ಲಾ ಕಾರುಗಳೂ ಹೊಸದರಂತೆ ಕಾಣುವುದು ಡಾ.ಹೆಗ್ಗಡೆಯವರ ಕಾರುಗಳ ನಿರ್ವಹಣೆಯ ಕುರಿತ ಕಾಳಜಿಗೆ ಹಿಡಿದ ಕೈಗನ್ನಡಿ. ಇಲ್ಲಿನ ಕಾರುಗಳ ನಿರ್ವಹಣೆಯ ರೀತಿಯು ಕಾರುಗಳ ನಿರ್ವಹಣೆಗೆ ಹೂಡಿದ ಹಣ, ವ್ಯಯಿಸಿದ ಸಮಯ ಮತ್ತು ಶ್ರಮದ ಬಗ್ಗೆ ಹೇಳುತ್ತದೆ. ಎಲ್ಲಾ ಕಾರುಗಳು ಉಕ್ಕಿನ ಕಮಾನುಗಳಲ್ಲಿ ದೃಢವಾಗಿ ಸುತ್ತುವರಿದಿದ್ದು, ಪ್ರತಿಯೊಂದು ಕಾರುಗಳ ವಿವರಗಳ ಮಾಹಿತಿ ಫಲಕಗಳನ್ನು ಅಂದವಾಗಿ ಪ್ರದರ್ಶಿಸಲಾಗಿದೆ. ಧರ್ಮಸ್ಥಳದ ಈ ವಿಂಟೇಜ್ ಕಾರ್ ಮ್ಯೂಸಿಯಂನ ಪ್ರವೇಶ ಶುಲ್ಕ ಕೇವಲ ರೂ.10/- ಮಾತ್ರ.

ಡಾ. ಹೆಗ್ಗಡೆಯವರು ಸ್ಥಾಪಿಸಿದ ಮಂಜುಷಾ ವಸ್ತುಸಂಗ್ರಹಾಲಯದಲ್ಲಿನ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ 2024 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆತ ಅತಿದೊಡ್ಡ ಏಕ-ವ್ಯಕ್ತಿ ವೈವಿಧ್ಯಮಯ ಪ್ರಾಚೀನ ವಸ್ತುಗಳ ಸಂಗ್ರಹದ ಸ್ಥಳವೆಂದು ಪ್ರಸಿದ್ಧಿಯನ್ನು ಪಡೆದಿದೆ. ಡಾ.ಹೆಗ್ಗಡೆ ಅವರ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಸ್ತುಗಳ ಸಂರಕ್ಷಣೆಯ ಅದಮ್ಯ ಉತ್ಸಾಹ ಮತ್ತು ನಿರ್ವಹಣೆಯ ಬದ್ಧತೆಯು ಯುವ ಜನತೆಯಲ್ಲೂ ಇತಿಹಾಸದ ಪುಟಗಳನ್ನು ಸೇರಿರುವ ಮತ್ತು ಸೇರಲಿರುವ ಅಮೂಲ್ಯ ವಸ್ತುಗಳನ್ನು ವೈಯಕ್ತಿಕವಾಗಿ ಸಂಗ್ರಹಿಸುವಂತೆ ಪ್ರೇರಣೆಯನ್ನು ನೀಡುವಂತಿದೆ.
ಡಾ.ಹೆಗ್ಗಡೆಯವರ ಮಂಜುಷಾದಲ್ಲಿ ವಸ್ತುಗಳನ್ನು ಸಂಗ್ರಹಿಸುವ ದೃಷ್ಟಿಕೋನವು ಇಲ್ಲಿ ಕೇವಲ ಕಲಾಕೃತಿಗಳನ್ನು ಸಂಗ್ರಹಿಸಿ ಇರಿಸುವುದಕ್ಕಿಂತ ಮಿಗಿಲಾಗಿ ಇನ್ನಷ್ಟು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ಮುಂದಿನ ಯುವಪೀಳಿಗೆಗೆ ಭೂತಕಾಲದಲ್ಲಿ ಕಳೆದು ಹೋಗಿರುವ ಪುರಾತನ ವಸ್ತುಗಳನ್ನು ಸಂರಕ್ಷಿಸಿ ಒಂದು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮೆಚ್ಚುಗೆಯನ್ನು ಮೂಡಿಸುವ ವಸ್ತುಸಂಗ್ರಹಾಲಯ ರಚಿಸುವುದು ಡಾ.ಹೆಗ್ಗಡೆ ಅವರ ದೂರದೃಷ್ಟಿಯಾಗಿದೆ.

ಮಂಜೂಷಾ ಮ್ಯೂಸಿಯಂ ವೀಕ್ಷಣೆಗೆ ಒಬ್ಬರಿಗೆ ತಲಾ ರೂ.20/- (08 ವರ್ಷ ಮೇಲ್ಪಟ್ಟವರಿಗೆ) ಪ್ರವೇಶ ಶುಲ್ಕವನ್ನು ವಿಧಿಸಲಾಗಿದ್ದು, 08 ವರ್ಷ ಕೆಳಗಿನ ಮಕ್ಕಳಿಗೆ, ಸೈನಿಕರಿಗೆ ಮತ್ತು ಪೋಲೀಸ್ ಸಿಬ್ಬಂದಿಗಳಿಗೆ ಹಾಗೂ ಶಾಲೆಗಳ ಅಧ್ಯಯನ ವಿದ್ಯಾರ್ಥಿಗಳ ತಂಡಗಳಿಗೆ ಉಚಿತ ಪ್ರವೇಶವಿದೆ. ಇಲ್ಲಿನ ಪುರಾತನ ವಸ್ತುಗಳ ಬೃಹತ್ ಸಂಗ್ರಹ, ಅವುಗಳ ಸಮರ್ಪಕ ಜೋಡಣೆ ಮತ್ತು ಅವುಗಳಿಗೆ ಒದಗಿಸಿರುವ ಮನಸ್ಸಿಗೆ ಮುದ ನೀಡುವ ಅದ್ಭುತ ಬೆಳಕಿನ ಸಂಯೋಜನೆ ವೀಕ್ಷಕರ ಕಣ್ಮನ ಸೆಳೆಯುತ್ತಿದೆ. ಈ ಮ್ಯೂಸಿಯಂ ವಾರದ ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ವೀಕ್ಷಿಸಲು ಲಭ್ಯವಿದ್ದು, ಬೆಳಗ್ಗೆ 09.30 ರಿಂದ ಸಾಯಂಕಾಲ 05.30 ವರೆಗೆ ತೆರೆದಿರುತ್ತದೆ. ಇಲ್ಲಿನ ವಿಶಿಷ್ಟ, ಅದ್ಭುತ ಮತ್ತು ವಿಶಾಲವಾದ ಸಂಗ್ರಹಗಳ ಬೃಹತ್ ಮ್ಯೂಸಿಯಂ ನಮ್ಮನ್ನು ಹಳೆಯ ಕಾಲದ ನೆನಪಿನ ಜೊತೆಗೆ ಹೊಸತೊಂದು ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಂಪರ್ಕಕ್ಕೆ: ದೂ: 08256-266624 ಮತ್ತು ಇ-ಮೈಲ್: manjushamuseum@gmail.com