ಮುತ್ತು ಮುತ್ತು ನೀರ ಹನಿಯ ತಾಂ ತನನ
ಪರ್ಲ್ ವ್ಯಾಲಿ ಎಂದು ಕರೆಯಲ್ಪಡುವ ಮುತ್ಯಾಲಮಡು ಜಲಪಾತದ ಅಂದ ಸವಿಯಬೇಕಾದರೆ 300 ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ವಯಸ್ಸಾದವರಿಗೆ ಇದು ಕಷ್ಟವೆನಿಸಬಹುದು.
- ಶೋಭಾ ಪುರೋಹಿತ್
ದಕ್ಷಿಣ ಬೆಂಗಳೂರಿನ ಆನೆಕಲ್ ತಾಲ್ಲೂಕಿನಿಂದ ಸುಮಾರು 5 ಕಿ ಮೀ, ಬೆಂಗಳೂರಿನಿಂದ 40 ಕಿ ಮೀ ದೂರದ ಈ ಮುತ್ಯಾಲಮಡು ಜಲಪಾತ ತುಂಬಾ ಸುಂದರ ತಾಣ.
ಆಗಸ್ಟ್ ನಿಂದ ನವೆಂಬರ್ ವರೆಗೆ ಮಳೆಗಾಲದ ಸಮಯದಲ್ಲಿ, ಸುಮಾರು 100 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಅಲ್ಲಿನ ಸಸ್ಯ ಸಮೂಹದ ಮೇಲೆ ಬಿದ್ದು ಹನಿ ಹನಿ ಮುತ್ತುಗಳಂತೆ ಬೀಳುವುದರಿಂದ ಇದಕ್ಕೆ ಮುತ್ಯಾಲಮಡು ಎಂದು ಹೆಸರು ಬಂತು. ಪರ್ಲ್ ವ್ಯಾಲಿ ಅಂತಲೂ ಕರೆಯುತ್ತಾರೆ. ಈ ಜಲಪಾತದ ಅಂದ ಸವಿಯಬೇಕಾದರೆ 300 ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ವಯಸ್ಸಾದವರಿಗೆ ಇದು ಕಷ್ಟವೆನಿಸಬಹುದು.

ಮೇಲ್ಗಡೆ ಬೆಟ್ಟ ಗುಡ್ಡಗಳು ಮತ್ತು ದಟ್ಟ ಮರಗಳಿಂದ ಕೂಡಿದ ಅರಣ್ಯ ಪ್ರದೇಶವಿದ್ದು, ಇದು ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಒಂಟಿಯಾಗಿ ಚಾರಣ ಹೊರಡುವುದು ಸೂಕ್ತವಲ್ಲ. ಇಲ್ಲಿ ಒಂದು ಪಾರ್ಕ್ ಕೂಡ ಇದ್ದು ಮಕ್ಕಳ ಆಟವಾಡಲು ಉಯ್ಯಾಲೆ ಇತ್ಯಾದಿ ಇವೆ. ಪಕ್ಷಿ ಪ್ರಿಯರಿಗೆ ಇಲ್ಲಿ ಬಗೆ ಬಗೆಯ ಪಕ್ಷಿಗಳು ಕಾಣಲು ಸಿಗುತ್ತವೆ. ಅವುಗಳ ಫೊಟೋಗಳನ್ನು ಸೆರೆ ಹಿಡಿಯಬಹುದು.
ಪ್ರವೇಶ ಶುಲ್ಕ ಅಂತ ರೂ. 20/- ಪಡೆಯುತ್ತಾರೆ. ಆದರೆ ಇದು ಸರ್ಕಾರದ ವ್ಯವಸ್ಥೆಯೋ, ಲೋಕಲ್ ಜನರ ಕೈವಾಡವೋ ತಿಳಿಯದು.
ಪೆಡಲ್ ಬೋಟ್ ಸವಾರಿ
ಪಕ್ಕದಲ್ಲೇ ಒಂದು ಕೆರೆ ಇದ್ದು ಪೆಡಲ್ ಬೋಟುಗಳಿವೆ. 2 ಸೀಟಿನ ಬೋಟಿಗೆ ರೂ 250/- ಮತ್ತು 4 ಸೀಟು ಆದರೆ ರೂ 350/- ದರಗಳಿವೆ. ಒಟ್ಟಿನಲ್ಲಿ ಒಂದು ದಿನದ ಪಿಕ್ನಿಕ್ ಗೆ ಹೇಳಿ ಮಾಡಿಸಿದ ಸ್ಥಳ.
ದಯವಿಟ್ಟು ಗಮನಿಸಿ ಪ್ಲೀಸ್
ಎಲ್ಲ ಪ್ರವಾಸಿ ತಾಣಗಳಂತೆ ಈ ಸ್ಥಳ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪಾರ್ಕ್ ನಲ್ಲಿ ಮುಳ್ಳು ಕಂಟಿಗಳು ಬೆಳೆದುಕೊಂಡಿವೆ. ನೀರಿನ ಬಾಟಲಿ, ಪೇಪರ್ ಇತ್ಯಾದಿಗಳನ್ನು ಬಳಸಿ ಬಿಸಾಕಿ ಅಂದಗೆಡಿಸಿದ್ದಾರೆ. ಸರ್ಕಾರ ಗಮನ ಹರಿಸಿ ಅಭಿವೃದ್ಧಿ ಪಡಿಸಲಿ ಅಂತ ಇಲ್ಲಿನ ಜನ ಒತ್ತಾಯಿಸುತ್ತಿದ್ದಾರೆ; ಜೊತೆಗೆ ನಾಗರಿಕರೂ ಶಿಸ್ತು ಪಾಲಿಸಿ ಈ ಸ್ಥಳವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ಮೆರೆಯಬೇಕಿದೆ. ಇಲ್ಲಿಗೆ ಹತ್ತಿರ ಒಂದು ಪುರಾತನ ಶಿವನ ದೇವಾಲಯವಿದ್ದು, ನಿತ್ಯ ಬೆಳಿಗ್ಗೆ ಪೂಜೆ ನಡೆಯುತ್ತದೆ. ಅಲ್ಲಿಗೂ ಭೇಟಿ ಕೊಡಬಹುದು.

ದಾರಿ ಹೇಗೆ?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ಮೂಲಕ ಆನೆಕಲ್ ತಲುಪಿ ಅಲ್ಲಿಂದ ಬಾಡಿಗೆ ವಾಹನ ಅಥವಾ ಆಟೋದಲ್ಲಿ ಹೋಗಬಹುದು. ನಿಮ್ಮ ಸ್ವಂತ ವಾಹನ ಇದ್ದರೆ ಮತ್ತೂ ಒಳ್ಳೆಯದೇ.
ಮಂಗಗಳಿವೆ ಎಚ್ಚರ
ಅಲ್ಲಿ ಕೆ ಎಸ್ ಟಿ ಡಿ ಸಿ ಅವರ ಮಯೂರ ಹೊಟೇಲ್ ಇದೆ ಮತ್ತು ಸಾಕಷ್ಟು ವಿಶಾಲವಾದ ವಾಹನ ನಿಲುಗಡೆ ಸ್ಥಳವಿದೆ. ಪಾರ್ಕಿಂಗ್ ಶುಲ್ಕ ಕೊಟ್ಟು ಕಾರು ನಿಲ್ಲಿಸಿ ನೆಮ್ಮದಿಯಿಂದ ಕಾಲ ಕಳೆಯಬಹುದು. ಇಲ್ಲಿ ತಿಂಡಿ, ಕಾಫಿ ಸಿಗುವುದರಿಂದ ಜೊತೆಗೆ ಕೊಂಡೊಯ್ಯುವ ಅಗತ್ಯ ಇಲ್ಲ. ಹಾಗೊಮ್ಮೆ ಒಯ್ದರೂ, ಅಲ್ಲಿರುವ ಮಂಗಗಳ ಹಾವಳಿ ವಿಪರೀತವಿದ್ದು ಪೊಟ್ಟಣ ತೆಗೆದು ತಿನ್ನುವುದು ಅಸಾಧ್ಯ.