- ಪೂರ್ಣಚಂದ್ರ ಹೆಗಡೆ

ಬ್ಯುಸಿ ಶಹರ ಬೆಂಗಳೂರಿನ ಮಧ್ಯೆ ಹಸಿರಿನ ಪರಿಸರದಲ್ಲಿ ಭಾರತೀಯ ವಿಜ್ಞಾನ ಸಂಸ್ಥಾನ ನೆಲೆಗೊಂಡಿದೆ. ಟಾಟಾ ಇನ್ಸ್ಟಿಟ್ಯೂಟ್ ಅಥವಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನ ಸಂಸ್ಥಾನ) ಎಂಬ ಹೆಸರು ಇದಕ್ಕಿದ್ದು, 1909ರಲ್ಲಿ ಈ ವಿದ್ಯಾಲಯ JN ಟಾಟಾರವರ ಕನಸು ಮತ್ತು ಮೈಸೂರು ಒಡೆಯರ್‌ ಸಂಸ್ಥಾನದ ಕೊಡುಗೆಯಿಂದ ಬೆಳೆದು ಬಂದಿದೆ. ಭಾರತದ ಹಲವಾರು ಭಾಗಗಳಲ್ಲಿ ನೆಲೆಯಾಗಿರುವ ಐಐಟಿಗೆ ಸಂಶೋಧನೆ ಮತ್ತು ವಿದ್ಯಾಭ್ಯಾಸಕ್ಕೆ ಸಾಕಷ್ಟು ಮಹತ್ವವಿದೆ. ಆದರೆ, ಭಾರತದಲ್ಲಿ ಏಕೈಕ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಸಿ) ಇದ್ದು, ಅದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವುದು ವಿಶೇಷ.

ಜಂತರ್‌ ಮಂತರ್‌ 18ನೆಯ ಶತಮಾನದ ಖಗೋಳ ವಿಜ್ಞಾನದ ಸಾಕ್ಷಿ

ಐಐಎಸ್‌ಸಿ ಇತಿಹಾಸ

ಮೈಸೂರಿನ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿ ವಿಲಾಸರವರು ಅಂದು ನೀಡಿದ್ದ 370 ಎಕರೆ ಜಾಗದಲ್ಲಿ ಈ ಸಂಸ್ಥಾನ ಆರಂಭವಾಗಿತ್ತು. ಈ ಸಂಸ್ಥಾನ ಇಂದು ಚಿತ್ರದುರ್ಗದ ಚಳ್ಳಕೆರೆಯ 1500 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ತನ್ನ ಬ್ರಾಂಚ್‌ ಅನ್ನು ಸ್ಥಾಪಿಸಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT), JN ಟಾಟಾ, JRD ಟಾಟಾ, ಸಿ. ವಿ. ರಾಮನ್, ಸರ್. ಎಮ್. ವಿಶ್ವೇಶ್ವರಯ್ಯ, ಸತೀಶ್ ಧವನ್ ಹೀಗೆ ಹಲವಾರು ಆಗ್ರಗಣ್ಯ ವ್ಯಕ್ತಿಗಳು ಇಲ್ಲಿ ಅದ್ಯಯನ ಮಾಡಿದ್ದಾರೆ.

New Project (2)

ಮುಕ್ತ ದಿನಕ್ಕೆ ನೀವೂ ಹೋಗಿ ಬರಬಹುದು

ಐಐಎಸ್‌ಸಿಯಲ್ಲಿ ನಡೆಯುವ ಅಧ್ಯಯನಗಳನ್ನು ಜನಸಾಮಾನ್ಯರು, ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ನೋಡಬಹುದು. ಇದಕ್ಕೆ ಸಂಸ್ಥಾನ ಹಮ್ಮಿಕೊಳ್ಳುವ ವಿಶೇಷ ಕಾರ್ಯಕ್ರಮ ಓಪನ್ ಡೇ ಅಥವಾ ಮುಕ್ತ ದಿನ ಅವಕಾಶ ಕಲ್ಪಿಸಿಕೊಡುತ್ತದೆ. ಹೊರ ಜಗತ್ತಿನ ಜನರಿಗೆ ಅಂದು ಐಐಎಸ್‌ಸಿ ಬಾಗಿಲು ತೆರೆದಿರುತ್ತದೆ. ಈ ಕಾರ್ಯಕ್ರಮ 1956ರಲ್ಲಿ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಈ ಕುರಿತು ಮಾಹಿತಿ ನೀಡಲು ಅಂದು ನೀಡಲಾಗುತ್ತಿದ್ದ ಭಿತ್ತಿ ಪತ್ರ ಮತ್ತು ಪೋಸ್ಟರ್‌ಗಳ ಬದಲಿಗೆ ಓಪನ್ ಡೇ ಅಪ್ಲಿಕೇಶನ್ ಬಂದಿದೆ. ಆದರೆ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಐಐಎಸ್‌ಸಿ ಮುಕ್ತ ದಿನ ಎಂದರೆ ವಿಜ್ಞಾನದ ಹಬ್ಬ. 2026ನೆಯ ಸಾಲಿನ ಓಪನ್ ಡೇ ಮಾರ್ಚ್ 7ರಂದು ನಡೆಯಿತು. ಇದು ವಿಜ್ಞಾನದ ಹಬ್ಬ ಅಥವಾ ಜಾತ್ರೆಯಂತೆ ಕಂಡಿತ್ತು ಎಂದರೆ ಅಚ್ಚರಿಯಿಲ್ಲ.

New Project (3)

ವೈಜ್ಞಾನಿಕ ವಿಷಯಗಳ ವಿಶೇಷ ಪ್ರದರ್ಶನ

ಐಐಎಸ್‌ಸಿಯ ಹಲವಾರು ವಿಭಾಗಗಳಿಂದ ಅಧ್ಯಯನದ ಪ್ರದರ್ಶನಗಳು ಇದ್ದುದು ಈ ಬಾರಿ ಮುಕ್ತ ದಿನದಲ್ಲಿದ್ದುದು ಗಮನ ಸೆಳೆಯುತಿತ್ತು. ಐಐಎಸ್‌ಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀಕ್ಷಣೆಗೆ ಬರುವ ಎಲ್ಲರಿಗೂ ಅರ್ಥವಾಗುವಂತೆ ತಮ್ಮ ಅದ್ಯಯನ, ಪ್ರದರ್ಶನಗಳ ಕುರಿತು ವಿವರಿಸುತ್ತಿದ್ದರು. ಈ ಮುಕ್ತ ದಿನದ ಪ್ರದರ್ಶನಗಳು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ವೈಜ್ಞಾನಿಕ ವಿಷಯದ ಬಗೆಗಿನ ಅರಿವು ಹೆಚ್ಚುವಂತೆ ಮಾಡುತ್ತವೆ. ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಫಿಸಿಕ್ಸ್(Quantum Physics), ಮೆಟೀರಿಯಲ್ಸ್, ಏರೋನಾಟಿಕಲ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಬಯೋ ಮೆಡಿಕಲ್ ಇಂಜಿನಿಯರಿಂಗ್ ಹಾಗೂ ಅಂತರ್‌ ವಿಭಾಗೀಯ ಅಧ್ಯಯನದ ಹತ್ತು ಹಲವಾರು ವಿಭಾಗಗಳು, ವಿಷಯಗಳು ಹೀಗೆ ಎಲ್ಲಾ ಮಾಹಿತಿಗಳನ್ನು ತಿಳಿಯಲು ಐಐಎಸ್‌ಸಿಯ ಈ ಮುಕ್ತ ದಿನ ಸಹಕಾರಿಯಾಗುತ್ತದೆ.

ಒಂದು ದಿನದಲ್ಲಿ ಎಲ್ಲವನ್ನು ಅರಿತುಕೊಳ್ಳುವುದಂತೂ ಅಸಾಧ್ಯ. ಅಷ್ಟು ವಿಷಯಗಳನ್ನು ಇಲ್ಲಿ ನೋಡಿಕೊಂಡು ಬರಬಹುದು. ಪೋಸ್ಟರ್ ಪ್ರಸ್ತುತಿ, ಪ್ರಾಜೆಕ್ಟ್ ಪ್ರದರ್ಶನ, ಹಲವು ಸ್ಪರ್ಧೆಗಳು ಕೂಡಿ ಮಕ್ತ ದಿನದಂದು ಇಡೀ ಐಐಎಸ್‌ಸಿ ಆವರಣ ತುಂಬಿ ಹೋಗಿರುತ್ತದೆ. ಈ ಸಂಗಮ ಜನರ ವಿಜ್ಞಾನದಡೆಗಿನ ಒಲವನ್ನು ದ್ವಿಗುಣ ಮಾಡುವುದರಲ್ಲಿ ಸಂದೇಹವಿಲ್ಲ.

ದಾರಿ ಹೇಗೆ?

ಬೆಂಗಳೂರಿನ ಹಸಿರು ಮೆಟ್ರೋ ಲೈನ್‌ ಮೂಲಕ ಪ್ರಯಾಣ ಆರಂಭಿಸಿದರೆ 'ಯಶವಂತಪುರ' ಅಥವಾ 'ಸ್ಯಾಂಡಲ್ ಸೋಪ್ ಫ್ಯಾಕ್ಟರಿ' ಹತ್ತಿರದ ಮೆಟ್ರೋ ನಿಲ್ದಾಣಗಳು. ಅಲ್ಲಿಂದ ಐಐಎಸ್‌ಸಿಗೆ ಆಟೋ ಮೂಲಕ ತಲುಪಬಹುದು. ಬಿಎಂಟಿಸಿ ಬಸ್‌ ಸಂಚಾರ ಸೌಲಭ್ಯವೂ ಇದೆ.