ಇತ್ತೀಚೆಗೆ ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಸಿಕ್ಕ ಹಿನ್ನೆಲೆಯಲ್ಲಿ ಉತ್ಖನನ ಕಾರ್ಯಕ್ಕೆ ಪುರಾತತ್ವ ಇಲಾಖೆ ಕೈ ಹಾಕಿತ್ತು. ಸದ್ಯ ಉತ್ತಕನನದ ವೇಳೆ ಕೋಟೆಯ ಗೋಡೆಯಲ್ಲಿ ಲೋಹದ ಶಿವಲಿಂಗ ಪತ್ತೆಯಾಗಿದೆ. ಆದರೆ, ಈ ಶಿವಲಿಂದ ಯಾವ ಲೋಹದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.

ಈ ಮೊದಲು ಲಕ್ಕುಂಡಿ ಪ್ರದೇಶ ಸಪ್ತ ಗ್ರಾಮಗಳ ಆಗ್ರಹಾರ ವಾಗಿತ್ತು. ಈ ಅಗ್ರಹಾರ ಸೊಕಮನ ಕಟ್ಟಿ, ತಂಗಾ ಬೆಂಚಿ, ಜವಳಬೆಂಚಿ, ನರಸಿಪುರ, ಮೊಟಬಸಪ್ಪ, ಬೂದಿ ಬಸಪ್ಪ, ಲಕ್ಕುಂಡಿ ಗ್ರಾಮಗಳನ್ನು ಒಳಗೊಂಡಿತ್ತು. ವಿಜಯನಗರದ ಅರಸರ ಅಧಿಪತ್ಯದ ನಂತರ ಏಳು ಗ್ರಾಮದ ಜನರು ಲಕ್ಕುಂಡಿಗೆ ಬಂದು ನೆಲೆಸಿದರು ಎಂದು ಇತಿಹಾಸ ಹೇಳುತ್ತದೆ.

ಇಲ್ಲಿ 101 ದೇಗುಲಗಳು 101 ಕೆರೆಗಳು ಈ ಲಕ್ಕುಂಡಿಯಲ್ಲಿದ್ದವು ಎಂದು ಇತಿಹಾಸವಿದ್ದು, ಕಲ್ಯಾಣಿ ಚಾಲುಕ್ಯರು, ವಿಜಯನಗರದ ಅರಸರ ಆಳಿಕೆಯಲ್ಲಿ ಈ ಸ್ಥಳಕ್ಕೆ ಅಗಾದ ಪ್ರಾತಿನಿದ್ಯ ಇತ್ತು. ದಾನಚಿಂತಾಮಣಿ ಅತ್ತಿಮಬ್ಬೆ ಈ ಸ್ಥಳದಲ್ಲಿ ಸಾಕಷ್ಟು ದಾನದತ್ತಿಗಳನ್ನು ನೀಡಿದ್ದರು ಜಿನಬಸದಿಗಳ ನಿರ್ಮಾಣಕ್ಕೂ ಸಾಕಷ್ಟು ಕೊಡುಗೆ ನೀಡಿದ್ದರು. ಇಲ್ಲಿ ಟಂಕಸಾಲೆಗಳಿದ್ದವು. ಈ ಇತಿಹಾಸಕ್ಕೆ ಸಂಬಂಧಿಸಿದ ಪುರಾತನ ಕಾಲದ ಕಲ್ಲಿನ ವಿಗ್ರಹಗಳು, ಅವಶೇಷಗಳು, ಪುರಾವೆಗಳು ಲಕ್ಕುಂಡಿಯ ಅಲ್ಲಲ್ಲಿ ಸಿಗುತ್ತಲೇ ಇದ್ದವು. ಬೆಳ್ಳಿ, ಬಂಗಾರ, ಮುತ್ತು, ರತ್ನ, ಹವಳಗಳ ತುಣುಕುಗಳೂ ಸಾಕಷ್ಟು ವರ್ಷಗಳಿಂದ ಸಿಗುತ್ತಲೇ ಇವೆ ಎಂದು ಸ್ಥಳಿಯರು ಹೇಳಿದ್ದಾರೆ.

ಸದ್ಯ ಈ ಪ್ರದೇಶದಲ್ಲಿ ಉತ್ಖನನಗಳು ನಡೆಯುತ್ತಿದ್ದು, ಇದರಿಂದ ಲಕ್ಕುಂಡಿಯ ಮಹೋನ್ನತ ಇತಿಹಾಸಕ್ಕೆ ಪುರಾತತ್ವ ಇಲಾಖೆ ಬೆಳಕು ಚೆಲ್ಲಬೇಕಿದೆ.