Monday, February 23, 2026
Monday, February 23, 2026

ಮೈಸೂರಿನಲ್ಲಿ ಬೆಕ್ಕುಗಳು!

ಕಾಡು ಪ್ರಾಣಿಗಳಿಗಾಗಿ ವಿಶಾಲವಾದ ಮೃಗಾಲಯಗಳಿವೆ, ಮೀನುಗಳಿಗಾಗಿ ಸುಂದರವಾದ ಅಕ್ವೇರಿಯಂಗಳೂ ನಿರ್ಮಾಣವಾಗಿದೆ. ಆದರೆ ಮುದ್ದಾದ ಬೆಕ್ಕುಗಳಿಗೆ? ಬೆಕ್ಕುಗಳಿಗಾಗಿಯೇ ದೇಶದ ಮೊದಲ ಬೆಕ್ಕುಗಳ ಮನೋರಂಜನಾ ಉದ್ಯಾನವನ ಮತ್ತು ವಸ್ತುಸಂಗ್ರಹಾಲಯ ʻಜಿನ್ ಮಿನ್ ಕ್ಯಾಟ್ ವರ್ಲ್ಡ್ʼ ಇದೀಗ ಮೈಸೂರಿನಲ್ಲಿ ನಿರ್ಮಾಣವಾಗಿದೆ. ಸುಮಾರು 13–14 ವಿಭಿನ್ನ ತಳಿಗಳ 20ಕ್ಕೂ ಹೆಚ್ಚು ಬೆಕ್ಕುಗಳು ಇಲ್ಲಿದ್ದು ಬೆಕ್ಕು ಪ್ರಿಯರ ಮನ ಗೆದ್ದಿದೆ.

ಸಾಕುಪ್ರಾಣಿಗಳಲ್ಲಿ ನಾಯಿ, ಬೆಕ್ಕುಗಳ ಬಗೆಗೆ ಒಲವಿರದ ಮಂದಿಯೇ ಕಡಿಮೆ. ಅವುಗಳನ್ನು ಪ್ರೀತಿಯಿಂದ ಆರೈಕೆ ಮಾಡುವ ವಿಧಾನ, ಆಹಾರ ಕ್ರಮ, ಬೆಚ್ಚನೆಯ ಸೂರನ್ನು ಕಲ್ಪಿಸಿಕೊಡುವ ರೀತಿ ಎಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾದರೆ ಬೆಕ್ಕುಗಳ ಪಾಲನೆಯ ಸರಿಯಾದ ವಿಧಾನ ಹೇಗೆ? ಈ ಪ್ರಶ್ನೆಗೆ ಉತ್ತರವೆಂಬಂತೆ ಇತ್ತೀಚೆಗಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶದ ಮೊದಲ ಬೆಕ್ಕು ಮ್ಯೂಸಿಯಂ ಪ್ರಾರಂಭವಾಗಿದೆ. ತಮಾಷೆಯಾಗಿ ಹೇಳುವುದಾದರೆ, ಬೆಕ್ಕುಗಳಿಗೆ ಮೈಸ್-ಊರಿಗಿಂತ ಪ್ರಶಸ್ತ ಜಾಗ ಇನ್ನ್ಯಾವುದುದಿದೆ ಅಲ್ವೇ?

ಜಿನ್ ಮಿನ್ ಕ್ಯಾಟ್ ಮ್ಯೂಸಿಯಂನ ಹುಟ್ಟು

ಮೈಸೂರು ನಿವಾಸಿ ಮತ್ತು ಬೆಕ್ಕು ಪ್ರಿಯರಾದ ಶರತ್ ಕುಮಾರ್‌ ಹಾಗೂ ಶಿಲ್ಪ ಜತೆಯಾಗಿ ʻಜಿನ್ ಮಿನ್ ಕ್ಯಾಟ್ ವರ್ಲ್ಡ್ʼನ್ನು ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ನಿರ್ಮಿಸಿ ಪ್ರಾಣಿ ಪ್ರಿಯರಿಗೆ ಮುಕ್ತವಾಗಿಸಿದ್ದಾರೆ. ಈ ಮೂಲಕ ಖುದ್ದು ತಮಗೆ ಬೆಕ್ಕುಗಳ ಮೇಲಿರುವ ಅಪಾರವಾದ ಪ್ರೀತಿಯನ್ನು ವ್ಯಕ್ತಪಡಿಸುವುದಷ್ಟೇ ಅಲ್ಲದೆ ವಿಭಿನ್ನ ತಳಿಯ ಬೆಕ್ಕುಗಳನ್ನು ಪರಿಚಯಿಸುವುದು ಹಾಗೂ ಅವುಗಳ ಪಾಲನೆಯ ಬಗೆಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿರುವ ಬೆಕ್ಕುಗಳು ಮಾರಾಟಕ್ಕಿಲ್ಲ. ಆದರೆ ಜಗತ್ತಿನಾದ್ಯಂತ ಇರುವ ಬೆಕ್ಕುಗಳ ಬಗೆಗೆ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶವಿದೆ.

Untitled design (44)

ಬೆಕ್ಕು ಸಂಗ್ರಹಾಲಯವಷ್ಟೇ ಅಲ್ಲ; ಶೈಕ್ಷಣಿಕ ತಾಣವೂ ಹೌದು

ವಾಸ್ತವವಾಗಿ, ಶ್ವಾನಗಳಲ್ಲಿರುವಂತೆ ಬೆಕ್ಕುಗಳಲ್ಲೂ ಸುಮಾರು 50 ರಿಂದ 60 ತಳಿಗಳಿವೆಯಾದರೂ ಈ ಬಗ್ಗೆ ಹೆಚ್ಚಿನವರಲ್ಲೂ ಮಾಹಿತಿಯ ಕೊರತೆಯಿದೆ. ವಾತಾವರಣ, ಆಹಾರದ ಕಾರಣಕ್ಕಾಗಿ ಆ ಎಲ್ಲಾ ತಳಿಗಳ ಬೆಕ್ಕುಗಳನ್ನೂ ಭಾರತಕ್ಕೆ ತಂದು ಸಾಕುವುದು ಕಷ್ಟಸಾಧ್ಯ. ಆದರೂ ʻಜಿನ್ ಮಿನ್ ಕ್ಯಾಟ್ ಮ್ಯೂಸಿಯಂʼನಲ್ಲಿ ಭಾರತೀಯ ತಳಿಯ 7-8 ಬೆಕ್ಕುಗಳು ಮಾತ್ರವಲ್ಲದೆ ಮೈಸೂರಿನ ವಾತಾವರಣಕ್ಕೆ ಒಗ್ಗಿಕೊಳ್ಳಬಲ್ಲ ವಿದೇಶಿಯ ತಳಿಯ ಕೆಲವು ಬೆಕ್ಕುಗಳನ್ನೂ ಕಾಣಬಹುದು. ಸುಮಾರು 13–14 ವಿಭಿನ್ನ ತಳಿಗಳ 20ಕ್ಕೂ ಹೆಚ್ಚು ಬೆಕ್ಕುಗಳು ಇಲ್ಲಿದ್ದು ಬೆಕ್ಕು ಪ್ರಿಯರ ಮನ ಗೆದ್ದಿದೆ.

ʻಜಿನ್ ಮಿನ್ ಕ್ಯಾಟ್ ವರ್ಲ್ಡ್ʼ ಕೇವಲ ಬೆಕ್ಕು ಸಂಗ್ರಹಾಲಯ ಮಾತ್ರವಲ್ಲ. ಬೆಕ್ಕುಗಳ ಬಗೆಗೆ ಶಿಕ್ಷಣವನ್ನು ನೀಡುವ ತಾಣವೂ ಹೌದು. ಇಲ್ಲಿ ಭೇಟಿ ನೀಡುವ ಮೂಲಕ ನೀವು ಪೆಟ್‌ ಪೇರೆಂಟಿಂಗ್‌ ಬಗೆಗೆ ವಿಶೇಷವಾದ ಒಳನೋಟಗಳನ್ನು ಪಡೆಯಬಹುದು, ಬೆಕ್ಕುಗಳ ಸ್ವಭಾವದ ಬಗೆಗೆ ತಿಳಿದುಕೊಳ್ಳಬಹುದು. ಬೆಕ್ಕುಗಳಿಗೆ ನೀಡಬೇಕಾದ ಆಹಾರ ಮತ್ತು ಲಸಿಕೆಯ ಪ್ರಾಮುಖ್ಯ ಮಾತ್ರವಲ್ಲದೆ, ಅವುಗಳ ಆರೈಕೆಯ ವೇಳೆ ಗಮನಿಸಬೇಕಾದ ವಿಚಾರಗಳ ಬಗೆಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ

ಈ ಬೆಕ್ಕು ಸಂಗ್ರಹಾಲಯವು ಸಂದರ್ಶಕರಿಗೆ ಜಗತ್ತಿನ ಪ್ರಮುಖ ಬೆಕ್ಕುಗಳ ಸ್ವಭಾವವನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಬೆಕ್ಕುಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಮ್ಯೂಸಿಯಂನಲ್ಲಿ ಅವುಗಳ ಆಟ, ವಿಶ್ರಾಂತಿ ಪಡೆಯುವ ರೀತಿ, ಜನರೊಂದಿಗೆ ಅವುಗಳು ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ನೋಡಲು ಅವಕಾಶ ಸಿಗುತ್ತದೆ.

Untitled design (45)

ಕಾರ್ಟೂನ್‌ ಲೋಕದಿಂದ ಸೆಲ್ಫಿ ಸ್ಪಾಟ್‌ಗಳ ವರೆಗೂ

ವಸ್ತುಸಂಗ್ರಹಾಲಯವು ಬೆಕ್ಕುಗಳಿಗೆ ಸಂಬಂಧಿಸಿದ ಕಲೆ, ಶಿಲ್ಪಗಳು ಮತ್ತು ವರ್ಣಚಿತ್ರಗಳ ಆಕರ್ಷಕ ಪ್ರದರ್ಶನವೂ ಇವೆ. ಕಾರ್ಟೂನ್‌ ಲೋಕದಲ್ಲೂ ಮಕ್ಕಳನ್ನಷ್ಟೇ ಅಲ್ಲದೆ, ಎಲ್ಲ ವಯಸ್ಸಿನವರನ್ನೂ ಬೆರಗುಗೊಳಿಸುವ ಟಾಮ್‌ ಆಂಡ್‌ ಜೆರಿಯ ಟಾಮ್‌ ಬೆಕ್ಕು, ಡೊರೆಮಾನ್‌ ಕಾರ್ಟೂನ್‌ನಲ್ಲಿ 22ನೇ ಶತಮಾನದ ರೊಬೋಟಿಕ್‌ ಬೆಕ್ಕು, ಟಾಕಿಂಗ್‌ ಟಾಮ್‌, ಹಲೋ ಕಿಟ್ಟೀ, ಫ್ರೆಂಚ್‌ ಆನಿಮೇಟೆಡ್‌ ಕಾರ್ಟೂನ್‌ ಓಜಿ ಆಂಡ್‌ ದಿ ಕಾಕ್ರೋಚಸ್‌ ನಲ್ಲೂ ಇರುವ ಬೆಕ್ಕುಗಳ ಪಾತ್ರಗಳನ್ನು ಇಲ್ಲಿ ಚಿತ್ರಿಸುವ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿ ಹಾಡಲಾಗಿದೆ. ಸೆಲ್ಫಿ ಸ್ಪಾಟ್‌ಗಳನ್ನು ಹುಡುಕುವವರಿಗಾಗಿಯೇ ವಿಶೇಷ ವಿನ್ಯಾಸದ ಬೆಕ್ಕುಗಳ ಚಿತ್ರಗಳನ್ನೂ ಸಿದ್ಧಪಡಿಸಿದ್ದು, ಹೀಗೂ ಒಂದು ಮ್ಯೂಸಿಯಂ ನಿರ್ಮಿಸುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಮೂಡಿಸುವುದು ಸುಳ್ಳಲ್ಲ.

Untitled design (42)

ಜಿನ್ ಮಿನ್ ಕ್ಯಾಟ್ ಮ್ಯೂಸಿಯಂ ಭೇಟಿಯ ಸಮಯ:

ಬೆಳಗ್ಗೆ 10ರಿಂದ ಸಂಜೆ 8:30ವರೆಗೆ

ಟಿಕೆಟ್‌ ದರವೆಷ್ಟು ಗೊತ್ತಾ?

ವಯಸ್ಕರಿಗೆ 99 ರು. ಹಾಗೂ ಮಕ್ಕಳಿಗೆ 69 ರು. ಮಾತ್ರ

---

ಚಿಕ್ಕ ವಯಸ್ಸಿನಿಂದಲೂ ನನಗೆ ಬೆಕ್ಕುಗಳೆಂದರೆ ಅತಿಯಾದ ಪ್ರೀತಿ. ಆಗಿನಿಂದಲೂ ಅವುಗಳ ಬಗ್ಗೆ ಅಧ್ಯಯನ ಮಾಡುತ್ತಲೇ ಇದ್ದೆ. ಈಗ ಬೆಕ್ಕುಗಳ ಬಗೆಗೆ ನಾನು ತಿಳಿದುಕೊಂಡಿರುವ ಮಾಹಿತಿಗಳನ್ನು ಈ ಮ್ಯೂಸಿಯಂ ಮೂಲಕ ಅನೇಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಬೆಕ್ಕುಗಳು ಮಾಂಸಾಹಾರಿಗಳಾಗಿರುವುದರಿಂದ ಮೂರು ಹೊತ್ತೂ ಇಲ್ಲಿರುವ ಬೆಕ್ಕುಗಳಿಗೆ ವಿಶೇಷ ಆಹಾರವನ್ನೇ ನೀಡುತ್ತೇವೆ. ಬೆಳಗ್ಗೆ ಕ್ಯಾಟ್‌ ಫುಡ್‌, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಚಿಕನ್‌ ನೀಡುತ್ತೇವೆ. ರಾತ್ರಿ ಎಂಟರ ಸುಮಾರಿಗೆ ಲಾಸ್ಟ್‌ ಮೀಲ್ಸ್ ನೀಡುತ್ತೇವೆ. ಅವುಗಳ ನಿತ್ಯದ ಚಟುವಟಿಕೆಗಳಿಗೆ ಸೂಕ್ತವಾಗುವಂತೆಯೇ ವಿಶೇಷ ವಿನ್ಯಾಸದೊಂದಿಗೆ ಅವುಗಳಿಗೆ ಸೂರನ್ನು ನಿರ್ಮಾಣ ಮಾಡಿದ್ದೇನೆ. ಅಲ್ಲದೆ ಬೆಕ್ಕುಗಳ ಆರೈಕೆಗಾಗಿಯೇ ವಿಶೇಷ ಸಿಬ್ಬಂದಿಗಳೂ ಇಲ್ಲಿದ್ದು, ಸಂದರ್ಶಕರಿಗೆ ಬೆಕ್ಕುಗಳ ಬಗೆಗೆ ಸಾಕಷ್ಟು ಮಾಹಿತಿಯನ್ನೂ ನೀಡುತ್ತಾರೆ.
- ಶರತ್‌ ಕುಮಾರ್‌, ಸ್ಥಾಪಕರು

ವಿಳಾಸ:

151, ನಂಜನಗೂಡು-ಊಟಿ ರಸ್ತೆ,

ಕಿಲ್ಲೆ ಮೊಹಲ್ಲಾ, ಮೈಸೂರು,

ಕರ್ನಾಟಕ 570004,

ಭಾರತ

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..