• ಅಪರ್ಣಾ ಹೆಗಡೆ

ಆಗತಾನೆ ಫಸ್ಟ್‌ ಇಯರ್ ಡಿಪ್ಲೋಮ ಮುಗಿದಿತ್ತು. ಜುಲೈದಲ್ಲಿ ಸೆಕೆಂಡ್‌ ಇಯರ್ ತರಗತಿಗಳು ಶುರುವಾಗುವ ಕಾರಣ ಜೂನ್‌ನಲ್ಲಿಯೂ ರಜಾ ಇತ್ತು. ಮನೆಯಲ್ಲಿ ಕಾಲಹರಣ ಮಾಡುತ್ತಿದ್ದ ನನ್ನನ್ನು ತನ್ನ ಊರು ಕೇದಿಗೇರೆಗೆ ಕರೆದುಕೊಂಡು ಹೋದದ್ದು ಅತ್ತೆ. ತೀರ್ಥಹಳ್ಳಿ ತಾಲೂಕಿನ ಒಂದು ಪುಟ್ಟ ಬ್ರಾಹ್ಮಣರ ಅಗ್ರಹಾರ. ಅತ್ತೆಯ ಮನೆಯ ಹಿಂದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಒಬ್ಬ ಅಕ್ಕೋರಿರೊ ಶಾಲೆಗೆ ಒಪ್ಪತ್ತು ಟೈಂ ಪಾಸ್ ಟೀಚರಾಗಿ ನಾನೂ ಹೋಗುತಿದ್ದೆ. ಪುಟ್ಟ ಪುಟ್ಟ ಮಕ್ಕಳ ಜತೆ ಅದೊಂಥರ ಖುಷಿ.

ಒಂದು ಭಾನುವಾರ ಕವಿಮನೆ ಕುಪ್ಪಳ್ಳಿಗೆ ಹೋಗ್ಬೇಕು ಅಂತಾಯ್ತು. ಆಗ ನಮಗೆ ಜತರೆಯಾಗಿದ್ದು, ಕೇದಿಗೇರೆ ಊರಿನವರೇ 5 ಮಕ್ಕಳು, ಅತ್ತೆಯ ಮಕ್ಕಳಿಬ್ಬರು, ಪಕ್ಕದ ಮನೆಯ ಮೂರು ಮಕ್ಕಳು. ಹೆಚ್ಚು ದೂರ ಏನು ಇರದೆ ಇದ್ದುದ್ದರಿಂದ ಮತ್ತು ಈಗಾಗಲೇ ಮಕ್ಕಳು ಬಹಳಷ್ಟು ಸರತಿ ಹೋಗಿ ಪರಿಚಯ ಇದ್ದಿದ್ದರಿಂದ ದೊಡ್ಡವರು ಯಾರು ಬೇಡ ಎಂದೂ ಡಿಸೈಡ್ ಆಯ್ತು.

Untitled design (37)

ಸಂಜೆ ಅತ್ತೆ ಅವರ ಒಂದು ಬ್ಲೌಸ್ ತಂದು ಆ ಕಡೆ ಈ ಕಡೆ ಅಂತ ನನ್ನ ಅಳತೆಗೆ ಸರಿಯಾಗಿ ಹೊಂದಿಸಿ ಸ್ಟಿಚ್‌ ಮಾಡಿದ್ರು. ಇದೇನಪ್ಪಾ! ಕವಿಮನೆಗೆ ಹೋಗಲಿಕ್ಕೆ ಹೀಗೂ ರೂಲ್ಸ್‌ ಇದೆಯಾ ಅಂದ್ಕೊಂಡೆ. ಆದರೆ, ಆಮೇಲೆ ಗೊತ್ತಾಯ್ತು ಅಲ್ಲಿನ ಲೋಕಲ್ ಬಸ್‌ನವರು ಸ್ಕೂಲ್ ಪಿಕ್ನಿಕ್ ಅಂದ್ರೆ ಚಾರ್ಜ್ ತಗೋಳಲ್ಲಾ ಅಂತ.

5 ಜನ ಮಕ್ಕಳಿಗೆ ಸೀರೆ ಉಟ್ಕೊಂಡು ಅಕ್ಕೋರಾಗಿ ಮೊಸರನ್ನ, ಚಿತ್ರಾನ್ನ ಬಾಕ್ಸ್‌ಗೆ ಹಾಕ್ಕೊಂಡು ಕುಪ್ಪಳ್ಳಿ ಕವಿಮನೆಗೆ ಹೋದೆ. ನಾನು ಮೊದಲ ಸಲ ಕವಿಮನೆ ನೋಡಿದ್ದು. ಕುವೆಂಪುರವರ ಜೀವನ, ಸ್ನೇಹ ವಲಯದ, ಕೌಟುಂಬಿಕ ಬಂಧದ ಎಲ್ಲ ಪಳೆಯುಳಿಕೆಗಳು ಇಲ್ಲಿ ನನಗೆ ನೋಡಲಿಕ್ಕೆ ಸಿಕ್ಕಿದ್ದು ಅತೀವ ಸಂತಸದ ಕ್ಷಣ. ಕವಿಗಳಿಗೆ ಬೇಕಾದ ಮೌನದ ವರ್ತುಲ ಇಲ್ಲಿ ಈಗಲೂ ಜೀವಂತವಾಗಿದೆ. ಅಂತರ್ಮುಖಿಗಳಾಗಲು ಇಷ್ಟ ಪಡುವಂಥ ಕವಿಗಳಿಗೆ ಆ ಮೌನದಲ್ಲಿಯೇ ಮಾತಾಗುವ, ಹಾಡಾಗುವ ಕಲೆ ಸಿದ್ಧಿಸಿರುತ್ತದೆ. ಸಾಹಿತ್ಯ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಒಂದು ದಿನವನ್ನು ಆಹ್ಲಾದವಾಗಿ ಕಳೆಯಲಿಕ್ಕೆ ಅನುಕೂಲವಾದ ಸ್ಥಳ.

ʻಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆʼ ಎಂದು ಕುವೆಂಪುರವರು ಹೇಳಿಕೊಳ್ಳುತ್ತಾರೆ. ಪ್ರಕೃತಿಗೂ ಸ್ತ್ರೀಗೂ, ದೇವರಿಗೂ ಪ್ರಕೃತಿಗೂ ಹೀಗೆ ಎರಡು ಭಾವದಲ್ಲಿ ಕವಿತೆಗಳನ್ನ ಕುವೆಂಪುರವರು ರಚಿಸಿದ್ದು, ಅವರು ಪ್ರಕೃತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಕವಿಮನೆಗೆ ಹೋದಾಗ ತಿಳಿದು ಬಂತು. ಇದರ ಜತೆಗೆ ಅಕ್ಕೋರಾಗಿಸಿದ ಕುವೆಂಪು ಮನೆಯ ಪ್ರವಾಸ, ನೆನಪಿನಿಂದ ಅಳಿಸುವುದೇ ಇಲ್ಲ. ಅದರ ನಂತರ ಅದೆಷ್ಟೋ ಬಾರಿ ಕವಿಮನೆಗೆ ಬೇಟಿ ನೀಡಿದ್ದರೂ ಅಕ್ಕೋರಾಗಿ ಮೊದಲ ಬೇಟಿಯ ನೆನಪು ಮಧುರ.