• ಸಚಿನ್‌ ಹೊನ್ನೇಸರ

ಉತ್ತರ ಕರ್ನಾಟಕದ ಸೌಂದರ್ಯ ಇರುವುದು ಅಲ್ಲಿನ ಭಾಷೆ, ಸಂಸ್ಕೃತಿ, ಖಾದ್ಯ, ಇತಿಹಾಸ, ಆತಿಥ್ಯದಲ್ಲಿ. ಕೆಲಸದ ವಿಷಯವಾಗಿ ರಾಯಚೂರಿನ ಲಿಂಗಸೂಗೂರು ತಾಲೂಕಿನ ಮಸ್ಕಿಯಿಂದ ಮುದಗಲಕ್ಕೆ ಹೋಗುತ್ತಿದ್ದೆ. ಅಲ್ಲಿ ಕಾಣುವ ಸಾಮಾನ್ಯ ದೃಶ್ಯವಿದು - ತನ್ನನ್ನು ತಾನು ಆಕಾಶಕ್ಕೆ ಒಡ್ಡಿಕೊಂಡ ಬಯಲಿನಲ್ಲಿ ಅಲ್ಲಲ್ಲಿ ಬಂಡೆಯ ಗುಡ್ದಗಳು ಇರುತ್ತವೆ. ಆ ಬಂಡೆಗಳನ್ನು ಅಷ್ಟು ಚಂದವಾಗಿ ಯಾರು ಜೋಡಿಸಿಟ್ಟರು ಎಂಬ ಪ್ರಶ್ನೆ ನೋಡುಗರನ್ನು ಕಾಡುತ್ತದೆ. ಅದು ಮೊಳೆ ಹೊಡೆದಂತೆ, ಕೆಳಗೆ ಬೀಳದೆ, ಗಾಳಿಯ ರಭಸವನ್ನು ಎದುರಿಸಿ ನಿಂತಿರುವ ಬಗ್ಗೆ ಅಚ್ಚರಿಯೂ ಮೂಡುತ್ತದೆ. ಗುಂಪಿನಲ್ಲಿದ್ದೂ ಏಕಾಂಗಿತನವನ್ನು ಮೆರೆವ ಈ ಕಲ್ಲುಗಳನ್ನು ದಾಟಿ ಮುದಗಲಕ್ಕೆ ತಲುಪುವಾಗ ಕಂಡದ್ದು ಪೇಟೆಯ ಮಧ್ಯೆ ತಣ್ಣಗೆ ಮಲಗಿರುವ ಒಂದು ಕಲ್ಲಿನ ಕೋಟೆ. ಯಾವ ಜಂಜಾಟಗಳಿಗೂ ಜಗ್ಗದ ಕೋಟೆ. ಯಾರ ದಾಳಿಗೂ ಬಗ್ಗದ ಕೋಟೆ.

ಇದನ್ನೂ ಓದಿ: ಮುಂಬಯಿ–ಬೆಂಗಳೂರು ನಡುವೆ 2ನೆಯ ವಂದೇ ಭಾರತ್ ಸ್ಲೀಪರ್ ರೈಲು

ಕೋಟೆಯ ಬಾಗಿಲುಗಳ ಮೂಲಕ ವಾಹನಗಳು ಹೋಗಬಹುದು. ಹೀಗೆ ಒಳಗೆ ಹೋದರೆ ಹಲವು ಜನರು ವಾಸಿಸುವ ಇಡಿಯ ಊರಿದೆ. ಕೋಟೆಯ ಪಳೆಯುಳಿಕೆಗಳಿವೆ. ಇಲ್ಲಿನ ಜನರ ಕಣ್ಣಲ್ಲಿ ನಮ್ಮ ಕೋಟೆ ಎಂಬ ಹೆಮ್ಮೆ ಕಾಣುತ್ತದೆ. ಅಲ್ಲಿನ ಕಲ್ಲುಗಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ಹಲವು ಕಲ್ಲುಗಳು ದಾಳಿಗೆ ಒಳಗಾಗಿ ತಮ್ಮ ವ್ಯಥೆಯನ್ನು ಹೇಳುತ್ತಿವೆ. ಹೀಗೆ ಕೋಟೆಯ ಪ್ರತಿಯೊಂದು ಕಲ್ಲೂ ಒಂದೊಂದು ಕಥೆ ಹೇಳುತ್ತದೆ. ಒಂದು ಕಲ್ಲಿನ ಬಳಿ ನಿಂತು ನಾನು ಪ್ರಶ್ನೆಗಳ ಮೂಲಕ ಕುಟುಕಿದೆ. ಆ ಕಲ್ಲು ನನಗೆ ಕೊಟ್ಟ ಉತ್ತರವನ್ನು ನಾನು ನಿಮಗೆ ದಾಟಿಸುತ್ತೇನೆ.

mudagal fort

ಮುದಗಲ ಹೆಸರಿನ ವೃತ್ತಾಂತವೇನು?

ಬೇರೆ ಬೇರೆ ಕಾಲದ ಜನರು ಅನ್ಯಾನ್ಯ ಹೆಸರಿನಿಂದ ಈ ಊರನ್ನು ಕರೆದಿದ್ದಾರೆ. ಮುದ್ಗಲ ಎಂಬ ರಾಜರ್ಷಿಯ ಕಾರಣ ಊರಿಗೆ ಈ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಇಲ್ಲಿರುವ ಗ್ರಾನೈಟ್ ಕಲ್ಲುಗಳನ್ನು ನೋಡಿ ಜನರು ಮೊದಗೌಲ ಎಂದು ಕರೆಯುತ್ತಿದ್ದರು ಅಂತಲೂ ಹೇಳುತ್ತಾರೆ. ರಾಜರ ಕಾಲದಲ್ಲಿ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಎಂಬಾತ ಮೊದಗೌಲ ಎಂದು ತನ್ನ ಪ್ರವಾಸಕಥನದಲ್ಲಿ ಬರೆದನಂತೆ. ಆಮೇಲೆ ಜನರು ಮೆದು ಕಲ್ಲು, ಮುತ್ತಿನ ಕಲ್ಲು, ಮುದ್ದು ಕಲ್ಲು ಅಂತೆಲ್ಲ ಕರೆದರು. ಈಗ 'ಮುದಗಲ’, ‘ಮುದಗಲ್ಲ' ಎಂಬಲ್ಲಿ ಬಂದು ನಿಂತಿದೆ. ಆದರೆ ವಿಷಯ ಏನೆಂದರೆ ನಮ್ಮಿಂದಲೇ ಈ ಊರಿಗೆ ಹೆಸರು ಬಂದಿದೆ ಅಂತ ನಾನು ನಂಬುತ್ತೇನೆ. ಇದು ನಮಗೆ ಹೆಮ್ಮೆಯೂ ಹೌದು. ನಮ್ಮನ್ನು ಮುತ್ತಿನ ಕಲ್ಲು ಅಂತ ಕರೆಯಬಹುದು. ನಾವು ಇಲ್ಲಿನ ಜನರ ಮುದ್ದಿನ ಕಲ್ಲೂ ಹೌದು.

ಕೋಟೆಯ ಇತಿಹಾಸ ಏನು?

ಸರಿಯಾದ ಕಲ್ಲಿಗೆ ಈ ಪ್ರಶ್ನೆಯನ್ನು ಕೇಳಿದ್ದೀಯ. ಯಾಕೆ ಗೊತ್ತ? ನಾನು ಇಲ್ಲಿ ಮೊದಲಿಂದಲೂ ಇದ್ದವ. ಹಾಗಾಗಿ ನನಗೆ ಎಲ್ಲ ಕಲ್ಲುಗಳ ಜಾತಕ ತಿಳಿದಿದೆ. ಇಲ್ಲಿಗೆ ನನ್ನ ಪದಾರ್ಪಣೆ ಆಗಿದ್ದು ಕ್ರಿ.ಶ. 1053ರಲ್ಲಿ. ಮುದ್ದಪ್ಪ ರೆಡ್ಡಿ ಎಂಬ ಜಮೀನುದಾರ ದೇವಗಿರಿ ಯಾದವರ ಕಾಲದಲ್ಲಿ ಈ ಕೋಟೆಯನ್ನು ಕಟ್ಟಿಸಿದನು. ಮೇಲಿನಿಂದ ನೋಡಿದವರು ಕೋಟೆ ಆಯತಾಕಾರದಲ್ಲಿ ಇದೆ ಎಂದು ಹೇಳಿರುವುದನ್ನು ನಾನು ಕೇಳಿದ್ದೇನೆ. ಅಲ್ಲದೆ ಈ ಕೋಟೆಗೆ ಎರಡು ಸುತ್ತಿನ ಭದ್ರತೆ ಇದೆ. ಮೊದಲ ಸುತ್ತು ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದೆ. ಎರಡನೆಯ ಸುತ್ತಿನ ಕಲ್ಲುಗಳನ್ನು ತರಿಸಿ ಕಟ್ಟಿಸಿದ್ದು ಆದಿಲ್ ಶಾಹ್‌ನ ಕಾಲದಲ್ಲಿ. ಆಗಾಗ ಆಯಾ ಕಾಲಕ್ಕೆ ಬೇಕಾದ ಹಾಗೆ ದುರಸ್ತಿಯನ್ನು ಮಾಡಿದ್ದಾರೆ. 14 ರಾಜಮನೆತನಗಳು ಈ ಕೋಟೆಯನ್ನು ಆಳಿವೆ. ಕೋಟೆಯಲ್ಲಿ ಸಿಗುವ ಹಲವಾರು ಶಿಲಾಶಾಸನಗಳು ಇಲ್ಲಿನ ಇತಿಹಾಸವನ್ನು ಸಾರುತ್ತಿದೆ. ಅಲ್ಲದೆ ಕೋಟೆಯಲ್ಲಿರುವ ಮರದ ಬಾಗಿಲಿನ ಮೇಲೂ ಒಂದು ಕೆತ್ತನೆಯ ಶಾಸನವಿದೆ. ಜತೆಗೆ ಇಲ್ಲಿನ ವಾಸ್ತುಶಿಲ್ಪ ಕೂಡ ಆಯಾ ಕಾಲದ ಇತಿಹಾಸದ ಬಗ್ಗೆ ಸುಳಿವು ಕೊಡುತ್ತವೆ.

ಇದನ್ನೂ ಓದಿ: ಮೋದಿಯ ಪ್ರವಾಸಗಳು ಜಾಲಿ ಟ್ರಿಪ್‌ ಅಲ್ಲ.. ಇದು ಪ್ರಧಾನಿ ಪ್ರವಾಸ!

ರಕ್ಷಣಾ ವ್ಯವಸ್ಥೆ ಹೇಗಿತ್ತು?

ಕೋಟೆಯ ಸುತ್ತ ದೊಡ್ದ ಕಂದಕವಿದೆ. ಅದರಲ್ಲಿ ಸದಾ ನೀರು ಇರುತ್ತದೆ. ನೀರಿನಲ್ಲಿ ಮೊಸಳೆ ಇರುತ್ತಿತ್ತು. ವೈರಿಗಳು ಬರುವುದನ್ನು ತಡೆಯಲು ಈ ರೀತಿಯ ಪರಿಕಲ್ಪನೆಯನ್ನು ಮಾಡಲಾಗಿತ್ತು. ಮೇಲೆ ಫಿರಂಗಿಗಳು ತಯಾರಿರುತ್ತಿದ್ದವು. ಈಗಲೂ ತುಕ್ಕು ಹಿಡಿದ, ಆದರೆ ಬಲಿಷ್ಠವಾಗಿರುವ ಫಿರಂಗಿಯನ್ನು ನೀನು ಕೋಟೆಯ ಮೇಲೆ ಹೋಗಿ ನೋಡಬಹುದು. ಸೈನಿಕರು ಎದುರಾಳಿಗಳಿಗೆ ಕಾಣದ ಹಾಗೆ ಮರೆಯಲ್ಲಿ ಕೂತು ವೀಕ್ಷಣೆ ಮಾಡಬಹುದಾದ ಸ್ಥಳಗಳು ಕೋಟೆಯಲ್ಲಿದ್ದವು. ಅಲಲ್ಲಿ ರಹಸ್ಯ ಬಾಗಿಲುಗಳು, ದಾರಿಗಳು, ಯಾರಿಗೂ ಕಾಣದ ತಾಣಗಳು, ರಕ್ಷಣಾ ಗೋಪುರಗಳು ಇದ್ದವು.

ಒಂದುವೇಳೆ ಇದನ್ನೆಲ್ಲ ಮೀರಿ ಬಂದರು ಅಂತಿಟ್ಟುಕೊ, ದೊಡ್ಡ ಮರದ ಬಾಗಿಲನ್ನು ದಾಟಿ ಬರುವುದು ಕಷ್ಟವಿತ್ತು. ಅದು ವಿಜಯನಗರ ಶೈಲಿಯ ಬಾಗಿಲು. ಈಟಿಯಂತೆ ಮೊಣಚಾದ ಆಕಾರದಂತಿರುವ ಕಬ್ಬಿಣದ ಮುಳ್ಳುಗಳು ಬಾಗಿಲ ತುಂಬ ಇವೆ. ಆನೆಗಳ ಮೂಲಕ ಬಾಗಿಲನ್ನು ಒಡೆದು ಬರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿಸಲಾಗಿತ್ತು. ಇದನ್ನು ಮುಳ್ಳಿನ ಬಾಗಿಲು ಅಂತಲೇ ಕರೆಯುತ್ತಿದ್ದರು. ಈಗಲೂ ಈ ಬಾಗಿಲು ಸುಸ್ಥಿರವಾಗಿವೆ. ನೋಡುವುದನ್ನು ಮರೆಯಬೇಡ.

mudgal fort

ಹಾಗಿದ್ದರೆ ಇದನ್ನೆಲ್ಲ ಮೀರಿ ಯಾರೂ ಬಂದಿಲ್ಲವೇ?

ಹಾಗೇನಿಲ್ಲ. ರಾಯಚೂರು ದೋ-ಅಬ್ ಪ್ರದೇಶದ ಮೇಲೆ ಮುದಗಲ ಕೋಟೆಗೆ ಹೆಚ್ಚಿನ ಪ್ರಭಾವವಿತ್ತು. ಮುದಗಲನ್ನು ಗೆದ್ದರೆ ಇಡೀ ಪ್ರದೇಶ ಸಿಕ್ಕಂತೆ. ಹಾಗಾಗಿ ದಾಳಿಗಳು ಆಗಿವೆ. ವಿಜಯನಗರ- ಬಹಮನಿ ಸುಲ್ತಾನರ ನಡುವಿನ ತಾಳಿಕೋಟ ಯುದ್ಧಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಈ ಪ್ರದೇಶದಲ್ಲಿ ಯಾವುದೇ ರಾಜರು ಗೆದ್ದರೂ ಅವರು ವಿಜಯಪತಾಕೆ ಹಾರಿಸಲು ಈ ಕೋಟೆಗೆ ಬಂದೇ ಬರುತ್ತಿದ್ದರು. ಅವರ ಆಳ್ವಿಕೆಯ ಕುರುಹುಗಳನ್ನು ಛಾಪಿಸುತ್ತಿದ್ದರು. ಆದಿಲ್ ಶಾಹ್‌ನ ಕಾಲದಲ್ಲಿ ಅವನ ಅಧಿಕಾರಿ ಮಲ್ಲಿಕ್ ಮುರಾದ ಖಾನ್ ರಕ್ಕಸತಂಗಡಿ ಯುದ್ಧದಲ್ಲಿ ಗೆದ್ದ ನಂತರ ವಿಜಯದ ಪ್ರತೀಕವಾಗಿ ಈ ಕೋಟೆಯ ಉತ್ತರ ಬಾಗಿಲನ್ನು ಕಟ್ಟಿಸಿದ. ಅದನ್ನು ವಿಜಯದ ಬಾಗಿಲು ಅಂತಲೇ ಕರೆಯುತ್ತಾರೆ.

ಇದು ಯಾವ ಶೈಲಿಯ ಕೋಟೆ?

ನಿನ್ನ ಪ್ರಶ್ನೆಯ ಮರ್ಮ ನನಗೆ ಅರ್ಥವಾಯಿತು. ಈ ಕೋಟೆ ಹಿಂದೂ ಮತ್ತು ಮುಸಲ್ಮಾನರ ಆಳ್ವಿಕೆಯನ್ನು ಕಂಡಿದ್ದಕ್ಕಾಗಿ ಹೀಗೆ ಕೇಳುತ್ತಿದ್ದೀಯ. ಇಲ್ಲಿ ಎರಡೂ ಸಮುದಾಯದ ಛಾಯೆ ಇದೆ. ಹಿಂದೂ ಹಾಗೂ ಮುಸಲ್ಮಾನ ಶೈಲಿಯ ಕೆತ್ತನೆಗಳಿವೆ, ಇಬ್ಬರಿಗೂ ಸಂಬಂಧಿಸಿದ ವಾಸ್ತುಶಿಲ್ಪ ಕಾಣುತ್ತದೆ. ಹಿಂದೂಗಳು, ಮುಸಲ್ಮಾನರು ಇಬ್ಬರೂ ಕೋಟೆಯನ್ನು ನೋಡಲು ಇಂದೂ ಬರುತ್ತಾರೆ. ಅದಕ್ಕಿಂತ ವಿಶೇಷ ಎಂದರೆ ಎರಡೂ ಸಮುದಾಯಗಳು ಸೇರಿ ಪ್ರತಿ ವರ್ಷ ಆಚರಿಸುವ ಮುದಗಲ ಮೊಹರಂ.

ಏನಿದು ಮುದಗಲ ಮೊಹರಂ?

ದಕ್ಷಿಣ ಭಾರತದಲ್ಲೇ ವಿಜೃಂಭಣೆಯ ಮೊಹರಂ ಆಚರಣೆ ಆಗುವುದು ಮುದಗಲದಲ್ಲಿ ಎಂಬ ಅಭಿಪ್ರಾಯವಿದೆ. ಲಕ್ಷಾಂತರ ಜನರು ಬಂದು ಸೇರುತ್ತಾರೆ. ಮುಸಲ್ಮಾನರಷ್ಟೇ ನಿಷ್ಠೆ, ಆಸಕ್ತಿಯಿಂದ ಹಿಂದೂಗಳೂ ಇದಕ್ಕೆ ಕೈಜೋಡಿಸುತ್ತಾರೆ. ಪ್ರತಿ ವರ್ಷ ನಡೆಯುವ ಈ ಮೊಹರಂನಲ್ಲಿ ಜನರು ಪಂಜು ಹಿಡಿದು ದೇವರ ಪೆಟ್ಟಿಗೆಯನ್ನು ಊರ ತುಂಬ ಮೆರವಣಿಗೆ ಮಾಡುತ್ತಾರೆ. ಬಂದವರು ಹರಕೆ ಮಾಡಿಕೊಳ್ಳುತ್ತಾರೆ, ತೀರಿದ ಹರಕೆಯ ಸೇವೆ ಸಲ್ಲಿಸುತ್ತಾರೆ, ಜನಪದ ಕಲೆಗಳ ಪ್ರದರ್ಶನ ನಡೆಯುತ್ತದೆ. ಹೀಗೆ ಎಲ್ಲ ಸಮುದಾಯವೂ ಒಟ್ಟಾಗಿ ಸೇರಿ ಮುದಗಲದಲ್ಲಿ ಮೊಹರಂ ಆಚರಿಸುತ್ತಾರೆ. ಇದರ ವೈಭವ ತಿಳಿಯಬೇಕೆಂದರೆ ಒಮ್ಮೆ ಮೊಹರಂ ಸಮಯಕ್ಕೆ ಬಾ, ಆಗ ನಿನಗೆ ನಿಜವಾದ ಹಿಂದು-ಮುಸಲ್ಮಾನ ಸಾಮರಸ್ಯ ಏನೆಂದು ತಿಳಿಯುತ್ತದೆ.

mudgal fort

ಈಗ ರಾಜರಿಲ್ಲ, ದಾಳಿಗಳಿಲ್ಲ. ನಿನಗೆ ರಕ್ಷಣೆಯ ಹೊಣೆಯಿಲ್ಲ. ಇದರ ಬಗ್ಗೆ ನಿನ್ನ ಅನಿಸಿಕೆ?

ನೀನು ಹೇಳಿದ್ದು ಅರ್ಧ ಸರಿ. ಅರ್ಧ ತಪ್ಪು. ಈಗ ರಾಜರಿಲ್ಲ ಎಂಬುದು ಸರಿ. ದಾಳಿಗಳಿಲ್ಲ ಎಂಬುದು ತಪ್ಪು. ದಾಳಿಯ ಪ್ರಕಾರ ಬೇರೆ ಆಗಿದೆ ಅಷ್ಟೆ. ಅಂದು ರಾಜಾಶ್ರಯದ ಕಾಲದಲ್ಲಿ ವೈರಿಗಳು ಬಂದಾಗ ಎಲ್ಲವನ್ನು ಧ್ವಂಸ ಮಾಡುತ್ತಿದ್ದರು. ನಮ್ಮನ್ನೂ ಬಿಡುತ್ತಿರಲಿಲ್ಲ. ನಂತರ ಬರುತ್ತಿದ್ದ ರಾಜರು ಮತ್ತೆ ದುರಸ್ತಿ ಮಾಡುತ್ತಿದ್ದರು. ಈಗ ಹಾಗಲ್ಲ. ಪ್ರವಾಸಕ್ಕಾಗಿ ಬರುವ ಜನರು ನಮ್ಮ ಮೇಲೆ ದಾಳಿ ಮಾಡುತ್ತಾರೆ. ಇರುವ ಕೆತ್ತನೆಗಳನ್ನು ಹಾಳು ಮಾಡುತ್ತಾರೆ, ತಮ್ಮ ಪ್ರೇಮವನ್ನು ಅಜರಾಮರವಾಗಿಸುವ ಪ್ರಯತ್ನದಲ್ಲಿ ತಮ್ಮ ಹೆಸರುಗಳನ್ನು ಕೆತ್ತಲು ಪ್ರಯತ್ನಿಸುತ್ತಾರೆ. ಕಂಡಕಂಡಲ್ಲಿ ಕಸವನ್ನು ಎಸೆಯುತ್ತಾರೆ. ಇವೆಲ್ಲ ನನ್ನ ಎದುರಿಗೇ ನಡೆದರೂ ನಾನು ಸುಮ್ಮನಿರದೆ ಬೇರೆ ದಾರಿ ಇಲ್ಲ. ಕೋಟೆಯ ಗೋಡೆಯೊಂದು ಬಿದ್ದು ವರ್ಷಗಳ ಮೇಲಾಯ್ತು ಆದರೆ ಅದನ್ನು ಕೇಳುವವರಿಲ್ಲ. ಸುತ್ತಲೂ ನೋಡು. ನನ್ನ ಪರಿಸ್ಥಿತಿ ನಿನಗೇ ತಿಳಿಯುತ್ತದೆ.

ಅತ್ಯಂತ ನೋವು ತರುವ ಸಂಗತಿ ಎಂದರೆ ರಾಜರನ್ನು, ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತಿದ್ದ ನಮಗೇ ಈಗ ರಕ್ಷಣೆಯ ಅಗತ್ಯವಿದೆ. ಆದರೆ ಈ ಐತಿಹಾಸಿಕ ಮುದಗಲ ಕೋಟೆಗೆ ರಕ್ಷಣೆ ನೀಡುವವರಿಲ್ಲ. ಇಂದಿನ ವ್ಯವಸ್ಥೆಗೆ ನಾವು ಬೇಕಿಲ್ಲ. ನಾವು ಕೇವಲ ಕಲ್ಲುಗಳು.

ದಾರಿ ಹೇಗೆ?

ಬೆಂಗಳೂರಿನಿಂದ ಸುಮಾರು 400 ಕಿ. ಮಿ. ದೂರವಿರುವ ಮುದಗಲಕ್ಕೆ ರಾತ್ರಿ ಬೆಂಗಳೂರಿನಲ್ಲಿ ಬಸ್ ಹತ್ತಿ ಮಲಗಿದರೆ ಬೆಳಗ್ಗೆ ನೇರವಾಗಿ ಮುದಗಲದಲ್ಲಿ ಇಳಿಯಬಹುದು‌. ಹತ್ತಿರದ ರೈಲು ನಿಲ್ದಾಣ ಎಂದರೆ ರಾಯಚೂರು. ರಾಯಚೂರಿಂದ ಸರಕಾರಿ ಮತ್ತು ಖಾಸಗೀ ಬಸ್ ವ್ಯವಸ್ಥೆಯಿದೆ.