- ಅನಿಲ್ ಹೆಚ್.ಟಿ.

ಯಾಕಮ್ಮ ಬೇಸರ..? ಅಪ್ಪ ನಮ್ಮನ್ನು ಬಿಟ್ಟು ಹೋದ ಮೇಲೆ ಮಂಕಾಗಿಬಿಟ್ಟಿದ್ದೀಯಮ್ಮ. ಹೇಳಮ್ಮ.. ನಿಂಗೆ ಎಲ್ಲಾದರೂ ಹೋಗಬೇಕಾ? ತೀರ್ಥಕ್ಷೇತ್ರ ನೋಡಬೇಕಾ? ಹೇಳಮ್ಮ…

ಅಯ್ಯೋ, ಏನೂಂತ ಹೇಳ್ತಿಯಾ ಕೃಷ್ಣ.. ನಾನಿನ್ನೂ ಪಕ್ಕದಲ್ಲಿರೋ ಬೇಲೂರು ಹಳೇಬೀಡನ್ನೇ ನೋಡಿಲ್ಲ. ಇನ್ನು ತೀರ್ಥ ಕ್ಷೇತ್ರದ ಯೋಚನೆ ಎಲ್ಲಿದೆ ಹೇಳು?

ಇಲ್ಲಮ್ಮ.. ನಾವು ದೂರದೂರಕ್ಕೆ ಎಲ್ಲಾದ್ರೂ ಹೋಗೋಣ. ನಿನ್ನಿಷ್ಟದ ಎಲ್ಲ ಸ್ಥಳಗಳನ್ನು ದರ್ಶನ ಮಾಡಿಯೇ ಬರೋಣ. ನೀನು ಹೂಂ. ರೆಡಿ ಅನ್ನು ಸಾಕು.. ಹೊರಟೇ ಬಿಡೋಣ. ಆಗಬಹುದಾ?

ಏನೋ .. ನಿನ್ನಿಷ್ಟ ಕಣಪ್ಪ. ನೀನು ಜತೆಗಿದ್ರೆ ನಾನು ಯಾವತ್ತೂ ರೆಡಿಯೇ.

ಈ ಸಂಭಾಷಣೆ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ಆ ಮಗರಾಯ.. ಅಮ್ಮನ ಮುಂದೆ ಪ್ರತ್ಯಕ್ಷನಾಗಿ ಕೇಳುತ್ತಾನೆ.

ಅಮ್ಮ.. ನಾನು ರೆಡೀನಮ್ಮ. ಹೋಗೋಣ್ವಾ..? ನನ್ನಪ್ಪನ ಪ್ರೀತಿಯ ಚೇತಕ್ ಸ್ಕೂಟರ್ ರೆಡಿಯಿದೆ. ಆ ಸ್ಕೂಟರ್ ನಲ್ಲಿ ನಾವಿಬ್ಬರೂ ಹೋಗ್ತಾ ಇದ್ರೆ.. ಅಪ್ಪನೂ ನಮ್ಮೊಂದಿಗೆ ಬಂದ ಹಾಗಾಗುತ್ತೆ. ಓಕೇನಾ?

ರೆಡಿ ಕಣೋ ಕೖಷ್ಣ.

ಹೀಗೆ.. ಮೈಸೂರಿನಿಂದ ಚೇತಕ್ ಸ್ಕೂಟರ್ ನಲ್ಲಿ ಹೊರಟ ಅಮ್ಮ - ಮಗ ನಂತರದ ಮೂರೂವರೆ ವರ್ಷಗಳಲ್ಲಿ ಸುತ್ತಿದ್ದು ಬರೋಬ್ಬರಿ 1 ಲಕ್ಷ ಕಿಲೋಮೀಟರ್. ದೇಶಪರ್ಯಟನೆ ಮಾಡಬೇಕೆಂಬ ಅಮ್ಮನ ಆಸೆ ಈಡೇರಿಸಲು ಸ್ಕೂಟರ್ ನಲ್ಲಿಯೇ ಅಮ್ಮನನ್ನು ದೇಶ ಮಾತ್ರವಲ್ಲ ಭಾರತದ ಪಕ್ಕದ ಭೂತಾನ್, ನೇಪಾಳ, ಮಯನ್ಮಾರ್ ದೇಶಗಳಿಗೂ ಕರೆದೊಯ್ದ ಈ ಮಗ ಅಪರೂಪದಲ್ಲಿ ಅಪರೂಪದವರು. ಅದಕ್ಕಾಗಿ ಆಧುನಿಕ ಶ್ರವಣಕುಮಾರ ಎಂಬ ಖ್ಯಾತಿಯನ್ನೂ ತನ್ನದಾಗಿಸಿಕೊಂಡರು.

ಇದನ್ನೂ ಓದಿ: ಅಂಬಾರಿ ಒಳಗೆ ನಿನ್ನನ್ನು ಕಂಡೆ .. ನನ್ನೇ ನಾ ಕಂಡೆ

ಮುಂದಿನ ಮಾತುಗಳನ್ನು ಅವರಿಂದಲೇ ಕೇಳಿ.

’ಕೂಡು ಕುಟುಂಬದಲ್ಲಿ ಬೆಳೆದಿದ್ದರಿಂದಾಗಿ ಅಡುಗೆ ಮನೆಗಷ್ಟೇ ನನ್ನ ಅಮ್ಮ ಸೀಮಿತವಾಗಿದ್ದಳು. ಅಪ್ಪನ ಹತ್ತಿರ ಚೇತಕ್ ಸ್ಕೂಟರ್ ಇತ್ತು. ನನ್ನ ತಂದೆಯ ಹೆಸರು ದಕ್ಷಿಣಾಮೂರ್ತಿ. ಅವರ ಕಾಲಾನಂತರ ಅಮ್ಮ ತುಂಬ ಮಂಕಾಗಿದ್ದರು. ಅಮ್ಮನ ಮೊಗದಲ್ಲಿ ನಗು ನೋಡಬೇಕೆಂದರೆ ಈ ಮಂಕುಮೂಡ್ ನಿಂದ ಹೊರತರಬೇಕಿತ್ತು. ಹೊರಗೆಲ್ಲಾದರೂ ಸುತ್ತಾಡಿಸೋಣ ಎಂದು ನಿರ್ಧರಿಸಿದೆ. ಆದರೆ ಅವರಿಗೆ ತಿರುಗಾಟ ಇಷ್ಟವಿದೆಯೋ ಇಲ್ಲವೋ ಗೊತ್ತಿರಲಿಲ್ಲ. ಎಲ್ಲಾದರೂ ದೂರ ಹೋಗೋಣವೇ ಎಂದು ಕೇಳಿದಾಗ, ಮೈಸೂರು ಪಕ್ಕದ ಬೇಲೂರು ಹಳೇಬೀಡನ್ನೇ ಇನ್ನೂ ನೋಡಲಿಲ್ಲ. ದೇಶ ನೋಡೋದು ದೂರದ ಮಾತು ಬಿಡು ಅಂದರು. ಅವರಿಗೆ ಪರ್ಯಟನೆಯ ಆಸಕ್ತಿ ಇರುವುದು ಗೊತ್ತಾಯಿತು.

Untitled design (3)

ಅಮ್ಮನ ಮನಸಿನಗಳನ್ನು ಆಕೆ ಜೀವಂತವಾಗಿರುವಾಗ ಆಸೆ ಈಡೇರಿಸದೇ, ಆಕೆಯ ಕಾಲಾನಂತರ ಪಶ್ಚಾತ್ತಾಪ ಪಡಬಾರದು ಎಂದುಕೊಂಡೆ. ಹೀಗಾಗಿ ಬೆಂಗಳೂರಿನಲ್ಲಿ ಕೈ ತುಂಬಾ ಸಂಬಳ ಬರುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮೈಸೂರಿಗೆ ಬಂದೆ. ಅಮ್ಮನನ್ನು ನೋಡಿಕೊಳ್ಳಬೇಕೆಂದು ಮದುವೆ ಕೂಡ ಆಗದೇ ಬ್ರಹ್ಮಚರ್ಯ ವ್ರತ ಪಾಲಿಸಿದೆ.

ಸ್ಕೂಟರ್ ನಲ್ಲಿಯೇ ಟೂರ್ ಹೋಗೋಣವಾ ಎಂದು ಅಮ್ಮನನ್ನು ಕೇಳಿದೆ. ಅಮ್ಮ ಮರುಮಾತಾಡದೇ ಒಪ್ಪಿದರು. ಸರಿ ಎಂದು 2018 ರ ಜ.16 ರಂದು ಚೇತಕ್ ಸ್ಕೂಟರ್ ಹಿಂಬದಿ ಅಮ್ಮನನ್ನು ಕೂರಿಸಿಕೊಂಡು ದೇಶ ಪರ್ಯಟನೆ ಪ್ರಾರಂಭಿಸಿಯೇ ಬಿಟ್ಟೆ. ಇದಕ್ಕೆ ಮಾತೃಸೇವಾ ಸಂಕಲ್ಪ ಯಾತ್ರೆ ಎಂಬ ಹೆಸರಿಟ್ಟೆ. ಭಾರತದ ವಿವಿಧ ರಾಜ್ಯಗಳು ಮಾತ್ರವೇ ಅಲ್ಲದೇ ಭಾರತದ ಪಕ್ಕದಲ್ಲಿನ ನೇಪಾಳ, ಭೂತಾನ್, ಮಯನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿಮೀಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಮಾಡಿಸಿದೆ. ಚೇತಕ್ ಸ್ಕೂಟರ್ ನಲ್ಲಿಯೇ ಯಾಕೆ ಎಂದರೆ, ಅಪ್ಪನಿಗೆ ಇಷ್ಟವಾಗಿದ್ದ ಸ್ಕೂಟರ್ ಅದು. ಹೀಗಾಗಿ ಆ ಸ್ಕೂಟರ್ ನಲ್ಲಿ ಅಪ್ಪ ಕೂಡ ನಮ್ಮೊಂದಿಗೆ ಬರುತ್ತಿದ್ದಾರೆ ಎಂಬ ಫೀಲಿಂಗ್ ಬರುತ್ತಿತ್ತು. ರೈಲು, ವಿಮಾನದಲ್ಲಿ ಸಾಗಿದರೆ ಎಲ್ಲಾ ಸ್ಥಳಗಳನ್ನು ಇಷ್ಟೊಂದು ಹಾಯಾಗಿ ನೋಡಲಾಗುವುದಿಲ್ಲ. ಸ್ಕೂಟರ್ ನಲ್ಲಿ ಪ್ರತಿ ಸ್ಥಳಕ್ಕೂ ಪಯಣಿಸುತ್ತಿರುವಂತೆಯೇ ಅಮ್ಮನಿಗೆ ಉಂಟಾಗುತ್ತಿದ್ದ ಆನಂದ ವರ್ಣಿಸಲು ಅಸಾಧ್ಯದಂತಿತ್ತು. ಇಂಥ ದೃಶ್ಯ ಬೇರೆ ವಾಹನ ಪ್ರಯಾಣದಲ್ಲಿಯೂ ಕಾಣಲು ಅಸಾಧ್ಯ.

ಊರಿಂದೂರಿಗೆ, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಪಯಣಿಸುತ್ತ ಅಲ್ಲಿನ ಸುಂದರ ತಾಣಗಳನ್ನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಸಾಗಿರುವುದು ಅನೇಕರ ಅಚ್ಚರಿಗೆ ಕಾರಣವಾಗಿತ್ತು. ಉದ್ದೇಶ ಒಳ್ಳೆಯದಿದ್ದಾಗ ಯಾವುದೇ ಸಮಸ್ಯೆ ಬಾರದು ಎಂಬುದಕ್ಕೆ ನಮ್ಮ ಪರ್ಯಟನೆಯೇ ಉದಾಹರಣೆ. ಏಕೆಂದರೆ ಎಲ್ಲಿಯೂ ಸ್ಕೂಟರ್ ಗೆ ತಾಂತ್ರಿಕ ಸಮಸ್ಯೆ ಎದುರಿಸಲಿಲ್ಲ. ಎಲ್ಲ ಕಡೆಯೂ ಜನರು ನಮ್ಮನ್ನು ಆದರದಿಂದ ಸ್ವಾಗತಿಸಿದರು. ತಂಗುವುದಕ್ಕೆ ಹಾಗೂ ಊಟತಿಂಡಿಗೆ ಎಲ್ಲಿಯೂ ಸಮಸ್ಯೆಯಾಗಲೇ ಇಲ್ಲ. ಅಮ್ಮನ ಆಶೀರ್ವಾದ ಪಡೆಯಲು ಸರದಿ ಸಾಲಿನಲ್ಲಿ ಜನ ನಿಲ್ಲುತ್ತಿದ್ದ ನೋಟವೂ ಅನನ್ಯವಾಗಿತ್ತು. .

ಅಮ್ಮನ ಮಾತಿಗೆ 'ಸಂಕಲ್ಪ'ದ ಷರಾ

ನಿನಗೆ ಇಡೀ ಭಾರತವನ್ನು ತೋರಿಸುತ್ತೇನೆ ಎಂದು ನಾನು ಅಮ್ಮನಿಗೆ ನೀಡಿದ್ದ ಭರವಸೆ ಸಂಪೂರ್ಣವಾಗಿದೆ. ಹೀಗಿದ್ದರೂ ಅಮ್ಮನೊಂದಿಗೆ ಬಜಾಜ್ ಸ್ಕೂಟರ್ ಹತ್ತಿದ ನಾನು ಇಂದಿಗೂ ಇಳಿದಿಲ್ಲ! ರಾಷ್ಟ್ರದ ಯಾವ ಭಾಗವನ್ನೂ ಬಿಡದೆ ಸಂದರ್ಶಿಸುತ್ತಿದ್ದೇವೆ.

ಈ ರಾಷ್ಟ್ರದ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರದ ವಿಶೇಷ ಅಂತಃಕರಣ ಹಾಸುಹೊಕ್ಕಾಗಿದೆ 75ರ ಇಳಿವಯಸ್ಸಿನ ಅಮ್ಮನೊಂದಿಗೆ ನಾನು ಸ್ಕೂಟರ್‌ನಲ್ಲೇ ಉತ್ತರ ಭಾರತದ ಗಡಿಭಾಗದ 13,700 ಅಡಿ ಎತ್ತರದ ಪ್ರದೇಶಕ್ಕೂ ಭೇಟಿ ನೀಡಿದ್ದೇನೆ.

Untitled design (4)

ಈ ಪರ್ಯಟನೆ ಬಗ್ಗೆ ಅಮ್ಮ ಚೂಡಾರತ್ನಮ್ಮ ಹರ್ಷದಿಂದ ಹೇಳುವುದು ಹೀಗೆ:

ಮಗನೊಂದಿಗಿನ ಪ್ರಯಾಣ ಯಾವತ್ತೂ ಆರಾಮದಾಯಕವಾಗಿದೆ. ಆತನ ಸಂಕಲ್ಪದಂತೆ ನಾವಿಬ್ಬರೂ ವಿವಿಧೆಡೆಗಳಿಗೆ ಭೇಟಿ ನೀಡಿದ್ದೇವೆ. ಎಲ್ಲಿಯೂ ಆರೋಗ್ಯ ಸಮಸ್ಯೆ ಕಾಡಲಿಲ್ಲ. ಸಾಮಾನ್ಯವಾಗಿ ಸ್ಕೂಟರ್ ನಲ್ಲಿ ಸುದೀರ್ಘ ಅಂತರದಲ್ಲಿ ಪಯಣಿಸಿದಾಗ ಬೆನ್ನುನೋವು ಕಾಡುತ್ತದೆ. ಆದರೆ 1 ಲಕ್ಷ ಕಿಮೀ ಸಂಚರಿಸಿದರೂ ನನಗೆ ಮಾತ್ರ ಒಂದಿಷ್ಟೂ ಬೆನ್ನು ಹುರಿ ಸಮಸ್ಯೆ ಕಾಡಲೇ ಇಲ್ಲ. ಇಂದಿಗೂ ನಾನು ಇನ್ನೂ ಒಂದು ಲಕ್ಷ ಕಿಮೀ ಸಂಚರಿಸಲು ಫಿಟ್ ಇದ್ದೇನೆ.!

ಇಷ್ಟೆಲ್ಲ ಸುತ್ತಿದಿರಲ್ಲ, ಭಾರತದಲ್ಲಿ ಯಾವ ಜಾಗ ಇಷ್ಟ ಆಯಿತು ಎಂದು ಕೇಳಿದರೆ ತಾಯಿಯ ಉತ್ತರ ಹೀಗಿತ್ತು; ಅಯ್ಯೋ.. ಎಂಥ ಪ್ರಶ್ನೆಯಿದು. ಇಡೀ ಭರತ ಭೂಮಿಯೇ ಪವಿತ್ರ ಭೂಮಿ. ಭಾರತದ ಇಂಚಿಂಚು ಜಾಗವೂ ಅತ್ಯಂತ ಸುಂದರವಾಗಿದೆ. ಹೀಗಿರುವಾಗ ನನ್ನ ಭಾರತದಲ್ಲಿ ಇಂಥದ್ದೇ ಜಾಗ ಚಂದ ಇದೆ ಎಂದರೆ ನನ್ನದು ಪೆದ್ದುತನವಾದೀತು. ಪ್ರತಿಯೊಬ್ಬರೂ ತಮ್ಮ ಜೀವಿತ ಕಾಲದಲ್ಲಿ, ನಮ್ಮ ಹಾಗೇ ಭಾರತ ಪರ್ಯಟನೆಯನ್ನು ಮಾಡಲೇಬೇಕು. ಆಗ ಭಾರತದ ಮಹತ್ವ ತಿಳಿಯುತ್ತದೆ.’

ಸ್ಕೂಟರ್ ಕೊಡುಗೆ!

ಅಮ್ಮ ಮಗನ ಸುದೀರ್ಘ ಪ್ರವಾಸವನ್ನು ಗುರುತಿಸಿದ ಬಜಾಜ್ ಸಂಸ್ಥೆ ಇವರಿಗೆ 1.50 ಲಕ್ಷ ರು. ಮೌಲ್ಯದ 'ಬಜಾಜ್ ಇಲೆಕ್ಟ್ರಿಕ್ ಸ್ಕೂಟರ್'ನ್ನು ಕೊಡುಗೆಯಾಗಿ ನೀಡಿರುವುದು ವಿಶೇಷ. ತಾಯಿ ಮತ್ತು ಮಗ ಈ ದೀರ್ಘ ಪ್ರವಾಸಕ್ಕೆ ಯಾರಿಂದಲೂ ಆರ್ಥಿಕ ನೆರವು ಪಡೆದಿಲ್ಲ ಎಂಬುದು ಮತ್ತೊಂದು ವಿಶೇಷ. ಕೃಷ್ಣಕುಮಾರ್ ಇಡೀ ಪ್ರವಾಸವನ್ನು ಸ್ವಂತ ವೆಚ್ಚದಲ್ಲಿಯೇ ಮಾಡಿದ್ದಾರೆ ಎಂಬುದು ಗಮನಾರ್ಹ. ಅಮ್ಮನ ಸೇವೆಗಿಂತ ಮಿಗಿಲಾದ ಸೇವೆ ಬೇರೆ ಯಾವುದೂ ಇಲ್ಲ. ಜನ್ಮ ಕೊಟ್ಟ ಅಮ್ಮನಲ್ಲೇ ದೇವರಿದ್ದಾನೆ. ಹೀಗಾಗಿ ಆ ದೇವರ ಇಚ್ಛೆಯಂತೆ ಈ ಯಾತ್ರೆ ಕೈಗೊಂಡೆ ಎಂದು 47 ವರ್ಷದ ಕೖಷ್ಣಕುಮಾರ್ ಹೇಳುತ್ತಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದೂವರೆ ವರ್ಷಗಳ ಕಾಲ ಯಾತ್ರೆ ಸ್ಥಗಿತಗೊಳಿಸಿ ಮೈಸೂರಿಗೆ ಮರಳಿದ್ದ ತಾಯಿ ಮತ್ತು ಮಗ, ಇದೇ ಕಾರಣದಿಂದಾಗಿ 4 ಸುದೀರ್ಘ ವರ್ಷಗಳನ್ನು ಪ್ರವಾಸಕ್ಕೆ ಮೀಸಲಿಡುವಂತಾಯ್ತು. ಈ ಸ್ಮರಣೀಯ ಯಾತ್ರೆಯ ವಿಶೇಷಗಳನ್ನು ಪ್ರವಾಸಿ ಪ್ರಪಂಚದ ಮುಂದಿನ ಸಂಚಿಕೆಗಳಲ್ಲಿ ಓದಬಹುದು.