Wednesday, February 4, 2026
Wednesday, February 4, 2026

ಅಂಬಾರಿ ಒಳಗೆ ನಿನ್ನನ್ನು ಕಂಡೆ .. ನನ್ನೇ ನಾ ಕಂಡೆ

ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಪ್ರವಾಸಕ್ಕೆಂದೇ ಅದರಲ್ಲೂ ನಗರ ಸಂಚಾರಕ್ಕೆಂದೇ ನಿರ್ಮಾಣವಾದ ಬಸ್‌. ಎಷ್ಟೋ ಜನರು ಈ ಬಸ್‌ಗಳನ್ನು ಲಂಡನ್‌ ಪ್ರವಾಸದಲ್ಲಿ ಮೆಚ್ಚಿಕೊಂಡಿದ್ದಾರೆ. ಅಲ್ಲೂ ಇಂಥದ್ದೇ ಬಸ್‌ ಲಂಡನ್‌ನ ಬಿಗ್ ಬಸ್‌ ಊರು ತಿರುಗಿಸುತ್ತಿದೆ. ಈ ಅಂಬಾರಿಗೂ 50 ಆಸನಗಳ ಲಂಡನ್‌ನ ಬಿಗ್ ಬಸ್‌ ಪ್ರೇರಣೆ ಎನ್ನಲಾಗಿದೆ. ಮೈಸೂರಿನ ಬ್ರ್ಯಾಂಡ್‌ ಅಂಬಾರಿಯ ಹೆಸರನ್ನು ಇಡಲಾಗಿದೆ. 25 ಅಡಿ ಎತ್ತರ ಇರುವ ಡಬಲ್‌ ಡೆಕ್ಕರ್‌ ಬಸ್‌. ಮೇಲಿನ ಡೆಕ್‌ನಲ್ಲಿ 20 ಆಸನಗಳು ಮತ್ತು ಕೆಳಗಿನ ಡೆಕ್‌ನಲ್ಲಿ 20 ಆಸನಗಳು ಇದ್ದು, ಒಟ್ಟು ನಲವತ್ತು ಪ್ರಯಾಣಿಕರು ಆರಾಮವಾಗಿ ಪ್ರವಾಸ ಹೋಗಬಹುದು.

ಬೆಂಗಳೂರು ಸುತ್ತೋಕೆ ಅಂತ ಹೋಗುವಾಗ ನಡೆಯೋದೋ ಅಥವಾ ಗಾಡಿಯಲ್ಲಿ ತಿರುಗೋದೋ ಅಂತಾ ಯೋಚಿಸುತ್ತಿದ್ದರೆ, ಈಗಲೇ ಖರ್ಚು ಮತ್ತು ಸಮಯ ಎಲ್ಲವನ್ನು ಉಳಿಸಿಕೊಳ್ಳಿ. ನಗರ ಸಂಚಾರಕ್ಕೆ ಕೆಎಸ್‌ಟಿಡಿಸಿ ಅಂಬಾರಿ ಸವಾರಿ ನೀಡುತ್ತಿದೆ. ಇದಕ್ಕಂತಲೇ ಡಬಲ್‌ ಡೆಕ್ಕರ್‌ ಅಂಬಾರಿ ಇರುವಾಗ ಎಲ್ಲವನ್ನು ನಿಂತು ನೋಡುವುದಕ್ಕೆ ಅವಕಾಶ ನೀಡುವಾಗ ಸುಮ್ಮನೆ ಯಾಕೆ ಉಳಿದವುಗಳ ಚಿಂತೆ. ಆನ್‌ಲೈನ್‌ ಆಥವಾ ಆಫ್‌ಲೈನ್‌ ಟಿಕೆಟ್‌ ಬುಕ್‌ ಮಾಡಿಕೊಂಡು ಹೊರಟರಾಯಿತು. ಪ್ಯಾಕೇಜ್‌ನಲ್ಲಿ ಪ್ರವಾಸ ತೋರಿಸಲಿರುವ ಪ್ರದೇಶಗಳ ಪಟ್ಟಿಯೂ ಇರುತ್ತದೆ. ಜತೆಗೆ ಓಪನ್‌ ಟಾಪ್‌ನಲ್ಲಿ ಪ್ರವಾಸ ಮಾಡುವ ಥ್ರಿಲ್ ಕೂಡ ಸಿಗುತ್ತದೆ.

ಇದನ್ನೂ ಓದಿ: ನಿಸರ್ಗದ ಮುಂದೆ ಮನುಷ್ಯ ಬಲು ಸ್ವಾರ್ಥಿ!

ಬೆಂಗಳೂರಿನಲ್ಲಿ ಅಂಬಾರಿ ಸವಾರಿಗೆ ಚಾಲನೆ

ಬೆಂಗಳೂರು ನಗರ ಸುತ್ತಿಸಲು ಡಬಲ್‌ ಡೆಕ್ಕರ್‌ ಬಸ್‌ ಅಂಬಾರಿ ಸಜ್ಜಾಗಿದೆ. ಜ.21ರಂದು ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಚಿವರಾದ ಎಚ್‌ ಕೆ ಪಾಟೀಲ್‌ ಅವರು ಈ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಉಪಸ್ಥಿತರಿದ್ದರು. ಸದ್ಯ ಒಟ್ಟು ಮೂರು ಬಸ್‌ಗಳ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಬೇಡಿಕೆ ಹೆಚ್ಚಾದಂತೆ ಮತ್ತಷ್ಟು ಬಸ್‌ಗಳೂ ಸಂಚಾರ ಆರಂಭಿಸಲು ಯೋಜನೆ ಸಿದ್ಧವಾಗಿದೆ. ಸದ್ಯ ಮೈಸೂರು ದಸರಾದಲ್ಲಿ ಜನರಿಗೆ ಪರಿಚಯವಾಗಿದ್ದ ಈ ಬಸ್‌ಗಳು ಈಗ ಬೆಂಗಳೂರಿನಲ್ಲಿ ಓಡಾಡುತ್ತಿವೆ. ದಸರಾದ ವೇಳೆಗೆ ಮತ್ತೆ ಮೈಸೂರಿನಲ್ಲಿ ನಗರ ಸಂಚಾರ ಮಾಡಲಿವೆ.

ambari

ಅಂಬಾರಿ ಪರಿಚಯವಾಗಿದ್ದು ಮೈಸೂರಲ್ಲಿ

ಕೆಎಸ್‌ಟಿಡಿಸಿಯ ಈ ಅಂಬಾರಿ ಓಡಾಟ ಕರ್ನಾಟಕದಲ್ಲಿ ಆರಂಭವಾಗಿದ್ದು 2025ರ ಮೈಸೂರು ದಸರಾ ಸಮಯದಲ್ಲಿ. ದಸರಾ ಸಮಯದಲ್ಲಿ ದೀಪದ ಬೆಳಕಿನಲ್ಲಿ ಮೈಸೂರು ಸುತ್ತಿಸಲು ಪ್ರವಾಸ ಪ್ಯಾಕೇಜ್‌ ಹೊರತಂದು ಸಾಕಷ್ಟು ಸುದ್ದಿಯೂ ಆಗಿತ್ತು. ಒಂದು ಗಂಟೆಯ ಪ್ರವಾಸದಲ್ಲಿ ಮೈಸೂರಿನ ಪ್ರಮುಖ ತಾಣಗಳನ್ನು ಸುತ್ತಿಸಿ ಅಂದಿನಿಂದಲೇ ಪ್ರವಾಸ ಪ್ರಿಯರ ಆಕರ್ಷಣೆಯನ್ನು ಗಳಿಸಿದೆ.

ಬಸ್‌ ವಿನ್ಯಾಸ

ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಪ್ರವಾಸಕ್ಕೆಂದೇ ಅದರಲ್ಲೂ ನಗರ ಸಂಚಾರಕ್ಕೆಂದೇ ನಿರ್ಮಾಣವಾದ ಬಸ್‌. ಎಷ್ಟೋ ಜನರು ಈ ಬಸ್‌ಗಳನ್ನು ಲಂಡನ್‌ ಪ್ರವಾಸದಲ್ಲಿ ಮೆಚ್ಚಿಕೊಂಡಿದ್ದಾರೆ. ಅಲ್ಲೂ ಇಂಥದ್ದೇ ಬಸ್‌ ಲಂಡನ್‌ನ ಬಿಗ್ ಬಸ್‌ ಊರು ತಿರುಗಿಸುತ್ತಿದೆ. ಈ ಅಂಬಾರಿಗೂ 50 ಆಸನಗಳ ಲಂಡನ್‌ನ ಬಿಗ್ ಬಸ್‌ ಪ್ರೇರಣೆ ಎನ್ನಲಾಗಿದೆ. ಮೈಸೂರಿನ ಬ್ರ್ಯಾಂಡ್‌ ಅಂಬಾರಿಯ ಹೆಸರನ್ನು ಇಡಲಾಗಿದೆ. 25 ಅಡಿ ಎತ್ತರ ಇರುವ ಡಬಲ್‌ ಡೆಕ್ಕರ್‌ ಬಸ್‌. ಮೇಲಿನ ಡೆಕ್ಕರ್‌ನಲ್ಲಿ 20 ಮತ್ತು ಕೆಳಗಿನ ಡೆಕ್ಕರ್‌ನಲ್ಲಿ 20 ಆಸನಗಳು ಇದ್ದು, ಒಟ್ಟು 40 ಪ್ರಯಾಣಿಕರು ಆರಾಮವಾಗಿ ಪ್ರವಾಸ ಹೋಗಬಹುದು. ಗುಲಾಬಿ ಬಣ್ಣದ ಬಸ್‌ ಇದಾಗಿದ್ದು ಲುಕ್‌ ಮಾತ್ರ ಐಷಾರಾಮಿಯಾಗಿದೆ. ಇಷ್ಟಿದ್ದರೂ ಈ ಬಸ್‌ನಲ್ಲಿ ಪ್ರವಾಸ ಹೋಗುವ ಜನರ ಆಯ್ಕೆ ಮಾತ್ರ ಮೇಲಿನ ಡೆಕ್ಕರ್‌ನ ಆಸನಗಳೇ ಆಗಿರುತ್ತವೆ. ಏಕೆಂದರೆ ಇದು ಓಪನ್‌ ಟಾಪ್‌ ವ್ಯವಸ್ಥೆ ಹೊಂದಿದೆ. ಮೇಲಿನ ಡೆಕ್ಕರ್‌ನಲ್ಲಿ ಆಸನಗಳಲ್ಲಿ ಕುಳಿತುಕೊಂಡು ಅಥವಾ ನಿಂತುಕೊಂಡು ಪ್ರಯಾಣವನ್ನು ಕಿಟಕಿ ಮುಕ್ತ ಸಂಚಾರ ಆನಂದಿಸಬಹುದು.

ಸಖತ್‌ ಫೊಟೋಗ್ರಫಿ

ಈ ಬಸ್‌ಗಳ ಪ್ರಯಾಣ ಸುಖಕರ ಮತ್ತು ಐಷಾರಾಮಿಯಾಗಿರುವುದು ಒಂದೆಡೆಯಾದರೆ, 25 ಅಡಿಗಳಷ್ಟು ಎತ್ತರದ ಮತ್ತು ಓಪನ್‌ ಟಾಪ್‌ ಡೆಕ್ಕರ್‌ ವ್ಯವಸ್ಥೆ ಹೊಂದಿರುವುದು ವ್ಲಾಗರ್‌ಗಳಿಗೆ ಒಂದು ಉತ್ತಮ ಅವಕಾಶ ಎನ್ನಬಹುದು. ಬಸ್‌ ಪ್ರಯಾಣದ ವೇಳೆ ವಿಡಿಯೋಗ್ರಫಿಗೆ ಅದ್ಭುತವಾಗಿರುತ್ತದೆ. ಮೊಟರ್‌ ವ್ಲಾಗ್‌ನಂಥ ಅವಕಾಶಗಳಿಗೆ ಇದರಲ್ಲಿ ಸೌಲಭ್ಯ ಇರುವುದರಿಂದಲೂ ಸಾಕಷ್ಟು ಪ್ರವಾಸಿಗರ ಆಯ್ಕೆ ಇದೇ ಆಗಿರುತ್ತದೆ. ನೀವೂ ಇದನ್ನು ಪ್ರಯತ್ನಿಸಲು ಬಯಸಿದರೆ ಗ್ಲಿಂಬಲ್ ಸಹಿತ ಒಂದು 360 ಡಿಗ್ರಿ ಕ್ಯಾಮೆರಾ ಅಂದರೆ ಗೋಪ್ರೋ ಸಾಕಾಗಬಹುದು. ಅದ್ಭುತ ಲ್ಯಾಂಡ್‌ಸ್ಕೇಪ್‌ನೊಂದಿಗೆ ವಿಡಿಯೋಗಳನ್ನು ಸೆರೆಹಿಡಿಯಬಹುದು. ಇದಕ್ಕಾಗಿ ಹೆಚ್ಚುವರಿ ಸುಂಕ ತೆರುವ ಹೊರೆಯೂ ಈ ಅಂಬಾರಿಯಲ್ಲಿ ಇಲ್ಲ.

ಪ್ಯಾಕೇಜ್‌ನಲ್ಲಿ ಏನೇನಿದೆ?

ಇದು ಹಾಪ್-ಆನ್, ಹಾಪ್-ಆಫ್ ಸೇವೆಯಾಗಿದ್ದು, ರವೀಂದ್ರ ಕಲಾಕ್ಷೇತ್ರದಿಂದ ಪ್ರಾರಂಭವಾಗಿ, ಕಾರ್ಪೊರೇಷನ್ ಸರ್ಕಲ್‌ ಮತ್ತು ಹಡ್ಸನ್ ಸರ್ಕಲ್‌ ಮೂಲಕ ಕಸ್ತೂರಬಾ ರಸ್ತೆಯಲ್ಲಿ ಸಾಗಿ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯವನ್ನು ತಲುಪುತ್ತದೆ. ಅಲ್ಲಿಂದ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಜನರಲ್ ಪೋಸ್ಟ್ ಆಫೀಸ್ (GPO)ಗೆ ಹೊರಡುತ್ತದೆ. ಹೈಕೋರ್ಟ್ ಮತ್ತು ವಿಧಾನಸೌಧವನ್ನೂ ಸಂಚಾರದಲ್ಲಿ ನೋಡಬಹುದು.

ಕೆಎಸ್‌ಟಿಡಿಸಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಬುಕಿಂಗ್‌ ಮಾಡಬಹುದಾಗಿದ್ದು, ಬಸ್‌ನಲ್ಲಿಯೂ ನೇರ ಟಿಕೆಟ್‌ ಕೊಳ್ಳಬಹುದು.

Untitled design (2)

ನಮ್ಮ ರಾಜ್ಯದಲ್ಲಿನ ಸಾಕಷ್ಟು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹಾಗಾಗಿ ರಾಜ್ಯಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರು ಹಬ್ಬಕ್ಕೆ ಸಾಕಷ್ಟು ಜನರು ದೇಶ-ವಿದೇಶಗಳಿಂದ ಬರುತ್ತಾರೆ. ಇದರಿಂದ ಇಲ್ಲಿನ ಕಲೆ, ಸಂಸ್ಕೃತಿ, ಬೆಂಗಳೂರಿನ ವೈಭವ ಅವರಿಗೆ ಪರಿಚಯವಾಗುತ್ತದೆ. ಹಾಗಾಗಿ ಈ ಬಾರಿ ನಡೆಯಲಿರುವ ಬೆಂಗಳೂರು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲು ಮೈಸೂರಿನಲ್ಲಿ ನಾವು ಆರಂಭಿಸಿದ್ದ ಡಬಲ್‌ ಡೆಕ್ಕರ್‌ನ ಮೂರು ಅಂಬಾರಿ ಬಸ್‌ಗಳ ಓಡಾಟವನ್ನು ಬೆಂಗಳೂರಿಗೆ ತಂದಿದ್ದೇವೆ. ಬೆಂಗಳೂರಿನಲ್ಲಿ ಎಲ್ಲ ಕಡೆಗೂ ಅಂಬಾರಿ ಬಸ್‌ ಓಡಾಟ ಆಗಬೇಕು. ಆದರೆ, ಹಲವು ಕಡೆಗಳಲ್ಲಿ ಮರಗಳು, ಅಂಡರ್‌ ಪಾಸ್‌ ಹೀಗೆ ಅಡೆತಡೆಗಳಿವೆ. ಹಾಗಾಗಿ ಅವಕಾಶ ಇರುವ ಕಡೆಗಳಲ್ಲಿ ಬಸ್‌ ಸಂಚಾರ ಮಾಡಲಿದೆ. ಪ್ರವಾಸಿಗರಿಗೆ ಬೆಂಗಳೂರು ಬಹುದೊಡ್ಡ ಆಕರ್ಷಣೆಯ ತಾಣ. ಇಲ್ಲಿನ ವಿಧಾನ ಸೌಧದ ವಾಸ್ತುಶಿಲ್ಪ, ವಾತಾವರಣ ಜನರನ್ನು ಆಕರ್ಷಿಸುತ್ತವೆ. ಸಾಮಾನ್ಯ ಜನರ ಪ್ರವಾಸಕ್ಕೆ ಇವುಗಳು ಮುಚ್ಚಿದ್ದವು. ಈಗ ಅದನ್ನು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಟ್ಟಿದ್ದೇವೆ. ಇಂಥ ಹಲವು ನವೀನ ಪ್ರಯತ್ನಗಳಲ್ಲಿ ಅಂಬಾರಿ ಬಸ್‌ ಸಂಚಾರವೂ ಒಂದು.

-ಎಚ್‌ ಕೆ ಪಾಟೀಲ್‌, ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರಕಾರ

ಪ್ರವಾಸಕ್ಕೆ ಡಬಲ್‌ ಡೆಕ್ಕರ್‌ನ ಅಂಬಾರಿ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರವೀಂದ್ರ ಕಲಾ ಕ್ಷೇತ್ರದಿಂದ ಈ ಅಂಬಾರಿ ಬಸ್‌ ಪ್ರವಾಸ ಆರಂಭವಾಗುತ್ತದೆ. ಕಾರ್ಪೊರೇಷನ್‌ ಸರ್ಕಲ್‌ ಮಾರ್ಗವಾಗಿ ಸಾಗಿ, ಹಡ್ಸನ್‌ ಸರ್ಕಲ್‌ ಕಬ್ಬನ್‌ ಪಾರ್ಕ್‌, ಕಂಠೀರವ ಸ್ಟೇಡಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಲ್ಲಿಂದ ಜಿಪಿಯು, ವಿಧಾನಸೌಧ, ಹೈಕೋರ್ಟ್‌ ನೋಡಿಕೊಂಡು ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಪ್ರವಾಸಿಗರನ್ನು ಮರಳಿ ತಂದು ನಿಲುಗಡೆ ನೀಡಲಿದೆ. ಪ್ರತಿದಿನ ಒಟ್ಟು ಐದು ಟ್ರಿಪ್‌ಗಳನ್ನು ಮಾಡಲು ಸದ್ಯಕ್ಕೆ ಯೋಜಿಸಲಾಗಿದೆ. ಬೆಳಗ್ಗೆ 2 ಮತ್ತು ಮಧ್ಯಾಹ್ನ 3 ಟ್ರಿಪ್‌ ಇರಲಿವೆ. ಪ್ರವಾಸ ಮಾಡಲು ಬಯಸುವವರು ವೆಬ್‌ಸೈಟ್‌ ಮೂಲಕ ಟಿಕೆಟ್‌ ಬುಕಿಂಗ್‌ ಮಾಡಬಹುದು. ನೇರವಾಗಿ ಬಸ್‌ನಲ್ಲೂ ಟಿಕೆಟ್‌ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

-ಪ್ರಶಾಂತ್‌ ಕುಮಾರ್‌ ಮಿಶ್ರ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಟಿಡಿಸಿ

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..