ನಿಸರ್ಗದ ಮುಂದೆ ಮನುಷ್ಯ ಬಲು ಸ್ವಾರ್ಥಿ!
ಮನಾಲಿ ಬೆಳೆಯುತ್ತಿದ್ದಂತೆ, ಊರು ವಿಸ್ತಾರವಾಗುತ್ತಾ ಬೀಸ್ ನದಿಯ ಪಾತ್ರವನ್ನು ಇಂಚಿಂಚಾಗಿ ಕಬಳಿಸಿತ್ತು. ಉಕ್ಕಿ ಹರಿಯುವ ನದಿ, ತನ್ನ ಅಸ್ತಿತ್ವ ಕಳೆದುಕೊಳ್ಳಲು ತಯಾರಿಲ್ಲದೇ ತನ್ನ ಪಾತ್ರವನ್ನ ಮತ್ತೆ ಹಿಗ್ಗಿಸಿಕೊಂಡಾಗ, ಚಾಚಿಕೊಂಡಿದ್ದ ಊರು ಕೊಚ್ಚಿ ಹೋಯಿತು. ಈಗ ಕೊಚ್ಚಿಹೋದ ದಡದ, ಅಸ್ತವ್ಯಸ್ತ ನೆಲದ ಮೇಲೆ ಜೆಸಿಬಿ-ಲಾರಿಗಳು ಹೊಸತೊಂದು ರಸ್ತೆ ನಿರ್ಮಾಣಕ್ಕೆ ಶ್ರಮಿಸುತ್ತಿದೆ.
- ಟಿ. ಎಸ್. ಕೃತಿಕಾರಾಣಿ, ಯಲ್ಲಾಪುರ
ಫ್ರೆಂಡ್ಸ್ ಜತೆ, ಕಸಿನ್ಸ್ ಜತೆ, ಸಮಾನ ಮನಸ್ಕರ ಜತೆ, ಸಮಾನ ವಯಸ್ಕರ ಜತೆ ಅಥವಾ ಯಾರೊಂದಿಗೂ ಬೇಡವೆಂದು ಸೋಲೋ ಟ್ರಿಪ್ ಹೋಗೋದು ತುಂಬಾ ಮಾಮೂಲಿ. ಈ ಕತೆ ಇದ್ಯಾವುದೂ ಅಲ್ಲದ, ಇದರಲ್ಲೇನಿದೆ ಹೊಸತು ಅಂತ ಅನ್ನಿಸಬಹುದಾದ, ಪ್ರವಾಸದ್ದು. ಇದು ಒಂದು ಫ್ಯಾಮಿಲಿ ಟ್ರಿಪ್ಪು! ಇದು ಮಾಮೂಲಿ ಅಲ್ಲ ಅಂತೇನಲ್ಲ. ಆದರೆ ಸುಲಭದ್ದಂತೂ ಅಲ್ಲ. ಮೂರು ಜನರೇಷನ್ನು ಒಟ್ಟಿಗೇ ಸೇರಿ ಹೋಗಿದ್ದ ಒಂದು ಫ್ಯಾಮಿಲಿ ಟ್ರಿಪ್ಪು ನಮ್ಮದು. ಅರವತ್ತರ ಅಪ್ಪ, ಐವತ್ತರ ಅಮ್ಮ, ಮೂವತ್ತರಲ್ಲಿರೋ ಅಣ್ಣ-ಅತ್ತಿಗೆ, ಅವರಿಗಿಂತ ಸ್ವಲ್ಪ ಚಿಕ್ಕವಳಾದ ನಾನು, ನಮ್ಮ ಜತೆ ಇನ್ನೂ ಎರಡನ್ನೂ ಮುಟ್ಟಿರದ ಒಬ್ಬ ತುಂಟ ಪುಟಾಣಿ. ನಾವೆಲ್ಲ ಸೇರಿ ಹೋಗಿದ್ದು ಹಿಮಾಚಲಕ್ಕೆ.
ಇದನ್ನೂ ಓದಿ: ನಹಿ ಮೈ ಕರ್ನಾಟಕ ಸೆ ಹೂಂ!...
ಅಷ್ಟು ಚಳಿಗೆ, ಅಷ್ಟು ಎತ್ತರಕ್ಕೆ ಅಪ್ಪ-ಅಮ್ಮ, ಮತ್ತೀ ಪುಟ್ಟ ಚಿಲ್ಟಾರಿಗೆ ತೊಂದರೆಯಾಗಬಹುದೇನೋ ಎಂಬ ಅಣ್ಣನ ಭಯಕ್ಕೆ ಅವನು ಹಲವು ವೈದ್ಯರ ಬಳಿ ಕೇಳಿ ಮೌಂಟೇನ್ ಸಿಕ್‌ನೆಸ್‌ನಿಂದ ಹಿಡಿದು ಸುಮಾರು ರೀತಿಯ ಔಷಧಗಳೊಂದಿಗೆ ತಯಾರಿದ್ದ. ಅತ್ತಿಗೆ ಬ್ಯಾಗ್ ತುಂಬಾ ಬೆಚ್ಚಗಿನ ಬಟ್ಟೆಗಳನ್ನ ತುಂಬಿಸಿಟ್ಟಿದ್ದಳು. ಅಪ್ಪ ತನ್ನ ಬ್ಯಾಗಲ್ಲಿ ಮೊಮ್ಮಗನಿಗೆಂದು ಡ್ರೈಫ್ರೂಟ್ಸ್ ಹೊತ್ತು ತಿರುಗುತ್ತಿದ್ದ. ಅಮ್ಮನ ಬ್ಯಾಗಲ್ಲಿ ಅರ್ಧ ಮನೆಯನ್ನೇ ತುಂಬಿಕೊಂಡು ಬಂದಿದ್ದಳು. ಈ ಬಿಗ್‌ಬಾಸ್ ಮನೆಯಲ್ಲಿ ಹೇಗೆ ವಿಭಿನ್ನ ವ್ಯಕ್ತಿತ್ವಗಳು, ವಿಭಿನ್ನ ಮನಸ್ಥಿತಿಯವರು ಒಂದೆಡೆ ಸೇರಿರುತ್ತಾರೋ, ನಮ್ಮದೂ ಸುಮಾರು ಅಂಥದ್ದೇ ಒಂದು ಅನುಭವ. ಇಷ್ಟೇ ಸಾಲದೆಂಬಂತೆ ನಮ್ಮ ಜತೆಗೆ ಚಂಡೀಘಡದ ಒಬ್ಬ ಮಾತಿನ ಮಲ್ಲ ಡ್ರೈವರ್ ಶುರುವಿನಿಂದ ಕೊನೆಯವರೆಗೂ ಜತೆ ನೀಡಿದ್ದರು. ನಾನೋ ಜೆನ್‌ಜಿ, ಇನ್ನೇನು ಎಕ್ಸ್‌ಪೆಕ್ಟ್ ಮಾಡಲು ಸಾಧ್ಯ? ಖುಷಿಕಂಡಲೆಲ್ಲ ಇವರೆಲ್ಲರ ಫೊಟೋ ಕ್ಲಿಕ್ಕಿಸುತ್ತಿದ್ದೆ, ರೆಸ್ಟೋರೆಂಟ್ ಹುಡುಕುತ್ತಿದ್ದೆ, ಏನು ಶಾಪಿಂಗ್ ಮಾಡ್ಬೋದು ಅಂತ ಯೋಚಿಸ್ತಿದ್ದೆ- ಇಷ್ಟೇ ನನ್ನ ಬಂಡವಾಳ. ಇದರ ಹೊರತಾಗಿ ಮಾಡಿದ್ದು- ನನ್ನ ಅರಿವಿಗೆ ಬಂದಷ್ಟು ಆಲೋಚನೆಗಳನ್ನು. ಅವುಗಳನ್ನೇ ಇಲ್ಲಿ ಬಿಚ್ಚಿಟ್ಟಿದ್ದೇನೆ. ನಾನಿನ್ನೂ ಎಲ್ಲದನ್ನೂ ಓವರ್‌ಥಿಂಕ್ ಮಾಡಿಕೊಂಡು ಬದುಕುವ ಬಿಸಿರಕ್ತದ ಹುಡುಗಿ, ಇಲ್ಲಿಯೂ ಅದನ್ನೇ ಮಾಡಿರಬಹುದು. ಸದ್ಯಕ್ಕೆ ಇದನ್ನ ನನಗೆ ಘೋಚರವಾದ ಹಿಮಾಲಯ ಅಂತ ಅಂದುಕೊಳ್ಳೋಣ.

ಹಿಮಾಲಯ ಮತ್ತು ಬೆಚ್ಚಗಿನ ನೆನಪು
ಹಿಮಾಯಲದ ಮೇರು ಪರ್ವತಗಳು, ಅವುಗಳ ಅಗಾಧತೆ, ಒಂದು ಕ್ಷಣಕ್ಕೆ ರಮಣೀಯವಾಗಿಯೂ, ಇನ್ನೊಂದು ಕ್ಷಣಕ್ಕೆ ಭೀಕರವಾಗಿಯೂ ಕಾಣುತ್ತಿದ್ದ; ಹೇಳಿ ವರ್ಣಿಸಲಸಾಧ್ಯವಾದ ಬೃಹತ್- ಎನ್ನಿಸುವ ಭೂ ಸೃಷ್ಠಿ! ಈ ಶ್ರೇಣಿಯ ಶಿಖರದ ಮೇಲೆ ನಿಂತಾಗ ಮೂಡುವ ಶೂನ್ಯ ಭಾವ, ಅಲ್ಪ ಎನ್ನಿಸುವ ಮನುಷ್ಯ ರೂಪ, ಸೂರ್ಯನ ಪ್ರಖರ ತೇಜಸ್ಸಿಗೂ ಕರಗದೇ ಕುಳಿತ ಹಿಮ, ತನ್ನೊಡನೆ ಬೇಕು-ಬೇಡಗಳನೆಲ್ಲ ಸೇರಿಸಿಕೊಂಡು ಭರದಿಂದ ಹರಿಯುವ ಹಿಮಾಲಯದ ರೌದ್ರ ನದಿಗಳು, ಆರು ಲೇಯರ್ ಬಟ್ಟೆಯನ್ನೂ ದಾಟಿ ಕೊರೆಯುವ ಚಳಿ- ಎಲ್ಲವನ್ನು ಹತ್ತಿರದಿಂದ ಅನುಭವಿಸಿದಾಗಲೇ ಅರ್ಥವಾಗಿದ್ದು: ಹಿಮಾಲಯದಲ್ಲೇ ಏಕೆ ಜನರು ಸಾಧುಗಳಾಗೋದು, ಹಿಮಾಲಯಕ್ಕೆ ಹೋದರೆ ವಿರಕ್ತಿಯೇಕೆ ಮೂಡುತ್ತದೆ ಎಂದು!
ಈ ಮಹಾ ಪರ್ವತಗಳು, ಬೃಹತ್ ಆಕೃತಿಗಳ ಮುಂದೆ ಕಾಲ ಕಸದಷ್ಟೂ ಇಲ್ಲದ ಮನುಷ್ಯ, ಆ ತುತ್ತತುದಿಯನ್ನೂ ತಲುಪಿ, ರಸ್ತೆ ನಿರ್ಮಿಸಿ, ಕರೆಂಟು ಕಂಬ ನಿಲ್ಲಿಸಿ, ನೆಲೆ ಕಾಣಬಲ್ಲ. ಸಣ್ಣ ಕಂಪನಕ್ಕೆ ಕುಸಿದ ಗುಡ್ಡವನ್ನು ಮರುದಿನ ಬೆಳಗ್ಗೆ ‘ಅಂಗಳದಲ್ಲಿನ ತರಗೆಲೆಯ ಗುಡಿಸುವಂತೆ’ ಮಣ್ಣ ರಾಶಿಯನ್ನೆತ್ತಿ ಆಚೆ ಹಾಕುತ್ತಿದ್ದ ಜನರ ಗುಂಪು, ಅದಕ್ಕೂ ತನಗೂ ಸಂಬಂಧವಿಲ್ಲದಂತೆ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ಸಾವಿರಾರು ಟೂರಿಸ್ಟ್ ಟ್ಯಾಕ್ಸಿಗಳು, ಆಗಷ್ಟೇ ಬಿದ್ದ ಹಿಮದ ಮೇಲೆ ಟೇಬಲ್ ಇಟ್ಟುಕೊಂಡು ಹೊಗೆಯಾಡಿಸುತ್ತ ಘಂ ಎನ್ನುತ್ತಿದ್ದ ಪಹಾಡೀ ಮ್ಯಾಗಿ ಸ್ಟಾಲ್‌ಗಳು, ಮೂವತ್ತು ಕೆಜಿ ಉಡುಪು ಧರಿಸಿ- ಹಿಮದ ಮೇಲೆ ಅಂಗಾತ ಮಲಗಿ ಸೂರ್ಯನನ್ನು ದಿಟ್ಟಿಸುತ್ತಿದ್ದ ನಮ್ಮಂತ ಟೂರಿಸ್ಟ್‌ಗಳು, ಮದರಂಗಿಯಿನ್ನೂ ಅಳಿಸದ-ಕೆಂಪು ಬಳೆಗಳು ತುಂಬಿದ ಕೈಗಳ ನವಜೋಡಿಗಳ ಹನಿಮೂನ್ ಫೊಟೋಶೂಟುಗಳು, ಬಿಡುವಿಲ್ಲದೇ ವಿವಿಧ ವ್ಯಾಪಾರದಲ್ಲಿ ತೊಡಗಿದ್ದ ಇನ್ನೊಂದಷ್ಟು ಜನರ ಗುಂಪು, ತನ್ನಿಚ್ಛೆಯಂತೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಗಳು, ನದಿ ಪಕ್ಕದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕಟ್ಟಿಕೊಂಡ ಹೋಮ್‌ಸ್ಟೇ/ ರೆಸಾರ್ಟುಗಳು ಒಂದು ಕಡೆ.
ಇನ್ನೊಂದು ಕಡೆ- ಈ ಎಲ್ಲವನ್ನೂ ಸಹಿಸಿಕೊಂಡು, ಈ ಮನುಷ್ಯ ಸಂಕುಲದ ಸಿಲ್ಲಿತನವನ್ನು ನೋಡುತ್ತಾ, ಬಹುಶಃ ತನ್ನಷ್ಟಕ್ಕೇ ನಗುತ್ತ ನಿಂತಿದ್ದ, ನಮ್ಮನೆಲ್ಲ ಹೊತ್ತಿದ್ದಲ್ಲದೇ ರೋಹ್‌ತಾಂಗ್ (ಪರ್ಷಿಯನ್‌ನಲ್ಲಿ ‘ಹೆಣಗಳ ರಾಶಿ’) ಅನ್ನೋ ಹೆಸರನ್ನೂ ಹೊತ್ತಿದ್ದ ಬೆಟ್ಟದ ಸಾಲು! ಈ ಬೆಟ್ಟಗಳನ್ನು ಏರಿದ್ದೇನೆ, ನೋಡಿದ್ದೇನೆ, ನನಗೆ ಬೇಕಾದಲ್ಲಿ ಗುಡ್ಡ ಕಡಿದು ರಸ್ತೆ ಇನ್ನೊಂದು-ಮತ್ತೊಂದು ನಿರ್ಮಿಸಿದ್ದೇನೆ ಎಂಬ ಗರ್ವ ಮನುಷ್ಯನಿಗೆ ಬಂದಿರೋದು ಅರಿವಾಗಿ, ಬೆಟ್ಟಗಳ ಈಗೋ ಹರ್ಟ್ ಆದರೆ, ಒಮ್ಮೆ ಅದು ಮೈ ಕೊಡವಿಕೊಂಡರೆ, ರೋಹ್‌ತಾಂಗ್ ಹೆಸರಿರೋ ಬೆಟ್ಟಗಳ ಕಣಿವೆಯಲ್ಲಿ ಹೇಳಹೆಸರಿಲ್ಲದ ಹೆಣವಾಗೋದಂತೂ ಪಕ್ಕಾ! ಇಂಥದ್ದು ಆಗಿರೋ ಉದಾಹರಣೆಯಂತೂ ನಮ್ಮಲ್ಲಿ ಬೇಕಾದಷ್ಟಿವೆ! ಇದನ್ನೆಲ್ಲ ಯೋಚಿಸುತ್ತ ಮುಂದಿರುವ ಪರ್ವತ ಶ್ರೇಣಿಗಳನ್ನು ನೋಡುತ್ತಾ ನಿಂತಿದ್ದಾಗ- ಕಾಲಡಿಯ ಪರ್ವತ ಫುಲ್ ಕಾನ್ಫಿಡೆನ್ಸಲ್ಲಿ ಗಟ್ಟಿಯಾಗಿ ನಿಂತಿದ್ದರೂ, ನನ್ನ ಕಾನ್ಫಿಡೆನ್ಸ್ ಅಡಗಿ, ಕಾಲು ನಡುಗಿ, ತಲೆ ತಿರುಗಿ, ನೆಲ ಅದುರಿದಂತೆ ಅನಿಸಿದ್ದಂತೂ ಸುಳ್ಳಲ್ಲ. ಈ ಅನುಭವವಾದ ಮೇಲೆ ಜೀವದ ಮೇಲೆ ಭಯ ಹೆಚ್ಚಾಯಿತೋ, ಜೀವ-ನ-ಶ್ವರ ಅನ್ನಿಸಿತೋ ಈಗಲೂ ಅರ್ಥವಾಗುತ್ತಿಲ್ಲ. ಒಂದೇ ಕ್ಷಣಕ್ಕೆ ಎರಡೂ ಅನ್ನಿಸುತ್ತಿತ್ತೆಂದರೆ ತಪ್ಪಿಲ್ಲ.

ಮನುಷ್ಯನ ಆಸೆಗೆ ಮಿತಿಯಲ್ಲ; ತನ್ನ ಸಾಮರ್ಥ್ಯ ತೋರಿಸದೇ ಪ್ರಕೃತಿಗೆ ಬೇರೆ ಗತಿಯಿಲ್ಲ. ಆದರೂ, ಮನಾಲಿಯ ನಡುವೆ ಹರಿಯುವ ಬೀಸ್ ನದಿಯನ್ನು ನೋಡಿದಾಗ ಮನಸಿಗೆ ಹಿಂಸೆಯಾಯಿತು. ಆ ನದಿಯ ದಡದಲ್ಲೇ ಮನಾಲಿ ಊರಿರೋದು. ಮನಾಲಿ ಬೆಳೆಯುತ್ತಿದ್ದಂತೆ, ಊರು ವಿಸ್ತಾರವಾಗುತ್ತಾ ಬೀಸ್ ನದಿಯ ಪಾತ್ರವನ್ನು ಇಂಚಿಂಚಾಗಿ ಕಬಳಿಸಿತ್ತು. ಉಕ್ಕಿ ಹರಿಯುವ ನದಿ, ತನ್ನ ಅಸ್ತಿತ್ವ ಕಳೆದುಕೊಳ್ಳಲು ತಯಾರಿಲ್ಲದೇ ತನ್ನ ಪಾತ್ರವನ್ನು ಮತ್ತೆ ಹಿಗ್ಗಿಸಿಕೊಂಡಾಗ, ಚಾಚಿಕೊಂಡಿದ್ದ ಊರು ಕೊಚ್ಚಿ ಹೋಯಿತು. ಈಗ ಕೊಚ್ಚಿಹೋದ ದಡದ, ಅಸ್ತವ್ಯಸ್ತ ನೆಲದ ಮೇಲೆ ಜೆಸಿಬಿ-ಲಾರಿಗಳು ಹೊಸತೊಂದು ರಸ್ತೆ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಸದ್ಯಕ್ಕೆ ತಣ್ಣಗೆ ಶಾಂತವಾಗಿ ಹರಿಯುತ್ತಿರುವ ಬೀಸ್ ನದಿ- ತನ್ನೊಳಗೆ ದ್ವೇಷವನ್ನು ಹಿಡಿದಿಟ್ಟುಕೊಂಡು ಬುಸುಗುಡುತ್ತಾ, ಮುಂದಿನ ಮಳೆಗಾಲಕ್ಕೋ, ಇನ್ನೊಂದು ಮೇಘ ಸ್ಫೋಟಕ್ಕೋ ಕಾಯುತ್ತ ಹಾವಿನಂತೆ ಹರಿಯುತ್ತಿರುವಂತೆ ಭಾಸವಾಗುತ್ತದೆ. ಒಮ್ಮೆ ದ್ವೇಷ ಹೊತ್ತ ಹಾವಿನ ಹಾಗೂ ಇನ್ನೊಮ್ಮೆ, ದೌರ್ಜನ್ಯಕ್ಕೊಳಗಾದ ಸುಕೋಮಲೆಯ ಹಾಗೂ ತೋರುತ್ತಾ ತನ್ನಷ್ಟಕ್ಕೆ ಹರಿಯುವ ನದಿಯ ನೋಡಿ ಮನುಷ್ಯನ ಮೇಲೆ, ತನ್ನ ಬುದ್ಧಿಯನ್ನು ‘ಮನುಷ್ಯತ್ವ’ ಅಂತ ಕರೆಯುವ ಬಗ್ಗೆ ಸ್ವಲ್ಪ ಅಸಮಾಧಾನ ಉಂಟಾಯಿತು.
ಇಷ್ಟೆಲ್ಲ ಹೇಳಿದ್ದು ನೋಡಿ, ಪ್ರವಾಸ ಇಷ್ಟು ನೆಗೆಟಿವಿಟಿಯದ್ದಾಗಿತ್ತು ಅಂತಲ್ಲ. ಪ್ರವಾಸವಂತೂ ಸ್ವಲ್ಪವೂ ತೊಂದರೆಯಿಲ್ಲದೇ, ನಮ್ಮವರನ್ನು ಇನ್ನೂ ಹತ್ತಿರವಾಗಿಸಿ, ಹೊರ ಊರು, ಆಹಾರ, ವಸ್ತ್ರ, ವೈವಿಧ್ಯಗಳನ್ನ ತೋರಿಸಿ, ನೆನಪಿನ ಬುತ್ತಿಯಲ್ಲಿ ಅಚ್ಚಳಿಯದ ಅದ್ಭುತ ಅಧ್ಯಾಯವಾಗಿದೆ. ಏನೇ ಆದರೂ, ಮನುಷ್ಯತ್ವಕ್ಕಿಂತ ನಿಸರ್ಗತತ್ವವೇ ಸಹಜ. ಮನುಷ್ಯತ್ವಕ್ಕೆ ಸ್ವಾರ್ಥವಿದೆ, ನಿಸರ್ಗದ್ದು ನಿಸ್ವಾರ್ಥ ಎಂಬುದು ನನ್ನ ಭಾವನೆ.
(ಲೇಖಕರು: ಚಿತ್ರಕತೆ ಬರಹಗಾರ್ತಿ ಮತ್ತು ಹವ್ಯಾಸಿ ಲೇಖಕಿ)