Wednesday, February 4, 2026
Wednesday, February 4, 2026

ನಹಿ ಮೈ ಕರ್ನಾಟಕ ಸೆ ಹೂಂ!...

ಜೈಸಲ್ಮೇರ್ ಕೋಟೆ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ಕೋಟೆ! It's a living fort. ಇಂದಿಗೂ ಸಾವಿರಾರು ಕುಟುಂಬಗಳು ನೆಲೆಸಿರುವ ಜಾಗ ಅದು. ಕೋಟೆಯ ಬಾಗಿಲಲ್ಲಿ ಇಳಿದು ನಡೆದು ಹೋಗುತ್ತಿದ್ದಂತೆಲ್ಲ ರಾಜಸ್ಥಾನದ ಸಂಸ್ಕೃತಿಯ ಅನಾವರಣವಾಗುತ್ತಾ ಹೋಯಿತು. ಎಡಬದಿಯಲ್ಲಿ ‘ಚುಪ್ನಾ ಜಾವೋ ಜೀ’ ಹಾಡು ಕೇಳುತ್ತಾ ಇದ್ದರೆ, ಬಲ ಬದಿಯಲ್ಲಿ ರಾಜಸ್ಥಾನಿ ಸಾಂಸ್ಕೃತಿಕ ಉಡುಗೆ ತೊಡಿಸಿ ಫೊಟೋ ತೆಗೆಯುತ್ತಿದ್ದುದು ಕಾಣುತ್ತಿತ್ತು. ಮುಂದೆ ನಡೆದು ಹೋದರೆ ಕಸೂತಿ ಕೆಲಸ, ಕುಸುರಿಯ ಸುಂದರವಾದ ಬೆಡ್‌ಶೀಟ್‌, ಜಾಕೆಟ್‌ಗಳ ಒಂದು ಆರ್ಟ್ ಗ್ಯಾಲರಿ!

- ಸ್ಫೂರ್ತಿ ಮುರಳೀಧರ್‌

ಖಮ್ಮಾ ಗಣಿ! ಅರೆ ಏನಪ್ಪ ಇದು ಕನ್ನಡತಿ ಅಂತ ಹೇಳೋ ಈ ಹುಡುಗಿ ಮಾರ್ವಾಡಿ ಬಳಸ್ತಾ ಇದ್ದಾಳಲ್ಲಾ ಅಂದುಕೊಳ್ಳದಿರಿ..ವಿಷಯ ಇದೆ!

ಇತ್ತೀಚೆಗಷ್ಟೇ ರಾಜಸ್ಥಾನದ ಜೈಸಲ್ಮೇರ್ ಗೆ ಹೋಗಿ ಅಲ್ಲಿನ ಕೋಟೆ ಕೊತ್ತಲಗಳನ್ನು ಸುತ್ತಿ, ಮರುಭೂಮಿಯಲ್ಲಿ ಅಡ್ಡಾಡಿ, ಒಂಟೆ ಸವಾರಿ ಮಾಡಿ, ದಾಲ್ ಪಕ್ವಾನ್, ಕಚೋರಿ ಇಂದ ಘೇವರ್‌ವರೆಗೂ ನಾಲ್ಕು ದಿನಗಳ ಕಾಲ ಮಾರ್ವಾಡಿ ಪಾತ್ರವನ್ನೂ ಪರಕಾಯ ಪ್ರವೇಶ ಮಾಡಿ, ಅನುಭವಿಸಿ, ಒಂದಷ್ಟು ನೆನಪಿನ ಮೂಟೆಯನ್ನು ಕಟ್ಟಿ ಈಗ ನೆನಪಿನ ಬುತ್ತಿಯನ್ನು ನಿಮ್ಮ ಮುಂದೆ ತೆರೆಯುವ ಪ್ರಯತ್ನ ಮಾಡುತ್ತಿದ್ದೇನೆ.

ಇದನ್ನೂ ಓದಿ: ಬೀದರ್‌ ಎಂದರೆ ಬಿಸಿಲುನಾಡಲ್ಲ ಇತಿಹಾಸ, ಶಿಲ್ಪಕಲೆಯ ತೊಟ್ಟಿಲು

ʼTravelling is my hobbyʼ ಅನ್ನೋದು ಕೂಲ್ ಸೌಂಡಿಂಗ್ ಆಗಿದ್ದರೂ, ಅದು ನಿಜವಾಗಿಯೂ ನನ್ನ ಹವ್ಯಾಸವಾ ಅನ್ನೋದು ಪರಿಚಯವಾಗೋಕೆ ಸ್ವಲ್ಪ ಸಮಯ ಬೇಕಾಗಿತ್ತು. ಕೆಲಸ ನಿಮಿತ್ತದ ಓಡಾಟ, ಯಾವುದೋ ಡಿಬೇಟ್, ಲಿಟ್ ಫೆಸ್ಟ್ ಅಂತ ಸುತ್ತುವ, ನಿನ್ನ ಕಾಲು ಒಂದು ಕಡೆ ನಿಲ್ಲಲ್ಲ ಅಂತ ಅಮ್ಮನಿಂದ ಬೈಸಿಕೊಳ್ಳುವ ನನಗೆ, ಟ್ರಾವೆಲಿಂಗ್ ಹವ್ಯಾಸಕ್ಕಿಂತ ಅಭ್ಯಾಸವಾಗಿದೆ. ಅಭ್ಯಾಸ ಆಗುವಷ್ಟು ಆಪ್ತ ಅಂತ. ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುವುದಕ್ಕೆ ವೀಕೆಂಡ್‌ ಗೇಟ್‌ವೇ ಹೋಗುವುದಕ್ಕಿಂತ ಕೆಲಸದ ಭಾಗವಾಗಿ ಸುತ್ತುವುದರಲ್ಲಿ ಜೀವಂತಿಕೆ ಕಂಡುಕೊಳ್ಳುವುದು ನನ್ನ ಇತ್ತೀಚೆಗಿನ ಆಸಕ್ತಿಯ ವಿಷಯವಾಗಿಬಿಟ್ಟಿದೆ.

jaisalmer

ಹವ್ಯಾಸ, ಅಭ್ಯಾಸದ word game ನ ಸದ್ಯಕ್ಕೆ ಪಕ್ಕಕ್ಕೆ ಇಟ್ಟು, ರಪ್ಪನೆ ರಾಜಸ್ಥಾನಕ್ಕೆ ಹೋಗಿ ಬರೋಣ ಬನ್ನಿ!

ಜೈಸಲ್ಮೇರ್‌ನ ಜಾದೂ

ಸಂಜೆ ಸುಮಾರು ಐದು ಗಂಟೆಯ ಸಮಯ -ʼWe have now arrived in Jaisalmer Airport. Photography and videography are strictly prohibited as this is a defence airportʼ ಅಂತ ಕೇಳಿದ್ದೇ ಥಟ್ಟನೆ, ಬಂದಿದ್ದ ಕೆಲಸ, ಕಾನ್ಫರೆನ್ಸ್, ಎಲ್ಲಾ ಮರೆತು ನನ್ನೊಳಗಿದ್ದ ಪುಟಾಣಿ ಹುಡುಗಿ ಅರೆ ವಾಹ್! Defence airport ಅಲ್ವಾ, ಹೌದು..ಅಂತ ಕಣ್ಣರಳಿಸಿ ವಿಮಾನದ ಕಿಟಕಿಯಿಂದ ಆಚೆ ಕಣ್ಣು ಹಾಯಿಸಲು, ಸಮಯಕ್ಕೆ ಸರಿಯಾಗಿ ವಾಯುದಳದ ಜೆಟ್ ಒಂದು ಹಾಸು ಹೋಯಿತು! Longewala ಇಂಡಿಯಾ - ಪಾಕ್ ಬಾರ್ಡರ್ ಗೂ ಹೋಗ್ತೀವಿ ಅಲ್ವಾ yayy! ಅನ್ಕೊಂಡು ಕೆಳಗೆ ಇಳಿದಾಗಲೇ ಅಮ್ಮ ಹೇಳಿದ ಮಾತು ಕೇಳಬೇಕಿತ್ತು ಅಂತ ಮೈಂಡ್‌ ವಾಯ್ಸ್‌ ಬುದ್ಧಿ ಹೇಳ್ತು! ನಾನೇನೋ ಮರುಭೂಮಿ ಅಲ್ವಾ ಭಯಂಕರ ಬಿಸಿಲು ಅನ್ಕೊಂಡು ಹೋಗಿದ್ರೆ, ಮೈ ನಡುಗಿಸೋ ಚಳಿ! ಬಸ್ ಹತ್ತಿ, ʼಭಯ್ಯಾ AC ಕಾ ಟೆಂಪರೇಚರ್ ಥೋಡಾ ಬಢಾ ದೋʼ ಅನ್ನುವಷ್ಟರಲ್ಲಿ ಕೋಟೆಯ ಮುಂದೆ ಹಾಜರ್ ಆದ್ವಿ! ಹಾಳು ಬಿದ್ದಿರುವ, ಕೇವಲ ಚರಿತ್ರೆಯ ಪುಟಗಳನ್ನು ಅನಾವರಣಗೊಳಿಸುವ ಅಥವಾ ರಾಕಿ loves ರಾಣಿ (ನಿಮ್ಮಿಷ್ಟದ ಹೆಸರನ್ನೂ ಹಾಕಿಕೊಳ್ಳಬಹುದು) ಅಂತ ಗೀಚಲ್ಪಟ್ಟಿರುವ ಶಿಥಿಲಾವಸ್ಥೆಯಲ್ಲಿರುವ ಕೋಟೆಗಳನ್ನೇ ನೋಡಿದ್ದ ನನಗೆ ಇದೊಂದು ವಿಸ್ಮಯವೇ ಸರಿ!

ಜೈಸಲ್ಮೇರ್‌ ಅಂತರಂಗ

ಜೈಸಲ್ಮೇರ್ ಕೋಟೆ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ಕೋಟೆ! It's a living fort. ಇಂದಿಗೂ ಸಾವಿರಾರು ಕುಟುಂಬಗಳು ನೆಲೆಸಿರುವ ಜಾಗ ಅದು. ಕೋಟೆಯ ಬಾಗಿಲಲ್ಲಿ ಇಳಿದು ನಡೆದು ಹೋಗ್ತಿದ್ದಂತೆಲ್ಲ ರಾಜಸ್ಥಾನದ ಸಂಸ್ಕೃತಿಯ ಅನಾವರಣ ಆಗ್ತಾ ಹೋಯ್ತು. ಎಡಬದಿಯಲ್ಲಿ ʼಚುಪ್ನಾ ಜಾವೋ ಜೀʼ ಹಾಡು ಕೇಳ್ತಾ ಇದ್ರೆ, ಬಲ ಬದಿಯಲ್ಲಿ ರಾಜಸ್ಥಾನಿ ಸಾಂಸ್ಕೃತಿಕ ಉಡುಗೆ ತೊಡಿಸಿ ಫೊಟೋ ತೆಗೆಯುತ್ತಿದ್ದದ್ದು ಕಾಣ್ತಿತ್ತು. ಮುಂದೆ ನಡೆದು ಹೋದ್ರೆ ಕಸೂತಿ ಕೆಲಸ, ಕುಸುರಿಯ ಸುಂದರವಾದ ಬೆಡ್‌ಶೀಟ್, ಜಾಕೆಟ್‌ಗಳ ಒಂದು ಆರ್ಟ್ ಗ್ಯಾಲರಿ! ಅಲ್ಲಿನ ಕೆಂಪು, ಕೇಸರಿ, ಹಳದಿ, ಗುಲಾಬಿ ಬಣ್ಣಗಳು ಜೀವಂತಿಕೆಯನ್ನು ಸಾರಿ ಸಾರಿ ಹೇಳ್ತಾ ಇತ್ತು! ಅಲ್ಲೇ ಬದಿಯಲ್ಲಿ ಇದ್ದ ಒಂದು ರಾಶಿ ಬಳೆಗಳಲ್ಲಿ ಎರಡನ್ನು ಆಯ್ದು ತೊಟ್ಟುಕೊಂಡ ನಂತರ, ಮೆಹೆಂದಿ ಹಾಕಿಸುವ ಹುಚ್ಚು ಹೆಚ್ಚಾಗಿ ಅದಕ್ಕೂ ಸೈ ಅಂದು, ಮುನ್ನಡೆದಾಗ ಒಂದು ನಾಲ್ಕು ಜನ ʼಆಪ್ ಕೇರಳ ಸೇ ಹೋ ಕ್ಯಾʼ ಅಂದವರಿಗೆ ʼನಹಿ ಮೈ ಕರ್ನಾಟಕ ಸೆ ಹೂಂʼ ಅಂದು ಮುನ್ನಡೆದಾಗ ಕಣ್ಣಿಗೆ ಕಂಡಿದ್ದು, ಕೋಟೆಯ ಗೋಡೆಯ ಮೇಲಿನ ಜೋಹರ್ ನ ಕುರುಹುಗಳು!

Untitled design (82)

ರಾವಲ್ ಜೈಸಲ್ ಕಟ್ಟಿದ ಸಂಸ್ಥಾನವೇ ಜೈಸಲ್ಮೇರ್. ಇದು ರಾಜಸ್ಥಾನದ ಮಾರ್ವಾಡ್ ಪ್ರದೇಶದಲ್ಲಿ ಬರುವುದಾಗಿಯೂ, ಇವರು ದ್ವಾಪರಯುಗದ ಶ್ರೀ ಕೃಷ್ಣನ ವಂಶಸ್ಥರು ಅಂತ ತಿಳಿದು ಆಶ್ಚರ್ಯಚಕಿತಳಾದೆ. 158 ನೆಯ ತಲೆಮಾರು ಇಂದಿಗೂ ಆ ವಂಶದ ಪರಂಪರೆ ಮತ್ತು ಸಂಸ್ಕೃತಿಯನ್ನ ಸಂಭ್ರಮಿಸ್ತಾ ಬಂದಿದೆ. ಕೋಟೆಯ ಸಂಗ್ರಹಾಲಯವನ್ನು ಒಳಹೊಕ್ಕಾಗ ಅಲ್ಲಿ ಕಂಡು ಬಂದದ್ದು ಬರೋಬ್ಬರಿ 7 ಅಡಿ ಉದ್ದ, 3.5 ಅಡಿ ಅಗಲ ಮತ್ತು 250 ಕೆಜಿ ತೂಕದ ರಾವಲ್ ಶಾಲಿವಾಹನ್ ಸಿಂಗ್ ಅವರು ಧರಿಸುತ್ತಿದ್ದ ಉಡುಪುಗಳು. ಬೇರೆ ಎಲ್ಲಾ ವಸ್ತು ಸಂಗ್ರಹಾಲಯಗಳಂತೆಯೇ ಅಲ್ಲಿಯೂ ಒಂದಷ್ಟು ರಾಜಮನೆತನದವರು ಬಳಿಸುತ್ತಿದ್ದ ಪಾತ್ರೆ, ಪಗಡೆ, ಒಡವೆ, ವಸ್ತ್ರ ಯುದ್ಧೋಪಕರಣಗಳನ್ನ ಕಂಡು ಮುನ್ನಡೆದಾಗ ಕಂಡಿದ್ದು, ಬಂಗಾರದ ಛತ್ರಿಯ ಸಹಿತವಾದ, ಬೆಳ್ಳಿಯ ರಾಜ ಸಿಂಹಾಸನ ಮತ್ತದರ ಮೇಲೊಂದು ರಾಜ ಖಡ್ಗ. ರಾಜನ ಅನುಪಸ್ಥಿತಿಯಲ್ಲಿಯೂ ಅವನ ಇರುವಿಕೆಯ ಸಿಂಹಸ್ವಪ್ನವನ್ನು ಶತ್ರುಗಳ ಎದೆಯಲ್ಲಿ ನಾಟುತ್ತಿದ್ದ ನಮ್ಮವರ ರಾಜತಾಂತ್ರಿಕ ನಡೆಗೆ ಮನಸಲ್ಲೇ ಒಂದು ಶಹಭಾಷ್ ಹೇಳಿ ಮುನ್ನಡೆದಾಗ ಊಟದ ಸಮಯ ಆಗಿದೆ, ಹೊಟ್ಟೆ ತಾಳ ಹಾಕ್ತಿದೆ ಅಂತ ಅಲ್ಲೇ ಇದ್ದ ಒಂದು ರಾಜಸ್ಥಾನಿ ಖಾನಾವಳಿಗೆ ಹೋಗಿ ಊಟ ಮಾಡೋಕೆ ಕೂತೆವು. ಬಾಜ್ರಾ ರೊಟ್ಟಿ, ಖೇರ್ ಸಾಂಗ್ರಿ, ಗಟ್ಟೇ ಕಿ ಸಬ್ಜಿ, ದಾಲ್ ಭಾಟಿ ಚೂರ್ಮ, ಕಡಿ, ಅನ್ನ ಎಲ್ಲವನ್ನೂ ಪ್ರೀತಿಯಿಂದ ಉಣ ಬಡಿಸಿದರು. ಅವರೇ ಬಂದು ಕೇಳಿ ಕೇಳಿ ಬಡಿಸುತ್ತಿದ್ದ ರೀತಿ, ಅಮ್ಮನ ಥರ ಹೊಟ್ಟೆ ತುಂಬಾ ತಿನ್ನಿ ಎಂದು ಅಪ್ಯಾಯಮಾನವಾಗಿ ಹೇಳಿದ್ದು, ದೂರದೂರಿನ ಮನೆಯ ನೆನಪನ್ನು ತಂದಿತ್ತು. ಇಷ್ಟೂ ಆಗಿ ಚಳಿ ತಡೆಯೋಕೆ ಆಗದೆ ಅಲ್ಲೇ ಚಳಿ ಕಾಯಿಸುತ್ತಿದ್ದ ಒಂದಷ್ಟು ವೃದ್ಧರ ಮಧ್ಯೆ ನಾನೂ ಹೋಗಿ ಚಳಿ ಕಾಯಿಸಿಕೊಳ್ಳುವಾಗ ಅವರೊಂದಿಗೆ ಮಾತಿಗೆ ಇಳಿದಾಗ ಗೊತ್ತಾಗಿದ್ದು! ವರ್ಷದ ಬೇರೆ ಬೇರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯದ ಜನ ಅಲ್ಲಿಗೆ ಪ್ರವಾಸಿಗರಾಗಿ ಬರುತ್ತಾರೆ! ಹಾಗೆಯೇ ನಾವು ಹೋಗಿದ್ದ ಎರಡು ದಿನದ ಮುಂಚೆ ದೆಹಲಿಯ ಕೋಟಾ ಮುಗಿದಿತ್ತು. ಈಗ ಕೇರಳದ ಸರದಿ ಶುರುವಾಗಿತ್ತು ಅಂತ. ಆದ ಕಾರಣ ಸಂಜೆಯ - ಕನ್ನಡಿಗೆ ಕೇಳಿದ್ದ ಮಲಯಾಳಿ ಆಣೋ ಪ್ರಶ್ನೆಗೆ ಉತ್ತರ ಸಿಗಲಾಗಿ, ಸ್ಪೂರ್ತಿಯ ರಾಜಸ್ಥಾನ ಪುರಾಣದ, ಜೈಸಲ್ಮೇರ್ ಖಂಡದ ಮೊದಲನೇ ಅಧ್ಯಾಯ ಇಲ್ಲಿಗೆ ಮುಕ್ತಾಯ.

(ಲೇಖಕರು: ಕಂಪನಿ ಸೆಕ್ರೆಟರಿ, ವಕೀಲೆ, ಭಾಷಣಗಾರ್ತಿ)

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ