Wednesday, February 4, 2026
Wednesday, February 4, 2026

ಬೀದರ್‌ ಎಂದರೆ ಬಿಸಿಲುನಾಡಲ್ಲ ಇತಿಹಾಸ, ಶಿಲ್ಪಕಲೆಯ ತೊಟ್ಟಿಲು

ಸಾಮಾನ್ಯವಾಗಿ ಕರ್ನಾಟಕದ ಶಿಲ್ಪಕಲೆಯ ಬಗ್ಗೆ ಮಾತನಾಡಿದಾಗ ಬೇಲೂರು, ಹಳೆಬೀಡು ದೇವಸ್ಥಾನಗಳು ಮಾತ್ರ ಬರುತ್ತವೆ. ಆದರೆ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಜಲಸಂಗವಿ ಮತ್ತು ನಾರಾಯಣಪುರದಲ್ಲಿ ನಿರ್ಮಿಸಲಾದ ದೇವಾಲಯಗಳು ವಾಸ್ತುಶಿಲ್ಪದಲ್ಲಿ ತನ್ನದೆಯಾದ ಹಿರಿಮೆಯನ್ನು ಹೊಂದಿದೆ. ಹೊಯ್ಸಳ ಶಿಲ್ಪ ಭಾವನಾತ್ಮಕವಾಗಿದ್ದರೆ, ಕಲ್ಯಾಣಿ ಚಾಲುಕ್ಯ ಶಿಲ್ಪಕಲೆ ಬೌದ್ಧಿಕ. ಒಂದರಲ್ಲಿ ಕಥೆ ಕಾಣಿಸಿದರೆ, ಇನ್ನೊಂದರಲ್ಲಿ ತತ್ತ್ವ ಕಾಣಿಸುತ್ತದೆ. ಈ ವ್ಯತ್ಯಾಸ ಶ್ರೇಷ್ಠ ಮತ್ತು ಕನಿಷ್ಟದಲ್ಲಲ್ಲ, ಶೈಲಿಯಲ್ಲಿ ಮಾತ್ರ.

- ಈಶ್ವರ ಬಿ ಮಠಪತಿ

‘ಅಯ್ಯೋ… ಬೀದರ್ ಅಂದ್ರೆ ಬಿಸಿಲು, ಗಡಿನಾಡು ಅಲ್ವಾ?’ ಹಲವು ವರ್ಷಗಳಿಂದ ಈ ಪ್ರಶ್ನೆ ಬೀದರ್‌ಗೆ ಅಂಟಿಕೊಂಡಿದೆ. ನಮ್ಮ ರಾಜ್ಯ ಶುರುವಾಗೋದೇ ಬೀದರ್‌ನಿಂದ ಎನ್ನುವುದು ನೆನಸಿಕೊ೦ಡರೆ, ಮಾತಿಗೆ ಅರ್ಥವೂ ಇಲ್ಲಎಂಬಂತಾಗುತ್ತದೆ. ಬೀದರ್ ಗಡಿಯಲ್ಲಿದ್ದರೂ, ಇತಿಹಾಸದಲ್ಲಿ ಇದು ರಾಜಧಾನಿಯಾಗಿತ್ತು, ಚಿಂತನೆಯ ಕೇಂದ್ರವಾಗಿತ್ತು, ಕ್ರಾಂತಿಯ ನೆಲವಾಗಿತ್ತು ಎಂಬುದು ಇನ್ನೂ ಎಷ್ಟೋ ಜನರಿಗೆ ತಿಳಿದೇ ಇಲ್ಲ.

ಬೀದರ್ ಜಿಲ್ಲೆ ದಕ್ಕನ್ ಪೀಠಭೂಮಿಯ ಎತ್ತರದ ಪ್ರದೇಶದಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು 2200 ಅಡಿ ಎತ್ತರದಲ್ಲಿದೆ. ಈ ಎತ್ತರವೇ ಬೀದರ್‌ಗೆ ವಿಶಿಷ್ಟ ಹವಾಮಾನವನ್ನು ನೀಡಿದೆ. ಉತ್ತರ ಕರ್ನಾಟಕದ ಉರಿಯುವ ಬಿಸಿಲಿನ ಪ್ರದೇಶಗಳಿಗಿಂತ, ಬೀದರ್‌ ನಲ್ಲಿ ತಂಪಾದ ಮುಂಜಾವು, ಶಾಂತಿಯುತವಾದ ಸಂಜೆ ಮತ್ತು ಮಳೆಗಾಲದಲ್ಲಿ ಹಸಿರು ವಾತಾವರಣ ಹೊಂದಿದೆ. ಇಂಥ ಪ್ರದೇಶಕ್ಕೆ “ಬಿಸಿಲುನಾಡು” ಎಂದು ಕರೆಯುವುದು ಅವರವರ ವಿವೇಚನೆಗೆ ಬಿಟ್ಟದ್ದು!

ಇದನ್ನೂ ಓದಿ: ಕುರುಗೋಡಿನಲ್ಲೊಬ್ಬ ಕಿರುಕೊಡಿನ ದೊಡ್ಡ ಬಸವ

ದಕ್ಕನ್ನರ ನಗರ

ಬೀದರ್ ಕೋಟೆ ಕೇವಲ ಯುದ್ಧಕ್ಕಾಗಿ ನಿರ್ಮಿಸಲಾದ ಕೋಟೆಯಲ್ಲ. ಇದು ಸಂಪೂರ್ಣ ಆಡಳಿತ ನಗರ. ಕಲ್ಯಾಣಿ ಚಾಲುಕ್ಯರು ಈ ಪ್ರದೇಶದ ತಂತ್ರಾತ್ಮಕ ಶಕ್ತಿಯನ್ನು ಮೊದಲೇ ಗುರುತಿಸಿದ್ದರು. ಆದ್ದರಿಂದ 1427ರಲ್ಲಿ ಬಹಮನಿ ಸುಲ್ತಾನ ಅಹ್ಮದ್ ಶಾಹ್ ವಲಿ ಗುಲ್ಬರ್ಗದಲ್ಲಿದ್ದ ರಾಜಧಾನಿಯನ್ನು ಬೀದರ್‌ಗೆ ಸ್ಥಳಾಂತರಿಸಿದ. ನಂತರ, ಈ ಕೋಟೆ ದಕ್ಕನ್ನ ರಾಜಕೀಯದ ಹೃದಯವಾಯಿತು.

Untitled design (80)

ಕೋಟೆಯೊಳಗೆ ಅರಮನೆಗಳು, ನ್ಯಾಯಾಲಯಗಳು, ದಿವಾನ್–ಇ–ಆಮ್, ದಿವಾನ್–ಇ–ಖಾಸ್, ಸೈನಿಕ ಶಿಬಿರಗಳು ಮತ್ತು ನೀರಿನ ವ್ಯವಸ್ಥೆಗಳಿದ್ದವು. 37 ಬಲಿಷ್ಠ ಬುರುಜುಗಳು ಮತ್ತು ಆಳವಾದ ಕಂದಕಗಳು, ಈ ಕೋಟೆಯ ರಕ್ಷಣಾ ಸಾಮರ್ಥ್ಯವನ್ನು ತೋರಿಸುತ್ತವೆ.

ಅಸ್ತೂರ್ ಸಮಾಧಿಗಳು

ಅಸ್ತೂರ್ ಗ್ರಾಮದ ಸಮಾಧಿಗಳು ಬಹಮನಿ ಸುಲ್ತಾನರ ಕೊನೆಯ ವಿಶ್ರಾಂತಿ ಸ್ಥಳಗಳು. 15ನೆಯ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಗಳು ಪರ್ಷಿಯನ್–ಇಸ್ಲಾಮಿಕ್ ವಾಸ್ತುಶಿಲ್ಪದ ಕನ್ನಡಿಯಾಗಿದೆ. ಗುಮ್ಮಟಗಳು, ಒಳಾಂಗಣ ಅಲಂಕಾರ ಮತ್ತು ಶಾಸನಗಳು ಆ ಕಾಲದ ರಾಜಕೀಯ ಘನತೆ ಮತ್ತು ಕಲಾತ್ಮಕ ಸಂವೇದನೆಯನ್ನು ಪ್ರತಿಬಿಂಬಿಸುತ್ತವೆ.

ಮದರಸಾ

1472ರಲ್ಲಿ ಬಹಮನಿ ಸಾಮ್ರಾಜ್ಯದ ಪ್ರಧಾನಮಂತ್ರಿ ಮಹಮೂದ್ ಗವಾನ್ ಈ ಮದರಸಾವನ್ನು ಸ್ಥಾಪಿಸಿದ. ಇದು ಕೇವಲ ಧಾರ್ಮಿಕ ಶಿಕ್ಷಣ ಕೇಂದ್ರವಾಗಿರಲಿಲ್ಲ. ಗಣಿತ, ಖಗೋಳಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ವೈದ್ಯಶಾಸ್ತ್ರ ಇಲ್ಲಿ ಬೋಧಿಸಲಾಯಿತು. ದಕ್ಕನ್ ಪ್ರದೇಶದ ಮೊದಲ ವಿಶ್ವವಿದ್ಯಾಲಯ ಮಾದರಿಗಳಲ್ಲಿ ಇದೊಂದು.

ನಾನಕ್ ಝೀರಾ

ಸಿಖ್ಖರ ಪರಮ ಗುರು ನಾನಕ್ ವರರು ಬೀದರ್‌ಗೆ ಬಂದಾಗ ನಗರ ಬರಗಾಲದಿಂದ ನರಳುತ್ತಿತ್ತು. ಸ್ಥಳೀಯ ನಂಬಿಕೆಯ ಪ್ರಕಾರ, ಅವರು ಭೂಮಿಯನ್ನು ಸ್ಪರ್ಶಿಸಿದಾಗ ನೀರು ಹೊರಹೊಮ್ಮಿತು. ಆ ನೀರೇ ‘ಝೀರಾ’. ಇಂದು ಈ ಗುರುದ್ವಾರ ಸೇವೆ, ಸಮಾನತೆ ಮತ್ತು ಮಾನವೀಯತೆಯ ಸಂಕೇತವಾಗಿದೆ.

ನರಸಿಂಹ ಝರಣಿ

ನರಸಿಂಹ ಝರಣಿ ದೇವಾಲಯ ಭೂಗರ್ಭ ಜಲಧಾರೆಯ ಮಧ್ಯ ಇರುವ ಅಪರೂಪದ ತೀರ್ಥ. ಭಕ್ತರು ನೀರಿನೊಳಗೆ ನಡೆದು ಗುಹೆಯೊಳಗೆ ದೇವರ ದರ್ಶನ ಪಡೆಯುತ್ತಾರೆ. ಪ್ರಹ್ಲಾದನ ರಕ್ಷಣೆಗಾಗಿ ನರಸಿಂಹ ಅವತಾರ ಧರಿಸಿದ ವಿಷ್ಣುವಿನ ಸ್ಮರಣಾರ್ಥ ಈ ತಾಣ ಬೆಳೆಯಿತು.

ಪಾಪನಾಶ ತೀರ್ಥ

ಪುರಾಣದ ಪ್ರಕಾರ, ವನವಾಸದ ವೇಳೆ ಶ್ರೀರಾಮನು ಇಲ್ಲಿ ಶಿವನನ್ನು ಆರಾಧಿಸಿದನು. ಈ ತೀರ್ಥವು ಶತಮಾನಗಳಿಂದ ಶಾಂತಿ ಮತ್ತು ಆತ್ಮಶುದ್ಧಿಯ ನೆಲೆಯಾಗಿದೆ.

ಜಲಸಂಗವಿ ದೇವಸ್ಥಾನ

ಜಲಸಂಗವಿ ಗ್ರಾಮದಲ್ಲಿರುವ ಈ ದೇವಾಲಯ 11ನೆಯ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಯಿತು. ಸರಳ ಆದರೆ ಸೂಕ್ಷ್ಮ ಶಿಲ್ಪಗಳು, ಸಮತೋಲನದ ವಿನ್ಯಾಸ ಚಾಲುಕ್ಯ ವಾಸ್ತುಶಿಲ್ಪದ ಪರಿಪಕ್ವತೆಯನ್ನು ತೋರಿಸುತ್ತವೆ.

Untitled design (79)

ಶಿಲ್ಪಕಲೆಯ ಉತ್ತರಾಧಿಕಾರಿ

ಸಾಮಾನ್ಯವಾಗಿ ಕರ್ನಾಟಕದ ಶಿಲ್ಪಕಲೆಯ ಬಗ್ಗೆ ಮಾತನಾಡಿದಾಗ ಬೇಲೂರು, ಹಳೆಬೀಡು ದೇವಸ್ಥಾನಗಳು ಮಾತ್ರ ಬರುತ್ತವೆ. ಆದರೆ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಜಲಸಂಗವಿ ಮತ್ತು ನಾರಾಯಣಪುರದಲ್ಲಿ ನಿರ್ಮಿಸಲಾದ ದೇವಾಲಯಗಳು ವಾಸ್ತುಶಿಲ್ಪದಲ್ಲಿ ತನ್ನದೆಯಾದ ಹಿರಿಮೆಯನ್ನು ಹೊಂದಿದೆ. ಹೊಯ್ಸಳ ಶಿಲ್ಪ ಭಾವನಾತ್ಮಕವಾಗಿದ್ದರೆ, ಕಲ್ಯಾಣಿ ಚಾಲುಕ್ಯ ಶಿಲ್ಪಕಲೆ ಬೌದ್ಧಿಕ. ಒಂದರಲ್ಲಿ ಕಥೆ ಕಾಣಿಸಿದರೆ, ಇನ್ನೊಂದರಲ್ಲಿ ತತ್ತ್ವ ಕಾಣಿಸುತ್ತದೆ. ಈ ವ್ಯತ್ಯಾಸ ಶ್ರೇಷ್ಠ ಮತ್ತು ಕನಿಷ್ಟದಲ್ಲಲ್ಲ, ಶೈಲಿಯಲ್ಲಿ ಮಾತ್ರ.

ಬಸವಕಲ್ಯಾಣ – ರಾಜಧಾನಿಯಿಂದ ಸಾಮಾಜಿಕ ಕ್ರಾಂತಿವರೆಗೆ

ಪ್ರಾಚೀನ ಕಲ್ಯಾಣಿ, ಇಂದಿನ ಬಸವಕಲ್ಯಾಣ, 10–12ನೆಯ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿ. 12ನೆಯ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅನುಭವ ಮಂಟಪದ ಮೂಲಕ ಸಮಾನತೆ, ಕಾಯಕ ಮತ್ತು ದಾಸೋಹದ ತತ್ತ್ವವನ್ನು ಸಾರಿದರು.

ರಾಜಕಾರಣಿಗಳಿಗೆ ಒಂದು ಸ್ಪಷ್ಟ ಸಂದೇಶ

ಇಷ್ಟು ಇತಿಹಾಸ, ಶಿಲ್ಪ ಮತ್ತು ಸಂಸ್ಕೃತಿ ಇದ್ದರೂ ಬೀದರ್ ಪ್ರವಾಸೋದ್ಯಮದಲ್ಲಿ ತುಂಬಾ ಹಿಂದೆ ಉಳಿದಿದೆ. ರಸ್ತೆಗಳು, ಮಾಹಿತಿ ಫಲಕಗಳು, ಮಾರ್ಗದರ್ಶಕ, ಸಂರಕ್ಷಣೆ ಮತ್ತು ಪ್ರಚಾರ ವನ್ನು ಕೊಡದೆ, ಈ ರಾಜ್ಯದ ಇತಿಹಾಸಲ್ಲಿ ಕಳಸಪ್ರಾಯವಾಗಿರುವ ಜಿಲ್ಲೆಯನ್ನು ಈ ರೀತಿಯಾಗಿ ಕಡೆಗಣಿಸುವುದು ಸಲ್ಲ. ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರು ಈ ಕಡೆಗೆ ಗಮನವನ್ನು ಹರಿಸಬೇಕು. ಇದು ಇಲ್ಲಿನ ಜನರ ಆಗ್ರಹವಲ್ಲ ಬದಲಿಗೆ ಈ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡುವ ಮರ್ಯಾದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ