- ಯತೀಶ ಎಸ್


ತುಮಕೂರಿನ ಸುಂದರ ಪ್ರಕೃತಿಯ ಮಡಿಲಿನಲ್ಲಿ ದೇವರಾಯನದುರ್ಗ ಎಂಬ ಅದ್ಭುತ ಬೆಟ್ಟವೊಂದು ಅಡಗಿ ಕೂತಿದೆ. ಅದು ಪ್ರವಾಸಿ ಪ್ರಿಯರ ಮತ್ತು ಚಾರಣಿಗರ ನೆಚ್ಚಿನ ತಾಣ. ಉರಿ ಬಿಸಿಲು, ಪ್ರಚಂಡ ಗಾಳಿ-ಮಳೆ, ನಮ್ಮ ಮೈಕೈ ಮತ್ತು ಭೂಮಿಯನ್ನು ನಡುಗಿಸುವ ಚಳಿಯಲ್ಲೂ ದೇವರಾಯನದುರ್ಗದ ಮೈಮಾಟ ಮಾತ್ರ ಮಾಸುವುದಿಲ್ಲ. ಕಣ್ಣು ನೆಟ್ಟಷ್ಟೂ ದೂರ ಬೆಟ್ಟ ಕಾಣುತ್ತದೆ. ಅಲ್ಲಿ ಮೃಗ ಖಗಗಳ ಗಾನವಿದೆ. ಕೆರೆ ತೊರೆಗಳೂ ಇವೆ. ಸೂರ್ಯ ತನ್ನ ಬೆಳಕಿನಿಂದ ಬಣ್ಣದ ಚಿತ್ತಾರವನ್ನು ಬರೆದಿರುತ್ತಾನೆ. ಇನ್ನು ದೇವರಾಯನದುರ್ಗದ ಸುತ್ತಲೂ ಹಸಿರುಮಯ. ತನ್ನ ಪೌರಾಣಿಕ ಹಿನ್ನೆಲೆ ಮತ್ತು ಸ್ಥಳ ಮಹಿಮೆಯಿಂದಾಗಿ ಈ ಬೆಟ್ಟವು ರಾಜ್ಯದಲ್ಲಿ ಖ್ಯಾತಿಗಳಿಸಿದೆ.

ಡಿಡಿ ಹಿಲ್ಸ್

ಬೆಂಗಳೂರಿಗರು ದೇವರಾಯನದುರ್ಗ ಬೆಟ್ಟವನ್ನು ಡಿಡಿ ಹಿಲ್ಸ್ ಎಂದು ಕರೆಯುತ್ತಾರೆ. ಆ ಹೆಸರೇ ಇತ್ತೀಚಿಗೆ ರೂಢಿಯಾಗಿ ಬಂದಿದೆ. ಈ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಸಾವಿರಾರು ವರ್ಷಗಳು ಕಾಲ ವಿಷ್ಣುವಿನ ಹೆಸರಿನಲ್ಲಿ ಈ ಜಾಗದಲ್ಲಿ ತಪಸ್ಸು ಮಾಡಿದ್ದಾನೆಂದು ಹೇಳಲಾಗುತ್ತದೆ. ಅವನ ತಪಸ್ಸಿಗೆ ಮೆಚ್ಚಿದ ವಿಷ್ಣು ಇಲ್ಲಿ ನರಸಿಂಹನಾಗಿ ಅವತರಿಸಿದನು ಎಂಬ ನಂಬಿಕೆಯೂ ಇದೆ. ಕಲ್ಪತರು ನಾಡಿನ ಜನರಿಗೆ ಈ ಬೆಟ್ಟವು ಭಾವನಾತ್ಮಕ ಸ್ಥಳವಾಗಿ ಉಳಿದಿದೆ. ಬೆಟ್ಟದ ಹಾದಿಯೂ ನುಣುಪಾಗಿದ್ದು, ತುತ್ತ ತುದಿಯವರೆಗೂ ಸಾಗಬಹುದು. ಆಫ್ ರೋಡಿಂಗ್ ಗಾಡಿಯೇ ಬೇಕು ಅಂತಿಲ್ಲ. ಒಂದು ಆರ್ಡಿನರಿ ಬೈಕ್‌ನಲ್ಲೂ ಈ ಬೆಟ್ಟವನ್ನು ಆರಾಮವಾಗಿ ತಲುಪಬಹುದು. ಒಂದು ದಿನದ ಪ್ರವಾಸಕ್ಕಂತೂ ಹೇಳಿ ಮಾಡಿಸಿದ ಜಾಗ. ಬೆಟ್ಟ ಹತ್ತುತ್ತಾ ಹತ್ತುತ್ತಾ ನಿಸರ್ಗದ ಸೌಂದರ್ಯವನ್ನು ಮನ ಮತ್ತು ಮನೆಗೆ ತುಂಬಿಕೊಳ್ಳಬಹುದು. ಅಂದಹಾಗೆ ಈ ಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪೌರಾಣಿಕವಷ್ಟೇ ಅಲ್ಲ ಐತಿಹಾಸಿಕವಾಗಿಯೂ ಈ ತಾಣ ಪ್ರಸಿದ್ಧ. ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆ ಸಂಕೇತವಾಗಿಯೂ ದೇವರಾಯನದುರ್ಗ ಮನೆ ಮಾತಾಗಿದೆ.

Devarayanadurga

ಐತಿಹಾಸಿಕ ನಂಟು

ಈ ಬೆಟ್ಟವನ್ನು ಈ ಮೊದಲು ದೇವರಾಯನ ಕೋಟೆ ಎಂದು ಕರೆಯಲಾಗುತ್ತಿತ್ತು. ಈ ಮೊದಲೇ ಹೇಳಿದಂತೆ ಈ ಬೆಟ್ಟಕ್ಕೆ ಐತಿಹಾಸಿಕ ನಂಟೂ ಇದೆ. ವಿಜಯ ನಗರ ಸಾಮ್ರಾಜ್ಯದ ಅರಸರ ಹೆಜ್ಜೆ ಗುರುತುಗಳು ಇಲ್ಲಿವೆ. ಮೈಸೂರು ಅರಸರು ಕೂಡ ಈ ಪ್ರದೇಶವನ್ನು ಆಳಿದ್ದರು ಎಂಬ ಮಾಹಿತಿಯಿದೆ. ಈ ದೇವರಾಯನದುರ್ಗವು ಮೈಸೂರು ದೊರೆ ಚಿಕ್ಕ ದೇವರಾಜ ಒಡೆಯರ್ ಅವರ ವಿಜಯದ ಕೂಸು ಎನ್ನಲಾಗುತ್ತದೆ. ಐತಿಹಾಸಿಕ ಮಹತ್ವವನ್ನು ಸಾರುತ್ತಲೇ ಈ ಬೆಟ್ಟವು ತನ್ನೊಳಗೆ ಧಾರ್ಮಿಕ ಮಹಿಮೆಯನ್ನು ಇಟ್ಟುಕೊಂಡಿದೆ. ಬೆಟ್ಟದ ತುದಿಯಲ್ಲಿ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯಕ್ಕೆ ಮೆಟ್ಟಿಲುಗಳನ್ನೇರಿ ಗುಡಿಯ ಒಳಗೆ ಹೋಗುತ್ತಿದ್ದಂತೆ ನಿಮ್ಮ ಮನಸ್ಸಿಗೆ ಮುದ ಉಂಟಾಗಿ ಶುದ್ಧ ಭಕ್ತಿ ಭಾವ ಮೂಡುತ್ತದೆ. ಒಂದು ಪುಟ್ಟ ಕಲ್ಯಾಣಿ ಅಲ್ಲಿನ ಪ್ರಮುಖ ಆಕರ್ಷಣೆ.

Devarayana durga Tumkur

ಟ್ರೆಕ್ಕಿಂಗ್ ಸ್ಪಾಟ್

ದೇವರಾಯನದುರ್ಗ ಯುವಕರ ಮತ್ತು ಚಾರಣಪ್ರಿಯರ ಹಾಟ್ ಫೇವರಿಟ್ ತಾಣ. ವೀಕೆಂಡ್‌ಗಳಲ್ಲಿ ಯುವಕರ ದಂಡು ಈ ಬೆಟ್ಟವನ್ನು ಹತ್ತುತ್ತದೆ. ಈ ಗಿರಿಧಾಮಕ್ಕೆ ಚಾರಣದ ಹಾದಿಯೆಂದರೆ ಅದು ಬೆಟ್ಟದ ಮೆಟ್ಟಿಲುಗಳು. ಮುಂಚೆ ಡಿಡಿ ಹಿಲ್ಸ್ ವ್ಯೂ ಪಾಯಿಂಟ್ ಎಂದೇ ಪ್ರಸಿದ್ಧಿ ಹೊಂದಿದ್ದ ಬೆಟ್ಟದ ತುದಿಗೆ ಹೋಗುವ ದಾರಿಗೆ ಈಗ ಬ್ಯಾರಿಕೇಡ್ ಬಿಗಿದಿದ್ದಾರೆ. ನೀವು ಬೆಟ್ಟದ ಹಾದಿಯಲ್ಲೇ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿ ಬರಬೇಕು. ಮುಂಜಾನೆ ದಾರಿಯೇ ಕಾಣದ ಹಾಗೆ ಮಂಜು ಕವಿದು ನಿಮ್ಮನ್ನು ಸ್ವಾಗತಿಸುತ್ತದೆ. ಮಳೆಗಾಲದಲ್ಲಿ ಈ ಬೆಟ್ಟ ಸ್ವರ್ಗಕ್ಕೆ ಸೆಡ್ಡು ಹೊಡೆದು ಬಾಜಿಗೆ ಕರೆಯುವುದೊಂದೇ ಬಾಕಿ. ಬೇಸಿಗೆ ಕಾಲದಲ್ಲಿ ಬೇರೆ ಬೆಟ್ಟದ ಹಾಗೆ ಬಿರು ಬಿಸಿಲಿನ ಕಪ್ಪುಗಲ್ಲು. ಒಂದಿಡೀ ದಿನ ಹೇಗೆ ಕಳೆದು ಹೋಗುತ್ತದೆ ಎಂದು ನಿಮಗೇ ತಿಳಿಯುವುದಿಲ್ಲ.

Devarayana durga

ನರಸಿಂಹನ ತೇರು ಯಾತ್ರೆ

ಈ ಕೋಟೆಯಲ್ಲಿ ಪ್ರತಿ ಹೋಳಿ ಹಬ್ಬದಂದು ಜಾತ್ರೆ ಜರುಗುತ್ತದೆ. ತುಮಕೂರು ಸೇರಿದಂತೆ ಇನ್ನು ಹತ್ತಾರು ಜಿಲ್ಲೆಗಳ ಜನರು ಆ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಅಲ್ಲಿನ ಪ್ರಮುಖ ದೇವರಾದ ಶ್ರೀ ಭೋಗ ನರಸಿಂಹಸ್ವಾಮಿಯ ರಥೋತ್ಸವ ಫಾಲ್ಗುಣ ಶುದ್ಧ ಪೂರ್ಣಿಮೆಯ ಸಮಯದಲ್ಲಿ ನಡೆಯುತ್ತದೆ. ಉಗ್ರರೂಪಿ ನರಸಿಂಹ ತೇರಿನಲ್ಲಿ ತೊಟ್ಟಿಲೊಳಗಿನ ಮಗುವಿನಂತೆ ಕೂತಿರುತ್ತಾನೆ. ಸುತ್ತಲಿನ ಹತ್ತಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಂಡು ಒಂದೇ ಮನೆಯ ಮಕ್ಕಳ ಹಾಗೆ ಜಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹಿಂದಿರುಗುತ್ತಾರೆ.

ಹತ್ತಿರದ ತಾಣಗಳು

ನಾಮದ ಚಿಲುಮೆ

ದೇವರಾಯನದುರ್ಗಕ್ಕೆ ಹೋಗುವವರು ನಾಮದ ಚಿಲುಮೆಗೂ ಹೋಗಿ ಬರಬಹುದು. ಇದು ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪವಿರುವ ಒಂದು ಪ್ರೇಕ್ಷಣೀಯ ಸ್ಥಳ. ಕೇವಲ 7 ಕಿಮೀ. ದೂರದ ನಾಮದ ಚಿಲುಮೆಯಲ್ಲಿ ಸಣ್ಣ ಮೃಗಾಲಯವಿದ್ದು ಅದರಲ್ಲಿ ಜಿಂಕೆ, ಕವಡೆ ಇತ್ಯಾದಿ ಪ್ರಾಣಿಗಳನ್ನು ಕಾಣಬಹುದು. ವನವಾಸದ ಸಮಯದಲ್ಲಿ ಪೂರಾ ದಣಿದಿದ್ದ ಶ್ರೀರಾಮನು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಈ ಜಾಗದಲ್ಲಿ ಬಾಣ ಹೂಡಿ ನೀರು ಚಿಮ್ಮುವ ಹಾಗೆ ಮಾಡಿದ ಎನ್ನಲಾಗುತ್ತದೆ. ಹಾಗಾಗಿ ಆ ತಾಣವನ್ನು ನಾಮದ ಚಿಲುಮೆ ಎಂದು ಕರೆಯಲಾಗುತ್ತದೆ.

ಸಿದ್ದರ ಬೆಟ್ಟ

ದೇವರಾಯನದುರ್ಗದಿಂದ ಸಮೀಪವಿರುವ ಸಿದ್ದರಬೆಟ್ಟವು ಪ್ರಸಿದ್ದ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ದೇವಾಲಯವಿದೆ. ವಿಶೇಷವೆಂದರೆ ಈ ಬೆಟ್ಟದ ಸುತ್ತಲೂ ನೂರಾರು ಬಗೆಯ ಔಷಧಿ ಸಸ್ಯಗಳಿವೆ. ಇಲ್ಲಿ ಹಲವು ಗುಹೆಗಳೂ ಇದ್ದು, ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳು ಬೆರಗು ಹುಟ್ಟಿಸುತ್ತದೆ.

ಗೊರವನಹಳ್ಳಿ ಮಹಾಲಕ್ಷ್ಮಿ

ದೇವರಾಯನದುರ್ಗದಿಂದ ಹತ್ತಾರು ಕಿ.ಮೀ ದೂರವಿರುವ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯಕ್ಕೂ ಪ್ರವಾಸಿಗರು ಭೇಟಿ ನೀಡಬಹುದು. ಕರ್ನಾಟಕದ ಕೊಲ್ಹಾಪುರವೆಂದೇ ಈ ದೇವಾಲಯವು ಪ್ರಖ್ಯಾತವಾಗಿದೆ. ರಾಜ್ಯ, ದೇಶ ಮತ್ತು ವಿದೇಶದಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಗೊರವನಹಳ್ಳಿಯ ಲಕ್ಷ್ಮಿಯು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ.

ದಾರಿ ಹೇಗೆ?

ಬೆಂಗಳೂರಿನಿಂದ ಸರಿಸುಮಾರು 80 ಕಿಮೀ. ದೂರವಿರುವ ದೇವರಾಯನದುರ್ಗ ಬೆಟ್ಟಕ್ಕೆ ಖಾಸಗಿ ವಾಹನದಲ್ಲಿ ತಲುಪಬಹುದು. ಬೆಂಗಳೂರಿನಿಂದ ತುಮಕೂರಿಗೆ KSRTC ಮೂಲಕವೂ ತಲುಪಿ, ಅಲ್ಲಿಂದ ರಿಕ್ಷಾ ಅಥವಾ ಅಲ್ಲಿನ ಸ್ಥಳೀಯ ಬಸ್‌ಗಳ ಮೂಲಕ ಬೆಟ್ಟವನ್ನು ತಲುಪಬಹುದು.