ಈ ಶ್ರೀಮಂತ ನಗರದಲ್ಲಿ ವೆಹಿಕಲ್ಗಳಿಗೆ ನೋ ಎಂಟ್ರಿ ! ; ಪ್ರಯಾಣಕ್ಕೆ ದೋಣಿಗಳೇ ಆಸರೆ..
ಜಗತ್ತಿನಲ್ಲಿ ಅದೆಷ್ಟೋ ಸುಂದರವಾದ ನಗರಗಳಿವೆ. ಅವುಗಳ ಇತಿಹಾಸ, ವಾಸ್ತುಶಿಲ್ಪ, ವಿಶೇಷವಾದ ಸ್ಮಾರಕಗಳ ವಿಚಾರದಲ್ಲಿ ಪ್ರವಾಸಿಗರಿಗೆ ಒಂದೊಂದು ವಿಭಿನ್ನ ಆಯ್ಕೆಗಳಿರುತ್ತವೆ. ಆದರೆ ಅದರ ಸುಂದರವಾದ ರಚನೆಯ ಮೂಲಕ ಎಲ್ಲರೂ ಮೆಚ್ಚಿಕೊಂಡಿರುವ ಸುಂದರವಾದ ನಗರ ವೆನಿಸ್.
ಉತ್ತರ ಇಟೆಲಿಯ ಸುಂದರವಾದ ನಗರ ವೆನಿಸ್. ಎಷ್ಟು ಸುಂದರವಾಗಿದೆ ಎಂದರೆ ಭಾರತದಂತಹ ನಗರಗಳಲ್ಲಿಯೂ ಸಹ ಅದರ ವಿನ್ಯಾಸವನ್ನು ನಕಲಿಸಲಾಗುತ್ತದೆ. ಹಾಗಾದರೆ ಈ ನಗರದ ವಿಶೇಷತೆ ಏನು ? ಹೌದು, 150 ಕಾಲುವೆಗಳಿಂದ ಬೇರ್ಪಡಿಸಲ್ಪಟ್ಟು 409 ಸೇತುವೆಗಳಿಂದ ಜೋಡಿಸಲ್ಪಟ್ಟ 118 ಚಿಕ್ಕ ಪುಟ್ಟ ದ್ವೀಪಗಳ ಸಂಗಮ ಈ ವೆನಿಸ್ ಎಂದರೆ, ಈ ನಗರದ ವೈಶಿಷ್ಟ್ಯತೆಗೆ ಮತ್ತೆ ಬೇರಿನ್ನೇನು ವಿಶ್ಲೇಷಣೆಗಳು ತಾನೇ ಬೇಕು?

ಅಚ್ಚರಿಯ ವಿಚಾರವೇನು ಗೊತ್ತಾ? ಈ ನಗರದಲ್ಲಿ ಅನೇಕ ಶ್ರೀಮಂತರಿದ್ದಾರೆ. ಆದರೆ ಅವರ್ಯಾರಬಳಿಯೂ ಬೆಲೆಬಾಳುವ ಕಾರುಗಳಿಲ್ಲ. ಕೇವಲ ದೂಣಿಗಳು ಮಾತ್ರ! ಗೊಂಡೋಲಾ ಎಂದು ಕರೆಯಲ್ಪಡುವ 6 ಜನರು ಮಾತ್ರ ಕುಳಿತು ಕೊಳ್ಳಬಹುದಾದ ದೋಣಿ ವಿಹಾರ ಮನಸ್ಸಿಗೆ ಮರೆಯಲಾಗದ ಮುದವನ್ನು ನೀಡುತ್ತದೆ.
118 ದ್ವೀಪಗಳ ನಗರ:
ಹೌದು, ವೆನಿಸ್ ನಗರದ ಅತ್ಯಂತ ಸುಂದರವಾದ ವಿಷಯವೆಂದರೆ ಅದು ನೂರಾರು ದ್ವೀಪಗಳಿಂದ ಕೂಡಿರುವುದು! UNESCO ಪ್ರಕಾರ, ವೆನಿಸ್ ನಗರವು 150 ಕಾಲುವೆಗಳಲ್ಲಿ 118 ದ್ವೀಪಗಳನ್ನು ಹೊಂದಿದೆ. ಇವುಗಳನ್ನು ಒಂದುಗೂಡಿಸಲು ಸುಮಾರು 409 ಸೇತುವೆಗಳಿವೆ. ಆದರೆ ಇವುಗಳನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ ದೋಣಿ ಮಾತ್ರ ಎಂದರೆ ನಂಬಲೇ ಬೇಕು.

ಇಷ್ಟಾದರೂ ವೆನಿಸ್ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆಯಿಲ್ಲ. ಇದನ್ನು ಗಮನಿಸಿದ ವೆನಿಸ್ ನಗರ ಪಾಲಿಕೆಯು 2011 ರಿಂದಲೇ ವೆನಿಸ್ ನಗರದ ವರ್ಚುವಲ್ ಪ್ರವಾಸ ಆರಂಭಿಸಿದೆ. ಪ್ರವಾಸಿಗರು ಈ ಮೂಲಕ ವೆನಿಸ್ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 360 ಡಿಗ್ರಿವರೆಗೂ ವೃತ್ತಾಕಾರದಲ್ಲಿ ಸೆರೆಹಿಡಿಯಲಾದ ಚಿತ್ರಗಳನ್ನು ಆಸ್ವಾದಿಸುತ್ತ ತಾವೇ ಸ್ವತಃ ಆ ಸ್ಥಳದಲ್ಲಿ ಇರುವಂತಹ ಅನುಭವ ಮೂಡಿಸುತ್ತದೆ.
ವೆನಿಸ್ ಬಗ್ಗೆ ನೀವು ತಿಳೀಯಲೇಬೇಕಿರುವ ವಿಚಾರಗಳಿವು:
- ವೆನಿಸ್ನ ನಗರವು ವರ್ಷಕ್ಕೆ 2 ಮಿಮೀ ಪ್ರಮಾಣದಲ್ಲಿ ಮುಳುಗುತ್ತಿದೆ. ಅಂದರೆ ಈ ನಗರ ಅಸ್ತಿತ್ವ ಕಳೆದುಕೊಳ್ಳುವ ದಿನ ದೂರವಿಲ್ಲ ಎನ್ನಲಾಗಿದೆ.
- ವೆನಿಸ್ನ ಬೀದಿಗಳು ವಿಶ್ವದ ಅತ್ಯಂತ ಕಿರಿದಾಗಿವೆ. ಇದರ ಪ್ರಮುಖ ಬೀದಿಯಾದ ಕಲಾ ವರಿಸ್ಕೋ ಕೇವಲ 53 ಸೆಂ.ಮೀ ಅಗಲವಿದೆ. ಆದ್ದರಿಂದ ಇದು ಪ್ರಪಂಚದ ಅತಿ ಕಿರಿಯ ಬೀದಿಯಾಗಿದೆ.
- 1638 ರಲ್ಲಿ ವೆನಿಸ್ನಲ್ಲಿ ವಿಶ್ವದ ಮೊದಲ ಸಾರ್ವಜನಿಕ ಕ್ಯಾಸಿನೊವನ್ನು ತೆರೆಯಲಾಯಿತು.
- ವೆನಿಸ್ ನಲ್ಲಿ ನಡೆಯುವ ವಿಶ್ವ ಪ್ರಸಿದ್ಧ ವೆನಿಸ್ ಕಾರ್ನೀವಲ್ 12 ನೇ ಶತಮಾನದಲ್ಲಿ ಪ್ರಾರಂಭವಾಯಿತು.
- ಗೊಂಡೋಲಾ ಎಂದು ಕರೆಯಲ್ಪಡುವ 6 ಜನರು ಮಾತ್ರ ಕುಳಿತು ಕೊಳ್ಳಬಹುದಾದ ದೋಣಿಗಳು ನಗರದ ಮಧ್ಯಭಾಗದಲ್ಲಿರುವ ಕಾಲುವೆಗಳ ಪ್ರವಾಸಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ. ಅಲ್ಲದೆ ವೆನಿಸ್ ನಗರದ ಇತಿಹಾಸಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ.

ವೆನಿಸ್ ಗೆ ಹೋಗುವುದು ಹೇಗೆ: ಬೆಂಗಳೂರಿನಿಂದ ವೆನಿಸ್ಗೆ ನೇರ ವಿಮಾನ ಸೌಲಭ್ಯವಿದೆಯಾದರೂ ಅಲ್ಲಿನ ವಾಸ್ತವ್ಯಕ್ಕೆ ಕನಿಷ್ಟ 5-6 ತಿಂಗಳು ಮುಂಚೆ ಹೋಟೆಲ್ ಬುಕ್ ಮಾಡಬೇಕಾಗುತ್ತದೆ. ಅದಕ್ಕೆ ಪರ್ಯಾಯವೆಂದರೆ ಅಲ್ಲಿಂದ ಸುಮಾರು 35 ಕಿ. ಮೀ. ದೂರದಲ್ಲಿರುವ ಪಡೋವಾದಲ್ಲಿ ಉಳಿದುಕೊಳ್ಳಬಹುದು.