ಲಕ್ಷದ್ವೀಪದ ಬಗ್ಗೆ ಅಂದೆಲ್ಲ ಇತಿಹಾಸದಲ್ಲಿ ಓದಿದ ನೆನಪು. ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಇವೆಲ್ಲಾ ಪುಸ್ತಕಕ್ಕೆ ಮಾತ್ರ ಸೀಮಿತವಾಗಿತ್ತು. ಅಂಡಮಾನ್ ಪ್ರವಾಸಕ್ಕೆ ಹೆಸರುವಾಸಿಯಾಗಿತ್ತು, ಆದರೆ ಲಕ್ಷದ್ವೀಪದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಅಲ್ಲಿಗೆ ಹೋಗುವುದು ಸುಲಭವೇನಲ್ಲ, ಅವೆಲ್ಲ ವಿಧಾನಗಳು ಯಾರಿಗೆ ಬೇಕು ಎಂಬಿತ್ಯಾದಿ ಕಲ್ಪನೆಗಳು. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಏನಿದೆ, ಪ್ರವಾಸೀ ತಾಣಗಳು ಏನೇನಿವೆ ಇವೆಲ್ಲಾ ಜನರಿಗೆ ತಿಳಿದಿರಲಿಲ್ಲ. ಆದರೆ ಮೋದಿಜಿಯವರ ಒಂದೇ ಒಂದು ಭೇಟಿಯಿಂದ ಹೇಗಿದ್ದ ಲಕ್ಷದ್ವೀಪ ಹೇಗೆ ಲಕ ಲಕ ಎಂದು ಹೊಳೆಯೋಕೆ ಶುರುವಾಯಿತು. ಜನ ಹಿಂದೆ ಮುಂದೆ ನೋಡದೆ ನಾ ಮುಂದು ತಾ ಮುಂದು ಎಂದು ಲಕ್ಷದ್ವೀಪದತ್ತ ಲಕ್ಷ್ಯವಿಟ್ಟರು. ಏನೇನಿವೆ ಅಲ್ಲಿ, ಏನೆಲ್ಲಾ ಮಾಡಬಹುದು?

ಅಗತ್ತಿ ಐಲ್ಯಾಂಡ್

ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕಾದರೆ ಅಲ್ಲಿರೋದೊಂದೇ ವಿಮಾನ ನಿಲ್ದಾಣ. ಪುಟ್ಟದಾದ ರನ್'ವೇ, ಸುತ್ತಲೂ ಸಮುದ್ರ, ಲ್ಯಾಂಡ್ ಆಗಲು ಸಾಧ್ಯವಾಗುವುದು ಏಕಕಾಲಕ್ಕೆ ಒಂದೇ ಒಂದು ವಿಮಾನಕ್ಕೆ. ವಿಮಾನ ಇಳಿಯುವಾಗ ಕಾಣುವ ಸುಂದರ ಚಿತ್ರಣ ನೋಡಲು ಕಣ್ಣೆರಡು ಸಾಲದು. ವಿಮಾನ ನಿಲ್ದಾಣ ಇರೋದು ಅಗತ್ತಿ ದ್ವೀಪದಲ್ಲಿ. ಈ ದ್ವೀಪದ ಮೂಲಕವೇ ಇತರೆ ದ್ವೀಪಗಳಿಗೆ ತೆರಳಬಹುದು. ಕಿರಿದಾದ ದಾರಿಯ ಎರಡೂ ಕಡೆ ತೆಂಗಿನ ಮರಗಳು, ಸುತ್ತಲೂ ಮನೆಗಳು, ಅಲ್ಲಲ್ಲಿ ತಲೆಯೆತ್ತಿರುವ ಪ್ರವಾಸಿಗರಿಗೆ ತಂಗಬಹುದಾದ ಹೋಟೆಲ್ಗಳು. ಒಟ್ಟಾರೆಯಾಗಿ ತೀರಾ ಸಣ್ಣದಲ್ಲದ ಅಂತೆಯೇ ತೀರಾ ದೊಡ್ಡದಲ್ಲದ, ಸದಾ ಚಟುವಟಿಕೆಯುಳ್ಳ ದ್ವೀಪ.

agatti-lakshadweep-august-22th-2023-600nw-2382692753

ಬಂಗಾರಂ ಬೀಚ್

ಮೋದಿಜಿಯವರು ಹವಾ ಎಬ್ಬಿಸಿರುವ ಬಂಗಾರಂ ದ್ವೀಪಕ್ಕೆ ಭೇಟಿ ನೀಡಿ. ಇಲ್ಲಿಯ ಯಾವುದೇ ಕಡಲ ತೀರಕ್ಕೆ ತೆರಳಿದರೂ ನೀರು ಅತೀ ಸುಂದರ. ಸಮುದ್ರದ ನೀಲಿಯಲ್ಲಿ ಹಲವು ವೈವಿಧ್ಯಮಯ ನೀಲಿಯ ನಮೂನೆಗಳನ್ನು ಕಾಣಬಹುದು. ಸೂರ್ಯೋದಯದಲ್ಲಿ ಒಂದು ಬಗೆಯ ನೀಲಿ ಬಣ್ಣಗಳಾದರೆ, ಸೂರ್ಯಾಸ್ತದಲ್ಲಿ ಇನ್ನೊಂದು ವೈವಿಧ್ಯ ನೀಲಿ ನಮೂನೆಗಳನ್ನು ಕಾಣಬಹುದು.

bangaram-island-beaches

ಸ್ಕೂಬಾ ಡೈವಿಂಗ್

ವಾಟರ್ ಸ್ಪೋರ್ಟ್ಸ್ ಅಲ್ಲಿ ಆಸಕ್ತಿ ಇರೋರು ಲಕ್ಷದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಪ್ರಯತ್ನಿಸಲೇಬೇಕು. ಮೇಲ್ಮೈಯಲ್ಲೇ ತುಂಬಾ ಸೊಗಸಾಗಿ ಕಾಣುವ ಸಮುದ್ರ ನೀರು, ಇನ್ನು ಅದರ ಆಳಕ್ಕೆ ತೆರಳಿದರೆ ಅದೆಷ್ಟು ಸುಂದರವಿರಬೇಡ! ವಿವಿಧ ಬಣ್ಣದ ಮೀನುಗಳು, ಸ್ವಚ್ಛವಾದ ನೀರು, ಜೀವಂತವಾಗಿರುವ ನೀಲಿ ಬಣ್ಣದ ಕೋರಲ್ಸ್, ಹಾಗೂ ಜೀವಂತವಿಲ್ಲದ ಬಿಳಿ ಬಣ್ಣದ ಕೋರಲ್ಸ್. ಈಜು ಬಾರದೆ ಇರೋರು ಕೂಡ ಏನೂ ಭಯವಿಲ್ಲದೆ ಸ್ಕೂಬಾ ಡೈವಿಂಗ್ ಪ್ರಯತ್ನಿಸಬಹುದು. ಸ್ಕೂಬಾ ಡೈವಿಂಗ್ ಸರ್ಟಿಫಿಕೇಟ್ ಇಲ್ಲದವರನ್ನು ಏಳು ಮೀಟರ್ ಆಳಕ್ಕೆ ಕರೆದುಕೊಂಡು ಹೋಗುತ್ತಾರೆ. ಸುಮಾರು ಅರ್ಧ ಗಂಟೆ ಸಾಗರದ ಆಳದಲ್ಲಿ ಹಲವು ನೆನಪುಗಳನ್ನು ಮೆಲುಕು ಹಾಕುವ ಸಂದರ್ಭಗಳನ್ನು ಆಸ್ವಾದಿಸಬಹುದು.

cover-for-Scuba-Diving-In-Lakshadweep_31st-Jan

ಸ್ನಾರ್ಕಲಿಂಗ್

ಸ್ಕೂಬಾ ಡೈವಿಂಗ್ ಅನುಭವ ಒಂದು ಬಗೆಯಾದರೆ, ಸ್ನಾರ್ಕಲಿಂಗ್ ಇನ್ನೊಂದು ಬಗೆ. ಈಜು ಬರುವವರು ತಮ್ಮಷ್ಟಕ್ಕೆ ತಾವೇ ಉಸಿರಾಡುವ ಮಾಸ್ಕ್ ಧರಿಸಿ ಅಲೆಗಳ ನಡುವೆ ಇಳಿಯಬಹುದು. ಉಸಿರಾಡುವ ವಿಧಾನ ಒಂದು ಸಲ ಅಭ್ಯಾಸವಾದರೆ, ಈ ನೀರಿನಾಟವೆಲ್ಲ ಸಲೀಸು. ನೀರೊಳಗಿನ ಜೀವನ ಅದೆಷ್ಟು ವಿಭಿನ್ನ, ಒಂದರ್ಧ ಗಂಟೆ ನೀರೊಳಗಿದ್ದರೆ ಅದೇ ಗುಂಗಲ್ಲಿ ಹಲವಾರು ದಿನಗಳು ಕಳೆಯುವಂತಾಗುವುದು. ಸ್ನಾರ್ಕಲಿಂಗ್, ಸ್ಕೂಬಾ ಡೈವಿಂಗ್, ಗ್ಲಾಸ್ ಬೋಟ್ ರೈಡ್ ಒಂದೊಂದೂ ವಿಶಿಷ್ಟ ಅನುಭವಗಳನ್ನು ಬಾಚುವಂತೆ ಮಾಡುವುದು.

ಭಾರತದಲ್ಲಿ ಸ್ಕೂಬಾ ಡೈವಿಂಗ್, ಸ್ನಾರ್ಕಲಿಂಗ್ ಅನ್ನು ಅಂಡಮಾನ್, ಗೋವಾ, ಗೋಕರ್ಣ ಹೀಗೆ ವಿವಿಧೆಡೆ ಮಾಡಿರೋರು, ಲಕ್ಷದ್ವೀಪದಲ್ಲಿ ಖಂಡಿತಾ ತಪ್ಪಿಸಬಾರದು. ಲಕ ಲಕ ಹೊಳೆಯುವ ನೀರಿನ ಮಧ್ಯೆಯಿರುವ ಲಕ್ಷದ್ವೀಪಕ್ಕೆ ತೆರಳಿ, ಲವ್ಲಿ ಲಕ್ಷದ್ವೀಪ ಅಂದುಕೊಳ್ಳುವಂತೆ ಮಾಡುವುದು.