ಅಜ್ಜನ ಪ್ರೀತಿಯ ಜತೆಗೆ ಅಜ್ಜಿಯ ಕೈರುಚಿ
ಕರ್ನಾಟಕದ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣವು ವಿಶೇಷವಾದ ಊಟ ಮತ್ತು ಆತಿಥ್ಯಕ್ಕಾಗಿ ಪ್ರಸಿದ್ಧವಾಗಿದೆ. ಈ ಭಾಗದಲ್ಲಿ ಸಾಂಪ್ರದಾಯಿಕ ರುಚಿಗೆ ಹೆಸರಾಗಿರುವ ಹಲವಾರು ಕ್ಯಾಂಟೀನ್ಗಳು, ಸಣ್ಣ ಹೋಟೆಲ್ಗಳು ಅನೇಕ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಲೇ ಬಂದಿವೆ. ಅಂಥ ಹೊಟೇಲ್ಗಳ ಪೈಕಿ ಸದ್ಯ ಬಹುಬೇಡಿಕೆಯನ್ನು ಪಡೆದಿರುವುದು ಕುಂದಾಪುರ ಸಮೀಪದ ಗಣೇಶ್ ಪ್ರಸಾದ್ ಹೊಟೇಲ್..ಹೀಗೆ ಕರೆಸಿಕೊಳ್ಳುವುದಕ್ಕಿಂತಲೂ ʻಅಜ್ಜಿ ಅಜ್ಜಿ ಹೋಟೆಲ್ʼ ಎಂದರೆ ಮಾತ್ರವೇ ಇಲ್ಲಿಗೆ ಬರುವ ಗ್ರಾಹಕರಿಗೆ ಆಪ್ತವೆನಿಸುತ್ತದೆ. ಈ ಅಜ್ಜಿಯ ಕೈ ಅಡುಗೆಯ ರುಚಿಯನ್ನು ಉಂಡವರು ಇಲ್ಲಿಗೆ ಮತ್ತೆ ಮತ್ತೆ ಭೇಟಿ ನೀಡುತ್ತಲೇ ಇರುತ್ತಾರೆ.
ಅಜ್ಜಿ ತಯಾರಿಸಿದ ರುಚಿಕರವಾದ ಆಹಾರವನ್ನು ಸವಿಯದವರು ಯಾರು? ಬಣ್ಣ, ರುಚಿ, ಅಲಂಕಾರಗಳ ಗೊಡವೆ ಇಲ್ಲದೆಯೇ ಮನೆಯಲ್ಲೇ ಆಕೆ ಪ್ರೀತಿಯಿಂದ ತಯಾರಿಸುವ ಆಹಾರ ಮನೆಮಂದಿಯನ್ನು ಹೊಟ್ಟೆತುಂಬಾ ತೃಪ್ತಿಯಿಂದ ಉಣ್ಣುವಂತೆ ಮಾಡುತ್ತದೆ. ಅಂಥ ಅಜ್ಜಿಯ ಕೈ ಅಡುಗೆಯ ರುಚಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಕುಂದಾಪುರ ಸಮೀಪದ ʻಅಜ್ಜ ಅಜ್ಜಿ ಹೊಟೇಲ್ʼಗೆ ನೀವೊಮ್ಮೆ ಭೇಟಿನೀಡಲೇಬೇಕು.
ಇದನ್ನೂ ಓದಿ: ದೇವರ ನಾಡಿನಲ್ಲೊಂದು ಸ್ವರ್ಗದಂಥ ರೆಸಾರ್ಟ್
ಈ ಹೊಟೇಲ್ ನೀವಂದುಕೊಂಡಂತೆ ದೊಡ್ಡದಾದ ಹೊಟೇಲ್ ಅಥವಾ ರೆಸ್ಟೋರಂಟ್ ಅಲ್ಲ. ಬದಲಾಗಿ ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿ ಪ್ರಭು ಎಂಬ ವೃದ್ಧ ದಂಪತಿ ನಡೆಸುತ್ತಿರುವ ಸರಳವಾದ ಹೊಟೇಲ್. ಇದನ್ನು ಹೊಟೇಲ್ ಎನ್ನುವುದಕ್ಕಿಂತ ಅಜ್ಜಿ ಮನೆಯ ಊಟ ಎನ್ನುವುದೇ ಉತ್ತಮ. ಯಾಕೆಂದರೆ ಈ ದಂಪತಿ ತಮ್ಮ ಮನೆಯ ಒಂದು ಭಾಗವನ್ನೇ ಹೊಟೇಲ್ ಆಗಿ ಪರಿವರ್ತಿಸಿದ್ದು, ಮಧ್ಯಾಹ್ನದ ವೇಳೆಯಲ್ಲಿ ಹಸಿವೆಯಂದು ಬರುವ ಅತಿಥಿಗಳಿಗೆ ಬರಿಯ 50ರುಪಾಯಿಗೆ ರುಚಿಕರವಾದ ಮನೆಯೂಟವನ್ನೇ ಉಣಬಡಿಸುತ್ತಾರೆ.

ವಸಂತಿ ಪ್ರಭು ಅವರು ಮಣಿಪಾಲ್ ಪ್ರೆಸ್ ನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ, 2011ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಕಾರ್ಕಳ- ಉಡುಪಿ ಮುಖ್ಯರಸ್ಥೆಯ ಪರ್ಕಳದಲ್ಲಿ ಮಾವ ಹಾಗೂ ಪತಿ ಅನೇಕ ವರ್ಷಗಳಿಂದ ನಡೆಸುತ್ತಿದ್ದ ಗಣೇಶ್ ಪ್ರಸಾದ್ ಹೊಟೇಲ್‌ನಲ್ಲಿ ತಾವೂ ಸಹಾಯಕ್ಕೆ ನಿಂತರು. ಹೊಟೇಲ್ ಉದ್ಯಮದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ರಸ್ತೆ ಅಗಲೀಕರಣದಿಂದ ಹೊಟೇಲ್ ಮುಚ್ಚಬೇಕಾದಾಗಲೂ ಧೃತಿಗೆಡದ ಈ ಹಿರಿಯ ಜೀವಗಳು ಕರೋನಾ ಕಾಲಘಟ್ಟದಲ್ಲಿ ತಮ್ಮ ಮನೆಯಲ್ಲೇ ಪುಟ್ಟದಾಗಿ ಫುಡ್ ಪಾಸರ್ಲ್ ಪ್ರಾರಂಭಿಸಿದ್ದರು. ಅದನ್ನೇ ಮುಂದುವರಿಸಿ ನಂತರದ ದಿನಗಳಲ್ಲಿ ಮನೆಯ ಆವರಣದಲ್ಲಿಯೇ ಸೀಮಿತ ಸೀಟು ವ್ಯವಸ್ಥೆಯನ್ನು ಮಾಡಿಕೊಂಡು ಮಧ್ಯಾಹ್ನದ ಬಿಸಿಯೂಟವನ್ನು ಆರಂಭಿಸಿ `ಅಜ್ಜ ಅಜ್ಜಿ ಹೊಟೇಲ್’ ಎಂದೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಇಲ್ಲಿ ದೊರೆಯುವ ಊಟದಲ್ಲಿ ಯಾವುದೇ ಕೃತಕತೆ ಇಲ್ಲ; ಬದಲಿಗೆ, ಮನೆಯಲ್ಲೇ ತಯಾರಿಸಿರುವ ತಾಜಾ, ಆರೋಗ್ಯಕರ ಮತ್ತು ರುಚಿಕರವಾದ ಆಹಾರ ಲಭ್ಯವಾಗುತ್ತದೆ. ಕರಾವಳಿ ಭಾಗದ ವಿಶೇಷವಾದ ಅನ್ನ-ಸಾರು, ಸಾಂಬಾರ್, ತರಕಾರಿ ಪಲ್ಯ, ಬಜ್ಜಿ, ಉಪ್ಪಿನಕಾಯಿ, ಮಜ್ಜಿಗೆ ಇತ್ಯಾದಿ ಆಯ್ಕೆಗಳಷ್ಟೇ ಇದ್ದರೂ ಬಾಳೆ ಎಲೆಯಲ್ಲಿ ಅದರ ರುಚಿಯನ್ನು ಸವಿಯುವ ಖುಷಿಯೇ ಬೇರೆ.
ಇಂದಿನ ಬ್ಯುಸಿ ಜೀವನದಲ್ಲಿ ಫಾಸ್ಟ್ ಫುಡ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರ ನಡುವೆಯೂ ʻಅಜ್ಜಿ ಅಜ್ಜಿ ಹೋಟೆಲ್ʼ ಸಾಂಪ್ರದಾಯಿಕ ಆಹಾರದ ಮಹತ್ವವನ್ನು ಉಳಿಸಿಕೊಂಡಿವೆ. ಇಲ್ಲಿ ದೊರೆಯುವ ಊಟ ಆರೋಗ್ಯಕರವಾಗಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವುದು ಮತ್ತೊಂದು ವಿಶೇಷ.
ಒಟ್ಟಿನಲ್ಲಿ, ʻಅಜ್ಜಿ ಅಜ್ಜಿ ಹೋಟೆಲ್ʼ ಎಂದರೆ ಕೇವಲ ಆಹಾರ ತಾಣವಷ್ಟೇ ಅಲ್ಲ; ಬದಲಾಗಿ ಅದೊಂದು ವಿಭಿನ್ನ ಅನುಭವ. ಅಜ್ಜಿ ಕೈರುಚಿಯನ್ನು ಮತ್ತೆ ನೆನಪಿಸುವ, ಆತ್ಮೀಯತೆಯನ್ನೂ, ಸಂಸ್ಕೃತಿಯನ್ನೂ ಉಳಿಸುವ ಒಂದು ಪುಟ್ಟ ಲೋಕ. ಕುಂದಾಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ರೀತಿಯ ಹೋಟೆಲ್‌ಗಳ ಆಹಾರ ಸೇವಿಸಿದರೆ, ಕರಾವಳಿ ಕರ್ನಾಟಕದ ನಿಜವಾದ ರುಚಿಯನ್ನು ತಿಳಿಯಲು ಸಾಧ್ಯ.

ಕಳೆದ ಅನೇಕ ವರ್ಷಗಳಿಂದೂ ನಾವು ಹೊಟೇಲ್ ತೊಡಗಿಸಿಕೊಂಡವರು. ನನ್ನ ಪತಿಯವರ ತಂದೆಯವರಾದ ರಾಮಣ್ಣ ಪ್ರಭು ಅವರು ಕಾರ್ಕಳ- ಉಡುಪಿ ಮುಖ್ಯರಸ್ಥೆಯ ಪರ್ಕಳದಲ್ಲಿ ಗಣೇಶ್ ಪ್ರಸಾದ್ ಎಂಬ ಹೊಟೇಲ್ ಪ್ರಾರಂಭಿಸಿ ಅನೇಕ ವರ್ಷಗಳ ಕಾಲ ನಡೆಯುತ್ತಿತ್ತು. ಆದರೆ ರಸ್ತೆ ಅಗಲೀಕರಣದಿಂದಾಗಿ ಹೊಟೇಲ್ ನಡೆಸುವುದು ಕಷ್ಟವಾಗಿತ್ತು. ಈ ನಡುವೆ ಕರೋನಾ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಮನೆಯಲ್ಲಿ ಅಡುಗೆ ಮಾಡಿ, ಪಾರ್ಸಲ್ ವ್ಯವಸ್ಥೆಯನ್ನು ಮಾಡುತ್ತಿದ್ದೆವು. ಅದಾಗಿ ಕೆಲವು ಕಾಲದಿಂದಲೂ ಮನೆಯಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮನೆ ಊಟವಾಗಿರುವುದಿಂದ ಅದ್ಧೂರಿಯೇನಿಲ್ಲ. ಸಿಂಪಲ್ ಮೆನು ನಮ್ಮದು. ಆದರೂ ದಿನಕ್ಕೆ ಏನಿಲ್ಲವೆಂದರೂ 70-80 ಮಂದಿ ಇಲ್ಲಿಗೆ ಬಂದು ಊಟಮಾಡಿಕೊಂಡು ಹೋಗುತ್ತಾರೆ.
- ವಸಂತಿ ಪ್ರಭು, ಹೊಟೇಲ್ ಮಾಲೀಕರು
ವಿಳಾಸ:
ಅಜ್ಜ ಅಜ್ಜಿ ಹೊಟೇಲ್, ರಾಜಗೋಪಾಲ್ ನಗರ ರಸ್ತೆ, ಹೆರ್ಗಾ, ಜೆ.ಹೆಚ್.ಸಿ. ಅತ್ರಾಡಿ,ಪರ್ಕಳ, ಕರ್ನಾಟಕ 576107
ದೂರವಾಣಿ: 098808 47656