Thursday, April 16, 2026
Thursday, April 16, 2026

ಮೌಂಟ್‌ ಅಬುವಿನ ಮಡಿಲಲ್ಲಿ ಅರ್ಬುದಾ ದೇವಿ

365 ಮೆಟ್ಟಿಲುಗಳನ್ನು ಏರಿದರೆ ದುರ್ಗಾ ಸ್ವರೂಪದ ಅರ್ಬುದಾದೇವಿ ಅಥವಾ ಅಧರಾ ದೇವಿಯ ದರ್ಶನವಾಗುತ್ತದೆ. ಬೆಟ್ಟದ ತುದಿಯ ಗುಹೆಯೇ ಗರ್ಭಗುಡಿ. ಇದರೊಳಗೆ ಪ್ರವೇಶಕ್ಕೆ ಅತ್ಯಂತ ಕಿರಿದಾದ ಕಿಂಡಿಯಲ್ಲಿ ಅಂಬೆಗಾಲಿಟ್ಟುಕೊಂಡೇ ಹೋಗಬೇಕು. ದೇವಿಯ ದರ್ಶನದಿಂದ, ಮೆಟ್ಟಿಲುಗಳನ್ನು ಹತ್ತಿದ ಆಯಾಸ ಮರೆತೇ ಹೋಗುತ್ತದೆ. ಶಿವ ಪುರಾಣದ ಪ್ರಕಾರ ಸತಿಯ ಅಧರ ಅಂದರೆ ಕೆಳ ತುಟಿಯು ಬಿದ್ದುದರಿಂದ ಇದು ಅಧರಾದೇವಿ ಸ್ಥಳವಾಯಿತು ಎನ್ನಲಾಗಿದೆ.

ಚಿಕ್ಕಂದಿನಲ್ಲಿ ಶಿವರಾಮ ಕಾರಂತರ ʻಅಬೂವಿನಿಂದ ಬರಾಮಕ್ಕೆʼ ಪುಸ್ತಕದ ಶೀರ್ಷಿಕೆ ನೋಡಿದಾಗ ಹಾಗಂದರೇನು ಎಂದು ಅರ್ಥವಾಗಿರಲಿಲ್ಲ. ಕೆಲವು ವರ್ಷಗಳ ನಂತರ ಆ ಪುಸ್ತಕ ಓದಿದಾಗ ಅದು ರಾಜಾಸ್ಥಾನದ ಮೌಂಟ್‌ ಅಬು ಎಂದು ತಿಳಿಯಿತು. ಕಾರಂತರ ಪ್ರವಾಸ ಸಾಹಿತ್ಯವು ಅವರ ಕಾದಂಬರಿ ಮತ್ತಿತರ ಸಾಹಿತ್ಯಗಳಿಗಿಂತ ಒಂದು ಕೈ ಮೇಲೆ ಎಂಬಂತೆ ನನಗೆ ಇಷ್ಟವಾಗತೊಡಗಿತು. ಆ ಮೌಂಟ್‌ ಅಬುವನ್ನು ವೀಕ್ಷಿಸಲು ಇತ್ತೀಚೆಗಷ್ಟೇ ಅವಕಾಶ ದೊರೆತಿತ್ತು.

ಇದನ್ನೂ ಓದಿ: ಮೇಘಾಲಯದ ಈ ಸೇತುವೆ ಬೀಳೋದಲ್ಲ ಬೆಳೆಯೋದು

ರಾಜಾಸ್ಥಾನದ ಏಕೈಕ ಗಿರಿಧಾಮ

ಮೌಂಟ್‌ ಅಬುವನ್ನು ರಾಜಾಸ್ಥಾನದ ಮರುಭೂಮಿಯ ಓಯಸಿಸ್‌ ಎಂದು ಕರೆಯುತ್ತಾರೆ. ಇದು ಅರಾವಳಿ ಸಾಲಿನ ಈ ಪರ್ವತ ಶ್ರೇಣಿ. 22 ಕಿಮೀ ಅಗಲ ಮತ್ತು 9 ಕಿಮೀ ಉದ್ದದ ನಿತ್ಯಹರಿದ್ವರ್ಣ ಅರಣ್ಯದಿಂದ ಕೂಡಿದೆ. ಅನೇಕ ನದಿ, ಜಲಪಾತ, ಸರೋವರಗಳಿಂದ ಕೂಡಿದ್ದು, ರಾಜಾಸ್ಥಾನದ ಏಕೈಕ ಗಿರಿಧಾಮವಾಗಿದೆ. ಇಲ್ಲಿ ಹೊಟೇಲ್‌ ಅರ್ಬುದ, ಅರ್ಬುದ ಸ್ಟೋರ್ಸ್‌, ಅರ್ಬುದ ಹಾಸ್ಪಿಟಲ್‌ ನೋಡುತ್ತಾ ಹೋದಂತೆ ಅರ್ಬುದಾ ದೇವಿ ದೇವಸ್ಥಾನವೂ ಇಲ್ಲಿದೆ ಎಂದು ತಿಳಿಯಿತು. ನಾವು ಅರ್ಬುದ ಎಂದರೆ ಕ್ಯಾನ್ಸರ್‌ ಎಂದು ತಿಳಿದಿದ್ದೇವೆ. ಆದರೆ, ಇದು ಆ ಅರ್ಬುದವಲ್ಲ. ಸ್ಥಳ ಪುರಾಣದ ಕತೆಯೊಂದರಂತೆ ಅರ್ಬುದ ಎಂಬ ಸರ್ಪವೊಂದು ಶಿವನ ನಂದಿಯನ್ನು ಪ್ರಾಣಾಪಾಯದಿಂದ ಪಾರುಮಾಡಿತ್ತು. ಹಾಗಾಗಿ ಇದಕ್ಕೆ ಅರ್ಬುದ ಪರ್ವತ ಶ್ರೇಣಿ ಎಂದು ಹೆಸರು ಬಂದಿದ್ದು, ಈಗ ಅಬು ಎಂದಾಗಿದೆ ಎನ್ನಲಾಗಿದೆ.

Untitled design - 2026-04-15T193649.750

ಗುಹೆಯೇ ಗರ್ಭಗುಡಿ

365 ಮೆಟ್ಟಿಲುಗಳನ್ನು ಏರಿದರೆ ದುರ್ಗಾ ಸ್ವರೂಪದ ಅರ್ಬುದಾದೇವಿ ಅಥವಾ ಅಧರಾ ದೇವಿಯ ದರ್ಶನವಾಗುತ್ತದೆ. ಬೆಟ್ಟದ ತುದಿಯ ಗುಹೆಯೇ ಗರ್ಭಗುಡಿ. ಇದರೊಳಗೆ ಪ್ರವೇಶಕ್ಕೆ ಅತ್ಯಂತ ಕಿರಿದಾದ ಕಿಂಡಿಯಲ್ಲಿ ಅಂಬೆಗಾಲಿಟ್ಟುಕೊಂಡೇ ಹೋಗಬೇಕು. ದೇವಿಯ ದರ್ಶನದಿಂದ, ಮೆಟ್ಟಿಲುಗಳನ್ನು ಹತ್ತಿದ ಆಯಾಸ ಮರೆತೇ ಹೋಗುತ್ತದೆ. ಶಿವ ಪುರಾಣದ ಪ್ರಕಾರ ಸತಿಯ ಅಧರ ಅಂದರೆ ಕೆಳ ತುಟಿಯು ಬಿದ್ದುದರಿಂದ ಇದು ಅಧರಾದೇವಿ ಸ್ಥಳವಾಯಿತು ಎನ್ನಲಾಗಿದೆ.

ಜೈನ ಕ್ಷೇತ್ರ ದಿಲ್ವಾರ

ಮೌಂಟ್‌ ಅಬುವಿನ ಪ್ರಮುಖ ಆಕರ್ಷಣೆಗಳಲ್ಲಿ ಜೈನ ಕ್ಷೇತ್ರ ದಿಲ್ವಾರ ಅಥವಾ ದಿಲ್ವಾಡ ದೇವಸ್ಥಾನಗಳು ಸೇರಿವೆ. ಸುಮಾರು 11-15ನೆಯ ಶತಮಾನದವರೆಗೆ ಈ ದೇವಸ್ಥಾನಗಳು ಹಂತ ಹಂತವಾಗಿ ನಿರ್ಮಿಸಲ್ಪಟ್ಟಿವೆ. ಇವು ಜೈನ ತೀರ್ಥಂಕರರಾದ ರಿಷಭದೇವ, ನೇಮಿನಾಥ, ಪಾರ್ಶ್ವನಾಥ, ಮಹಾವೀರರ ಮಂದಿರಗಳಾಗಿವೆ. ದೇವಾಲಯದ ಒಳ ಹೊಕ್ಕಂತೆ ಅಮೃತಶಿಲೆಯ ಅದ್ಭುತ ಕೆತ್ತನೆಯ ಕುಸುರಿ ಕೆಲಸಗಳು ನಿಬ್ಬೆರಗಾಗಿಸುತ್ತವೆ.

ನಕ್ಕಿ ಲೇಕ್‌

ನಕ್ಕಿ ಸರೋವರ ಮೌಂಟ್‌ ಅಬುವಿನ ಹೃದಯ ಭಾಗದಲ್ಲಿದೆ. ದೇವತೆಗಳು ತಮ್ಮ ಉಗುರುಗಳಿಂದ (ನಖ) ಕೆರೆದು ಸರೋವರ ನಿರ್ಮಿಸಿದ್ದರಿಂದ ಇದಕ್ಕೆ ನಕ್ಕಿ ಲೇಕ್‌ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇದಕ್ಕೆ ಸ್ವಲ್ಪದೂರದಲ್ಲೇ ಪರ್ವತದ ಅಂಚಿನಿಂದ ಸೂರ್ಯಾಸ್ತ ವೀಕ್ಷಿಸಲು ವೀಕ್ಷಣಾ ಸ್ಥಳಗಳನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ವಾಹನಗಳು ಹೋಗುವಂತಿಲ್ಲ. ಹಾಗಾಗಿ ನಡೆಯಲಾಗದವರು ತಳ್ಳುಗಾಡಿ ಅಥವಾ ಕುದುರೆ ಸವಾರಿಯ ಸಹಾಯ ಪಡೆಯಬಹುದು. ವಿಶಾಲ ಪರ್ವತ ಅರಣ್ಯದೊಳಗೆ ಸೂರ್ಯ ಅಸ್ತಂಗತನಾಗುವ ದೃಶ್ಯವಂತೂ ನಯನ ಮನೋಹರವಾಗಿರುತ್ತದೆ.

ದಾರಿ ಹೇಗೆ?

ಜೈಪುರದಿಂದ ಮೌಂಟ್‌ ಅಬು ಸುಮಾರು 440 ಕಿಮೀ ದೂರದಲ್ಲಿದೆ. ಜೈಪುರದಿಂದಲೇ ಮೌಂಟ್‌ ಅಬುಗೆ ನೇರ ರೈಲು ಸಂಪರ್ಕವಿದೆ. ಸ್ಲೀಪರ್‌ ಬಸ್‌ಗಳನ್ನೂ ಬಳಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat