Wednesday, July 15, 2026
Wednesday, July 15, 2026

ಹಿಮಾಲಯದ ತಪ್ಪಲಿನಲ್ಲಿ

ಲ್ಯಾಂಡೋರ್ ಪ್ರವೇಶಿಸಿದರೆ ನಿಮ್ಮನ್ನು ಸ್ವಾಗತಿಸುವುದು ಆಳೆತ್ತರದ ದೇವದಾರು, ಪೈನ್ ಮರಗಳು, ಹದವಾಗಿ ಬೀಸುವ ತಂಗಾಳಿ, ರೆಂಬೆಯಿಂದ ರೆಂಬೆಗೆ ಚಿಲಿಪಿಲಿಗುಟ್ಟುತ್ತಾ ಹಾರಾಡುವ ಹಕ್ಕಿಗಳು, ಹಚ್ಚ ಹಸುರಿನಿಂದ ಆವೃತವಾದ ಮನೆಗಳು, ಪುಟ್ಟ ಅಂಗಡಿಗಳು, ಪ್ರಶಾಂತತೆ ಈ ಎಲ್ಲಾ ಕಾರಣಗಳಿಂದ ಲ್ಯಾಂಡೋರ್ ನಿಮ್ಮನ್ನು ಆವರಿಸುತ್ತದೆ. ಹಿಂದೆ ಬ್ರಿಟಿಷ್ ಸೈನಿಕರಿಗೆ ಆಹಾರ ಪೂರೈಸುತ್ತಿದ್ದ ಅಂಗಡಿ ಕಟ್ಟಡಗಳು ಈಗಲೂ ಇವೆ. ಇದನ್ನು ಸ್ಥಳೀಯವಾಗಿ ಚಾರ್ ದುಕಾನ್ ಎಂದು ಕರೆಯುತ್ತಾರೆ. ಈಗ ಇಲ್ಲಿ ಭಾರತೀಯ ಅಂಚೆ ಕಚೇರಿ, ಟೀ- ಬನ್ ಪೂರೈಸುವ ಚಿಕ್ಕ ಕೆಫೆಗಳು ಇವೆ. ಜಗದ್ವಿಖ್ಯಾತ ಇಂಗ್ಲಿಷ್ ಕಾದಂಬರಿಕಾರ ರಸ್ಕಿನ್ ಬಾಂಡ್‌ ಮನೆ ಲ್ಯಾಂಡೋರ್‌ನಲ್ಲಿದೆ.

- ವೆಂಕಟೇಶ್‌ ಪ್ರಸಾದ್‌

ಈ ವರ್ಷದ ಬೇಸಗೆ ಆರಂಭದಲ್ಲೇ ತೀಕ್ಷ್ಣವಾಗಿತ್ತು. ಮಾರ್ಚ್‌ನಲ್ಲೇ ಬೆಂಗಳೂರು ಕಾದ ಕಾವಲಿಯಂತಾಗಿತ್ತು. ಹೀಗಾಗಿ ಯಾವುದಾದರೂ ಗಿರಿ ಶಿಖರದ ಕಡೆಗೆ ತೆರಳಲು ಮಾಹಿತಿ ಹುಡುಕುತ್ತಿದ್ದಾಗ ಮೊದಲು ಸಿಕ್ಕಿದ್ದು ಉತ್ತರಾಖಂಡ. ಇದು ಪ್ರಕೃತಿ ಸೌಂದರ್ಯದ ತಾಣ. ದೇವಭೂಮಿ ಎಂದೇ ಗುರುತಿಸಿಕೊಂಡಿದೆ. ಹಲವು ಗಿರಿ-ಶಿಖರಗಳ ತವರು. ಡೆಹ್ರಾಡೂನ್‌ನಿಂದ 35 ಕಿಮೀ ದೂರದಲ್ಲಿನ ‘ಗಿರಿಧಾಮಗಳ ರಾಣಿ’ ಮಸ್ಸೂರಿ ಹಾಗೂ ಜಗತ್ತಿನ ಯೋಗ ರಾಜಧಾನಿಯೆಂದು ಕರೆಸಿಕೊಳ್ಳುವ ಹೃಷಿಕೇಶಕ್ಕೆ ತೆರಳುವುದೆಂದು ತೀರ್ಮಾನಿಸಿದೆವು. ಪ್ರವಾಸಕ್ಕೆ ಬೇಕಾದ ಬಟ್ಟೆಬರೆಗಳ ಜತೆಗೆ ಪಕ್ಷಿವೀಕ್ಷಣೆಗೆ ಬೈನಾಕುಲರ್, ಕ್ಯಾಮೆರಾ-ಲೆನ್ಸ್‌ಗಳನ್ನೂ ಪ್ಯಾಕ್ ಮಾಡಿದೆವು.

ಇದನ್ನೂ ಓದಿ: ಅರಕು ಕಣಿವೆಯ ಗಿರಿಜನ ಸಂಗ್ರಹಾಲಯ

ನಿಗದಿತ ದಿನದಂದು ಮಧ್ಯಾಹ್ನ 3:50ಕ್ಕೆ ಹೊರಟ ವಿಮಾನ ಡೆಹ್ರಾಡೂನ್ ತಲುಪುವಾಗ ಸಂಜೆ 6 ಗಂಟೆ. ಮೊದಲೇ ಬುಕ್ ಮಾಡಿದ್ದ ಕ್ಯಾಬ್ ಏರಿ ಮಸ್ಸೂರಿಯ ಹೊಟೇಲ್ ತಲುಪುವಾಗ ರಾತ್ರಿ 9. ಗಿರಿಧಾಮಗಳಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಬೇಗ ಸೂರ್ಯೋದಯವಾಗುತ್ತದೆ. ಚಿಲಿಪಿಲಿಗುಟ್ಟುವ ಪಕ್ಷಿಗಳೇ ನಮ್ಮ ಆ ದಿನದ ಅಲಾರಾಂ. ಕ್ಯಾಮೆರಾ ಹಿಡಿದು ಹೊರ ನಡೆದವನಿಗೆ ಹಲವು ಪಕ್ಷಿಗಳು ದರ್ಶನ ನೀಡಿದವು. ನಿರ್ಮಲ ವಾತಾವರಣ, ಎಲ್ಲೆಲ್ಲೂ ಹಸಿರು, ಅಲ್ಲಲ್ಲಿ ಹಳ್ಳ ಕೊಳ್ಳಗಳು ಇವೆಲ್ಲವುದರ ನಡುವೆ ವಿವಿಧ ಬಣ್ಣದ ಚಿತ್ತಾರಗಳ ಹಲವು ಹಕ್ಕಿಗಳ ಚಿಲಿಪಿಲಿ ಸದ್ದು. ಸಹಜವಾದ ಹಾರಾಟ, ಇಷ್ಟು ಸಾಕು. ಪ್ರವಾಸದ ಆಯಾಸ ಕ್ಷಣ ಮಾತ್ರದಲ್ಲಿ ಮಂಗ ಮಾಯ ಆಗುತ್ತದೆ. ವಿರಾಮ ಕಾಲದಲ್ಲಿ ಬಗೆಬಗೆಯ ಹಕ್ಕಿಗಳನ್ನು ನೋಡುವುದು, ಚಿತ್ರಗಳಲ್ಲಿ ಸೆರೆ ಹಿಡಿಯುವುದು ಒಂದು ಉಲ್ಲಾಸಮಯ ಅನುಭವ ನೀಡುತ್ತದೆ.

ಕನಸಿನ ಪ್ರವಾಸಕ್ಕೆ ಈಗಲೇ ಸಾಲ ಮಾಡಬೇಕೆ ಇಲ್ಲಿದೆ ಟ್ರಾವೆಲ್ ಲೋನ್ ಮಾಹಿತಿ (5)

ಲ್ಯಾಂಡೋರ್‌ನಲ್ಲಿ ರಸ್ಕಿನ್‌ ಬಾಂಡ್‌ ಮನೆ

ಬೆಳಗ್ಗಿನ ಉಪಾಹಾರ ಮುಗಿಸಿ ಬಾಡಿಗೆ ದ್ವಿಚಕ್ರ ವಾಹನದಲ್ಲಿ ನಾವು ತೆರಳಿದ್ದು ಲ್ಯಾಂಡೋರ್ ಹಾಗೂ ಲಾಲ್ ಟಿಬ್ಬಾ ಕಡೆಗೆ. ಲ್ಯಾಂಡೋರ್ ಮಸ್ಸೂರಿಯ ಸಮೀಪವಿರುವ ಪುಟ್ಟ ಗಿರಿಧಾಮ. ಲ್ಯಾಂಡೋರ್ ಪ್ರವೇಶಿಸಿದರೆ ನಿಮ್ಮನ್ನು ಸ್ವಾಗತಿಸುವುದು ಆಳೆತ್ತರದ ದೇವದಾರು, ಪೈನ್ ಮರಗಳು, ಹದವಾಗಿ ಬೀಸುವ ತಂಗಾಳಿ, ರೆಂಬೆಯಿಂದ ರೆಂಬೆಗೆ ಚಿಲಿಪಿಲಿಗುಟ್ಟುತ್ತಾ ಹಾರಾಡುವ ಹಕ್ಕಿಗಳು, ಹಚ್ಚ ಹಸುರಿನಿಂದ ಆವೃತವಾದ ಮನೆಗಳು, ಪುಟ್ಟ ಅಂಗಡಿಗಳು, ಪ್ರಶಾಂತತೆ ಈ ಎಲ್ಲಾ ಕಾರಣಗಳಿಂದ ಲ್ಯಾಂಡೋರ್ ನಿಮ್ಮನ್ನು ಆವರಿಸುತ್ತದೆ. ಹಿಂದೆ ಬ್ರಿಟಿಷ್ ಸೈನಿಕರಿಗೆ ಆಹಾರ ಪೂರೈಸುತ್ತಿದ್ದ ಅಂಗಡಿ ಕಟ್ಟಡಗಳು ಈಗಲೂ ಇವೆ. ಇದನ್ನು ಸ್ಥಳೀಯವಾಗಿ ಚಾರ್ ದುಕಾನ್ ಎಂದು ಕರೆಯುತ್ತಾರೆ. ಈಗ ಇಲ್ಲಿ ಭಾರತೀಯ ಅಂಚೆ ಕಚೇರಿ, ಟೀ- ಬನ್ ಪೂರೈಸುವ ಚಿಕ್ಕ ಕೆಫೆಗಳು ಇವೆ. ಜಗದ್ವಿಖ್ಯಾತ ಇಂಗ್ಲಿಷ್ ಕಾದಂಬರಿಕಾರ ರಸ್ಕಿನ್ ಬಾಂಡ್‌ ಮನೆ ಲ್ಯಾಂಡೋರ್‌ನಲ್ಲಿದೆ. ಬ್ರಿಟಿಷರ ಕಾಲದ ಚರ್ಚ್, ಬೇಕ್ ಹೌಸ್‌ಗಳಿಗೂ ಈ ಸ್ಥಳ ಪ್ರಸಿದ್ಧವಾಗಿದೆ. ಮಸ್ಸೂರಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಲ್ಯಾಂಡೋರ್‌ಗೆ ತಪ್ಪದೇ ಭೇಟಿ ನೀಡುತ್ತಾರೆ.

ಮಸೂರದಿಂದ ಕೇದಾರನಾಥ್‌ ದರ್ಶನ

ಲಾಲ್ ಟಿಬ್ಬಾ ಮಸ್ಸೂರಿಯ ಅತ್ಯಂತ ಎತ್ತರದ ಬೆಟ್ಟ. ಇಲ್ಲಿ ಡಿಪೋ ಇರುವುದರಿಂದ ಡಿಪೋ ಬೆಟ್ಟ ಎಂದೂ ಕರೆಯಲಾಗುತ್ತದೆ. 1967ರಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ದೂರದರ್ಶಕವನ್ನು ಈ ಬೆಟ್ಟದಲ್ಲಿ ಅಳವಡಿಸಲಾಗಿದೆ. ಈ ದೂರದರ್ಶಕದ ಸಹಾಯದಿಂದ ಜನರು ಇಲ್ಲಿನ ಸಮೀಪದ ಬೆಟ್ಟಗಳಾದ ಬಂದೇರ್ಪಂಚ್, ಕೇದಾರನಾಥ್ ಮತ್ತು ಬದರಿನಾಥ್‌ಗಳನ್ನು ನೋಡಬಹುದಾಗಿದೆ. ಮಂಜು ಮುಸುಕಿದ್ದರಿಂದ ಹಿಮಾಲಯ ಪರ್ವತ ಶ್ರೇಣಿಗಳು ಕಾಣಿಸಲಿಲ್ಲ. ದ್ವಿಚಕ್ರ ವಾಹನವನ್ನು ಅಲ್ಲೇ ನಿಲ್ಲಿಸಿ ಲಾಲ್ ಟಿಬ್ಬಾದ ಸುತ್ತಮುತ್ತ ಪಕ್ಷಿಗಳನ್ನು ಹುಡುಕುತ್ತಾ ಹೊರಟೆ. ಅಷ್ಟರಲ್ಲಾಗಲೇ ಆ ಸ್ಥಳ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತು. ಎಲ್ಲರೂ ಮೊಬೈಲ್ ಹಿಡಿದು ರೀಲ್ಸ್ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಈ ತಾಣ ಅತಿಯಾದ ಪ್ರವಾಸಿಗರಿಂದ ಗಿಜುಗುಡುತ್ತಿದೆ.

ಬ್ರಿಟಿಷರ ನೆಚ್ಚಿನ ಬೇಸಗೆ ಅರಮನೆ

ಮಸ್ಸೂರಿ ಸಮುದ್ರ ಮಟ್ಟಕ್ಕಿಂತ 7000 ಅಡಿ ಎತ್ತರದಲ್ಲಿದೆ. ಇದು ಬ್ರಿಟಿಷರ ಬೇಸಗೆ ರಾಜಧಾನಿಯಾಗಿ ಕಾರ್ಯ ನಿರ್ವಹಿಸಿತ್ತು. ಈ ಸುಂದರವಾದ ಗಿರಿಧಾಮವು ಪುರಾತನ ದೇವಸ್ಥಾನಗಳು, ಬೆಟ್ಟಗಳು, ಜಲಪಾತಗಳು, ಕಣಿವೆಗಳು, ಅರಣ್ಯಧಾಮ ಮತ್ತು ಶಿಕ್ಷಣ ಸಂಸ್ಥೆಗಳಿಂದ ಪ್ರಸಿದ್ಧವಾಗಿದೆ. ಜ್ವಾಲಾದೇವಿ ದೇವಾಲಯ, ನಾಗ ದೇವತಾ ದೇವಸ್ಥಾನ ಮತ್ತು ಭದ್ರಾಜ್ ದೇವಸ್ಥಾನ ಇಲ್ಲಿನ ಕೆಲವು ಪ್ರಮುಖವಾದ ದೇವಸ್ಥಾನಗಳಾಗಿವೆ. ಈ ಪ್ರದೇಶದ ಸೌಂದರ್ಯಕ್ಕೆ ಮನಸೋತ 'ಜಾನ್ ಮೆಕಿನಾನ್' ಎಂಬ ಬ್ರಿಟಿಷ್ ಅಧಿಕಾರಿ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದನು.

ಮಸ್ಸೂರಿಯಲ್ಲಿನ ಪ್ರಸಿದ್ಧ ಜಲಪಾತಗಳೆಂದರೆ ಕೆಂಪ್ಟಿ ಜಲಪಾತ, ಝಾರಿಪಾನಿ ಜಲಪಾತ, ಭತ್ತಾ ಜಲಪಾತ ಮತ್ತು ಮೊಸ್ಸಿ ಜಲಪಾತ. ಕೆಂಪ್ಟಿ ಜಲಪಾತ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದು ಮಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಇಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಲಾದ ಹಲವು ಶಾಲೆ, ಚರ್ಚ್‌ಗಳಿವೆ. ಇಲ್ಲಿ ಬಹಳ ಪ್ರಸಿದ್ಧವಾದ ಮತ್ತು ಅತ್ಯಂತ ಹಳೆಯದಾದ ಸೈಂಟ್ ಜಾರ್ಜ್, ಓಕ್ ಗ್ರೋವ್ ಮತ್ತು ವೈನ್ಬರ್ಗ್ ಆಲನ್ ಮುಂತಾದ ವಸತಿ ಶಾಲೆಗಳಿವೆ. ಇಲ್ಲಿನ ಗಿರಿಧಾಮಗಳು ಎಲ್ಲ ಋತುಮಾನಗಳಲ್ಲೂ ಸುಂದರವಾಗಿ ಕಾಣುತ್ತವೆ. ಆದರೂ ಮಾರ್ಚ್‌- ಜೂನ್ ಮತ್ತು ಸೆಪ್ಟೆಂಬರ್‌- ನವೆಂಬರ್ ಭೇಟಿಗೆ ಅತ್ಯಂತ ಸೂಕ್ತ ಸಮಯ.

ಕನಸಿನ ಪ್ರವಾಸಕ್ಕೆ ಈಗಲೇ ಸಾಲ ಮಾಡಬೇಕೆ ಇಲ್ಲಿದೆ ಟ್ರಾವೆಲ್ ಲೋನ್ ಮಾಹಿತಿ (7)

ಡೆಹ್ರಾಡೂನ್‌

ಸಂಜೆ ಮಾಲ್ ರೋಡ್ ಸುತ್ತಾಡಿ ವಿಶ್ರಾಂತಿ ಪಡೆದ ನಾವು ಮರುದಿನ ತೆರಳಿದ್ದು ಡೆಹ್ರಾಡೂನ್‌ಗೆ. ಡೆಹ್ರಾಡೂನ್ ಉತ್ತರಾಖಂಡದ ರಾಜಧಾನಿ. ದೊಡ್ಡ ನಗರ. ವರ್ಷ ಪೂರ್ತಿ ಆಹ್ಲಾದಕರ ವಾತಾವರಣವಿರುತ್ತದೆ. ಈ ಸ್ಥಳವನ್ನು ಮಸ್ಸೂರಿ ಮತ್ತು ಹೃಷಿಕೇಶ, ಹರಿದ್ವಾರಕ್ಕೆ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ದೇಶದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ಬೋರ್ಡಿಂಗ್ ಶಾಲೆಗಳನ್ನು ಹೊಂದಿರುವ ಇದನ್ನು ‘ಉತ್ತರಾಖಂಡದ ಶೈಕ್ಷಣಿಕ ಕೆಂದ್ರ’ ಎಂದೂ ಕರೆಯಲಾಗುತ್ತದೆ.

ಲೂಟಿಕೋರರ ಗುಹೆ

‘ರಾಬರ್ಸ್ ಕೇವ್’ ಇಲ್ಲಿನ ಬಹುಮುಖ್ಯ ಪ್ರವಾಸಿ ತಾಣ. ಇದು ಒಂದು ನೈಸರ್ಗಿಕ ಗುಹೆಯಾಗಿದ್ದು, ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿಯ ಮಂಜುಗಡ್ಡೆ ತುಂಬಿರುವ ನೀರಿನಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿಕೊಂಡು ಗುಹೆಗಳಲ್ಲಿ ನಡೆಯಬಹುದು. ರಾಬರ್ಸ್ ಗುಹೆಯು ಇಲ್ಲಿಯ ಅತ್ಯಂತ ಜನಪ್ರಿಯ ಪಿಕ್ನಿಕ್ ತಾಣಗಳಲ್ಲೊಂದೆನಿಸಿದೆ. ಸ್ಥಳೀಯರು ಇದನ್ನು ಗಚ್ಚಿಪಾನಿ ಎಂದು ಕರೆಯುತ್ತಾರೆ. ಇಲ್ಲಿಯ ಮತ್ತೊಂದು ಜನಪ್ರಿಯ ತಾಣವೆಂದರೆ ಅದು ಲಚ್ಚಿವಾಲ. ಇಲ್ಲಿ ನೀವು ಮಾನವ ನಿರ್ಮಿತ ಕೃತಕ ಸರೋವರದ ಸುತ್ತಲೂ ಹರಡಿರುವ ಹಚ್ಚ ಹಸುರಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾ ಸೂರ್ಯಾಸ್ತವನ್ನು ವೀಕ್ಷಿಸಬಹುದು. ಟ್ರೆಕ್ಕಿಂಗ್ ಅಥವಾ ಪಕ್ಷಿ ವೀಕ್ಷಣೆಗೂ ಉತ್ತಮ ವ್ಯವಸ್ಥೆ ಇದೆ. ಇದಲ್ಲದೇ ಸಹಸ್ರಧಾರ, ತಪಕೇಶ್ವರ ದೇವಸ್ಥಾನ, ಮೈಂಡ್ರೋಲಿಂಗ್ ಮಠ ಇನ್ನೂ ಅನೇಕ ಸ್ಥಳಗಳನ್ನು ನೋಡಬಹುದು.

ಜಗತ್ತಿನ ಯೋಗದ ರಾಜಧಾನಿ ಹೃಷಿಕೇಶ

ಡೆಹ್ರಾಡೂನ್‌ನಿಂದ ನಾವು ತೆರಳಿದ್ದು ಭಾರತೀಯರ ಪಾಲಿನ ಪವಿತ್ರ ಯಾತ್ರಾಸ್ಥಳ ಹೃಷಿಕೇಶಕ್ಕೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಕೇವಲ 20 ಕಿಮೀ ದೂರದಲ್ಲಿದೆ. ಇದು ಗಂಗಾ ಹಾಗೂ ಚಂದ್ರಭಾಗ ನದಿಯ ಸಂಗಮ ಸ್ಥಳ. ಹಲವಾರು ಸಾಹಸ ಚಟುವಟಿಕೆಗಳು, ಪ್ರಾಚೀನ ದೇವಾಲಯಗಳು, ಹೆಸರಾಂತ ಕೆಫೆಗಳು ಇನ್ನಿತರ ವಿಷಯಗಳಿಗೆ ಹೆಸರುವಾಸಿಯಾಗಿದೆ. ‘ಜಗತ್ತಿನ ಯೋಗದ ರಾಜಧಾನಿ’ ಎನಿಸಿಕೊಂಡಿದೆ. ಇಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ರಾಮಝುಲಾ ತೂಗುಸೇತುವೆಯಲ್ಲಿ ನಿಂತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದು. ಇನ್ನೊಂದು ತೂಗುಸೇತುವೆ ಲಕ್ಷ್ಮಣ ಝುಲಾ ಶಿಥಿಲವಾಗಿದ್ದು, ಉತ್ತರಾಖಂಡ ಇದಕ್ಕೆ ಪರ್ಯಾಯವಾಗಿ ಗಾಜಿನ ಹಾಸಿನ ತೂಗುಸೇತುವೆ ‘ಭಜರಂಗ್ ಸೇತು’ ನಿರ್ಮಿಸಿದ್ದು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ. ಸೇತುವೆಯ ಮೇಲೆ ನಡೆಯುವಾಗ ಪಾದದ ಕೆಳಗೆ ಭೋರ್ಗರೆಯುತ್ತಾ ಹರಿಯುವ ಗಂಗಾ ನದಿಯನ್ನು ನೋಡಬಹುದು. ಹೃಷಿಕೇಶದಲ್ಲಿ ಸಾರ್ವಜನಿಕ ಸಾರಿಗೆ ಇಲ್ಲವೆಂದೇ ಹೇಳಬಹುದು. ಆದರೆ ಶೇರ್ ಮಾಡಿಕೊಂಡು ಹೋಗಬಹುದಾದ ಆಟೋಗಳು, ಬಾಡಿಗೆ ದ್ವಿಚಕ್ರ ವಾಹನಗಳ ಸೌಲಭ್ಯವಿದೆ.

ಹೃಷಿಕೇಶದ ಬೀದಿಗಳಲ್ಲಿ ನಡೆದಾಡುವುದೇ ಸುಂದರ ಅನುಭವ. ಪ್ರವಾಸಿಗರ ದಂಡು ಒಂದೆಡೆಯಾದರೆ, ಸಾಧುಗಳು ಹಾಗೂ ದನ-ಕರುಗಳು ಇನ್ನೊಂದೆಡೆ. ಇತ್ತೀಚೆಗೆ ಇಲ್ಲಿನ ಹೆಚ್ಚಿನ ಗೋಡೆಗಳಿಗೆ ಚಿತ್ತಾಕರ್ಷಕ ಪೇಂಟಿಂಗ್ ಮಾಡಿದ್ದಾರೆ. ಇವೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಾರ್ಗದುದ್ದಕ್ಕೂ ಬಗೆಬಗೆಯ ಸ್ಟ್ರೀಟ್ ಫುಡ್‌ಗಳು ತಿಂಡಿಪೋತರನ್ನು ಕೈ ಬೀಸಿ ಕರೆಯುತ್ತವೆ. ಈ ಪಟ್ಟಣ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರ, ವೈಟ್‌ವಾಟರ್ ರಾಫ್ಟಿಂಗ್, ಬಂಜೀ ಜಂಪಿಂಗ್, ಮೌಂಟೇನ್ ಬೈಕಿಂಗ್ ಮತ್ತು ಗಂಗಾನದಿಯ ಉದ್ದಕ್ಕೂ ಕ್ಯಾಂಪಿಂಗ್‌ಗೂ ಜನಪ್ರಿಯವಾಗಿದೆ.

ಕನಸಿನ ಪ್ರವಾಸಕ್ಕೆ ಈಗಲೇ ಸಾಲ ಮಾಡಬೇಕೆ ಇಲ್ಲಿದೆ ಟ್ರಾವೆಲ್ ಲೋನ್ ಮಾಹಿತಿ (8)

ಹೃಷಿಕೇಶಕ್ಕೆ ಬಂದವರು ಇಲ್ಲಿ ಪ್ರತಿದಿನ ನಡೆಯುವ ಗಂಗಾರತಿಯನ್ನು ನೋಡಲೇಬೇಕು. ನದಿಯ ಇಕ್ಕೆಲಗಳಲ್ಲಿ ಹಲವಾರು ಘಾಟ್‌ಗಳಿವೆ. ಅವುಗಳಲ್ಲಿ ತ್ರಿವೇಣಿ, ಪರಮಾರ್ಥ ನಿಕೇತನ್, ಶತ್ರುಘ್ನ ಘಾಟ್‌ಗಳಲ್ಲಿ ನಡೆಯುವ ಗಂಗಾರತಿ ಪ್ರಸಿದ್ಧವಾಗಿದೆ. ತಣ್ಣನೆ ಹರಿಯುವ ಗಂಗಾ ನದಿಯ ಪಕ್ಕದಲ್ಲಿ ಕುಳಿತುಕೊಂಡು, ಮನಸಿನಲ್ಲಿ ದೇವರನಾಮ ಜಪಿಸುತ್ತಾ ಗಂಗಾ ಆರತಿಯನ್ನು ನೋಡುವುದು ಮನಸಿಗೆ ಶಾಂತಿ ನೀಡುತ್ತದೆ.

ದಾರಿ ಹೇಗೆ?

ಮಸ್ಸೂರಿಗೆ ಅತಿ ಸಮೀಪದ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ಇಲ್ಲಿಂದ ಮಸ್ಸೂರಿ ಕೇವಲ 35ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಡೆಹ್ರಾಡೂನ್ ಗೆ ಪ್ರತಿದಿನ ವಿಮಾನ ಸೌಲಭ್ಯವಿದೆ ಹಾಗೂ 2.30 ಗಂಟೆಗಳ ಪ್ರಯಾಣದ ಅವಧಿ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ