ಥೈಲ್ಯಾಂಡ್ ಮೇಲೆ ಕಾಲಿಡೋಕೂ ಕಾಸು!
ಥೈಲ್ಯಾಂಡ್ ಸದ್ಯ ರೂಪಿಸಿರೋ ಯೋಜನೆಯ ಪ್ರಕಾರ ಆ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು 800 ರುಪಾಯಿ ಹಣ ಪಾವತಿ ಮಾಡಬೇಕು. ಇದಕ್ಕೆ ‘ಥೈಲ್ಯಾಂಡ್ ಮಣ್ಣಿನ ಮೇಲೆ ಕಾಲಿಡುತ್ತಿರುವುದಕ್ಕೆ ಜನರು ಪಾವತಿಸಬೇಕಿರುವ ಶುಲ್ಕ’ ಎಂದು ಇದನ್ನು ಕರೆಯಲಾಗಿದೆ. ಇದನ್ನು 2025ರಲ್ಲಿ ಜಾರಿಗೆ ತರುವ ಪ್ಲ್ಯಾನ್ ಇತ್ತು. ಆದರೆ, ಅನಿಶ್ಚಿತೆಗಳ ಕಾರಣದಿಂದ ಇದನ್ನು 2026ರ ಮಧ್ಯಂತರದ ವೇಳೆಗೆ ಜಾರಿಗೆ ತರಲು ಯೋಜಿಸಲಾಗಿದೆ.
- ಮಮತಾ ತರೀಕೆರೆ
ಯಾವುದಾದರೂ ಪ್ರವಾಸಿ ತಾಣಗಳನ್ನು ನೋಡಲು ಹೋಗಬೇಕು ಎಂದರೆ ಅದಕ್ಕೆ ಒಂದಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈ ಹಣವನ್ನು ಆ ಜಾಗದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಐತಿಹಾಸಿಕ ತಾಣ, ಜಲಪಾತ ಹೀಗೆ ಅನೇಕ ಕಡೆಗಳಲ್ಲಿ ಈ ರೀತಿ ಶುಲ್ಕ ಪಡೆಯೋ ಪದ್ಧತಿ ಇದೆ. ಆದರೆ, ಒಂದು ದೇಶಕ್ಕೆ ನೀವು ಪ್ರವಾಸಿಗನಾಗಿ ಎಂಟ್ರಿ ಕೊಡಬೇಕು ಎಂದಾಗ ಹಣ ನೀಡಬೇಕು ಎಂದರೆ ಹೇಗೆ? ಹೀಗೊಂದು ಯೋಜನೆಯನ್ನು ತರಲು ಥೈಲ್ಯಾಂಡ್ ನಿರ್ಧರಿಸಿದೆ! ಈ ಯೋಜನೆ ಕೇಳಿ ಅನೇಕರಿಗೆ ನಗು ಬಂದಿದೆ. ಇನ್ನೂ ಕೆಲವರು ಸಿಟ್ಟಾಗಿದ್ದಾರೆ. ಆದರೆ, ಪ್ರವಾಸಿಗರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಯೋಜನೆ ಏನು?
ಥೈಲ್ಯಾಂಡ್ ಸದ್ಯ ರೂಪಿಸಿರೋ ಯೋಜನೆಯ ಪ್ರಕಾರ ಆ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು 800 ರುಪಾಯಿ ಹಣ ಪಾವತಿ ಮಾಡಬೇಕು. ಇದಕ್ಕೆ ‘ಥೈಲ್ಯಾಂಡ್ ಮಣ್ಣಿನ ಮೇಲೆ ಕಾಲಿಡುತ್ತಿರುವುದಕ್ಕೆ ಜನರು ಪಾವತಿಸಬೇಕಿರುವ ಶುಲ್ಕ’ ಎಂದು ಇದನ್ನು ಕರೆಯಲಾಗಿದೆ. ಇದನ್ನು 2025ರಲ್ಲಿ ಜಾರಿಗೆ ತರುವ ಪ್ಲ್ಯಾನ್ ಇತ್ತು. ಆದರೆ, ಅನಿಶ್ಚಿತೆಗಳ ಕಾರಣದಿಂದ ಇದನ್ನು 2026ರ ಮಧ್ಯಂತರದ ವೇಳೆಗೆ ಜಾರಿಗೆ ತರಲು ಯೋಜಿಸಲಾಗಿದೆ.

ಬಂದೇ ಬರುತ್ತೆ..
ಪ್ರವಾಸಿಗರು ಬರದೇ ಇದ್ದರೇ ಗತಿ ಏನು ಎಂಬ ಕಾರಣಕ್ಕೆ ಯೋಜನೆ ಮುಂದಕ್ಕೆ ಹಾಕಲಾಗಿತ್ತು ಎನ್ನುವ ಮಾತಿತ್ತು. ಆದರೆ, ಇದಕ್ಕೆ ಅಲ್ಲಿನ ಸರ್ಕಾರ ಹೇಳೋದೇ ಬೇರೆ. ಸದ್ಯದ ಮಾಹಿತಿ ಪ್ರಕಾರ ಈ ಯೋಜನೆಯ ರೂಪು-ರೇಷೆ ಸರಿಯಾದ ರೀತಿಯಲ್ಲಿ ಆಗಿಲ್ಲ. ಭೂಮಿ, ಸಮುದ್ರ, ವಿಮಾನ ಹಾಗೂ ರೈಲಿನ ಮೂಲಕ ಬರುವ ಪ್ರಯಾಣಿಕರಿಗೆ ವಿವಿಧ ರೀತಿಯ ಶುಲ್ಕ ನಿಗದಿ ಮಾಡಲು ಯೋಜಿಸಲಾಗಿದೆ. ಇದೆಲ್ಲ ಫೈನಲ್ ಆದ ಬಳಿಕ ಯೋಜನೆ ಜಾರಿಗೆ ಬರಲಿದೆ.
ಸದ್ಯದ ಫೀ ಎಷ್ಟು?
ಸದ್ಯ ಎಲ್ಲರಿಗೂ ಒಂದೇ ರೀತಿಯ ಶುಲ್ಕ ನಿಗದಿ ಮಾಡಿಲ್ಲ. ವಿಮಾನದಲ್ಲಿ ಬರುವವರಿಗೆ 800 ರುಪಾಯಿ, ಸಮುದ್ರದಲ್ಲಿ ಬರುವವರಿಗೆ 400 ರುಪಾಯಿ ಶುಲ್ಕ ಫೈನಲ್ ಮಾಡಲಾಗಿದೆ. ಇದನ್ನು ಹೇಗೆ ಸಂಗ್ರಹಿಸಬೇಕು ಎಂಬಿತ್ಯಾದಿ ವಿಚಾರಗಳಲ್ಲಿ ಸರ್ಕಾರ ಸರಿಯಾದ ರೂಪುರೇಷೆ ರೆಡಿ ಮಾಡಿ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ.
ಪ್ರವಾಸಿಗರ ಏಳ್ಗೆಗೆ ಬಳಕೆ
ಈ ರೀತಿ ಸಂಗ್ರಹಿಸಿದ ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರದ ಕಡೆಯಿಂದ ಉತ್ತರ ಸಿಕ್ಕಿದೆ. ಈ ಹಣವನ್ನು ಥೈಲ್ಯಾಂಡ್ ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಇಷ್ಟೇ ಅಲ್ಲ, ಆ ದೇಶಕ್ಕೆ ಬರುವ ಪ್ರವಾಸಿಗರಿಗೆ ವಿಮೆ ನೀಡಲು ಕೂಡ ಪ್ಲ್ಯಾನ್ ನಡೆದಿದೆ.
ಪ್ರವಾಸಿಗರು ಕೂಡ ಮುಖ್ಯ
ಥೈಲ್ಯಾಂಡ್ ಆರ್ಥಿಕತೆ ಆ ದೇಶಕ್ಕೆ ಬರುವ ಪ್ರವಾಸಿಗರ ಮೇಲೆ ಹೆಚ್ಚು ಡಿಪೆಂಡ್ ಆಗಿದೆ. ಆದರೆ, ಇತ್ತೀಚೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಇದರಿಂದ ದೇಶದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿದೆ. ಈ ವರ್ಷದ ಆರು ತಿಂಗಳಲ್ಲಿ ಈ ಭಾಗಕ್ಕೆ 1.7 ಕೋಟಿ ಜನರು ಬಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 5ರಷ್ಟು ಇಳಿಕೆ ಆಗಿದೆ. ಈ ಭಾಗಕ್ಕೆ ಬರೋದಕ್ಕೆ ವಿಮಾನ ದರ ದುಬಾರಿ ಆಗಿದ್ದು, ಇದರಿಂದ ಜನರು ಬೇರೆ ಆಯ್ಕೆ ಹುಡುಕುತ್ತಿದ್ದಾರೆ. ಇವುಗಳ ಜೊತೆ ಎಂಟ್ರಿ ಫೀ ಕೂಡ ನಿಗದಿ ಆದರೆ ಕಷ್ಟ.