ಮೃತ್ಯುಂಜಯನ ಮಡಿಲಿನಲ್ಲಿ…
ಈ ಕೃತಿಯಲ್ಲಿ ಒಟ್ಟು ಇಪ್ತತ್ತೈದು ಅಧ್ಯಾಯಗಳಿವೆ. ಇವುಗಳಲ್ಲಿ ಕೈಲಾಸ ಮಾನಸ ಸರೋವರದ ಯಾತ್ರೆಯಲ್ಲಿ ಬರುವ ಪ್ರಮುಖ ಸ್ಥಳ, ದೇಗುಲ, ಕ್ಯಾಂಪ್, ಪ್ರಕೃತಿ ಸೌಂದರ್ಯ, ಹವಾಮಾನ, ಊಟೋಪಚಾರ, ರೀತಿ-ನೀತಿ ಮತ್ತು ಲೇಖಕರ ಅನುಭವಗಳ ವಿವರಗಳಿವೆ.
- ಮಂಜುನಾಥ ಡಿ. ಎಸ್.
ಮೂರು ಬಾರಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿರುವ ಎಸ್. ವೆಂಕಟೇಶ್ ವಿರಚಿತ ‘ಮೃತ್ಯುಂಜಯನ ಮಡಿಲಿನಲ್ಲಿ’ ಶೀರ್ಷಿಕೆಯ ಪ್ರವಾಸ ಕೃತಿ ನನಗೆ ಇಷ್ಟವಾಯಿತು. ಪ್ರವಾಸಿ ಪ್ರಪಂಚದ ಓದುಗರಿಗೆ ಈ ಕೃತಿಯನ್ನು ಪರಿಚಯಿಸುವ ಪ್ರಯತ್ನವಿದು.
2010ರಲ್ಲಿ ಈ ಗ್ರಂಥದ ಎರಡನೆಯ ಆವೃತ್ತಿ ಪ್ರಕಟಗೊಂಡಿತು. ʻಪ್ರವೇಶʼದಲ್ಲಿ ಲೇಖಕರು ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಮೃತ್ಯುಂಜಯನ ಮಡಿಲಿನಲ್ಲಿ ಪುಸ್ತಕದ ಮೊದಲ ಆವೃತ್ತಿ ಹೊರಬಂದ ನಂತರ ಲೇಖಕರ ಕೈಲಾಸ ಮಾನಸದ ಯಾತ್ರೆಯ ಸೆಳೆತ ಮತ್ತಷ್ಟು ಹೆಚ್ಚಾಗಿ ಶಿವನ ಆಶೀರ್ವಾದದಿಂದಲೇ ಅವರ ಮೂರನೆಯ ಬಾರಿಯ ಯಾತ್ರೆ 2007ರಲ್ಲಿ ಸಫಲಗೊಂಡಿತು ಎಂದಿದ್ದಾರೆ. ಮೂರನೆಯ ಸಲದ ಯಾತ್ರೆಯಲ್ಲಿ ಆದ ಅಪಾರ ಅನುಭವಗಳ ಒಂದು ಭಾಗವನ್ನಾದರೂ ಓದುಗರೊಡನೆ ಹಂಚಿಕೊಳ್ಳುವ ಅವರ ಆಸೆಯ ಫಲ ಈ ಆವೃತ್ತಿ.
ಇದನ್ನೂ ಓದಿ: ಟೂರು ಕೇರಿಯ ನೂರು ಕಥೆಗಳು
ಮೊದಲ ಪ್ರವಾಸವನ್ನು ನೇಪಾಳದ ಮೂಲಕ ಮಾಡಿದ್ದ ಲೇಖಕರು ಮೂರನೆಯ ಪ್ರವಾಸವನ್ನು ಭಾರತದ ಚಾರಣದ ಹಾದಿಯಲ್ಲಿ ಕ್ರಮಿಸಿದ್ದಾರೆ. ಗುಂಜಿ, ಕಾಲಾಪಾನಿ, ನಾಭಿಡಾಂಗ್ (ಓಂ ಪರ್ವತ), ಲಿಪೂಲೇಖ್ ಪಾಸ್ ಹೀಗೆ ಒಂದಕ್ಕಿಂತ ಒಂದು ಅದ್ಭುತ ಪ್ರದೇಶಗಳ ವೀಕ್ಷಣೆಯ ವಿಶೇಷ ಅನುಭವ ಗಳಿಸಿದ್ದಾರೆ. ಪರಿಕ್ರಮಣದ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಈ ಕೃತಿಯ ಮೂಲಕ ಇವುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಲೇಖಕರ ಮನಸು ಸದಾ ತಿರುಗಾಟದ ಸುತ್ತಲೇ ತಿರುಗುತ್ತದೆ. ಆದರೂ ಅದೇಕೋ ಹಿಮಾಲಯ ಅವರ ಮನಸನ್ನು ಹಿಡಿದಿಟ್ಟಿರುವುದಂತೆ. ʻಅಂಥದ್ದೇನಿದೆ ಅಲ್ಲಿ?ʼ ಎಂಬ ಪ್ರಶ್ನೆಗೆ ʻಏನಿಲ್ಲ?ʼ ಎಂದು ಅವರು ಉತ್ತರಿಸುತ್ತಾರೆ. ಪ್ರಕೃತಿಪ್ರಿಯರಿಗೆ ಅದ್ಭುತ ನಿಸರ್ಗ, ಯಾತ್ರಿಕರಿಗೆ ನೂರಾರು ಪವಿತ್ರ ಕ್ಷೇತ್ರಗಳು, ಮನಃಶಾಂತಿ ಬಯಸುವವರಿಗೆ ಹೇಳಿ ಮಾಡಿಸಿದ ಜಾಗ, ಕುಂಚ ಹಿಡಿದ ಕಲಾವಿದರಿಗಂತೂ ಮುಂದಿನ ಜನ್ಮಕ್ಕೂ ಆಗುವಷ್ಟು ಗ್ರಾಸ, ಹೀಗೆ ಹಾದಿ ಸಾಗುತ್ತದೆ. ವಿಜ್ಞಾನಿಗಳಿಗೆ, ಕವಿಗಳಿಗೆ, ಸಾಹಿತಿಗಳಿಗೆ, ಸಾಧಕರಿಗೆ ಬೇಕು ಬೇಕಾದ್ದೆಲ್ಲಾ ಬೇಕಾದಷ್ಟಿವೆ ಅಲ್ಲಿ ಎನ್ನುತ್ತಾರೆ ಲೇಖಕ.
ʻಹಿಮಗಿರಿಯೊಳಗವಿತಿಹುದು ಚೈತನ್ಯದಗ್ನಿ ಕಣ
ಸ್ಥಿಮಿತದಿಂ ನಿಂತಿಹುದು ಧರೆಯ ಹಿತಕೆ
ಶಮದ ಸುಂದರದ ಸಾತ್ವಿಕದ ಗಾಂಭೀರ್ಯವದು
ನಮಗೊಂದು ವೇದ ನಿಧಿ ಮಂಕುತಿಮ್ಮʼ
ಡಿವಿಜಿ ಯವರ ಈ ಕಗ್ಗದ ಅನುಭವಾಮೃತಧಾರೆಯ ಸವಿಯನ್ನು ಅಕ್ಷರಶಃ ಇಲ್ಲಿ ಸವಿಯಬಹುದು ಎಂಬುದು ಲೇಖಕರ ಅನಿಸಿಕೆ. ಪುಸ್ತಕ ಓದಲು ತೊಡಗುವ ಪ್ರತಿ ಓದುಗರಿಗೂ ಮೊದಲಿಗೆ ಹಿತ ನೀಡುವುದು ಲೇಖಕರ ಸರಳತೆ, ಪ್ರಾಮಾಣಿಕತೆ, ಸ್ವಾಭಾವಿಕ ವಿಷಯಗಳಲ್ಲೂ ಸಂಕೋಚ ಪಡುವ ನಡವಳಿಕೆ. ಕೆಲವೊಮ್ಮೆ ಅತೀ ಭಾವುಕರಾದಂತೆ ವರ್ತಿಸುವ ಲೇಖಕರು, ದೆಹಲಿಯ ಮುಖ್ಯ ವೈದ್ಯಾಧಿಕಾರಿ ʻನೀವು ಯಾತ್ರೆಗೆ ಫಿಟ್ʼ ಎಂದು ಹೇಳಿದ ಕೂಡಲೆ ‘ದಿಢೀರನೆ ಎದ್ದು ಆತನ ಕಾಲಿಗೇ ನಮಸ್ಕರಿಸಿಬಿಟ್ಟೆ’ ಎಂದಿದ್ದಾರೆ. ಹೀಗೆ ಸಮರ್ಥ ನುಡಿಕಟ್ಟುಗಳನ್ನು ಬಳಸಿ ಮನಮುಟ್ಟುವಂತೆ ಬರೆಯುವ ಚಾಕಚಕ್ಯತೆ ಅವರಿಗಿದೆ - ಶ್ರೀಯುತ ರಾಜಗೋಪಾಲ್. ಎಂ. ಅವರು ಮುನ್ನುಡಿಯಲ್ಲಿ ಬರೆದ ವಾಕ್ಯಗಳು ನಿಜಕ್ಕೂ ಈ ಕೃತಿಗೆ ಪೀಠಿಕೆ ಎನಿಸಿವೆ.

ಈ ಕೃತಿಯಲ್ಲಿ ಒಟ್ಟು ಇಪ್ತತ್ತೈದು ಅಧ್ಯಾಯಗಳಿವೆ. ಇವುಗಳಲ್ಲಿ ಕೈಲಾಸ ಮಾನಸ ಸರೋವರದ ಯಾತ್ರೆಯಲ್ಲಿ ಬರುವ ಪ್ರಮುಖ ಸ್ಥಳ, ದೇಗುಲ, ಕ್ಯಾಂಪ್, ಪ್ರಕೃತಿ ಸೌಂದರ್ಯ, ಹವಾಮಾನ, ಊಟೋಪಚಾರ, ರೀತಿ-ನೀತಿ ಮತ್ತು ಲೇಖಕರ ಅನುಭವಗಳ ವಿವರಗಳಿವೆ.
ತಮ್ಮ ಅನುಭವಗಳನ್ನು ಲೇಖಕರು ದಾಖಲಿಸಿರುವ ಪರಿ ಕೆಲವೆಡೆ ನವಿರಾದ ಹಾಸ್ಯದಿಂದ ಕೂಡಿದೆ. ಬೀಳ್ಕೊಡುಗೆಯ ಸಮಾರಂಭದಲ್ಲಿ ಯಾತ್ರಿಕರಿಗೆ ಮಾಡಿದ ಪನ್ನೀರು ಸಿಂಚನ ಮತ್ತು ಪುಷ್ಪವೃಷ್ಟಿಯನ್ನು ದಾಖಲಿಸಿ, ‘ಸದ್ಯ ಮುಖಕ್ಕೆ ಮಂಗಳಾರತಿ ಮಾಡಲಿಲ್ಲ’ ಎಂದಿರುವುದು ಇದಕ್ಕೊಂದು ಉದಾಹರಣೆ.
ITBP ಸೈನಿಕರ ಶಿಸ್ತು ಹಾಗೂ ಕಾಳಜಿ ಕಂಡು ಭಾರತದ ಸಂಸ್ಕೃತಿ ಯಾವ ಮೂಲೆಯಲ್ಲೂ ಮುಕ್ಕಾಗಿಲ್ಲ ಎಂದು ಲೇಖಕರು ಹೆಮ್ಮೆ ಪಡುತ್ತಾರೆ. ಚಾರಣದಲ್ಲಿ ಅನುಕೂಲವಾಗಲೆಂದು ದೆಹಲಿಯ ಸ್ವಯಂ ಸೇವಾ ಸಂಘದವರು ಕೊಟ್ಟಿದ್ದ ಊರುಗೋಲು ಅರ್ಧಗಂಟೆಯೊಳಗೇ ಮುರಿದುಹೋದಾಗ ಕುದುರೆಯ ಮಾಲೀಕ ರುಕ್ ರಾಂ ಯಾವುದೋ ಮರದ ಕೊಂಬೆಯನ್ನು ಮುರಿದುಕೊಂಡು ಬಂದು ಚಾಕುವಿನಿಂದ ಸವರಿ ಊರುಗೋಲು ಮಾಡಿಕೊಟ್ಟಿದ್ದು, ಇದು ಗಟ್ಟಿ ಮರದ್ದು ಯಾವ ಕಾರಣಕ್ಕೂ ಮುರಿಯುವುದಿಲ್ಲ ಎಂಬ ಭರವಸೆ ಕೊಟ್ಟಿದ್ದು, ಹೀಗೆ ಸ್ಮರಣೀಯ ಅನುಭವಗಳನ್ನೂ ಸರಳವಾಗಿ ದಾಖಲಿಸಿದ್ದಾರೆ.
ತನ್ನ ಓದಿಗೆ ಹಣ ಕೂಡಿಸಲು ಪೋರ್ಟರ್ ಕೆಲಸ ಮಾಡುವ ಚಿಕ್ಕ ವಯಸ್ಸಿನ ಪೀಚು ದೇಹದ ಹುಡುಗ, ಜಲಪಾತಗಳ ರುದ್ರ ರಮಣೀಯ ದೃಶ್ಯಗಳು, ಲಘು ಪಾದಾಘಾತಕ್ಕೇ ಕಿರುಗುಟ್ಟುವ ಪುರಾತನ ತೂಗುಸೇತುವೆಯ ಮೇಲೆ ಸಾಗುವಾಗ ಮನದಲ್ಲಿ ಮೂಡಿದ ಭಾವನೆಗಳನ್ನೂ ಅವರು ದಾಖಲಿಸಿದ್ದಾರೆ. ಮರದ ಹಲಗೆಯ ಒಂದು ಚೂರು ಮುರಿದರೂ ನಾವು ಕೈಲಾಸಕ್ಕೆ ಹೋಗುವುದಿರಲಿ ಕೈಲಾಸವೇ ನಮ್ಮ ಬಳಿ ಪ್ರತ್ಯಕ್ಷವಾಗುತ್ತದೆ ಎಂದಿದ್ದಾರೆ.
ಮಾನಸ ಸರೋವರದಲ್ಲಿ ಮುಳುಗುಹಾಕಿ ಜನ್ಮ ಸಾರ್ಥಕಗೊಳಿಸಿಕೊಂಡ ಪ್ರಸಂಗವನ್ನು ಭಾವುಕತೆಯಿಂದ ದಾಖಲಿಸಿದ್ದಾರೆ. ಭೂಮಿಯ ಮೇಲಿದ್ದರೂ ಕೈಲಾಸ ಬೇರೆಯ ಲೋಕವೇ ಎನ್ನುತ್ತಾರೆ ಲೇಖಕರು.
ಬೆಲೆ ಕಟ್ಟಲಾಗದ ಅನುಭವಗಳು, ಮನಃಶಾಂತಿ, ಕಂಡು ಕೇಳಿರದ ನಂಬಲಾಗದ ದೃಶ್ಯಗಳನ್ನು ಮನದ ತುಂಬ, ಕಿವಿಯ ತುಂಬ, ಕಣ್ತುಂಬ ತುಂಬಿಕೊಂಡು ಬಂದದ್ದೇ ತಾವು ಕೈಲಾಸದಿಂದ ಹೊತ್ತು ತಂದುದೆಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಅವರ ಈ ಯಾತ್ರೆಯ ಪುಸ್ತಕ ಓದುಗರಿಗೂ ಮಾನಸ ಯಾತ್ರೆಯ ಅನುಭವ ನೀಡುವುದಂತೂ ನಿಜ…
ಮಾಹಿತಿ ಪೆಟ್ಟಿಗೆ
- ಲೇಖಕರು : ಶ್ರೀ ಎಸ್. ವೆಂಕಟೇಶ್
- ಶ್ರೀಯುತ ರಾಜಗೋಪಾಲ್ ಎಂ. ಅವರಿಂದ ಮುನ್ನುಡಿ
- ಡಿವಿಜಿಯವರ ಕಗ್ಗದ ಅನುಭವಾಮೃತ ಉಣಬಡಿಸುವ ಪುಸ್ತಕ
- ಸರಳವಾಗಿ ಓದಿಸಿಕೊಳ್ಳುತ್ತದೆ
- ಕೈಲಾಸ ಮಾನಸ ಸರೋವರ ಯಾತ್ರೆ ವಿಷಯಾಧಾರಿತ ಪುಸ್ತಕ