Wednesday, February 4, 2026
Wednesday, February 4, 2026

2026 ಬಜೆಟ್‌: ಪ್ರವಾಸೋದ್ಯಮಕ್ಕೆ ಈ ಸಲ ಸಿಗಲಿದೆಯೇ ʻಉದ್ಯಮʼದ ಮಾನ್ಯತೆ?

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಸಂಪರ್ಕ ಕ್ರಾಂತಿಯೇ ಮೂಲಮಂತ್ರ. ರಸ್ತೆ, ರೈಲು ಮತ್ತು ವಿಮಾನ ಯಾನ ಮಾರ್ಗಗಳು, ಮೂಲಸೌಕರ್ಯ ಅಭಿವೃದ್ಧಿಯಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ. 2026ರಲ್ಲಿ ಟೂರಿಸಂಗೆ ವಿಶೇಷ ಅನುದಾನ ಮಂಜೂರಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. 2025-26ರಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ ಹೆಚ್ಚಿಸಲು, ಟ್ರಾವೆಲ್‌ ಸೌಲಭ್ಯ, ತಾಣಗಳ ಅಭಿವೃದ್ಧಿಗೆ 2,500 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಇದನ್ನು ಮತ್ತಷ್ಟು ಹೆಚ್ಚಿಸುವುದು ಅಗತ್ಯ.

  • ಕೇಶವ ಪ್ರಸಾದ್‌ ಬಿ.

2026-27ರ ಕೇಂದ್ರ ಬಜೆಟ್‌ ಫೆಬ್ರವರಿ 1ಕ್ಕೆ ಮಂಡನೆಯಾಗಲಿದೆ. ಈ ಸಲ ಭಾನುವಾರ ಬಜೆಟ್‌ ಮಂಡನೆಯಾಗುತ್ತಿರುವುದು ಸ್ವಾರಸ್ಯ. ಆಯವ್ಯಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಮೂಲಸೌಕರ್ಯ, ತೆರಿಗೆ ಸುಧಾರಣೆ, ಆತಿಥ್ಯೋದ್ಯಮದ ವಿಸ್ತರಣೆ, ಕಾರ್ಮಿಕ ಸಿಬ್ಬಂದಿಯ ಅಭಿವೃದ್ಧಿ, ದೇಶೀಯ ಟ್ರಾವೆಲ್‌ ಬೇಡಿಕೆಗೆ ಪುಷ್ಟಿ, ದೀರ್ಘಾವಧಿಯ ಪ್ರಗತಿಗೆ ಬೇಕಾದ ಕ್ರಮಗಳನ್ನು ನಿರೀಕ್ಷಿಸಲಾಗಿದೆ.

ಮುಖ್ಯವಾಗಿ ದೇಶೀಯ ಪ್ರವಾಸೋದ್ಯಮ ಬಜೆಟ್‌ನಿಂದ ಹಲವಾರು ಕೊಡುಗೆಗಳನ್ನು ನಿರೀಕ್ಷಿಸುತ್ತಿದೆ. ಹಣಕಾಸು ನೀತಿಗಳು, ತೆರಿಗೆ ಸುಧಾರಣೆಗಳು, ನಿರ್ದಿಷ್ಟ ಗುರಿ ನಿರ್ದೇಶಿತ ಉಪಕ್ರಮಗಳು ಟೂರಿಸಂ ವಲಯದ ಬೆಳವಣಿಗೆ, ಆದಾಯ ಹೆಚ್ಚಳ, ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.

ಇದನ್ನೂ ಓದಿ: ಜೀವನ ಪಾಠ ಕಲಿಯಲು ಸ್ಮಶಾನ ಪ್ರವಾಸ ಮಾಡಬೇಕು!

ಟೂರಿಸಂ ಎಂಬುದು ಟ್ರಾವೆಲ್‌ ಸೆಕ್ಟರ್‌ನ ಬೆನ್ನೆಲುಬು

ಭಾರತದ ಟ್ರಾವೆಲ್‌ ಮತ್ತು ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ. ಸಂಖ್ಯೆ ಮತ್ತು ಮೌಲ್ಯದ ದೃಷ್ಟಿಯಿಂದ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನಕ್ಕಿಂತಲೂ, ದೇಶೀಯ ಪ್ರವಾಸಿಗರ ಸಂಖ್ಯೆ ಮತ್ತು ಆರ್ಥಿಕ ಆದಾಯಗಳು ಹೆಚ್ಚುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ ಒಟ್ಟಾರೆಯಾಗಿ ಪ್ರವಾಸೋದ್ಯಮದ ಆದಾಯದ ಹರಿವಿನಲ್ಲಿ ದೇಶೀಯ ಪ್ರವಾಸಿಗರು ಮಹತ್ವದ ಪಾಲು ವಹಿಸುತ್ತಿದ್ದಾರೆ. ಈ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು 2026ರ ಬಜೆಟ್‌ನಲ್ಲಿ ಪ್ರಯಾಣದ ವೆಚ್ಚ ಕಡಿಮೆ ಮಾಡಲು, ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲು ಟೂರಿಸಂ ಇಕೊ ಸಿಸ್ಟಮ್‌ ಅನ್ನು ಬಲಪಡಿಸಲು ಆದ್ಯತೆ ನೀಡುವ ಸಾಧ್ಯತೆ ಇದೆ.

ದೇಶದ ಆರ್ಥಿಕತೆಯ ಬುನಾದಿ ಭದ್ರವಾಗಿದೆ. ವಿಶ್ವದ ನಾಲ್ಕನೆಯ ಅತಿ ದೊಡ್ಡ ಇಕಾನಮಿಯಾಗಿ ಭಾರತ ಹೊರಹೊಮ್ಮಿದೆ. ಜಿಡಿಪಿ 4 ಟ್ರಿಲಿಯನ್‌ ಡಾಲರ್‌ (4 ಲಕ್ಷ ಕೋಟಿ ಡಾಲರ್)‌ ಗಡಿ ದಾಟಿದೆ. 2025-26ರಲ್ಲಿ 7.4 ಪರ್ಸೆಂಟ್‌ ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಖರ್ಚು ಮಾಡಲು ಜನರ ಕೈಯಲ್ಲಿ ದುಡ್ಡು ಓಡಾಡುತ್ತಿರುವುದನ್ನು ಇದು ಬಿಂಬಿಸಿದೆ. ಆದ್ದರಿಂದ ಜನರ ಟ್ರಾವೆಲ್‌ ಬಜೆಟ್‌ಗೆ ತೊಂದರೆ ಇಲ್ಲ. ಜಿಎಸ್‌ಟಿ 2.0 ಪರಿಣಾಮ ತೆರಿಗೆ ಸರಳವಾಗಿದೆ. ಇವೆಲ್ಲದರ ಪರಿಣಾಮ ಜನ ಈಗ ಹಿಂದಿಗಿಂತ ಹೆಚ್ಚು ಪ್ರವಾಸದ ಮೂಡ್‌ನಲ್ಲಿದ್ದಾರೆ. ರಜಾ ದಿನಗಳಲ್ಲಿ ಯಾವುದೇ ಪ್ರವಾಸಿ ತಾಣಗಳಲ್ಲಿ ನೋಡಿ, ಪ್ರವಾಸಿಗರ ಕಲರವವನ್ನು ಗಮನಿಸಬಹುದು.

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಸಂಪರ್ಕ ಕ್ರಾಂತಿಯೇ ಮೂಲಮಂತ್ರ. ರಸ್ತೆ, ರೈಲು ಮತ್ತು ವಿಮಾನ ಯಾನ ಮಾರ್ಗಗಳು, ಮೂಲಸೌಕರ್ಯ ಅಭಿವೃದ್ಧಿಯಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ. 2026ರಲ್ಲಿ ಟೂರಿಸಂಗೆ ವಿಶೇಷ ಅನುದಾನ ಮಂಜೂರಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. 2025-26ರಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ ಹೆಚ್ಚಿಸಲು, ಟ್ರಾವೆಲ್‌ ಸೌಲಭ್ಯ, ತಾಣಗಳ ಅಭಿವೃದ್ಧಿಗೆ 2,500 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಇದನ್ನು ಮತ್ತಷ್ಟು ಹೆಚ್ಚಿಸುವುದು ಅಗತ್ಯ. ರಾಜ್ಯ ಸರಕಾರಗಳು, ಸ್ಥಳೀಯಾಡಳಿತದ ಸಹಭಾಗಿತ್ವದ ಮೂಲಕ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಏರ್‌ಪೋರ್ಟ್‌ಗಳ ಸಾಮರ್ಥ್ಯವನ್ನು ವೃದ್ಧಿಸಬೇಕು. ರಸ್ತೆ ಕಾರಿಡಾರ್‌ಗಳನ್ನು ಮೇಲ್ದರ್ಜೆಗೇರಿಸಬೇಕು.

New Project (76)

ಟೂರಿಸಂಗೆ ಆದ್ಯತೆ ನೀಡುವುದು ಒಂದು ವಿಚಾರವಾದರೆ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ, ಆತಿಥ್ಯೋದ್ಯಮದ ಕೌಶಲಾಭಿವೃದ್ಧಿಯೂ ಮುಖ್ಯ. ಇದು ಸೇವೆಯ ಗುಣಮಟ್ಟವನ್ನು ವೃದ್ಧಿಸುತ್ತದೆ. ಕೌಶಲಾಭಿವೃದ್ಧಿ ಮಂಡಳಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು. ತರಬೇತಿ ಯೋಜನೆಗಳಿಗೆ ಅನುದಾನ ಕೊಡಬೇಕು. ಆತಿಥ್ಯೋದ್ಯಮ ಕೌಶಲ ತರಬೇತಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯಬೇಕು. ಭಾರತವು ಉದ್ದಗಲಕ್ಕೂ ಸಾಂಸ್ಕೃತಿಕವಾಗಿ ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಆದ್ದರಿಂದ ಪ್ರತಿಯೊಂದು ಊರಿನಲ್ಲೂ ಪ್ರವಾಸಿಗರಿಗೆ ತೋರಿಸಬಹುದಾದ ಸಾಕಷ್ಟು ಸ್ಥಳಗಳು ಇರುತ್ತವೆ. ಆದರೆ ಈ ಬಗ್ಗೆ ಸ್ಥಳೀಯ ಯುವಜನತೆಗೆ ಅರಿವು ಮೂಡಿಸುವುದು ಮತ್ತು ಕೌಶಲಗಳನ್ನು ತಿಳಿಸಿಕೊಡುವುದು ಮುಖ್ಯ. ಸುಮಾರು 4.5 ಕೋಟಿಗೂ ಹೆಚ್ಚು ಮಂದಿ ಟ್ರಾವೆಲ್‌ ಮತ್ತು ಟೂರಿಸಂ ವಲಯದಲ್ಲಿ ಉದ್ಯೋಗ, ವೃತ್ತಿಯನ್ನು ಕಂಡುಕೊಂಡಿದ್ದಾರೆ. 2034ರ ವೇಳೆಗೆ 6.2 ಕೋಟಿಗೆ ಏರಿಕೆಯಾಗುವ ಸಾಧ್ಯತೆಯೂ ಇದೆ. ದೇಶದ ಜಿಡಿಪಿಗೆ ಕೂಡ ಪ್ರವಾಸೋದ್ಯಮ 6.8 ಪರ್ಸೆಂಟ್‌ ಕೊಡುಗೆ ನೀಡುತ್ತಿದ್ದು, ಇದು ಕೂಡ 2034ರ ವೇಳೆಗೆ 7.6 ಪರ್ಸೆಂಟ್‌ಗೆ ಏರಿಕೆಯಾಗುವ ಅಂದಾಜಿದೆ.

ಪ್ರಯಾಣದ ವೆಚ್ಚ ಕಡಿಮೆಯಾಗಲಿದೆಯೇ?

ಜಿಎಸ್‌ಟಿ ಸರಳವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಪುಷ್ಟಿ ಸಿಕ್ಕಿದೆ. ಹೊಟೇಲ್‌ ರೂಮ್‌ಗಳಲ್ಲಿ ವಾಸ್ತವ್ಯ, ಆಹಾರ ಸೇವೆ, ಟ್ರಾವೆಲ್‌ ಉತ್ಪನ್ನಗಳಿಗೆ ತೆರಿಗೆಯಲ್ಲಿ ಇನ್ನಷ್ಟು ಇಳಿಕೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ಪ್ರವಾಸೋದ್ಯಮಕ್ಕೆ ಉದ್ಯಮದ ಮಾನ್ಯತೆಯನ್ನು ಕೂಡ ಕೊಡಬೇಕು. ಇದರಿಂದ ಸಾಲ ಸೌಲಭ್ಯದ ಹರಿವು ಹೆಚ್ಚಲಿದೆ. ಕಡಿಮೆ ಬಡ್ಡಿಗೆ ಸಾಲ ಸಿಗಲಿದೆ. ಬಜೆಟ್‌ 2026ರಲ್ಲಿ ಈ ಬಗ್ಗೆ ಗಮನ ಹರಿಸಬೇಕು. ಇದು ಪ್ರವಾಸಿಗರಿಗೆ ಹಣ ಉಳಿತಾಯಕ್ಕೆ ಕಾರಣವಾದರೆ, ಸೇವೆಗಳನ್ನು ಪೂರೈಸುವವರಿಗೂ ಅನುಕೂಲಕರ.

New Project (77)

ದೇಶೀಯ ಪ್ರವಾಸೋದ್ಯಮದಲ್ಲಿ ಹೊಟೇಲ್‌ಗಳು, ಹೊಟೇಲ್‌ ರೂಮ್‌ಗಳು, ಅವುಗಳ ದರಗಳು ಪ್ರಮುಖವಾಗಿವೆ. ಇವು ಪ್ರಯಾಣಿಕರಿಗೆ ಬಜೆಟ್‌ ರೂಪಿಸುವಲ್ಲಿ ನಿರ್ಣಾಯಕವಾಗುತ್ತದೆ. 2026ರಲ್ಲಿ ಹೊಟೇಲ್‌ ರೂಮ್‌ಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆಯೂ ಇದೆ. ಭಾರತೀಯರು ಪ್ರವಾಸದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಬಯಸುತ್ತಾರೆ. ಜತೆಗೆ ಪಾಕೆಟ್‌ ಫ್ರೆಂಡ್ಲಿಯೂ ಆಗಿರಬೇಕು. ಇತ್ತೀಚಿನ ವರ್ಷಗಳಲ್ಲಿ ಹೆರಿಟೇಜ್‌ ಸರ್ಕ್ಯೂಟ್‌ಗಳು, ಪ್ರಕೃತಿ-ಚಾರಣಗಳು, ಆರೋಗ್ಯ ಧಾಮಗಳು, ಆಟೋಟಗಳಿಗೆ ಖ್ಯಾತಿ ಗಳಿಸಿರುವ ಕೇಂದ್ರಗಳು, ರೆಸಾರ್ಟ್‌ ಟೂರಿಸಂ ಜನಪ್ರಿಯವಾಗುತ್ತವೆ. ಹಿಮಾಚಲಪ್ರದೇಶ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಗುಡ್ಡಗಾಡುಗಳನ್ನು, ಬೆಟ್ಟ, ಶಿಖರಗಳನ್ನು ಆಧರಿಸಿದ ಪ್ರವಾಸೋದ್ಯಮ ವೃದ್ಧಿಸುತ್ತಿದೆ. ನಮ್ಮಲ್ಲಿ ದೇವಾಲಯಗಳು, ಪುಣ್ಯಕ್ಷೇತ್ರಗಳನ್ನು ಆಧರಿಸಿದ ಪ್ರವಾಸೋದ್ಯಮಕ್ಕೆ ಶತಶತಮಾನಗಳ ಐತಿಹ್ಯವೇ ಇದೆ. ಇವೆಲ್ಲದರ ಅಭಿವೃದ್ಧಿಯಿಂದ ಸ್ಥಳೀಯವಾಗಿ ಹೇರಳ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಜತೆಗೆ ಸರಕಾರಗಳ ಬೊಕ್ಕಸಕ್ಕೂ ಆದಾಯ ಸಿಗುತ್ತದೆ.

ಹೊಟೇಲ್‌ ಅಸೋಸಿಯೇಶನ್‌ ಆಫ್‌ ಇಂಡಿಯಾವು ವಲಯಾವಾರು ಕೇಂದ್ರಿತ ಸುಧಾರಣೆಗಳಿಗೆ ಬೇಡಿಕೆ ಮುಂದಿಟ್ಟಿದೆ. ಹೊಟೇಲ್‌ಗಳಿಗೆ ಮೂಲಸೌಕರ್ಯ ವಲಯದ ಮಾನ್ಯತೆ ಕೊಡಬೇಕು, ಇಂಡಸ್ಟ್ರಿಯ ಬೆನಿಫಿಟ್‌ಗಳನ್ನು ಕೊಡಬೇಕು ಎಂಬುದು ಅಸೋಸಿಯೇಶನ್‌ನ ಬಲವಾದ ವಾದವಾಗಿದೆ. ಜತೆಗೆ ಹೊಟೇಲ್‌ ಉದ್ಯಮದಲ್ಲಿ ಬಂಡವಾಳ ಹೂಡುವವರಿಗೆ ಸಿಂಗಲ್‌ ವಿಂಡೋ ಕ್ಲಿಯರೆನ್ಸ್‌ ಸಿಗುವ ವ್ಯವಸ್ಥೆ ಮಾಡಬೇಕು. ಇದರಿಂದ ಹೊಟೇಲ್‌ ವಲಯಕ್ಕೆ ಹೆಚ್ಚಿನ ಹೂಡಿಕೆ ಬರಲಿದೆ, ಉದ್ಯೋಗ ಸೃಷ್ಟಿಯಾಗಲಿದೆ, ವಿದೇಶಿ ವಿನಿಮಯ ಸಂಗ್ರಹವಾಗಲಿದೆ ಎಂದು ಸಂಘಟನೆ ತಿಳಿಸಿದೆ.

ಕೇಂದ್ರ ಸರಕಾರವು ದೇಶೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ದೇಖೋ ಅಪ್ನಾ ದೇಶ್‌, ಪ್ರಸಾದ್‌, ವೈಬ್ರೆಂಟ್‌ ವಿಲೇಜ್‌ ಪ್ರೋಗ್ರಾಮ್‌, ಸ್ವದೇಶಿ 2.0, ಉಡಾನ್‌ ಇದರಲ್ಲಿ ಸೇರಿವೆ. ಆದರೆ ಪ್ರವಾಸೋದ್ಯಮಕ್ಕೆ ಎಷ್ಟು ಬಂಡವಾಳ ಹೂಡಿದರೂ ಕಡಿಮೆಯೇ. ಅಷ್ಟು ಬೇಡಿಕೆ ಅಲ್ಲಿದೆ. ಆದ್ದರಿಂದ ಬಜೆಟ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚು ಮೊತ್ತದ ಅನುದಾನ, ಬೆಂಬಲ, ಉಪಕ್ರಮಗಳು ಘೋಷಣೆಯಾಗಲಿ ಎಂಬುದು ಪ್ರವಾಸಿಗರು, ಉದ್ಯಮಿಗಳು, ತಜ್ಞರ ಅಶಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?