Wednesday, February 4, 2026
Wednesday, February 4, 2026

ಜೀವನ ಪಾಠ ಕಲಿಯಲು ಸ್ಮಶಾನ ಪ್ರವಾಸ ಮಾಡಬೇಕು!

ಯುನೆಸ್ಕೋ ಪಾರಂಪರಿಕ ತಾಣಗಳು ಎಂದೊಡನೆಯೇ ನಮ್ಮ ಗಮನವೆಲ್ಲಾ ಚಾರಿತ್ರಿಕ ಕಟ್ಟಡ, ದೇವಸ್ಥಾನ, ಕಾಡು, ಬೆಟ್ಟ, ಬಂಡೆಗಳ ಕಡೆಗೇ ಹೋಗುತ್ತವೆ. ಆದರೆ ಯುನೆಸ್ಕೋ ಪಾರಂಪರಿಕ ತಾಣಗಳ ಒಡಂಬಡಿಕೆ ಎನ್ನುವ ಅಂತಾರಾಷ್ಟ್ರೀಯ ಕರಾರೊಂದು ರಾಷ್ಟ್ರರಾಷ್ಟ್ರಗಳ ನಡುವೆ 1972ನೆಯ ಇಸವಿಯಿಂದಲೂ ಜಾರಿಯಲ್ಲಿದೆ. ಈ ಒಪ್ಪಂದದ ಅಡಿಯಲ್ಲಿ ಜಗತ್ತಿನ ಕೆಲವು ಸ್ಮಶಾನಗಳನ್ನೂ ಪಾರಂಪಾರಿಕ ತಾಣಗಳೆಂದು ಗುರುತಿಸಲಾಗಿದೆ.

  • ಅಂಜಲಿ ರಾಮಣ್ಣ

ಪ್ರತಿ ದೇಶದಲ್ಲೂ, ಪ್ರತಿ ಧರ್ಮದಲ್ಲೂ ಮದುವೆಗಷ್ಟೇ ಅಲ್ಲ ಮಸಣಕ್ಕೂ ಪದ್ಧತಿ ಪ್ರಕಾರಗಳ ಜತೆಗೆ ಕಾನೂನು ಕೂಡ ಇದೆ. ಈ ವಿಷಯ ತಿಳಿದದ್ದೂ ದೇಶಗಳನ್ನು ಸುತ್ತಿದ್ದರಿಂದಲೇ ಎಂಬುದು ವಿಶೇಷ. ಸ್ಮಶಾನ ಕಾಯುವ ಕೆಲಸ ಮತ್ತು ಅದನ್ನು ಹೇಗೆ ಇರಬೇಕೋ ಹಾಗೆ ಇಟ್ಟುಕೊಳ್ಳುವ ಕಾಯಕ ನಮ್ಮಲ್ಲಿ ಒಂದು ಜನಾಂಗಕ್ಕೆ ಮೀಸಲು. ಆದರೆ ಐರೋಪ್ಯ ದೇಶಗಳಲ್ಲಿ ಸ್ಮಶಾನದ ಸ್ವಚ್ಛತಾ ಕೆಲಸ ಮಾಡುತ್ತಾ Earn while you learn ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಇದನ್ನು ಖುದ್ದು ನೋಡಿರದಿದ್ದರೆ ನಂಬಲು ತಿಣುಕಾಡುತ್ತಿದ್ದೆ ಎನ್ನುವುದಂತೂ ನಿಜ.

ಇದನ್ನೂ ಓದಿ: ಓದದಿದ್ದರೂ ಚೂರೂ.. ಮಾಡಲೇಬೇಕು ಯೂನಿವರ್ಸಿಟಿ ಟೂರು!

ನಮ್ಮಲ್ಲಿ ಸ್ಮಶಾನ ಎಂದರೆ ಭಯಮಿಶ್ರಿತ ಅನೂಹ್ಯ ಭಾವ. ಆದರೆ ಯುರೋಪಿನ ಜನರದ್ದು ಅದರೊಡನೆ ಒಂದು ಗೌರವಯುತ ಸಂಬಂಧ. ವೇಲ್ಸ್ ದೇಶದ ಕಾರ್ಡಿಫ್ ನಗರದ ಪೆನಾರ್ತ್ ಎನ್ನುವ ಜಾಗದಲ್ಲಿ ಒಂದು ಬೆಳಗಿನಲ್ಲಿ ಕಾಫೀ ಬಟ್ಟಲಿನ ಬಿಸುಪಿನ ಜತೆ ಆಕಾಶ ನೋಡುತ್ತಾ ನಿಂತಿರುವಾಗ ಎದುರು ರಸ್ತೆಯಲ್ಲಿಯೇ ಸಮಾಧಿಯ ಕಲ್ಲುಗಳನ್ನು ತೊಳೆಯುತ್ತಿದ್ದ ಯುವಕನೊಬ್ಬ ಕಣ್ಣಿಗೆ ಬಿದ್ದ. ಅತ್ತಿತ್ತ ನೋಡದೆ ಅತ್ತು ಹೊರಳಾಡದೆ ಕೆಲಸ ಮಾಡುತ್ತಿದ್ದವನಿಂದ ಸ್ಪಷ್ಟವಾಯಿತು ಆತ ಅಲ್ಲಿ ಯಾರದೋ ಸಾವಿಗೆ ಬಂದಿಲ್ಲ ಬದಲಿಗೆ ಕೆಲಸ ಮಾಡಲು ಅಲ್ಲಿದ್ದ ಅಂತ. 23ರ ಹರೆಯದ ಜ್ಯಾಕ್ ಮೂಲತಃ ಪೋಲೆಂಡ್ ದೇಶದವನು. ಇಲ್ಲಿಗೆ ವಲಸೆ ಬಂದಿದ್ದ ನಾಲ್ಕನೆಯ ತಲೆಮಾರಿನವನು. ವಾಣಿಜ್ಯ ವಿಭಾಗದಲ್ಲಿ ಪದವಿ ಓದುತ್ತಿದ್ದ. ವಾರಕ್ಕೆ ಒಮ್ಮೆ ಬಂದು ಹೀಗೆ ಸ್ಮಶಾನವನ್ನು ಸ್ವಚ್ಛಗೊಳಿಸುತ್ತಾನೆ. ಅಲ್ಲಿನ ಕಾರ್ಪೊರೇಷನ್ ಈ ಕೆಲಸಕ್ಕೆ ಅವನಿಗೆ 20 ಪೌಂಡ್ಸ್ ಕೂಲಿ ಕೊಡುತ್ತಿತ್ತು.

New Project (78)

ಯುರೋಪಿನ ದೇಶಗಳಲ್ಲಿ ಹೀಗೆ ಸ್ಮಶಾನವನ್ನು ಸ್ವಚ್ಛಗೊಳಿಸುವುದು ಒಂದು ಗೌರವಯುತ ಕೆಲಸ. ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳು ಪಾರ್ಕಿನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗದಿಯಾಗಿರುತ್ತದೆ. ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಾದರೂ ಹೋಗಬಹುದು. ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ. ವಿದೇಶದಲ್ಲಿ ಸಾವಿಗೆ ಇರುವಷ್ಟು ಗೌರವ ಮತ್ತು ಸ್ಮಶಾನಕ್ಕೆ ಇರುವ ಘನತೆ, ನಮ್ಮಲ್ಲಿ ಬದುಕು, ಜೀವ, ದೇಶ, ಭಾವ ಯಾವುದಕ್ಕೂ ಇಲ್ಲವೇನೋ ಎನ್ನುವ ಅನುಮಾನ ಮೂಡಿಸುವಷ್ಟು ಅರ್ಥಪೂರ್ಣವಾಗಿವೆ ಅಲ್ಲಿನ ಸ್ಮಶಾನಗಳು.

ಪ್ರಪಂಚದ ಎಲ್ಲಾ ದೇಶಗಳಿಗಿಂತ ಅತಿ ವಿವರವಾದ ‘ಸ್ಮಶಾನ ಕಾನೂನನ್ನು’ ಲಿಖಿತ ರೂಪದಲ್ಲಿ ಹೊಂದಿರುವ ದೇಶ ಜಪಾನ್. ಅಲ್ಲಿರುವ ಯಾವ ಧರ್ಮದವರೇ ಆಗಲೀ ಕಡ್ಡಾಯವಾಗಿ ಶವಗಳನ್ನು ಸುಡಬೇಕು ನಂತರ ಅಸ್ಥಿಗಳನ್ನು ಸರ್ಕಾರವು ನಿಗದಿ ಪಡಿಸಿದ ಸ್ಥಳದಲ್ಲಿ ಅಥವಾ ಸ್ವಂತ ಭೂಮಿ ಇದ್ದರೆ ಸರ್ಕಾರದ ಒಪ್ಪಿಗೆ ಪಡೆದು ಅಲ್ಲಿ ಹೂಳಬೇಕು ಎನ್ನುವ ಕಾನೂನು ಇದೆ. 2020 ಇಸವಿಯ ವೇಳೆಗೆ ಜಗತ್ತಿನಲ್ಲಿಯೇ ಹೆಚ್ಚಿನ ಶವದಹನ ನಡೆಸಿದ ದೇಶ ಜಪಾನ್. ಸದ್ಯದ ಪರಿಸ್ಥಿತಿಯಲ್ಲಿ ಅಸ್ಥಿಯನ್ನು ಹೂಳಲೂ ಸ್ಥಳಾಭಾವ ಎದುರಿಸುತ್ತಿರುವುದರಿಂದ ಕಾನೂನಿನಲ್ಲಿ ಮಾರ್ಪಾಡು ತರಲು ಅಲ್ಲಿನ ಪಾರ್ಲಿಮೆಂಟಿನಲ್ಲಿ ಚರ್ಚೆ ನಡೆಯುತ್ತಿದೆ. ಅಕ್ರಮವಾಗಿ ವಲಸೆ ಬಂದವರು ಜಪಾನ್ ದೇಶದಲ್ಲಿ ತೀರಿಕೊಂಡರೆ ಸಂಬಂಧಿಕರು ಮೃತರ ಶರೀರವನ್ನು ಶುಲ್ಕ ಪಾವತಿಸಿ ತಮ್ಮ ಮೂಲ ದೇಶಕ್ಕೆ ತೆಗೆದುಕೊಂಡು ಹೋಗುವಂತೆ ನಿಯಮ ರೂಪಿಸಲಾಗುತ್ತಿದೆ. ಯಾವ ಧರ್ಮದವರೇ ಆಗಲೀ ತಮ್ಮತಮ್ಮ ಪದ್ಧತಿಯಂತೆ ಅಂತ್ಯಸಂಸ್ಕಾರ ಮಾಡಲು ಅವಕಾಶವಿಲ್ಲದೆ ಸರ್ಕಾರ ರಚಿಸಲಿರುವ ಏಕರೂಪದ ಕಾನೂನಿನಂತೆ ನಡೆದುಕೊಳ್ಳಬೇಕಿರುತ್ತದೆ. ಜಪಾನಿನ ಕ್ಯೋಟೊ ನಗರದ ಸಗಾನೋ ಬ್ಯಾಂಬೂ ಫಾರೆಸ್ಟ್ ಒಳಗೆ ನಾನೋಮಿಯ ಶ್ರೈನ್ ಇದೆ. ಇಲ್ಲಿಗೆ ಹೋಗುವ ದಾರಿಯಲ್ಲಿ ಒಂದು ವಿಶೇಷ ಸ್ಮಶಾನವಿದೆ. ಹೊಸ ಕಾನೂನುಗಳು ಚಾಲ್ತಿಗೆ ಬರುವ ಮೊದಲು ಇದ್ದ, ಹಳೆಯ ಪದ್ಧತಿಯ ರೀತಿಯಲ್ಲಿ ಉಳಿದುಕೊಂಡಿರುವ ಏಕೈಕ ಸ್ಮಶಾನ ಇದಾಗಿದೆ.

New Project (80)

ಕ್ರೈಸ್ತಧರ್ಮದ ಅನುಯಾಯಿಗಳಲ್ಲಿ ಚರ್ಚಿನ ಹಿಂಭಾಗದಲ್ಲಿ ಶವ ಹೂಳುವ (Graveyard) ಆಚರಣೆ ಇದೆ. ಆದರೆ ಸ್ಕಾಟ್ ಲೆಂಡ್ ದೇಶದ ಎಡಿನ್ ಬರ್ಗ್ ನಲ್ಲಿ Greyfriars Krikyard ಎನ್ನುವ ಚರ್ಚಿನ ಮುಖ್ಯದ್ವಾರದಲ್ಲಿಯೇ ಒಂದು ವಿಶಿಷ್ಟ ಸಮಾಧಿ ಇದೆ. ಅಗಲಿದ ತನ್ನ ಯಜಮಾನನ ದಾರಿಯನ್ನು ಅವನ ಸಮಾಧಿಯ ಬಳಿಯಲ್ಲಿಯೇ ಕುಳಿತು ಹದಿನಾಲ್ಕು ವರ್ಷ ಕಾದು ಕಣ್ಮುಚ್ಚಿದ ಸಾಕುನಾಯಿ ಬಾಬಿಯನ್ನು ಇಲ್ಲಿ ಹೂತು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈ ನಗರಕ್ಕೆ ಬಂದವರು ತಪ್ಪದೆಯೇ ಇಲ್ಲಿಗೆ ಬಂದು ಬಾಬಿಯ ಸಮಾಧಿಯ ಮೇಲೆ ಗುಲಾಬಿಯನ್ನಿರಿಸಿ ಕರಿಕಲ್ಲಿನಲ್ಲಿ ಮಾಡಿಟ್ಟಿರುವ ಬಾಬಿಯ ಪ್ರತಿಮೆಯೆದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ಇದೇ ಊರಿನಲ್ಲಿ ಸೈನ್ಯದಲ್ಲಿದ್ದ ನಾಯಿಗಳಿಗಾಗಿಯೇ ಸ್ಮಶಾನವೊಂದನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಎರಡನೆಯ ಮಹಾಯುದ್ಧದಲ್ಲಿ ಮಡಿದ ತಮ್ಮ ಸೇನೆಯ ಅಧಿಕಾರಿಗಳಿಗೆ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ನಡುನಡುವೆಯೇ ಯೋಧರೊಂದಿಗೆ ಇದ್ದು ತೀರಿಕೊಂಡ ಸಾಕುನಾಯಿಗಳಿಗೂ ಸಮಾಧಿಗಳನ್ನು ಮಾಡಲಾಗಿದೆ.

New Project (85)

ಯುನೆಸ್ಕೋ ಪಾರಂಪರಿಕ ತಾಣಗಳು ಎಂದೊಡನೆಯೇ ನಮ್ಮ ಗಮನವೆಲ್ಲಾ ಚಾರಿತ್ರಿಕ ಕಟ್ಟಡ, ದೇವಸ್ಥಾನ, ಕಾಡು, ಬೆಟ್ಟ, ಬಂಡೆಗಳ ಕಡೆಗೇ ಹೋಗುತ್ತವೆ. ಆದರೆ ಯುನೆಸ್ಕೋ ಪಾರಂಪರಿಕ ತಾಣಗಳ ಒಡಂಬಡಿಕೆ ಎನ್ನುವ ಅಂತಾರಾಷ್ಟ್ರೀಯ ಕರಾರೊಂದು ರಾಷ್ಟ್ರರಾಷ್ಟ್ರಗಳ ನಡುವೆ 1972ನೆಯ ಇಸವಿಯಿಂದಲೂ ಜಾರಿಯಲ್ಲಿದೆ. ಈ ಒಪ್ಪಂದದ ಅಡಿಯಲ್ಲಿ ಜಗತ್ತಿನ ಕೆಲವು ಸ್ಮಶಾನಗಳನ್ನೂ ಪಾರಂಪಾರಿಕ ತಾಣಗಳೆಂದು ಗುರುತಿಸಲಾಗಿದೆ. ಜರ್ಮನಿಯ ಹ್ಯಾಂಬರ್ಗ್‍ನಲ್ಲಿರುವ ಜ್ಯೂಯಿಶ್ ಸಿಮೆಟ್ರಿಯಲ್ಲಿ1600 ಸಮಾಧಿ ಕಲ್ಲುಗಳಿದ್ದು ಪ್ರತೀ ಕಲ್ಲಿನ ಮೇಲೂ ವಿಭಿನ್ನ ರೀತಿಯ ಬರಹ ಮತ್ತು ಕೆತ್ತನೆ ಮಾಡಲಾಗಿದೆ. ಇಂಥ ಕಲಾತ್ಮಕ ಸ್ಮಶಾನಗಳನ್ನು ಜೆಕ್ ರಿಪಬ್ಲಿಕ್, ಫ್ರಾನ್ಸ್, ಪೋಲೆಂಡ್ ದೇಶಗಳಲ್ಲೂ ಗುರುತಿಸಿ ಇವುಗಳನ್ನು ಯುನೆಸ್ಕೋ ಪಾರಂಪರಿಕ ತಾಣಗಳಾಗಿಸಿದ್ದಾರೆ. ಈ ಸ್ಥಳಗಳಿಗೆಲ್ಲಾ ಪ್ರವಾಸ ಏರ್ಪಡಿಸಿ ಆಯಾ ದೇಶಗಳು ಆದಾಯ ಗಳಿಸಿಕೊಳ್ಳುತ್ತಿವೆ. ಅದರಲ್ಲೂ ಪೋಲೆಂಡ್ ದೇಶದಲ್ಲಿ ‘ಸ್ಮಶಾನ ಪ್ರವಾಸ’ ಒಂದು ಬಹು ಮುಖ್ಯ ಪ್ರವಾಸೀ ಆಕರ್ಷಣೆಯಾಗಿದೆ. ನರಮೇಧದಲ್ಲಿ ಪ್ರಾಣ ಕಳೆದುಕೊಂಡ ಯಹೂದಿಯರ ಮತ್ತು ಬದುಕುಳಿದು ಕಾಲಾಂತರದಲ್ಲಿ ತೀರಿಕೊಂಡ ಯಹೂದಿಯರನ್ನು ಮಣ್ಣು ಮಾಡಿರುವ ಸ್ಥಳಗಳಿಗೆ ಇರುವ ಇತಿಹಾಸ ಮತ್ತು ಒಂದೊಂದು ಊರಿನಲ್ಲಿ ಇರುವ ಅವರ ಸಮಾಧಿಗೆ ಇರುವ ವ್ಯತ್ಯಾಸ, ಅದಕ್ಕೆ ಕಾರಣಗಳು ಎಲ್ಲದರ ವಿವರಣೆ ನೀಡಲಾಗುತ್ತದೆ. ಈ ’ಸ್ಮಶಾನ ಪ್ರವಾಸ’ಕ್ಕೆ ಹೋಗಲು ಇಚ್ಛೆ ಇದ್ದರೆ ಟಿಕೆಟ್‍ಗಳನ್ನು ಮೊದಲೇ ಕಾಯ್ದಿರಿಸಿಕೊಳ್ಳಬೇಕು.

New Project (86)

ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ಎಲ್ಲಾ ದೇಶಗಳಲ್ಲೂ ಪ್ರತ್ಯೇಕ ಸಮಾಧಿ ಪ್ರದೇಶವನ್ನು ನೀಡಿ ಗೌರವಿಸಲಾಗಿದೆ. ಹಾಗೆಯೇ ಆಳಿದ ರಾಜರಾಣಿಯರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಜಗತ್ಪ್ರಸಿದ್ಧರಿಗೆ ಪ್ರತ್ಯೇಕ ಸ್ಥಳಗಳನ್ನು ಮೀಸಲಿಡಲಾಗಿದೆ. 1914-1918ರಲ್ಲಿ ನಡೆದ ಮೊದಲನೆಯ ಮಹಾಯುದ್ಧದಲ್ಲಿ ಇಸ್ರೇಲಿನ ಹೈಫಾ ಪಟ್ಟಣದ ಬಿಡುಗಡೆಗೆ ಹೋರಾಡಿ ಗೆದ್ದು ಮಡಿದ ಮೈಸೂರು ಸಂಸ್ಥಾನದ ಸೈನಿಕರನ್ನು ತನ್ನೊಳಗೆ ಇಟ್ಟುಕೊಂಡಿದೆ Haifa Indian Cemetery.

ಲಂಡನ್ನಿನ ಹೈ‍ಗೇಟ್ ಸಿಮೆಟ್ರಿಯಲ್ಲಿ ಹಲವಾರು ವಿಜ್ಞಾನಿಗಳ, ನೊಬೆಲ್ ಪ್ರಶಸ್ತಿ ವಿಜೇತರ ಕಳೇಬರಗಳನ್ನು ಹೂತಿಡಲಾಗಿದೆ. ಕಾರ್ಲ್ ಮಾರ್ಕ್ಸ್ ನ ಸಮಾಧಿಯೂ ಇಲ್ಲಿದೆ. ಈ ಮೊದಲು ಸಿರಿವಂತರು ತಾವು ಬದುಕಿರುವಾಗಲೇ ತಮ್ಮ ಸಮಾಧಿಗಾಗಿ ಹಣ ಕೊಟ್ಟು ಸ್ಥಳವನ್ನು ಖರೀದಿ ಮಾಡಬಹುದಿತ್ತು. ಆದರೆ ಈಗ ಕೋಟಿ ಕೊಟ್ಟರೂ ಬದುಕಲು ಗೇಣು ನೆಲವಿಲ್ಲ, ಸಾಯಲು ಇಂಚು ತಾವಿಲ್ಲ ಎನ್ನುವ ಪರಿಸ್ಥಿತಿ.

ಕತಾರ್ ದೇಶದಲ್ಲಿ ಇತರೆ ಇಸ್ಲಾಂ ದೇಶಗಳಲ್ಲಿ ಇರುವಂತೆಯೇ ಮಹಿಳೆಯರು ಮತ್ತು ಪುರುಷರಿಗೆ ಬೇರೆಬೇರೆ ಸ್ಮಶಾನಗಳಿವೆ. ಆದರೆ ಇಲ್ಲಿನ ವಿಭಿನ್ನತೆ ಎಂದರೆ ಶವಗಳನ್ನು ಶವಪೆಟ್ಟಿಗೆಯಲ್ಲಿ ಹಾಕದೆಯೇ ನೇರವಾಗಿ ಸುಡಬೇಕು ಮತ್ತು ಯಾವ ಮೃತವ್ಯಕ್ತಿಗೂ ಸಮಾಧಿ ಕಲ್ಲುಗಳನ್ನು ನೆಡುವ ಹಾಗಿಲ್ಲ. ಹೆಣಗಳನ್ನು ಸುಟ್ಟ ಜಾಗದಲ್ಲಿ ಅವರ ಹೆಸರು ಮತ್ತಿತರ ವಿವರಗಳನ್ನು ಬರೆಸುವ ಅವಕಾಶ ಇರುವುದಿಲ್ಲ.

New Project (87)

ಮೊದಲ ಬಾರಿಗೆ ಲಂಡನ್ನಿಗೆ ಹೋದಾಗ ವೆಸ್ಟ್ ಮಿನ್ ಸ್ಟರ್ ಜಾಗದಲ್ಲಿ ಇರುವ ಸುಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳನ್ನು ತೋರಿಸುತ್ತಾ ’ಈಗ ಇಲ್ಲಿ ಹೆಣಗಳನ್ನು ಹೂಳಲು ಜಾಗವೇ ಇಲ್ಲ ಹಾಗಾಗಿ ಇಲ್ಲಿನ ಸ್ಮಶಾನಗಳು ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದ ಪ್ರವಾಸಿ ಮಾರ್ಗದರ್ಶಕ ಇಯಾನ್. ಹಾಗೆ ನೋಡಿದರೆ ಜಗತ್ತಿನಲ್ಲಿ ನಾವು ಹೆಜ್ಜೆ ಇಟ್ಟೆಡೆಯೆಲ್ಲ ಒಂದು ಹೆಣ ಮಣ್ಣಾಗಿರುತ್ತದೆ ಎಂಬುದು ಅವನ ಅಭಿಪ್ರಾಯವಾಗಿತ್ತು. ಆತ Die Hard ಸಿನೆಮಾದ ಒಂದು ಸಂಭಾಷಣೆಯನ್ನು ಪ್ರವಾಸಿಗರ ಆಕರ್ಷಣೆಗಾಗಿ ಹೇಳುತ್ತಿದ್ದಾನೆ ಎಂದುಕೊಂಡು ಮನಸಿನಲ್ಲಿಯೇ ನಕ್ಕಿದ್ದೆ. ಆದರೆ ಉದ್ದಗಲದ ಪ್ರವಾಸ ನೀಡಿದ ಅನುಭವದ ಪಾಠ ಎಂದರೆ - ಬದುಕಿನ ನೀತಿ ಕಲಿಯಲು ವಾರಾಣಸಿಯ ಮಣಿಕರ್ಣಿಕಾ ಘಾಟ್ ಮುಂದೆಯೇ ಕೂರಬೇಕೆಂದಿಲ್ಲ. ಒಳಗಿನ ಮನುಷ್ಯ ಜೀವಂತವಾಗಿದ್ದರೆ ಊರುವ ಪ್ರತಿ ಹೆಜ್ಜೆಯೂ ಒಂದಷ್ಟು ವಿನಮ್ರತೆಯನ್ನು ಕಲಿಸಿಕೊಡುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?