Wednesday, January 21, 2026
Wednesday, January 21, 2026

ಓದದಿದ್ದರೂ ಚೂರೂ.. ಮಾಡಲೇಬೇಕು ಯೂನಿವರ್ಸಿಟಿ ಟೂರು!

ಇದೇ ಟ್ರಿನಿಟಿ ಕಾಲೇಜಿನಲ್ಲಿ ಓದಿದ್ದು ಸರ್ ಐಸ್ಯಾಕ್ ನ್ಯೂಟನ್. ಅವನ ತಲೆ ಮೇಲೊಂದು ಸೇಬು ಬಿದ್ದಾಗ ತಿಳಿದ ಗುರುತ್ವಾಕರ್ಷಣಾ ನಿಯಮವನ್ನು ನಾವುಗಳು ಭೂಮಿಗೆ ಬಂದ ದಿನದಿಂದಲೂ ಕಲಿಸಲಾಗಿದೆ. ಅವನಿಂದಲೇ ಜಗತ್ತಿಗೆ ಅರಿವು ಬಂದಿದ್ದು Every action has an equal and opposite reaction ಎಂದು. ಆ ಸೇಬಿನ ಗಿಡದ ನಾಲ್ಕನೆಯ ತಲೆಮಾರನ್ನೂ ಇಲ್ಲಿ ಕಾಪಿಟ್ಟಿದ್ದಾರೆ. ಅಂದಹಾಗೆ ನೆಹರು, ರಾಜೀವ್ ಗಾಂಧಿ ಓದಿದ್ದೂ ಇಲ್ಲಿಯೇ. ರಾಹುಲ್ ಗಾಂಧಿಕೂಡ ಇಲ್ಲಿಯೇ ಓದಿದ್ದು ಎನ್ನುತ್ತೆ ಗೂಗಲ್. ಆದರೆ ಅದರ ಬಗ್ಗೆ ಇಲ್ಲಿ ಕಾಲೇಜಿನಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ.

  • ಅಂಜಲಿ ರಾಮಣ್ಣ

ವಿದ್ಯೆ ಒಬ್ಬನದೇ ವ್ಯಕ್ತಿಯ ಕನಸಲ್ಲ. ಅದು ವಿಶ್ವದ ಕನಸು. ಹೆಚ್ಚು ಓದದೇ ಯಾವುದೇ ಕ್ಷೇತ್ರದಲ್ಲಿ ಜಗತ್ಪ್ರಸಿದ್ಧನಾದ ಮನುಷ್ಯನನ್ನು ’ನಿನಗೆ ಇರುವ ಒಂದು ಕೊರಗು ಏನು’ ಎಂದು ಕೇಳಿದರೆ ಬರುವ ಉತ್ತರ ’ನಾನು ಓದಿ ವಿದ್ಯಾವಂತನಾಗದೇ ಇದ್ದದ್ದು’ ಎನ್ನುವುದೇ ಆಗಿರುತ್ತದೆ. ಈ ಹೇಳಿಕೆಯು ಸತ್ಯವೋ ಅಲ್ಲವೋ ಎಂದು ಪರೀಕ್ಷಿಸಲಾದರೂ ತಕ್ಷಣ ಒಂದು ಪ್ರವಾಸ ಕೈಗೊಳ್ಳಬೇಕಿರುತ್ತದೆ.

ಕಾರಣಾಂತರದಿಂದ ಕಾಲೇಜಿಗೆ ಹೋಗಿರದಿದ್ದರೆ Academic Tourism ಮೂಲಕ ಚರಿತ್ರಾರ್ಹ, ವಿಖ್ಯಾತ ವಿಶ್ವವಿದ್ಯಾಲಯಗಳನ್ನು ನೋಡಿ ಬರಲು ಅವಕಾಶ ಕೊಟ್ಟಿವೆ ಯುರೋಪ್ ಮತ್ತು ಅಮೆರಿಕ ದೇಶಗಳು. ಕಟ್ಟಡಗಳ ಗೇಟಿನ ವಿಶೇಷತೆಯಿಂದ ತರಗತಿ ಕೋಣೆಗಳ ವಿಶೇಷತೆಯವರೆಗೂ ಅಲ್ಲಿನ ನಿಯೋಜಿತ ವಿದ್ಯಾರ್ಥಿಗಳು ವಿವರಣೆ ನೀಡುತ್ತಾ ಸುತ್ತಿಸುತ್ತಾರೆ. ಕೇಂಬ್ರಿಜ್, ಆಕ್ಸ್ ಫರ್ಡ್, ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯಗಳನ್ನು ನೋಡಲು ಜಗತ್ತಿನ ಎಲ್ಲೆಡೆಯಿಂದ ವರ್ಷವೊಂದಕ್ಕೆ 20 ಲಕ್ಷ ಜನರು ಹೋಗುತ್ತಾರೆ. ಈ ವಿಶ್ವವಿದ್ಯಾಲಯಗಳಲ್ಲಿ University Tour ಎನ್ನುವ ವಿಭಾಗವೇ ಇದೆ. ಅಲ್ಲಿನ ಪ್ರವಾಸಕ್ಕೆ ಹೋದವರು ಕೆಲವು ತರಗತಿಗಳು, ವರ್ಕ್ ಶಾಪ್, ಉಪನ್ಯಾಸ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ:ರಸ್ತೆಯ ಕಸ ವಿದ್ಯುತ್ ಆದಂತೆ ಮನಸಿನ ಕಸ ವಿದ್ವತ್ ಆಗಲಿ !

ಅಲ್ಲಿನ ವಿಶ್ವವಿದ್ಯಾಲಯಗಳು ಎಂದರೆ ದೊಡ್ಡ ದೊಡ್ಡ ಕಟ್ಟಡಗಳಲ್ಲ, ಅದೊಂದು ಊರು, ಅದೊಂದು ಬ್ರಹ್ಮಾಂಡ. 12281 ಎಕರೆಗಳ ಜಾಗದಲ್ಲಿ ಹರಡಿಕೊಂಡು 42 ಕಾಲೇಜುಗಳನ್ನು ಅಕ್ಷರಶಃ ಸರಸ್ವತಿಯ ಆಡುನೆಲವನ್ನಾಗಿಸಿದೆ ಯುನೈಟೆಡ್ ಕಿಂಗ್ ಡಮ್ ನ ಕೇಂಬ್ರಿಜ್ ವಿಶ್ವವಿದ್ಯಾಲಯ. ಕೇಂಬ್ರಿಜ್ ನ ರಸ್ತೆಗಳು ಅದೆಷ್ಟು ಶಾಂತ ನಿರಾಳ ಎಂದರೆ ಓಡಾಡುವಾಗ ಪುಸ್ತಕ ಓದುತ್ತಿರಬಹುದು, ಎಲ್ಲಿಯೂ ಢಿಕ್ಕಿ ಹೊಡೆಯುತ್ತೇವೆ ಎನ್ನುವ ಭಯ ಆತಂಕವಿಲ್ಲದೆ. ಯಾರೇ ಆಗಲಿ, ಕೇಂಬ್ರಿಜ್ ಊರಿಗೆ ಕಾಲಿಟ್ಟೊಡನೆ ಮೊದಲು ಮಾಡಬೇಕಾದ ಕೆಲಸ, ಬಸ್ ಸ್ಟೇಷನ್, ಬಟ್ಟೆ ಅಂಗಡಿಗಳು, ಮೆಡಿಕಲ್ ಶಾಪ್ಸ್ ಇಲ್ಲೆಲ್ಲಾ ಉಚಿತವಾಗಿ ತೆಗೆದುಕೊಳ್ಳಬಹುದು ಎಂದು ಇಟ್ಟಿರುವ ಆಯಾ ತಿಂಗಳ ಮಾಹಿತಿ ಪುಸ್ತಕವನ್ನು ಎತ್ತಿಟ್ಟುಕೊಳ್ಳುವುದು. 100-150 ಪುಟಗಳಷ್ಟು ಇರುವ ಆ ಪುಸ್ತಕದಲ್ಲಿ ಯಾವಯಾವ ದಿನ, ಎಷ್ಟು ಹೊತ್ತಿಗೆ, ಯಾವ ಕಾಲೇಜಿನಲ್ಲಿ ಏನೇನು ಚಟುವಟಿಕೆ ನಡೆಯುತ್ತದೆ.. ಆ ಕಾರ್ಯಕ್ರಮದ ಸಂಕ್ಷಿಪ್ತ ವಿವರ ಏನು, ಆ ಜಾಗವನ್ನು ತಲುಪುವುದು ಹೇಗೆ, ಟಿಕೆಟ್ ಇದ್ದರೆ ಅದರ ದರ ಏನು, ಎಲ್ಲಿ ಪಡೆದುಕೊಳ್ಳಬಹುದು ಎಲ್ಲಾ ವಿವರಗಳು ಇರುತ್ತವೆ. ಸೆಮಿನಾರ್ ಗಳು, ಪಾಠಗಳು, ಪ್ರಯೋಗಗಳು, ಚರ್ಚೆ, ವಿಚಾರ ಸಂಕಿರಣಗಳು, ಪ್ರಬಂಧ ಮಂಡನೆ, ನಾಟಕ, ಸಂಗೀತ, ಚಿತ್ರಕಲೆ, ಕಥೆ ಹೇಳುವುದು, ಪುಸ್ತಕ ಓದುವುದು, ಗಿಡ ನೆಡುವುದು ಹೀಗೆ ಸಮಸ್ತ ಕಾರ್ಯಕ್ರಮವೂ ನಿತ್ಯವೂ ಇರುತ್ತದೆ ಅಲ್ಲಿ.

ಈವರೆಗೂ ಒಟ್ಟು 900 ಜನರಿಗೆ ನೊಬೆಲ್ ಪುರಸ್ಕಾರ ದೊರಕಿದೆ. ಅವರಲ್ಲಿ 126 ಜನರು ಇದೇ ಕೇಂಬ್ರಿಜ್ ನ ಕಾಲೇಜುಗಳಲ್ಲಿ ಓದಿದವರು. ಇಲ್ಲಿನ ಕಾಲೇಜುಗಳಲ್ಲಿ ಪ್ರಸ್ತುತ 140 ದೇಶಗಳಿಂದ ಬಂದಿರುವ 24912 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎನ್ನುತ್ತಿದೆ ಅಂಕಿಅಂಶ. ಅಂದಹಾಗೆ 1971ರ ವರೆಗೂ ಕೇಂಬ್ರಿಜ್ ನಲ್ಲಿ ಹುಡುಗರ ಕಾಲೇಜಿಗೆ ಹುಡುಗಿಯರು ಸೇರಿಕೊಳ್ಳುವುದಿರಲಿ, ಹೋಗುವುದನ್ನೂ ನಿಷೇಧಿಸಲಾಗಿತ್ತು. 1958ರಲ್ಲಿ ಆರಂಭವಾದ ವಿನ್ ಸ್ಟನ್ ಚರ್ಚಿಲ್ ಕಾಲೇಜ್ ಮೊದಲ ಬಾರಿಗೆ ಈ ನಿಷೇಧ ತೆಗೆದು ಹಾಕಿತು. ಕೇಂಬ್ರಿಜ್ ನಲ್ಲಿ ಕೇವಲ 3 ಕಾಲೇಜುಗಳಲ್ಲಿ ಮಾತ್ರ ಕೋ-ಎಜುಕೇಶನ್ ಪದ್ಧತಿ ಇದೆ.

Untitled design (6)

1546ರಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು ಟ್ರಿನಿಟಿ ಕಾಲೇಜು. ಕೇಂಬ್ರಿಜ್ ನಲ್ಲಿ ಎಲ್ಲಾ ಕಾಲೇಜುಗಳನ್ನೂ ಹೀಗೇ ಸುಮ್ಮನೆ ಸುತ್ತಿ ಬರಬಹುದು (ಕೆಲವಕ್ಕೆ ಪ್ರವೇಶ ದರ ಇರುತ್ತದೆ). ಇದೇ ಟ್ರಿನಿಟಿ ಕಾಲೇಜಿನಲ್ಲಿ ಓದಿದ್ದು ಸರ್ ಐಸ್ಯಾಕ್ ನ್ಯೂಟನ್. ಅವನ ತಲೆ ಮೇಲೊಂದು ಸೇಬು ಬಿದ್ದಾಗ ತಿಳಿದ ಗುರುತ್ವಾಕರ್ಷಣಾ ನಿಯಮವನ್ನು ನಾವುಗಳು ಭೂಮಿಗೆ ಬಂದ ದಿನದಿಂದಲೂ ಕಲಿಸಲಾಗಿದೆ. ಅವನಿಂದಲೇ ಜಗತ್ತಿಗೆ ಅರಿವು ಬಂದಿದ್ದು Every action has an equal and opposite reaction ಎಂದು. ಆ ಸೇಬಿನ ಗಿಡದ ನಾಲ್ಕನೆಯ ತಲೆಮಾರನ್ನೂ ಇಲ್ಲಿ ಕಾಪಿಟ್ಟಿದ್ದಾರೆ. ಅಂದಹಾಗೆ ನೆಹರು, ರಾಜೀವ್ ಗಾಂಧಿ ಓದಿದ್ದೂ ಇಲ್ಲಿಯೇ. ರಾಹುಲ್ ಗಾಂಧಿಕೂಡ ಇಲ್ಲಿಯೇ ಓದಿದ್ದು ಎನ್ನುತ್ತೆ ಗೂಗಲ್. ಆದರೆ ಅದರ ಬಗ್ಗೆ ಇಲ್ಲಿ ಕಾಲೇಜಿನಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ.

ಚಾರ್ಲ್ಸ್ ಡಾರ್ವಿನ್ ಓದಿದ್ದು ಇಲ್ಲಿನ ಕ್ರೈಸ್ಟ್ ಕಾಲೇಜಿನಲ್ಲಿ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಆ ಕಾಲೇಜಿನಲ್ಲಿ ಓದುತ್ತಿದ್ದಾಗ ಆತ ನುಡಿಸುತ್ತಿದ್ದ ಎನ್ನುವ ಪಿಯಾನೋ ಕೂಡ ಅಲ್ಲಿಯೇ ಇದೆ. ಕಾಲೇಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಸಲ್ಮಾನ್ ರಷ್ದಿ, ಅರಬಿಂದೋ ಘೋಷ್ ಇನ್ನೂ ಮುಂತಾದ ಸುಪ್ರಸಿದ್ಧ ವ್ಯಕ್ತಿಗಳು ಓದಿದರು ಎನ್ನುವ ಖ್ಯಾತಿ ಹೊತ್ತ, 1441ರಲ್ಲಿ ಆರಂಭವಾದ ಕಿಂಗ್ಸ್ ಕಾಲೇಜು, ಟ್ರಿನಿಟಿ ಕಾಲೇಜು, ಕ್ರೈಸ್ಟ್ ಕಾಲೇಜು ಇವುಗಳು ಜಗತ್ತಿನಲ್ಲೇ ಅತ್ಯಂತ ದುಬಾರಿ ಸಂಸ್ಥೆಗಳು. ಈ ದಿನಕ್ಕೂ ಇಲ್ಲಿ ಓದುವ ವಿದ್ಯಾರ್ಥಿಗಳ ಸಂಪೂರ್ಣ ಖರ್ಚನ್ನು ಬ್ರಿಟಿಷ್ ಸರ್ಕಾರವೇ ಭರಿಸಿ ಓದಿಸುತ್ತದೆ. ಅಲ್ಲಿನ ವಿದ್ಯಾರ್ಥಿಗಳು ಶುಲ್ಕ ಭರಿಸಬೇಕು, ಊಟ ತಿಂಡಿ ಹೊಂದಿಸಬೇಕು, ಮುಂದಿನ ಕೆಲಸ ಹುಡುಕಬೇಕು ಎನ್ನುವ ಯಾವುದೇ ಒತ್ತಡವಿಲ್ಲದೆ ಅಲ್ಲಿ ರಾಜಕುಮಾರನ ಜೀವನ ಶೈಲಿಯಲ್ಲಿ ಓದಬಹುದು. ಆದರೆ ಎಲ್ಲಾ ಸವಲತ್ತುಗಳು ಸಿಗುವುದು ಸಾಲದ ರೂಪದಲ್ಲಿ ಮಾತ್ರ. ಕೆಲಸ ಹಿಡಿದು ನಾಲ್ಕು ವರ್ಷಗಳ ನಂತರ ಸಾಲ ಹಿಂದಿರುಗಿಸಬೇಕಾದ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಮುಗಿಯುವುದು ಯಾವಾಗ?! ಉಹುಂ, ಸಾಧ್ಯವೇ ಇಲ್ಲ. ಈ ಕಾಲೇಜುಗಳು ಅದೆಷ್ಟು ಕಾಸ್ಟ್ಲಿ ಎಂದರೆ ಯಾವ ವ್ಯಕ್ತಿಯೂ ಜೀವನವಿಡೀ ದುಡಿದರೂ, ಪೂರ್ವಾರ್ಜಿತ ಆಸ್ತಿ ಕೊಚ್ಚಿಹೋಗುವಷ್ಟು ಇಲ್ಲದಿದ್ದರೆ ಸಾಲ ತೀರಿಸಲಾರ. ಖರ್ಚು, ಶುಲ್ಕಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ ಆ ಕಾಲೇಜಿನ ವೆಬ್‍ಸೈಟ್‍ನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಕೊಟ್ಟಿದ್ದಾರೆ.

Untitled design (7)

ವಿನ್ ಸ್ಟನ್ ಚರ್ಚಿಲ್ ಕಾಲೇಜಿಗೆ ನಾನು ಹೋದ ದಿನ ಭೌತವಿಜ್ಞಾನಿ Lise Meitner ಬಗ್ಗೆ ಸಿಂಪೋಸಿಯಂ ಇತ್ತು. ಭೌತಶಾಸ್ತ್ರ ವಿಭಾಗದಲ್ಲಿ ಮಹಿಳಾ ವಿಜ್ಞಾನಿಗಳು ಅದೆಷ್ಟು ಹಿಂದೆ ಇದ್ದಾರೆ ಎಂದರೆ ಭೌತವಿಜ್ಞಾನಿಗಳಲ್ಲಿ ಗಂಡು ಹೆಣ್ಣಿನ ಅನುಪಾತ ಸಮವಾಗಲು ಇನ್ನೂ 200 ವರ್ಷಗಳು ಕಳೆಯಬೇಕು ಎಂಬುದು ಅಲ್ಲಿ ತಿಳಿದ ವಿಷಯ . ಕೇಂಬ್ರಿಜ್ ನಲ್ಲಿ ಮ್ಯೂಸಿಯಂ ಗಳಿವೆ. ಬೊಟಾನಿಕಲ್ ಉದ್ಯಾನವನ, ಕೆರೆ-ಕೊಳ, ಕಾಡುಪ್ರಾಣಿ ವೀಕ್ಷಣೆ, ಚರ್ಚುಗಳು, ಯುದ್ಧ ಸ್ಮಾರಕಗಳು, ಸಿರಿವಂತ ಅರಮನೆಯಂಥ ಕಾಲೇಜುಗಳು, ಕಡಿಮೆ ಬೆಲೆಗೆ ಸಿಗುವ ಊಟ ತಿಂಡಿ ಎಲ್ಲವೂ ಇದೆ. ಪ್ರಪಂಚದ ವಿವಿಧ ದೇಶಗಳಿಂದ ಬಂದವರ ಒಡನಾಟವಿದೆ. ಓಡಾಡಲು ಬಸ್‍ಗಳಿವೆ. ಸೈಕಲ್ಲುಗಳೂ ಇವೆ. ಸಾಕಿಕೊಳ್ಳಲು ಪ್ರಾಣಿಗಳು ಸಿಗುತ್ತವೆ. ಕೇಂಬ್ರಿಜ್ ನಂಥ ಜಾಗಕ್ಕೆ ಹೋಗುವುದು ಉಲ್ಲಾಸದ ಪ್ರವಾಸ ಎನ್ನುವುದಕ್ಕಿಂತ “ಬದುಕು ಅದೆಷ್ಟು ಚಿಕ್ಕದು” ಎನ್ನುವ ನಿರಾಸೆಗೆ ದಬ್ಬಿ ಬಿಡುವಂಥದ್ದು.

ಬೀಜಗಣಿತ ಯಾಕೆ ಓದಬೇಕು ಜೀವನದಲ್ಲಿ ಎಲ್ಲಿ ಉಪಯೋಗಕ್ಕೆ ಬರತ್ತೆ, ಓದಿ ಏನು ಮಹಾ ಕಡಿದು ಕಟ್ಟೆ ಹಾಕಿರೋದು, ಇಂಥ ವಿತಂಡ ಪ್ರಶ್ನೆಗಳಿಗೆ ಸ್ಪಷ್ಟ, ನಿಖರ ಉತ್ತರ ಕೊಡುತ್ತವೆ ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳು. ವಿದ್ಯೆ ಎಂದರೆ ಕಟ್ಟಡದ ಒಳಗೆ ಕುಳಿತಾಗ ಉಪನ್ಯಾಸಗಳನ್ನು ಕೇಳುವಾಗ ಸಿಗುವ ಮಾಹಿತಿಯಲ್ಲ. ವಿದ್ಯೆ ಎನ್ನುವುದು ಒಂದು ವಾತಾವರಣ. ಬದುಕಲು ಇರಲೇಬೇಕಾದ ಹದವಾದ ಹವಾಮಾನ. ಇದನ್ನು ನಂಬದವರು ಮಾಡಲೇ ಬೇಕು Academic Tour.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?