ಪಟಾಕಿ ಹೊಡೆಯುವುದು ಭಾರತಕ್ಕೆ ಮಾತ್ರ ಸೀಮಿತವಲ್ಲ !
ಇಂಗ್ಲೆಂಡ್‌ನಲ್ಲಿ 5 ನವೆಂಬರ್, ದೇಶದಾದ್ಯಂತ ಪಟಾಕಿ ಸಿಡಿಸುತ್ತಾರೆ . 1605ರಿಂದ ಈ ಪದ್ಧತಿಯನ್ನು ಪಾಲಿಸುತ್ತಾ ಬಂದಿದ್ದಾರೆ. ಇಂಗ್ಲೆಂಡಿನ ಅಂದಿನ ರಾಜ ಪ್ರಥಮ ಜೇಮ್ಸ್ ಅವರನ್ನು ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಕೆಲವರು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಸೋಲುತ್ತಾರೆ. ಇದಕ್ಕೆ ಗನ್ ಪೌಡರ್ ಪ್ಲಾಟ್ ಎನ್ನಲಾಗುತ್ತದೆ. ಇಂಗ್ಲೆಂಡ್ ಇಂದಿಗೂ ಪ್ರೊಟೆಸ್ಟಂಟ್ ದೇಶವಾಗಿ ಉಳಿದುಕೊಂಡಿದೆ.
- ರಂಗಸ್ವಾಮಿ ಮೂಕನಹಳ್ಳಿ
ದೀಪಾವಳಿ ಹಬ್ಬ ಬಂದಷ್ಟೇ ವೇಗವಾಗಿ ಮಾಯವಾಯ್ತು. ಹಬ್ಬಗಳ ಮಜವೇ ಬೇರೆ. ದಿನ ನಿತ್ಯದ ಜಂಜಾಟಗಳನ್ನ ಮರೆಸುವ, ಬದುಕಿಗೆ ಅವಶ್ಯವಾಗಿ ಬೇಕಾಗುವ ಹೊಸತನವನ್ನು ಈ ಹಬ್ಬಗಳು ನಮಗೆ ನೀಡುತ್ತವೆ. ಭಕ್ತಿ-ಶ್ರದ್ಧೆ-ನಂಬಿಕೆ-ಆಚರಣೆ ಮುಖ್ಯವಾಗಿ ಹಬ್ಬದ ಪ್ರಮುಖ ಲಕ್ಷಣಗಳು. ಊಟವಿಲ್ಲದ ಮೇಲೆ ಹಬ್ಬಕ್ಕೆ ಹಬ್ಬದ ರಂಗು ಹೇಗೆ ತಾನೇ ಬಂದೀತು .. ಅಲ್ಲವೇ? ನಮ್ಮ ದೇಶದಲ್ಲಿ ಇದರ ಜತೆಗೆ ಎಡ -ಬಲ ಸಿದ್ಧಾಂತಗಳ ಕಾದಾಟ ಕೂಡ ಶುರುವಾಗುತ್ತದೆ. ಎಲ್ಲಾ ವೇಳೆಯಲ್ಲೂ ಸುಮ್ಮನಿರುವ ಒಂದು ವರ್ಗದ ಜನ, ದೀಪಾವಳಿ ಸಮಯದಲ್ಲಿ ಇದ್ದಕಿದ್ದಂತೆ ಪಟಾಕಿ ಹೊಡೆಯಬೇಡಿ ಎನ್ನುವ ವರಾತ ಶುರು ಹಚ್ಚಿಕೊಳ್ಳುತ್ತಾರೆ. ಪ್ರತಿ ವರ್ಷವೂ ಇದೊಂದು ಮಾಮೂಲಾಗಿದೆ. ಆದರೆ ಈ ವರ್ಷ ಜನ ಇದಕ್ಕೆ ಸಿಡಿದೆದ್ದು ಪಟಾಕಿ ಸಿಡಿಸಿದರು. ಕಳೆದ ದಶಕದಲ್ಲಿ ಮಾರಾಟವಾಗದ ಪಟಾಕಿ ಈ ವರ್ಷ ಮಾರಾಟವಾಗಿದೆ ಎನ್ನುವುದನ್ನು ಅಂಕಿ ಅಂಶಗಳು ತಿಳಿಸುತ್ತಿವೆ.
ದೀಪಾವಳಿಯನ್ನು ಭಾರತದಲ್ಲಿ ಸಿಖ್ಖರು , ಜೈನರು, ಹಿಂದೂಗಳು ಬಹಳ ಆಸ್ಥೆಯಿಂದ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಶ್ರೀ ರಾಮ ಮರಳಿ ರಾಜ್ಯಕ್ಕೆ ಬಂದ ದಿನವೆಂದೂ, ಕತ್ತಲೆಯಿಂದ ಬೆಳಗಿನೆಡೆಗಿನ ಹಬ್ಬವೆಂದೂ, ಕೆಟ್ಟದ್ದರ ಮೇಲೆ ಒಳಿತಿನ ವಿಜಯದ ದಿನವೆಂದೂ ಆಚರಿಸುತ್ತಾರೆ. ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ. ಹೀಗಾಗಿ ಆತನ ಸ್ವಾಗತಕ್ಕೆ ಪಟಾಕಿಯನ್ನು ಹೊಡೆಯುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಹಲವಾರು ಸಮುದಾಯಕ್ಕೆ ಇದು ಹೊಸ ವರ್ಷ ಕೂಡ. ಮಾರ್ವಾಡಿಗಳಲ್ಲಿ ಲಕ್ಷ್ಮಿ ಪೂಜೆ ಅತ್ಯಂತ ಮಹತ್ವದ ಪೂಜೆಯಾಗಿದೆ. ಇದೆಲ್ಲಾ ನಮ್ಮೂರ ಕಥೆ ಆಯ್ತು. ವಿದೇಶಗಳಲ್ಲಿ ದೀಪಾವಳಿ ಎನ್ನುವ ಹಬ್ಬವಿದೆಯೇ? ಖಂಡಿತ ಇದೆ. ಆದರೆ ಅದಕ್ಕೆ ದೀಪಾವಳಿ ಎನ್ನುವುದಿಲ್ಲ ಹೆಸರು ಬೇರೆ, ಕಾರಣ ಬೇರೆ. ಆದರೇನು ಖುಷಿ, ಮನುಷ್ಯನ ಭಾವನೆ ಮಾತ್ರ ಒಂದೇ. ಏಕತಾನತೆಯನ್ನು ಹೊಡೆದೋಡಿಸುವುದು, ಒಳ್ಳೆಯ ಊಟ ಬಟ್ಟೆಯುಟ್ಟು ಸಂಭ್ರಮಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ? ನಾವು ಹಬ್ಬ ಯಾರದೇ ಇರಲಿ ಅದನ್ನು ಗೌರವಿಸುವುದನ್ನು ಕಲಿಯಬೇಕು. ಒಂದು ವರ್ಗಕ್ಕೆ ಒಂದು ನೀತಿ, ಇನ್ನೊಂದು ವರ್ಗಕ್ಕೆ ಇನ್ನೊಂದು ನೀತಿ ಎಂದಾಗ ಸಹಜವಾಗೇ ಸಂಘರ್ಷ ಶುರುವಾಗುತ್ತದೆ.

ಸ್ಪೇನ್‌ನಲ್ಲಿ ಸ್ಯಾನ್ ವಾನ್ ಎನ್ನುವ ಹಬ್ಬವನ್ನು ಪ್ರತಿ ವರ್ಷ ಜೂನ್ 23 ರಂದು ಆಚರಿಸುತ್ತಾರೆ. ಪ್ರಥಮ ವರ್ಷ ಪಟಾಕಿ ಸದ್ದು ಕೇಳಿ ಆಶ್ಚರ್ಯವಾಗಿತ್ತು. ಬೆಂಕಿಯನ್ನು ನೆಲದಲ್ಲಿ ಹಾಕಿ ಅದರ ಮೇಲೆ ಹಾರುವುದು, ಪಟಾಕಿ ಸುಡುವುದು ಮಾಡುತ್ತಾರೆ . ಆತ್ಮ ಶುದ್ಧಿ ಮತ್ತು ಕೆಟ್ಟ ಶಕ್ತಿಗಳ ದಮನವಾಗುತ್ತದೆ ಎನ್ನುವುದು ನಂಬಿಕೆ. ಈ ಹಬ್ಬದ ಬಗ್ಗೆ ನೀವು ಈಗಾಗಲೇ ಕಳೆದ ವಾರ ಪ್ರವಾಸಿ ಪ್ರಪಂಚದಲ್ಲಿ ಓದಿರುತ್ತೀರಿ.
ಪೋರ್ಚುಗಲ್‌ನಲ್ಲಿ ಪೋಗೊರಿಯುಸ್ ದೆ ಸ್ಯಾನ್ ವಾನ್ ಎನ್ನುವ ಹೆಸರಿನಿಂದ ಇಲ್ಲಿ ಕೂಡ ಇದೇ ದಿನದಲ್ಲಿ ಪಟಾಕಿ ಸುಡುತ್ತಾರೆ. ಕೆಟ್ಟ ಆತ್ಮಗಳನ್ನು ಓಡಿಸುವುದು ಮುಖ್ಯ ಕಾರಣ. ನಿಮಗೆ ಗೊತ್ತಿರಲಿ ಪೋರ್ಚುಗಲ್ ಮತ್ತು ಸ್ಪೇನ್ ಎರಡೂ ಅಕ್ಕತಂಗಿಯರಿದ್ದಂತೆ! ಥೇಟ್ ನಮ್ಮ ಕನ್ನಡ ಮತ್ತು ತೆಲುಗು ಇದ್ದ ಹಾಗೆ. ಭಾಷೆಯ ವಿಷಯದಲ್ಲಿ ಮಾತ್ರವಲ್ಲ, ಊಟ ತಿಂಡಿಯಿಂದ ಹಿಡಿದು ಬಹುತೇಕ ಆಚರಣೆಗಳು ಹಾಗೂ ಹಬ್ಬಗಳಲ್ಲಿ ಸಾಮ್ಯ ಹೆಚ್ಚು.
ಇಂಡೋನೇಷ್ಯಾದ ಬಾಲಿಯಲ್ಲಿ ದೀಪಾವಳಿ ಹಬ್ಬವನ್ನು ನೋಡಲು ಎರಡು ಕಣ್ಣು ಸಾಲದು. ಇಲ್ಲಿನ ರೀತಿ ನೀತಿಗಳು ಎಲ್ಲವೂ ಹಿಂದೂ ಸಂಸ್ಕೃತಿಯನ್ನು ಹೋಲುತ್ತವೆ.
ಚೀನಾದಲ್ಲಿ ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ವರ್ಷದ ಆಗಮನಕ್ಕೆ ಚೀನಿಯರು ಪಟಾಕಿ ಹೊಡೆಯುತ್ತಾರೆ. ಅದು ಕೇವಲ ಹೊಸ ವರ್ಷದ ಆಚರಣೆಯಲ್ಲ. ನಿಧನರಾದ ಹಿರಿಯರು ಮತ್ತು ತಮ್ಮ ದೇವರುಗಳನ್ನು ನೆನೆಯುವ ಕಾಯಕವೂ ಹೌದು. ನಕ್ಷತ್ರದ ಅನುಸಾರ ಈ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಏಷ್ಯಾದ ದೇಶಗಳಲ್ಲಿ ಹಬ್ಬ ಇದೇ ದಿನಾಂಕ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಜುಲೈ 4, ಅಮೆರಿಕದ ಇಂಡಿಪೆಂಡೆನ್ಸ್ ಡೇ ! ಫ್ಯಾಮಿಲಿ ಬಾರ್ಬಿಕ್ಯೂ, ಪಟಾಕಿ, ಮೆರವಣಿಗೆ ಪ್ರಮುಖ ಅಂಶಗಳು.
ಇಂಗ್ಲೆಂಡ್‌ನಲ್ಲಿ 5 ನವೆಂಬರ್, ದೇಶದಾದ್ಯಂತ ಪಟಾಕಿ ಸಿಡಿಸುತ್ತಾರೆ . 1605 ರಿಂದ ಈ ಪದ್ಧತಿಯನ್ನು ಪಾಲಿಸುತ್ತಾ ಬಂದಿದ್ದಾರೆ. ಇಂಗ್ಲೆಂಡಿನ ಅಂದಿನ ರಾಜ ಪ್ರಥಮ ಜೇಮ್ಸ್ ಅವರನ್ನು ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಕೆಲವರು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಸೋಲುತ್ತಾರೆ. ಇದಕ್ಕೆ ಗನ್ ಪೌಡರ್ ಪ್ಲಾಟ್ ಎನ್ನಲಾಗುತ್ತದೆ. ಇಂಗ್ಲೆಂಡ್ ಇಂದಿಗೂ ಪ್ರೊಟೆಸ್ಟಂಟ್ ದೇಶವಾಗಿ ಉಳಿದುಕೊಂಡಿದೆ.
1700ರ ಆಜುಬಾಜಿನಲ್ಲಿ ಜಪಾನ್ ದೇಶದಲ್ಲಿ ಆರ್ಥಿಕ ಮಂದಗತಿ, ರೋಗರುಜಿನಗಳು ಹೆಚ್ಚಾಗಿತ್ತು. ಬಹಳಷ್ಟು ಸಾವು ನೋವು ಕೂಡ ಆಗಿತ್ತು. ಹೀಗಾಗಿ ಅಂದಿನಿಂದ ಪಟಾಕಿ ಹೊಡೆಯುವುದನ್ನು ಶುರು ಮಾಡಿದರು. ಸತ್ತವರಿಗೆ ಗೌರವ ನೀಡಲು, ಇದ್ದವರ ಬದುಕಿಗೆ ಹೊಸ ಹುರುಪು ನೀಡಲು ಮತ್ತು ಆರ್ಥಿಕತೆಯಿಂದ ಕಂಗೆಟ್ಟಿದ್ದ ಜನತೆಯನ್ನು ಖುಷಿ ಪಡಿಸಲು ಇದನ್ನು ಪ್ರಾರಂಭಿಸುತ್ತಾರೆ. ಇವತ್ತಿಗೆ ಇದು ಇಲ್ಲಿನ ಸಂಸ್ಕೃತಿಯಾಗಿ ಬದಲಾವಣೆ ಹೊಂದಿದೆ.
ಹೀಗೆ ಜಗತ್ತಿನಾದ್ಯಂತ ಒಂದಲ್ಲ ಒಂದು ಹೆಸರಿನಿಂದ ದೀಪಾವಳಿಯನ್ನು ಆಚರಿಸುತ್ತಾರೆ. ನಾವು ಕನ್ನಡಿಗರು ಇದನ್ನು ದೀಪಾವಳಿ ಎಂದು ಕರೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಬಾಯಲ್ಲಿ ಕೂಡ 'ದಿವಾಳಿ' ಎನ್ನುವ ಪದವನ್ನು ಕೇಳುತ್ತಿದ್ದೇವೆ. ನೆನಪಿರಲಿ ಕನ್ನಡದಲ್ಲಿ ದಿವಾಳಿ ಎಂದರೆ ಪಾಪರ್, ಬ್ಯಾಂಕ್ರಪ್ಟ್ ಎನ್ನುವ ಅರ್ಥ ಬರುತ್ತದೆ. ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ ಎನ್ನುತ್ತದೆ ನಮ್ಮ ನಾಣ್ನುಡಿ. ದೋಸಾ ಅಂದಷ್ಟು ಸುಲಭವಾಗಿ ದಿವಾಳಿ ಅನ್ನಬೇಡಿ ಪ್ಲೀಸ್ . ಕನಿಷ್ಠ ಇಲ್ಲಾದರೂ ನಮ್ಮತನವನ್ನು ಕಾಪಾಡಿ.

ಇದರ ಜತೆಗೆ ಇನ್ನೊಂದು ಮಾತನ್ನು ಕೂಡ ನಿಮಗೆ ಹೇಳಬೇಕಿದೆ. ಮೇಲೆ ಉದಾಹರಿಸಿದ ಯಾವುದೇ ದೇಶದಲ್ಲಿ ಪಟಾಕಿ ಹೊಡೆಯಬೇಡಿ ಎಂದು ಯಾರೂ ಪ್ರವಚನ ನೀಡುವುದಿಲ್ಲ. ಇಲ್ಲಿನ ಜನ ಮನಸೋ ಇಚ್ಛೆ ತಮ್ಮ ಹಿಂದಿನ ರೀತಿ ರಿವಾಜನ್ನು ಪಾಲಿಸುತ್ತಾರೆ. ಇದು ಕೇವಲ ಪಟಾಕಿ ಹೊಡೆಯುವುದಕ್ಕೆ ಮಾತ್ರ ಸೀಮಿತವಲ್ಲ . ಇಲ್ಲಿನ ಜನತೆಯ ಮಾನಸಿಕತೆಯ ವಿರುದ್ಧ ಹೋಗುವ ಧೈರ್ಯವನ್ನು ಸರಕಾರಗಳು ಕೂಡ ಮಾಡುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಎರಡು ನಿದರ್ಶಗಳನ್ನು ನೀಡಬಲ್ಲೆ.
ಸ್ಪೇನ್ ದೇಶದ ಸಮಯ ಜರ್ಮನಿಯನ್ನು ಹೋಲುತ್ತದೆ , ಆದರೆ ಸ್ಪೇನ್ , ಪೋರ್ಚುಗಲ್ ದೇಶದ ವೇಳೆಯನ್ನು ಅನುಸರಿಸಬೇಕಿತ್ತು . ಈ ವೇಳೆ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದು ದಶಕಗಳಿಂದ ಕೇಳಿ ಬರುತ್ತಿದೆ ,ಆದರೆ ಸಾಮಾನ್ಯ ಜನ ಇಂದು ಇರುವ ಸಮಯಕ್ಕೆ ಮನಸ್ಸನ್ನು ಒಗ್ಗಿಸಿ ಕೊಂಡಿದ್ದಾರೆ. ಹೀಗಾಗಿ ಇಲ್ಲಿನ ಸರಕಾರ ಜನರ ವಿರುದ್ಧ ಹೋಗುವ ದಾರ್ಷ್ಟ್ಯ ತೋರುತ್ತಿಲ್ಲ . ಇನ್ನು ಸ್ಪೇನ್ ದೇಶದಲ್ಲಿ ಗೂಳಿ ಕಾಳಗ ಅತ್ಯಂತ ಪುರಾತನ ಕ್ರೀಡೆ. ಇದು ಪ್ರಾಣಿ ಹಿಂಸೆ ಇದನ್ನು ಮಾಡಬಾರದು ಎನ್ನುವುದು ಹಲವರ ಒತ್ತಾಯ. ಆದರೂ ಜನ ಸಾಮಾನ್ಯ ಇದನ್ನು ಬಯಸುತ್ತಾನೆ . ಹೀಗಾಗಿ ಇಂದಿಗೂ ಇದು ನಡೆಯುತ್ತದೆ. ಹಿಂದಿನ ಮಟ್ಟದಲ್ಲಿ ಇಲ್ಲದಿದ್ದರೂ, ಇಂದಿಗೂ ಇದೆ. ಪ್ರತಿ ದೇಶವೂ ತಮ್ಮ ಆಚಾರ , ವಿಚಾರ ನಂಬಿಕೆಗಳನ್ನು ಪಾಲಿಸುತ್ತವೆ. ನಾವು ಕೂಡ ನಮ್ಮ ಆಚಾರ ವಿಚಾರಗಳನ್ನ ಗೌರವಿಸಬೇಕು, ಪಾಲಿಸಬೇಕು.
ನಾವು ಫೇಟ್ (fate ), ಡೆಸ್ಟಿನಿಗಳ ಬಗ್ಗೆ ಮಾತಾಡುತ್ತೇವೆ. ಇದೇ ರೀತಿ ಇಲ್ಲಿನ ಜನರು ಕೂಡ ಫೇಟ್, ಹಣೆಬರಹವನ್ನು ನಂಬುತ್ತಾರೆ. ಕೇವಲ ಹಬ್ಬ ಮಾತ್ರವಲ್ಲ ಹಣೆಬರಹ ಕೂಡ ಬಹಳಷ್ಟು ದೇಶಗಳ ಜನರು ನಂಬುತ್ತಾರೆ . ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ. ಒಬ್ಬಬ್ಬರ ಬದುಕು ಒಂದೊಂದು ಥರ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ ಹೀಗೇಕೆ ? ಇಲ್ಲಿ ಏಕೆ ಎನ್ನುವುದಕ್ಕೆ ಉತ್ತರವನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ 'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳು ಸೃಷ್ಟಿಯಾಗಿರಬಹುದು. ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ . ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯವನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದ ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ.
ಎಲ್ಲವನ್ನೂ, ಎಲ್ಲರನ್ನೂ ಸಮಚಿತ್ತದಿಂದ ನೋಡುವುದನ್ನು ಬೆಳೆಸಿಕೊಂಡಾಗ ಈ ಜಗತ್ತು ಎಲ್ಲರೂ ಬದುಕಬಹುದಾದ ಜಾಗವಾಗುತ್ತದೆ. ಇದನ್ನು ಸ್ಪೇನ್ ಜನರು 'ಅಕಿ ಕಾವೇ ಮೊಸ್ ತೊದೊಸ್' ಎನ್ನುತ್ತಾರೆ. ಹೌದು ವಿಶಾಲವಾದ ಈ ಜಗತ್ತಿನಲ್ಲಿ ನಾವೆಲ್ಲಾ ಒಟ್ಟಾಗಿ ಬದುಕಬಹುದು.