Saturday, September 6, 2025
Saturday, September 6, 2025

ದಕ್ಷಿಣ ಕನ್ನಡ ಶಿಕ್ಷಣ ಮಾತ್ರವಲ್ಲ, ಪ್ರವಾಸೋದ್ಯಮದಲ್ಲೂ ಟಾಪರ್!

ಅಧ್ಯಾತ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿದರೆ ಪ್ರಶಾಂತ ಕಡಲತೀರಗಳು ದಕ್ಷಿಣ ಕನ್ನಡ ಜಿಲ್ಲೆಯ ಹೈಲೈಟ್. ಮಂಗಳೂರಿನಲ್ಲಿರುವ ಪಣಂಬೂರು, ತಣ್ಣೀರುಬಾವಿ ಮತ್ತು ಉಳ್ಳಾಲದಂಥ ಕಡಲತೀರಗಳು ತಮ್ಮ ಶುಭ್ರತೆ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾಗಿವೆ. ಗೋವಾದಂಥ ಜನದಟ್ಟಣೆಯ ಬೀಚ್‌ಗಳಿಗೆ ಹೋಲಿಸಿದರೆ, ಇಲ್ಲಿನ ಕಡಲತೀರಗಳು ಹೆಚ್ಚು ಶಾಂತಿಯುತವಾಗಿದ್ದು, ಪ್ರವಾಸಿಗರಿಗೆ ವಿಶ್ರಾಂತಿ ಮತ್ತು ಮನರಂಜನೆ ನೀಡುತ್ತವೆ.

- ಸಹನಾ ಪ್ರಸಾದ್

ದಕ್ಷಿಣ ಕನ್ನಡ ಜಿಲ್ಲೆ, ತನ್ನ ವಿಶಿಷ್ಟ ಸಂಸ್ಕೃತಿ, ಕಡಲತೀರಗಳು, ದೇವಸ್ಥಾನಗಳು ಮತ್ತು ಹಸಿರು ಪರಿಸರದಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2024 ವರುಷದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳ ಕಂಡುಬಂದಿರುವುದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಹುರುಪು ತಂದಿದೆ. 2023ರಲ್ಲಿ ಕೇವಲ 3,818 ವಿದೇಶಿಯರು ಭೇಟಿ ನೀಡಿದ್ದರೆ, 2024ರಲ್ಲಿ ಈ ಸಂಖ್ಯೆ 10,778ಕ್ಕೆ ಏರಿದೆ. ದಕ್ಷಿಣ ಕನ್ನಡ ಜಿಲ್ಲೆ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಹಲವಾರು ಅಂಶಗಳು ಪ್ರಮುಖ ಪಾತ್ರ ವಹಿಸಿವೆ.

ಅದರಲ್ಲಿ ಪ್ರಮುಖ ಅಂಶ ಅಂದರೆ ಅದು ಧಾರ್ಮಿಕ ಮತ್ತು ಆಧ್ಯಾತ್ಮಿಕ ತಾಣಗಳು. ದಕ್ಷಿಣ ಕನ್ನಡದ ಪ್ರಮುಖ ಆಕರ್ಷಣೆಗಳಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳು ಪ್ರಮುಖವಾಗಿವೆ. ಈ ದೇವಸ್ಥಾನಗಳ ವಾಸ್ತುಶಿಲ್ಪ, ಪೂಜಾ ಕೈಂಕರ್ಯಗಳು ಮತ್ತು ಅಧ್ಯಾತ್ಮಿಕ ವಾತಾವರಣವು ವಿದೇಶಿ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸಿ, ವಿಶೇಷವಾಗಿ, ಆಧ್ಯಾತ್ಮಿಕ ಶಾಂತಿ ಮತ್ತು ನೆಮ್ಮದಿಗಾಗಿ ಹುಡುಕುವವರು ಈ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.

kateel temple

ಅಧ್ಯಾತ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿದರೆ ಪ್ರಶಾಂತ ಕಡಲತೀರಗಳು ಈ ಜಿಲ್ಲೆಯ ಹೈಲೈಟ್. ಮಂಗಳೂರಿನಲ್ಲಿರುವ ಪಣಂಬೂರು, ತಣ್ಣೀರುಬಾವಿ ಮತ್ತು ಉಳ್ಳಾಲದಂಥ ಕಡಲತೀರಗಳು ತಮ್ಮ ಶುಭ್ರತೆ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾಗಿವೆ. ಗೋವಾದಂಥ ಜನದಟ್ಟಣೆಯ ಬೀಚ್‌ಗಳಿಗೆ ಹೋಲಿಸಿದರೆ, ಇಲ್ಲಿನ ಕಡಲತೀರಗಳು ಹೆಚ್ಚು ಶಾಂತಿಯುತವಾಗಿದ್ದು, ಪ್ರವಾಸಿಗರಿಗೆ ವಿಶ್ರಾಂತಿ ಮತ್ತು ಮನರಂಜನೆ ನೀಡುತ್ತವೆ. ಜಲಕ್ರೀಡೆಗಳಾದ ಸರ್ಫಿಂಗ್, ಕಯಾಕಿಂಗ್ ಮತ್ತು ಸ್ನಾರ್ಕ್ಲಿಂಗ್‌ಗಳು ವಿದೇಶಿ ಪ್ರವಾಸಿಗರಿಗೆ ಇಷ್ಟವಾಗುತ್ತಿವೆ.

manglore beach

ಮೂರನೇ ಕಾರಣ ಅಂದರೆ ಪಾರಂಪರಿಕ ಮತ್ತು ಸಾಂಸ್ಕೃತಿಕ ತಾಣಗಳು. ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಪಿಲಿಕುಳ ನಿಸರ್ಗಧಾಮ ಮತ್ತು ಜಮಾಲಾಬಾದ್ ಕೋಟೆಯಂಥ ಸ್ಥಳಗಳು ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯನ್ನುಎತ್ತಿಹಿಡಿಯುತ್ತವೆ . ಪಿಲಿಕುಳ ನಿಸರ್ಗಧಾಮದಲ್ಲಿ ಜೀವವೈವಿಧ್ಯ, ಪ್ರಾದೇಶಿಕ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಒಂದೇ ಕಡೆ ಕಾಣಬಹುದು.

ಇನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿಗಳು ಮತ್ತು ಯೋಜನೆಗಳು ಜಾರಿಯಾದದ್ದು ಕೂಡ ದಕ್ಷಿಣ ಕನ್ನಡ ಪ್ರವಾಸೋದ್ಯಮಕ್ಕೆ ಬಲ ಕೊಟ್ಟಿತು. 2024ರಲ್ಲಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ಹೊಸ ಪ್ರವಾಸೋದ್ಯಮ (2024-29) ನೀತಿಯು ಮೂಲಸೌಕರ್ಯ ಅಭಿವೃದ್ಧಿ, ಪ್ರಚಾರ ಕಾರ್ಯಕ್ರಮಗಳು ಮತ್ತು ಪ್ರವಾಸಿ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಿ, ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗಿದೆ.

ಇವೆಲ್ಲದರ ಜೊತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಿದ್ದು ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಾರಂಭಿಸಿತು. ಹೌದು. ಪ್ರವಾಸಿ ತಾಣಗಳಲ್ಲಿ ಉತ್ತಮ ರಸ್ತೆ ಸಂಪರ್ಕ, ವಸತಿ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿದೇಶಿ ಪ್ರವಾಸಿಗರಿಗೆ ನೇರ ಸಂಪರ್ಕ ಕಲ್ಪಿಸುತ್ತಿರುವುದು ಸಹ ಪ್ರವಾಸಿಗರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

manglore airport

ಇಂದಿನ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಜಗತ್ತಿನ ಅಗತ್ಯಕ್ಕೆ ತಕ್ಕಂತೆ ಹೊಸ ಪ್ರಚಾರ ತಂತ್ರಗಳನ್ನು ಅಳವಡಿಸಿಕೊಂಡಿದ್ದು ಕೂಡ ಇದಕ್ಕೆ ಕಾರಣವಾಯ್ತು. ದಕ್ಷಿಣ ಕನ್ನಡ ಪ್ರವಾಸಿ ಮಾಹಿತಿ ಇರುವ ನೂತನ ವೆಬ್ ಪೋರ್ಟಲ್ ಮತ್ತು "ಇವೆಂಟ್ ಕ್ಯಾಲೆಂಡರ್" ಗಳನ್ನು ಬಿಡುಗಡೆಗೊಳಿಸಲಾಗಿದೆ. ಇದು ವರ್ಷವಿಡೀ ನಡೆಯುವ ಹಬ್ಬಗಳು, ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿದೇಶಿ ಪ್ರವಾಸಿಗರಿಗೆ ಮಾಹಿತಿ ನೀಡಲು ಸಹಾಯಕವಾಗಿದೆ. ಇದರಿಂದ ಕರಾವಳಿ ಸಂಸ್ಕೃತಿ, ಯಕ್ಷಗಾನ, ಕಂಬಳ ಮತ್ತು ಭೂತ ಕೋಲದಂಥ ವಿಶಿಷ್ಟ ಆಚರಣೆಗಳನ್ನು ವಿದೇಶಿಗರು ನೇರವಾಗಿ ಅನುಭವಿಸಲು ಅವಕಾಶ ಸಿಕ್ಕಿದೆ.

ದಕ್ಷಿಣ ಕನ್ನಡದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024ರ ಈ ಹೆಚ್ಚಳ ಕೇವಲ ಪ್ರಾರಂಭ ಮಾತ್ರ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಈ ಜಿಲ್ಲೆಗಿದೆ. ಇದಕ್ಕಾಗಿ ವೈದ್ಯಕೀಯ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಗಳಂಥ ಹೊಸ ಕ್ಷೇತ್ರಗಳತ್ತ ಗಮನಹರಿಸಲಾಗಿದೆ. ಒಟ್ಟಾರೆ, ದಕ್ಷಿಣ ಕನ್ನಡವು ತನ್ನ ಅನನ್ಯ ಪ್ರಕೃತಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಮೂಲಕ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಸ್ವಾಗತವನ್ನು ಕೋರುತ್ತಿದೆ. 2024ರಲ್ಲಿ ಕಂಡ ವಿದೇಶಿ ಪ್ರವಾಸಿಗರ ಪ್ರವಾಹವು ಜಿಲ್ಲೆಯ ಆರ್ಥಿಕತೆಗೂ ಮತ್ತು ಸ್ಥಳೀಯ ಜನಜೀವನಕ್ಕೂ ಧನಾತ್ಮಕ ಪರಿಣಾಮ ಬೀರಿದೆ. ಈ ಬೆಳವಣಿಗೆಯನ್ನು ಸರಿಯಾಗಿ ನಿರ್ವಹಿಸಿದರೆ, ದಕ್ಷಿಣ ಕನ್ನಡವು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗುವುದರಲ್ಲಿ ಸಂದೇಹವಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?