ಕಳೆದ ವಾರ ಆತ್ಮೀಯ ಸ್ನೇಹಿತನ ಜತೆ ಮಾತಾಡುವಾಗ, 'ಸದ್ಯ ಯಾವ ವಿದೇಶ ಪ್ರವಾಸವಿಲ್ಲವಾ?' ಇಂದು ಕೇಳಿದ. 'ಈಗ ತಾನೇ ಫ್ರಾನ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಪ್ರವಾಸ ಮುಗಿಸಿ ಬಂದಿದ್ದೇನೆ' ಎಂದು ಹೇಳಿದೆ. 'ಆದರೂ ನೀನು ಅಲ್ಲಿಂದ ಬರುವಾಗಲೇ ಪ್ಲಾನ್ ಮಾಡಿರುತ್ತೀಯ' ಅಂದ. ಅದಕ್ಕೆ ನಾನು, 'ಅದು ನಿಜ, ಮುಂದಿನ ತಿಂಗಳು ಇಸ್ರೇಲ್ ಗೆ ಹೋಗುತ್ತಿದ್ದೇನೆ' ಎಂದು ಹೇಳಿದೆ. 'ಅಯ್ಯೋ ಇಸ್ರೇಲಿಗಾ?' ಎಂದು ರಾಗ ತೆಗೆದ. 'ನಿನ್ನ ಜತೆ ಎಲ್ಲಿಗೆ ಬೇಕಾದರೂ ಬರುವೆ, ಆದರೆ ಇಸ್ರೇಲಿಗೆ ಆದ್ರೆ ದೊಡ್ಡ ನಮಸ್ಕಾರ' ಎಂದು ಹೇಳಿದ. ನನಗೆ ಆಶ್ಚರ್ಯ ಆಯಿತು. 'ಇಸ್ರೇಲಿಗೆ ಯಾಕೆ ಬರುವುದಿಲ್ಲ?' ಎಂದು ಕೇಳಿದೆ. 'ನೀನು ಪುಕ್ಕಟೆ ಕರೆದುಕೊಂಡು ಹೋಗ್ತೇನೆ ಅಂದ್ರೂ ನಾನು ಅಲ್ಲಿಗೆ ಬರುವುದಿಲ್ಲ. ಅಲ್ಲಿ ಯಾವಾಗ ತಲೆ ಮೇಲೆ ಬಾಂಬ್, ರಾಕೆಟ್ ಬೀಳುತ್ತೆ ಅನ್ನೋದೇ ಗೊತ್ತಾಗುವುದಿಲ್ಲ' ಎಂದ. ಅದಕ್ಕೆ ನಾನು, 'ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನವಿರಾಮ ಘೋಷಣೆಯಾಗಿ ಒಂದು ತಿಂಗಳು ಆಯ್ತಲ್ಲ... ಈಗ ಅಲ್ಲಿ ಯಾವುದೇ ಟೆನ್ಷನ್ ಇಲ್ಲ. ಅದಕ್ಕಿಂತ ಹೆಚ್ಚಾಗಿ ಇಸ್ರೇಲಿನಲ್ಲಿ ಸುಮಾರು ತೊಂಬತ್ತು ಲಕ್ಷ ಜನ ವಾಸಿಸುತ್ತಿದ್ದಾರಲ್ಲ? ಅವರ ತಲೆ ಮೇಲೆ ಬಾಂಬ್, ರಾಕೆಟ್ ಬೀಳುವುದಿಲ್ಲವಾ? ಅವರು ಅಲ್ಲಿ ಆರಾಮಾಗಿ ಇಲ್ಲವಾ?' ಎಂದು ಕೇಳಿದೆ. 'ಅವರಿಗೆ ಅಲ್ಲಿರುವುದು ಕರ್ಮ. ನನಗೆ ಆ ದರ್ದು ಇಲ್ಲವಲ್ಲ?' ಎಂದು ಸ್ನೇಹಿತ ಹೇಳಿದ.

ನಿಜ, ಇಸ್ರೇಲ್-ಹಮಾಸ್ ಉಗ್ರರ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಗಾಜಾದಿಂದ ಇಸ್ರೇಲಿ ಸೈನಿಕರು ನಿರ್ಗಮಿಸಿದ್ದಾರೆ. ಅಲ್ಲಿ ಯಾವುದೇ ಗುಂಡಿನ ಮೊರೆತ ಕೇಳುತ್ತಿಲ್ಲ. ಅಮೆರಿಕ ಅಧ್ಯಕ್ಷರೇ, ಇಸ್ರೇಲ್-ಪ್ಯಾಲೆಸ್ಟೀನ್ ಮಧ್ಯೆ ಶಾಂತಿದೂತರಾಗಿ ನಿಂತಿದ್ದಾರೆ. ಆದರೂ ಇಸ್ರೇಲ್ ಮೇಲೆ ಕವಿದ ಯುದ್ಧ ಕಾರ್ಮೋಡ ಇನ್ನೂ ಚದುರಿಲ್ಲ. ಇಸ್ರೇಲ್ ಅಂದ್ರೆ ಪ್ರವಾಸಿಗರ ಮನಸ್ಸಿನಲ್ಲಿ ಇನ್ನೂ ಭಯ-ಭೀತಿ ಗಾಢವಾಗಿ ನೆಲೆಸಿದೆ.

ಇಸ್ರೇಲ್ ಮತ್ತು ಗಾಜಾ ನಡುವೆ ದ್ವೇಷಮಯ ವಾತಾವರಣ ಇದ್ದಾಗ, ಅಂದರೆ ಕದನ ವಿರಾಮ ಘೋಷಣೆ ಆಗುವ ಎರಡು ತಿಂಗಳು ಮುನ್ನ, ನಾನು ಇಸ್ರೇಲಿಗೆ ಹೋಗಿದ್ದೆ. ಟೆಲ್ ಅವಿವ್‌ನಲ್ಲಿರುವ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಬಿಕೋ ಎನ್ನುವ ವಾತಾವರಣ. ನಾನು ಅದಕ್ಕೂ ಮುನ್ನ ಹನ್ನೊಂದು ಬಾರಿ ಅಲ್ಲಿಗೆ ಹೋದಾಗ ಆ ನಿಲ್ದಾಣ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದುದನ್ನು ನೋಡಿದ್ದೆ. ಆದರೆ ಈ ಸಲ ಹೋದಾಗ ಅಲ್ಲಿನ ನೀರಸ ದೃಶ್ಯ ನೋಡಿ ನನಗೆ ಅಚ್ಚರಿಯಾಗಿತ್ತು. ಅದಾದ ಬಳಿಕ ಮುಂದಿನ ಒಂದು ವಾರ ಕಾಲ ಇಸ್ರೇಲಿನ ಯಾವ ಭಾಗಕ್ಕೆ ಹೋದರೂ, ಪ್ರವಾಸಿಗರ ಸಂಖ್ಯೆ ಕರಗಿ ಹೋಗಿದ್ದು ಕಂಡು ಬಂತು. ದಿನದ ಯಾವುದೇ ಸಂದರ್ಭದಲ್ಲಿ ಸಾವಿರಾರು ಜನರಿಂದ ತುಂಬಿರುತ್ತಿದ್ದ ಡೆಡ್ ಸೀ ಪ್ರದೇಶದಲ್ಲಿ ಬರೀ ಹತ್ತಾರು ಮಂದಿ ಇದ್ದರು. ಅಲ್ಲಿನ ಪಾರ್ಕಿಂಗ್ ತಾಣದಲ್ಲಿ ನಾಲ್ಕೈದು ವಾಹನಗಳು ನಿಂತಿದ್ದವು. ಇಸ್ರೇಲಿನ ಎಲ್ಲ ಹೊಟೇಲುಗಳು ಖಾಲಿ ಹೊಡೆಯುತ್ತಿದ್ದವು.

Terror attack

ಇಸ್ರೇಲಿನ ಸರಕಾರ ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಹೊಸ ಭರವಸೆಯನ್ನು ಮೂಡಿಸಲು ವಿದೇಶಗಳಲ್ಲಿ ರೋಡ್ ಷೋ ಮಾಡಿ, ದೊಡ್ಡ ಮಟ್ಟದಲ್ಲಿ ಅಭಿಯಾನ ಮಾಡಿ, ತಮ್ಮ ದೇಶ ಸುರಕ್ಷವಾಗಿದೆ, ಬನ್ನಿ ಎಂದು ಕರೆದರೂ ಇಸ್ರೇಲಿನ ಕಡೆಗೆ ವಿದೇಶಿ ಪ್ರವಾಸಿಗರು ಮುಖ ಹಾಕಲು ಮನಸ್ಸು ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು. ಹಾಗೆ ನೋಡಿದರೆ, ಇಸ್ರೇಲ್ ಸುರಕ್ಷವಾಗಿತ್ತು. ಅಲ್ಲಿ ಯುದ್ಧ ಭೀತಿಯೇನೂ ಇರಲಿಲ್ಲ. ಆದರೆ ಸುಮಾರು ಎರಡು ವರ್ಷಗಳ ಅತಿ ದೀರ್ಘ ಅವಧಿಯ ಉದ್ವಿಗ್ನ ಪರಿಸ್ಥಿತಿಯಿಂದಾಗಿ, ಪ್ರವಾಸೋದ್ಯಮ ನೆಲ ಕಚ್ಚಿತ್ತು. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಅನಿಶ್ಚಿತ ವಾತಾವರಣ ವಿದೇಶಿ ಪ್ರವಾಸಿಗರ ಮನಸ್ಸಿನಲ್ಲಂತೂ ಕವಿದುಬಿಟ್ಟಿತ್ತು. ಅದನ್ನು ನೀಗಿಸಲು ಇಸ್ರೇಲ್ ಸರಕಾರ ಎಷ್ಟೇ ಪ್ರಯತ್ನಿಸಿದರೂ, ಯಶ ಸಿಕ್ಕಿರಲಿಲ್ಲ. ಕಡಿಮೆ ಖರ್ಚಿನ ಪ್ಯಾಕೇಜಿನ ಆಕರ್ಷಣೆಯನ್ನು ಒಡ್ಡಿದರೂ, ಪ್ರವಾಸಿಗರು ಮುಂದೆ ಬರುತ್ತಿರಲಿಲ್ಲ. ಇಸ್ರೇಲಿ ಏರ್ ಲೈನ್ಸ್ ಸಂಸ್ಥೆ ವಿಮಾನ ಪ್ರಯಾಣ ದರವನ್ನು ಅರ್ಧ ಬೆಲೆಗೆ ಇಳಿಸಿದರೂ, ವಿದೇಶಿ ಪ್ರವಾಸಿಗರು ಉಮ್ಮೇದು ಮಾಡುತ್ತಿರಲಿಲ್ಲ. 'ವಿದೇಶಿ ಪ್ರವಾಸಿಗರ ಮನಸ್ಸಿನಲ್ಲಿ ಹೊಕ್ಕ ಭೂತವನ್ನು ಓಡಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡರೂ, ನಾವು ಯಶಸ್ವಿಯಾಗಿಲ್ಲ. ಈ ಸಮಸ್ಯೆಗೆ ಕಾಲವೇ ಉತ್ತರ ಹೇಳಬೇಕು, ಅಲ್ಲಿ ತನಕ ಕಾಯಬೇಕು' ಎಂಬ ನಿಸ್ತೇಜ ಪ್ರತಿಕ್ರಿಯೆ ಅಲ್ಲಿನ ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯರಾದ ಐದಾರು ಮಂದಿಯ ಜತೆ ಮಾತಾಡುವಾಗ ಮೂಡಿ ಬಂದಿತು.

ಈ ಪ್ರಸಂಗ ನೆನಪಾಗಲು ಕಾರಣವಿದೆ. ನಾನು ಕಳೆದ ಎರಡು ದಿನಗಳ ಪತ್ರಿಕೆಗಳನ್ನು ಓದುವಾಗ ಒಂದು ಸುದ್ದಿ ಗಮನ ಸೆಳೆಯಿತು. ದಿಲ್ಲಿಯಲ್ಲಿ ಕಾರು ಬಾಂಬ್ ಸ್ಫೋಟವಾದ ಬಳಿಕ, ಎರಡು ದಿನಗಳಲ್ಲಿ ಮೂವತ್ತೊಂದು ಸಾವಿರ ವಿದೇಶಿ ಪ್ರಯಾಣಿಕರು ದಿಲ್ಲಿ ಪ್ರವಾಸವನ್ನು ರದ್ದು ಮಾಡಿದ್ದಾರಂತೆ. ಮುಂದಿನ ಒಂದು ತಿಂಗಳಲ್ಲಿ ದಿಲ್ಲಿಗೆ ಬರಬೇಕಿದ್ದ ಮೂರು ಲಕ್ಷ ತೊಂಬತ್ತೆರಡು ಸಾವಿರ ಪ್ರವಾಸಿಗರು ತಮ್ಮ ಪ್ರವಾಸವನ್ನು, ಕಾಯ್ದಿರಿಸಿದ ಹೊಟೇಲ್ ರೂಮುಗಳನ್ನು ಹಠಾತ್ ರದ್ದುಪಡಿಸಿದ್ದಾರಂತೆ. ಇದು ಕೇವಲ ದಿಲ್ಲಿ ಮತ್ತು ಸುತ್ತಮುತ್ತಲ (ಆಗ್ರಾ, ಫತೇಪುರ್ ಸಿಕ್ರಿ) ಪ್ರೇಕ್ಷಣೀಯ ತಾಣಗಳನ್ನು ನೋಡಬಯಸುವ ಪ್ರವಾಸಿಗರು ಮಾತ್ರ. ಸಾಮಾನ್ಯವಾಗಿ ವಿದೇಶಿ ಪ್ರವಾಸಿಗರು, 'ದಿಲ್ಲಿಯಲ್ಲಿ ಬಾಂಬ್ ಸ್ಫೋಟ ಆಯಿತಂತೆ' ಎಂಬ ಸುದ್ದಿ ಕೇಳಿದರೆ, 'ಇಡೀ ಭಾರತದಲ್ಲಿಯೇ ಬಾಂಬ್ ಸ್ಪೋಟ ಆಯಿತು' ಎಂಬ ರೀತಿಯಲ್ಲಿ ಭಾವಿಸುತ್ತಾರೆ. ಅಂದರೆ, ದಿಲ್ಲಿಯ ಘಟನೆಯ ಪರಿಣಾಮ ಇಡೀ ದೇಶದ ಮೇಲಾಗುತ್ತದೆ. ಭಾರತಕ್ಕೆ ಹೊರಡಬೇಕು ಎಂದು ನಿರ್ಧರಿಸುವ ಪ್ರವಾಸಿಗರ ಮೇಲೆ ಅನಿಶ್ಚಿತತೆಯ ಭೀತಿ ಆವರಿಸುತ್ತದೆ. ಒಂದು ಬಾಂಬ್ ಸ್ಫೋಟಕ್ಕೆ ಇಡೀ ಪ್ರವಾಸೋದ್ಯಮ ರಂಗವನ್ನು ತಲ್ಲಣಗೊಳಿಸುವ, ಇಡೀ ಕ್ಷೇತ್ರವನ್ನು ಛಿದ್ರಗೊಳಿಸುವ ಶಕ್ತಿಯಿದೆ. ಅದರಲ್ಲೂ ಯಾವುದೇ ದೇಶದಲ್ಲಿ ಇಂಥ ಘಟನೆಗಳು ಮೇಲಿಂದ ಮೇಲೆ ನಡೆದರೆ, ಆ ದೇಶದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತು ಎಂದು ಭಾವಿಸಬಹುದು.

Terrorism

ಪ್ರವಾಸೋದ್ಯಮವು ಜಾಗತಿಕ ಆರ್ಥಿಕತೆಯ ಪ್ರಮುಖ ಸ್ತಂಭಗಳಲ್ಲಿ ಒಂದು. ಇದು ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಆದಾಯವನ್ನು ಒದಗಿಸುತ್ತದೆ ಮತ್ತು ದೇಶಗಳ ನಡುವೆ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುತ್ತದೆ. ಆದರೆ, ಈ ಸೂಕ್ಷ್ಮ ಉದ್ಯಮವು ಭಯೋತ್ಪಾದನೆಯೆಂಬ ಮಾರಕ ಶಕ್ತಿಯಿಂದ ಆಳವಾದ ಅಪಾಯವನ್ನು ಎದುರಿಸುತ್ತಿದೆ. ಭಯೋತ್ಪಾದಕ ದಾಳಿಯ ಒಂದು ಘಟನೆಯು ಸುದೀರ್ಘ ಪ್ರಯತ್ನಗಳಿಂದ ನಿರ್ಮಿಸಲಾದ ಪ್ರವಾಸಿ ತಾಣದ ಸಾರ್ವಜನಿಕ ನಂಬಿಕೆ ಮತ್ತು ಆರ್ಥಿಕತೆಯನ್ನು ಕೆಲವೇ ಕ್ಷಣಗಳಲ್ಲಿ ನೆಲಸಮ ಮಾಡಬಲ್ಲದು. ಭಯೋತ್ಪಾದನೆಯು ಕೇವಲ ಒಂದು ಸ್ಥಳ ಅಥವಾ ಕಟ್ಟಡವನ್ನು ನಾಶಪಡಿಸುವುದಿಲ್ಲ, ಅದು ಜನಸಾಮಾನ್ಯರ ಮನಸ್ಸಿನಲ್ಲಿ ಭಯವನ್ನು ಹುಟ್ಟಿಸುತ್ತದೆ ಮತ್ತು ತಮ್ಮ ಸುರಕ್ಷತೆಯ ಬಗ್ಗೆ ಇರುವ ವಿಶ್ವಾಸವನ್ನು ಭಂಗಗೊಳಿಸುತ್ತದೆ. ಈ ವಿಶ್ವಾಸದ ನಾಶವು ಪ್ರವಾಸೋದ್ಯಮದ ಮೇಲೆ ಅತ್ಯಂತ ನಿರ್ಣಾಯಕ ಪರಿಣಾಮ ಬೀರುತ್ತದೆ. ಏಕೆಂದರೆ ಪ್ರವಾಸೋದ್ಯಮದ ಮೂಲಭೂತ ಆಧಾರವೇ ಸುರಕ್ಷತೆ ಮತ್ತು ಮನಶ್ಶಾಂತಿ. ಯಾವುದೇ ಪ್ರವಾಸಿಗರು ಆತಂಕ ಅಥವಾ ಅಪಾಯದ ನೆರಳಿನಲ್ಲಿ ರಜಾದಿನಗಳನ್ನು ಕಳೆಯಲು ಬಯಸುವುದಿಲ್ಲ.

ಒಂದು ಘಟನೆ ನಡೆದ ಕೂಡಲೇ ಆ ಪ್ರದೇಶದಲ್ಲಿ ಇರುವ ಪ್ರವಾಸಿಗರು ತಕ್ಷಣವೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಅಲ್ಲಿಂದ ಹೊರಡುತ್ತಾರೆ. ಅದೇ ಸಮಯದಲ್ಲಿ, ಈಗಾಗಲೇ ಕಾಯ್ದಿರಿಸಿದ್ದ ಅಥವಾ ಪ್ರಯಾಣವನ್ನು ಯೋಜಿಸಿದ್ದ ಲಕ್ಷಾಂತರ ಪ್ರವಾಸಿಗರು ತಮ್ಮ ಟಿಕೆಟ್‌ಗಳು, ಹೊಟೇಲ್ ಬುಕಿಂಗ್‌ಗಳು ಮತ್ತು ಪ್ರವಾಸದ ಪ್ಯಾಕೇಜ್‌ಗಳನ್ನು ರದ್ದುಗೊಳಿಸುತ್ತಾರೆ. ಹಲವು ಪಾಶ್ಚಿಮಾತ್ಯ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ತಕ್ಷಣವೇ ಆ ದೇಶಕ್ಕೆ ಪ್ರಯಾಣ ಮಾಡದಂತೆ ತಮ್ಮ ನಾಗರಿಕರಿಗೆ ಎಚ್ಚರಿಕೆಗಳನ್ನು ನೀಡುತ್ತವೆ. ಈ ಎಚ್ಚರಿಕೆಗಳು ವಿಮೆ ಮತ್ತು ವೀಸಾ ನಿಯಮಗಳ ಮೇಲೆ ಪರಿಣಾಮ ಬೀರಿ, ಪ್ರಯಾಣವನ್ನು ಮತ್ತಷ್ಟು ಕಷ್ಟಕರ ಮತ್ತು ದುಬಾರಿಯನ್ನಾಗಿ ಮಾಡುತ್ತವೆ. ವಿಮಾನಯಾನ ಸಂಸ್ಥೆಗಳು, ಹೊಟೇಲ್‌ಗಳು, ಟ್ಯಾಕ್ಸಿ ಚಾಲಕರು, ಮಾರ್ಗದರ್ಶಕರು, ಸ್ಮಾರಕ ಮಾರಾಟಗಾರರು ಮತ್ತು ಸ್ಥಳೀಯ ರೆಸ್ಟೋರೆಂಟ್‌ಗಳು ತಕ್ಷಣವೇ ಆದಾಯದ ನಷ್ಟವನ್ನು ಅನುಭವಿಸುತ್ತವೆ. ಈ ಎಲ್ಲ ಕ್ಷೇತ್ರಗಳ ಆದಾಯವು ಹಠಾತ್ ಮುಗ್ಗರಿಸುತ್ತವೆ. ಭಯೋತ್ಪಾದನೆಯ ಅತ್ಯಂತ ಅಪಾಯಕಾರಿ ಪರಿಣಾಮಗಳು ದೀರ್ಘಕಾಲದವರೆಗೆ ಉಳಿಯುತ್ತವೆ ಮತ್ತು ಇವು ಒಂದು ದೇಶದ ಚಿತ್ರಣವನ್ನೇ ಬದಲಾಯಿಸುತ್ತವೆ.

Bomb blast in delhi

ದಾಳಿಯ ನಂತರ, ಸರಕಾರವು ಪ್ರವಾಸಿ ತಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ. ಇದು ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ತರಬೇತಿ ಪಡೆದ ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಒಳಗೊಂಡಿರುತ್ತದೆ. ಈ ಹೆಚ್ಚಿದ ವೆಚ್ಚಗಳು ಪ್ರವಾಸೋದ್ಯಮದ ಲಾಭಾಂಶವನ್ನು ಕಡಿಮೆ ಮಾಡುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ, ಈ ಹೆಚ್ಚುವರಿ ಭದ್ರತಾ ಕ್ರಮಗಳು ಪ್ರವಾಸಿಗರಿಗೆ ಅನಾನುಕೂಲತೆ ಮತ್ತು ಅಹಿತಕರ ವಾತಾವರಣವನ್ನು ಸೃಷ್ಟಿಸಬಹುದು. ಪ್ರವಾಸೋದ್ಯಮದ ಮೇಲೆ ಅವಲಂಬಿತರಾದ ಲಕ್ಷಾಂತರ ಜನ, ಉದಾಹರಣೆಗೆ ಸ್ಥಳೀಯ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳು, ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ. ಪ್ರವಾಸಿಗರಿಲ್ಲದೇ, ಅವರ ವ್ಯವಹಾರಗಳು ಮುಚ್ಚಿಹೋಗುತ್ತವೆ. ಇದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿ, ಬಡತನ ಮತ್ತು ನಿರುದ್ಯೋಗ ಹೆಚ್ಚಾಗುತ್ತದೆ. ಈ ಆರ್ಥಿಕ ಸಂಕಷ್ಟವು ಸ್ಥಳೀಯರಲ್ಲಿ ಹತಾಶೆ ಮತ್ತು ಸಾಮೂಹಿಕ ಆತಂಕವನ್ನು ಹೆಚ್ಚಿಸುತ್ತದೆ.

'ಭಯದ ಹಣೆಪಟ್ಟಿ' ಅತ್ಯಂತ ವಿನಾಶಕಾರಿ ಪರಿಣಾಮ. ಒಮ್ಮೆ ಒಂದು ಸ್ಥಳವು ಭಯೋತ್ಪಾದಕ ದಾಳಿಗೆ ಒಳಗಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಸ್ಥಳಕ್ಕೆ 'ಅಪಾಯಕಾರಿ ತಾಣ' ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಜಾಹೀರಾತು ಮತ್ತು ಪ್ರಚಾರದಿಂದ ಈ ಹಣೆಪಟ್ಟಿಯನ್ನು ಹೋಗಲಾಡಿಸುವುದು ಕಷ್ಟಕರ. ಈಗಾಗಲೇ ಹೇಳಿದಂತೆ, ದಿಲ್ಲಿಯಲ್ಲಿ ಒಂದು ಬಾಂಬ್ ಸ್ಫೋಟದ ಘಟನೆಯು ಇಡೀ ಭಾರತದ ಬಗ್ಗೆ ಭಯವನ್ನು ಸೃಷ್ಟಿಸಬಹುದು. ಏಕೆಂದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಈ ಘಟನೆಗಳನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತವೆ. ಪಾಕಿಸ್ತಾನದಂಥ ದೇಶಗಳ ವಿಷಯದಲ್ಲಿ, ನಡೆಯುತ್ತಿರುವ ಆಂತರಿಕ ಭದ್ರತಾ ಸಮಸ್ಯೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳು ಆ ದೇಶಕ್ಕೆ ಪ್ರವಾಸಿಗರು ಹೋಗದಿರಲು ಮುಖ್ಯ ಕಾರಣವಾಗಿವೆ. ಪ್ರವಾಸಿಗರು ಒಂದು ದೇಶವನ್ನು 'ಒಂದೇ ಘಟಕ' ಎಂದು ನೋಡುತ್ತಾರೆ ಮತ್ತು ಒಂದು ಪ್ರದೇಶದಲ್ಲಿನ ಸಮಸ್ಯೆ ಇಡೀ ದೇಶದ ಸುರಕ್ಷತೆಯ ಬಗ್ಗೆ ಅನುಮಾನ ಹುಟ್ಟಿಸುತ್ತದೆ.

Mumbai Terror attack

ಕೆಲವೊಮ್ಮೆ ದಾಳಿಗಳು ಐತಿಹಾಸಿಕ ಸ್ಮಾರಕಗಳು, ಹೊಟೇಲ್‌ಗಳು ಅಥವಾ ಸಾರಿಗೆ ಜಾಲದಂಥ ಪ್ರಮುಖ ಪ್ರವಾಸಿ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಬಹುದು, ಅವುಗಳ ಪುನರ್‌ನಿರ್ಮಾಣಕ್ಕೆ ಅಪಾರ ಸಮಯ ಮತ್ತು ಸಂಪನ್ಮೂಲ ಬೇಕಾಗುತ್ತದೆ. ಭಯೋತ್ಪಾದಕರು ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಅಥವಾ ಕ್ರೂಸ್ ಹಡಗುಗಳಂಥ ಸಾರಿಗೆ ಕೇಂದ್ರಗಳನ್ನು ಗುರಿಯಾಗಿಸಿದಾಗ, ಅದು ಪ್ರಯಾಣದ ಮೂಲಭೂತ ಪ್ರಕ್ರಿಯೆಯನ್ನು ವಿಚ್ಛಿದ್ರಗೊಳಿಸುತ್ತದೆ. ವಿಮಾನ ಅಥವಾ ರೈಲು ಪ್ರಯಾಣದ ಸುರಕ್ಷತೆಯ ಬಗ್ಗೆ ಅನುಮಾನಗಳು ಮೂಡಿದಾಗ, ಜನರು ತಮ್ಮ ಪ್ರವಾಸದ ಯೋಜನೆಯನ್ನೇ ಕೈಬಿಡುತ್ತಾರೆ. ಪ್ಯಾರಿಸ್‌ನ ಬಾಟಾಕ್ಲಾನ್, ಈಜಿಪ್ಟ್‌ನ ಅಬು ಸಿಂಬೆಲ್ ದೇವಾಲಯದ ಸಮೀಪದ ದಾಳಿಗಳು ಅಥವಾ ಶ್ರೀಲಂಕಾದ ಚರ್ಚ್‌ಗಳ ಮೇಲಿನ ಸ್ಫೋಟಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುತ್ತವೆ. ಈ ಸ್ಥಳಗಳನ್ನು ನಾಶಪಡಿಸುವುದರಿಂದ ಕೇವಲ ಪ್ರವಾಸೋದ್ಯಮಕ್ಕೆ ಹಾನಿಯಾಗುವುದಿಲ್ಲ, ಬದಲಿಗೆ ಜಾಗತಿಕ ಸಾಂಸ್ಕೃತಿಕ ಪರಂಪರೆಗೆ ಮತ್ತು ಆ ದೇಶದ ಆತ್ಮಕ್ಕೆ ಧಕ್ಕೆಯುಂಟಾಗುತ್ತದೆ. ಪ್ರವಾಸಿಗರು ನೋಡಲು ಬಯಸುವ ಪ್ರಮುಖ ಆಕರ್ಷಣೆಗಳೇ ಸುರಕ್ಷಿತವಲ್ಲ ಎಂದಾಗ, ಇನ್ನುಳಿದ ಸ್ಥಳಗಳಿಗೆ ಹೋಗಲು ಜನರಿಗೆ ಆಸಕ್ತಿಯಿರುವುದಿಲ್ಲ. ಶಾಪಿಂಗ್ ಮಾಲ್‌ಗಳು, ಮನರಂಜನಾ ಪಾರ್ಕ್‌ಗಳು, ಕಡಲತೀರಗಳು ಅಥವಾ ಹೊಟೇಲ್‌ಗಳನ್ನು ಗುರಿಯಾಗಿಸಿದಾಗ, ಭಯೋತ್ಪಾದಕರು ಪ್ರವಾಸಿಗರು ವಿಶ್ರಾಂತಿ ಪಡೆಯುವ ಮತ್ತು ಆನಂದಿಸುವ ವಾತಾವರಣವನ್ನು ಗುರಿಯಾಗಿಸುತ್ತಾರೆ. ಇದು 'ಎಲ್ಲಿಯೂ ಸುರಕ್ಷಿತವಲ್ಲ' ಎಂಬ ಸಂದೇಶವನ್ನು ಕಳುಹಿಸುತ್ತದೆ. ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳು ಪ್ರವಾಸಿಗರನ್ನು ಆಕರ್ಷಿಸುವ ಬದಲು, ಅವರು ಸುಲಭವಾಗಿ ತಲುಪಬಹುದಾದ ದುರ್ಬಲ ಗುರಿಗಳಾಗುತ್ತವೆ.

ಭಯೋತ್ಪಾದನೆಯಿಂದ ನಾಶವಾದ ಪ್ರವಾಸೋದ್ಯಮವನ್ನು ಪುನಃ ನಿರ್ಮಿಸುವುದು ಅತ್ಯಂತ ದುಬಾರಿ ಮತ್ತು ಸುದೀರ್ಘ ಪ್ರಕ್ರಿಯೆ. ಇದಕ್ಕೆ ಕೇವಲ ಆರ್ಥಿಕ ಹೂಡಿಕೆ ಸಾಲದು, ಅದಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ವಿಶ್ವಾಸದ ಪುನರ್ನಿರ್ಮಾಣ ಅಗತ್ಯವಿದೆ. ಭಯೋತ್ಪಾದನೆಗೆ ಒಳಗಾದ ದೇಶದ ಪ್ರವಾಸೋದ್ಯಮ ಇಲಾಖೆ ಜಾಹೀರಾತುಗಳನ್ನು ನೀಡಿದರೂ ಜನ ಹೋಗುವುದಿಲ್ಲ. ಏಕೆಂದರೆ, ಮನರಂಜನೆಯ ಚಿತ್ರಗಳಿಗಿಂತ ವಾಸ್ತವದ ಭಯ ಮತ್ತು ಸುರಕ್ಷತೆಯ ಕಳವಳವು ಹೆಚ್ಚು ಪ್ರಬಲವಾಗಿರುತ್ತದೆ. ಪ್ರವಾಸಿಗರಿಗೆ ಮನಶ್ಶಾಂತಿ ಮುಖ್ಯ, ಕೇವಲ ಕಡಿಮೆ ಬೆಲೆಯ ಟಿಕೆಟ್ ಅಲ್ಲ.

ಭಯೋತ್ಪಾದನೆಯು ಪ್ರವಾಸೋದ್ಯಮಕ್ಕೆ ಮಾರಕವಾಗಿದೆ ಎನ್ನುವುದು ಸ್ಪಷ್ಟ. ಇಸ್ರೇಲ್‌ನಿಂದ ಭಾರತದವರೆಗೂ, ಭಯೋತ್ಪಾದನೆಯು ಒಂದು ದೇಶದ 'ಅತಿಥಿಸತ್ಕಾರದ ಮುಖ'ವನ್ನೇ ವಿರೂಪಗೊಳಿಸಿಬಿಡುತ್ತದೆ. ಇದು ಕೇವಲ ಒಂದು ಆರ್ಥಿಕ ನಷ್ಟವಲ್ಲ. ಒಂದು ದೇಶದ ಪ್ರತಿಷ್ಠೆ, ಘನತೆಗೆ ಮಾರಕ. ಭಯೋತ್ಪಾದನೆ ಮತ್ತು ಪ್ರವಾಸೋದ್ಯಮ ಎಂದೆಂದೂ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ದಿಲ್ಲಿ ಕಾರ್ ಬಾಂಬ್ ಸ್ಫೋಟವನ್ನು ನೋಡಿದಾಗ, ನಾವು ಕಳೆದುಕೊಂಡಿದ್ದೇನು ಎಂಬುದು ಗೊತ್ತಾಗುತ್ತದೆ.