- ಕೇಶವ ಪ್ರಸಾದ್‌ ಬಿ.

ಏಪ್ರಿಲ್-‌ ನಿಂದ ಜೂನ್‌ ಅವಧಿಯ ತನಕ ಬೇಸಗೆಯಲ್ಲಿ ಭಾರತೀಯರು ಯುರೋಪ್‌ ಮತ್ತು ಆಸ್ಟ್ರೇಲಿಯಾಗೆ ಭೇಟಿ ನೀಡುವುದು, ಅಲ್ಲಿನ ತಣ್ಣನೆಯ ಮತ್ತು ಅನುಪಮ ನಿಸರ್ಗ ಸೌಂದರ್ಯ ತಾಣಗಳನ್ನು ವೀಕ್ಷಿಸುವುದು, ಮೋಜು-ಮಸ್ತಿಯೊಂದಿಗೆ ಕಾಲ ಕಳೆದು ಹಿಂತಿರುಗುವುದು ವಾಡಿಕೆಯಾಗಿದೆ. ಆದರೆ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ ಗೆ 106 ಡಾಲರ್‌ಗೆ ಏರಿಕೆಯಾಗಿದೆ. ಹೀಗಾಗಿ ಭಾರತಕ್ಕೆ ಆಮದು ದುಬಾರಿಯಾಗುತ್ತಿದೆ. ದೀರ್ಘಾವಧಿಗೆ ಯುದ್ಧ ಮುಂದುವರಿದರೆ, ತೈಲ ದರ ನೂರು ಡಾಲರ್‌ ಗಡಿಯಾಚೆಗೆ ಇದ್ದರೆ, ಭಾರತದ ವಿದೇಶಿ ವಿನಿಮಯ ಸಂಗ್ರಹ ಕರಗುವ ಆತಂಕ ಇದೆ. ಏಕೆಂದರೆ, ಆಮದು ಮಾಡುವ ತೈಲ, ಬಂಗಾರ, ಎಲೆಕ್ಟ್ರಾನಿಕ್ಸ್‌, ರಸಗೊಬ್ಬರ, ಖಾದ್ಯತೈಲವನ್ನು ಖರೀದಿಸಲು ಡಾಲರ್‌ ಬೇಕಾಗುತ್ತದೆ. ಡಾಲರ್‌ ಅನ್ನು ಹೆಚ್ಚು ಖರ್ಚು ಮಾಡಿದಷ್ಟೂ ರುಪಾಯಿ ಮೌಲ್ಯ ತಗ್ಗುತ್ತದೆ. ಭಾರತದ ವಿತ್ತೀಯ ಕೊರತೆ ಹೆಚ್ಚುತ್ತದೆ. ಅದು ಆರ್ಥಿಕತೆಗೆ ಒಳ್ಳೆಯದಲ್ಲ. ಆದ್ದರಿಂದ ಡಾಲರ್‌ಗಳನ್ನು ಖರ್ಚು ಮಾಡಲು ಆಸ್ಪದವೀಯುವ ವಿದೇಶಿ ಪ್ರವಾಸಗಳನ್ನೂ ದೂರವಿಡುವಂತೆ ಪ್ರಧಾನಿ ಮೋದಿಯವರು ರಾಷ್ಟ್ರೀಯ ಹಿತದೃಷ್ಟಿಯಿಂದ ಮನವಿ ಮಾಡಿದ್ದಾರೆ. ಕಚ್ಚಾ ತೈಲದ ಮಿತವ್ಯಯದ ಜತೆಗೆ ಬಂಗಾರ, ಬೆಳ್ಳಿಯ ಶಾಪಿಂಗ್‌ ಅನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ ಎಂದಿದ್ದಾರೆ.‌

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಮೈಗ್ರೇನ್ ತರುತ್ತಿರುವ ಮೈಗ್ರೆಂಟ್ಸ್

ದೇಶೀಯ ಪ್ರವಾಸೋದ್ಯಕ್ಕೆ ಪುಷ್ಟಿ!

ಪ್ರಧಾನಿ ನರೇಂದ್ರ ಮೋದಿಯವರು ಮೊದಲಿನಿಂದಲೂ, 'ದೇಖೋ ಅಪ್ನಾ ದೇಶ್' (Dekho Apna Desh) ಮತ್ತು 'ವೆಡ್ ಇನ್ ಇಂಡಿಯಾ' (Wed in India) ನಂಥ ಅಭಿಯಾನಗಳ ಮೂಲಕ ವಿದೇಶಿ ಪ್ರವಾಸಕ್ಕಿಂತ ಹೆಚ್ಚಾಗಿ ದೇಶೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದ್ದಾರೆ.

ಮೇಲ್ನೋಟಕ್ಕೆ ಮೋದಿಯವರ ಕರೆಯಿಂದಾಗಿ ವಿದೇಶಿ ಪ್ರವಾಸ ಆಯೋಜಿಸುವ ಏಜೆನ್ಸಿಗಳಿಗೆ ಸ್ವಲ್ಪ ಮಟ್ಟಿಗೆ ಸವಾಲು ಎನಿಸಬಹುದು. ಆದರೆ ಒಟ್ಟಾರೆ ಚಿತ್ರಣ ಬೇರೆಯೇ ಇದೆ:

ಭಾರತೀಯರು ವಿದೇಶಕ್ಕೆ ಹೋಗಿ ಖರ್ಚು ಮಾಡುವ ಹಣ ಭಾರತದ ಒಳಗೇ ಉಳಿಯುವುದರಿಂದ ದೇಶೀಯ ಪ್ರವಾಸೋದ್ಯಮಕ್ಕೆ ದೊಡ್ಡ ಲಾಭವಾಗಲಿದೆ.

ವಿದೇಶಕ್ಕೆ ಹೋಗುವ ಪ್ರವಾಸಿಗರು ಸೀಮಿತವಾಗಿದ್ದರೂ, ದೇಶೀಯವಾಗಿ ಪ್ರಯಾಣಿಸುವವರ ಸಂಖ್ಯೆ ಕೋಟಿಗಟ್ಟಲೆ ಲೆಕ್ಕದಲ್ಲಿದೆ. ಇದು ಸ್ಥಳೀಯ ಹೊಟೇಲ್‌ಗಳು, ಸಾರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ವರದಾನವಾಗಿದೆ.

'ವಂದೇ ಭಾರತ್' ರೈಲುಗಳು, ಹೊಸ ವಿಮಾನ ನಿಲ್ದಾಣಗಳು ಮತ್ತು ಉತ್ತಮ ರಸ್ತೆ ಸಂಪರ್ಕವು ದೇಶೀಯ ಪ್ರವಾಸವನ್ನು ಸುಲಭಗೊಳಿಸಿದೆ. ಪ್ರವಾಸಿಗರು ಹಳ್ಳಿ ಅಥವಾ ಸಣ್ಣ ನಗರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನರಿಗೆ ಉದ್ಯೋಗ ಸಿಗುತ್ತದೆ. ಭಾರತದ ಹಣ ಹೊರಹೋಗುವ ಬದಲು ಇಲ್ಲಿಯೇ ಚಲಾವಣೆಯಾಗುತ್ತದೆ. ಇದು ರುಪಾಯಿಯ ಮೌಲ್ಯವನ್ನು ರಕ್ಷಿಸುತ್ತದೆ. ನಮ್ಮ ಐತಿಹಾಸಿಕ ಸ್ಮಾರಕಗಳು ಮತ್ತು ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಮೂಡುತ್ತದೆ.

ರೀಜನರೇಟಿವ್ ಟೂರಿಸಂ ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ (2)

2025ರಲ್ಲಿ 3 ಕೋಟಿ 27 ಲಕ್ಷ ಮಂದಿ ಭಾರತೀಯರು ವಿದೇಶ ಪ್ರವಾಸ ಮಾಡಿದ್ದರು. ಹೆಚ್ಚುತ್ತಿರುವ ಆದಾಯ, ಸುಲಭ ವೀಸಾ, ಸಾಮಾಜಿಕ ಜಾಲತಾಣಗಳ ಪ್ರಭಾವ, ಜನರ ಆಸಕ್ತಿ, ವಿದೇಶಗಳ ಆಕರ್ಷಣೆ, ಕೆಲವು ಲಕ್ಷ ರುಪಾಯಿಗಳಲ್ಲೂ ವಿದೇಶ ಪ್ರವಾಸ ಸಾಧ್ಯವಾಗುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಪ್ರಧಾನಿ ಮೋದಿಯವರು ಟ್ರಾವೆಲ್‌ ಇಂಡಸ್ಟ್ರಿಯನ್ನು ಬಂದ್‌ ಮಾಡಲು ಕರೆ ಕೊಟ್ಟಿಲ್ಲ. ಅದರ ಬದಲಿಗೆ ದೇಶೀಯ ಪ್ರವಾಸಕ್ಕೆ ಹೆಚ್ಚು ಒತ್ತು ಕೊಡಿ ಎಂಬುದೇ ಆಗಿದೆ. ಈಗ ಟ್ರಾವೆಲ್‌ ಏಜೆನ್ಸಿಗಳು ವಿದೇಶಿ ಟೂರ್‌ ಪ್ಯಾಕೇಜ್‌ಗಿಂತಲೂ ದೇಶೀಯ ಟೂಪರ್‌ ಪ್ಯಾಕೇಜ್‌ಗಳಿಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದ್ದೇ ಇರುತ್ತದೆ.

ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬೇಕು:

ಭಾರತೀಯರು ವಿದೇಶಕ್ಕೆ ಹೋಗಿ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡುವುದರ ಬಗ್ಗೆ ಮೋದಿಯವರು ಮನವಿ ಮಾಡಿದ್ದಾರೆ. ಆದರೆ ಇನ್ನೊಂದು ಆಯಾಮದ ಬಗ್ಗೆ ಕೂಡ ಟ್ರಾವೆಲ್ಸ್‌ ವಲಯ ಆಲೋಚಿಸಬೇಕು. ಸರಕಾರಗಳೂ ಕಾರ್ಯಪ್ರವೃತ್ತವಾಗಬೇಕು. ಅದೇನೆಂದರೆ, ವಿದೇಶಿ ಪ್ರವಾಸಿಗರು ಭಾರತಕ್ಕೆ ಬರುವುದು ನಮ್ಮ ಆರ್ಥಿಕತೆಗೆ ಅತ್ಯಂತ ಅವಶ್ಯಕವಾಗಿದೆ.

ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಾಗ ಅವರು ಡಾಲರ್ ಅಥವಾ ತಮ್ಮ ದೇಶದ ಕರೆನ್ಸಿಯನ್ನು ನೀಡಿ ಭಾರತೀಯ ರುಪಾಯಿಯನ್ನು ಪಡೆಯುತ್ತಾರೆ. ಇದರಿಂದ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) ಹೆಚ್ಚಾಗುತ್ತದೆ.

ಭಾರತವು ತನ್ನ ಉತ್ಪನ್ನಗಳನ್ನು ವಿದೇಶಕ್ಕೆ ಕಳುಹಿಸಿ ಹಣ ಪಡೆಯುವುದನ್ನು ರಫ್ತು ಎನ್ನುತ್ತೇವೆ. ಆದರೆ ಪ್ರವಾಸೋದ್ಯಮದಲ್ಲಿ ವಿದೇಶಿಯರೇ ಇಲ್ಲಿಗೆ ಬಂದು ನಮ್ಮ ಸೇವೆಗಳನ್ನು (ಹೊಟೇಲ್, ಸಾರಿಗೆ, ಗೈಡ್) ಖರೀದಿಸುತ್ತಾರೆ. ಇದನ್ನು "ಇನ್‌ ವಿಸಿಬೆಲ್‌ ರಫ್ತುʼ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಶದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಕಡಿಮೆ ಮಾಡಲು ನೆರವಾಗುತ್ತದೆ.

ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಾಗ ಉಂಟಾಗುವ ಸಕಾರಾತ್ಮಕ ಪರಿಣಾಮಗಳು ಹಲವು. ಆದ್ದರಿಂದ ಅವರಿಗೆ ಆದರದ ಆತಿಥ್ಯವನ್ನು ನೀಡಬೇಕು. ವಿದೇಶಿ ಪ್ರವಾಸಿಗರು ಹೆಚ್ಚಾಗಿ ಐಷಾರಾಮಿ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಜತೆಗೆ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ದುಬಾರಿ ಪ್ರವಾಸಿ ಪ್ಯಾಕೇಜ್‌ಗಳ ಮೇಲೆ ಹಣ ಖರ್ಚು ಮಾಡುತ್ತಾರೆ. ಇಲ್ಲಿ ಎಲ್ಲ ಹಂತಗಳಲ್ಲಿಯೂ ಹಣದ ಚಲಾವಣೆ ನಡೆಯುತ್ತದೆ. ದೊಡ್ಡ ಹೊಟೇಲ್‌ ಗಳಿಂದ ಸ್ಥಳೀಯ ಟ್ಯಾಕ್ಸಿ ಚಾಲಕರು, ಕಲಾವಿದರು, ಕರಕುಶಲಗಾರರು, ಸಣ್ಣ ವ್ಯಾಪಾರಿಗಳಿಗೂ ವ್ಯಾಪಾರವಾಗುತ್ತದೆ. ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವ ಪ್ರತಿ 1 ರುಪಾಯಿ ಹೂಡಿಕೆಯು ಇತರ ಕ್ಷೇತ್ರಗಳಿಗಿಂತ 3.5 ಪಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿ, ಯೋಗ ಮತ್ತು ಆತಿಥ್ಯವನ್ನು ಕಂಡು ಪ್ರಭಾವಿತರಾದಾಗ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದು ಪರೋಕ್ಷವಾಗಿ ಭಾರತಕ್ಕೆ ವಿದೇಶಿ ಹೂಡಿಕೆ ಹರಿದು ಬರಲು ಸಹಕಾರಿಯಾಗುತ್ತದೆ. ಕೇಂದ್ರ ಸರಕಾರದ ಉದ್ದೇಶ ಸ್ಪಷ್ಟವಾಗಿದೆ. "ಹಣದ ಹೊರಹರಿವು ಕಡಿಮೆ ಮಾಡುವುದು ಮತ್ತು ಒಳಹರಿವನ್ನು ಹೆಚ್ಚಿಸುವುದು. ಅಂದರೆ, ಭಾರತೀಯರು ವಿದೇಶಕ್ಕೆ ಹೋಗಿ ಹಣ ವ್ಯಯಿಸುವುದರ ಬದಲು ಭಾರತದಲ್ಲೇ ಪ್ರವಾಸ ಮಾಡಲಿ, ಮತ್ತು ವಿದೇಶಿಯರು ಭಾರತಕ್ಕೆ ಬಂದು ಇಲ್ಲಿ ಹಣ ಖರ್ಚು ಮಾಡಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ರೀಜನರೇಟಿವ್ ಟೂರಿಸಂ ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ (3)

ಪ್ರವಾಸೋದ್ಯಮವು ಕೇವಲ ಹೊಟೇಲ್ ಅಥವಾ ರೆಸ್ಟೊರೆಂಟ್ ಉದ್ಯಮಕ್ಕೆ ಸೀಮಿತವಾಗಿಲ್ಲ. ಒಬ್ಬ ಪ್ರವಾಸಿ ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಟ್ಯಾಕ್ಸಿ ಚಾಲಕರು, ಸ್ಥಳೀಯ ಗೈಡ್‌ಗಳು, ಸಣ್ಣ ಅಂಗಡಿಕಾರರು, ಕುಶಲಕರ್ಮಿಗಳು ಹೀಗೆ ಎಲ್ಲರಿಗೂ ವ್ಯಾಪಾರಾವಕಾಶಗಳು ಸಿಗುತ್ತವೆ. ದೇಶೀಯ ಪ್ರವಾಸೋದ್ಯಮ ಹೆಚ್ಚಾದಷ್ಟೂ ಗ್ರಾಮೀಣ ಮತ್ತು ಸಣ್ಣ ನಗರಗಳ ಆರ್ಥಿಕತೆ ಬಲಗೊಳ್ಳುತ್ತದೆ. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಕೋಟಿಗಟ್ಟಲೆ ಹಣ ಖರ್ಚು ಮಾಡಿ ಇಟಲಿ, ದುಬೈ ಅಥವಾ ಥೈಲ್ಯಾಂಡ್‌ನಲ್ಲಿ ಮದುವೆಯಾಗುವ ಶ್ರೀಮಂತ ಭಾರತೀಯರನ್ನು ದೇಶದ ಒಳಗೇ ಮದುವೆ ಸಮಾರಂಭಗಳನ್ನು ಆಯೋಜಿಸುವಂತೆ ಪ್ರಧಾನಿಯವರು ಪ್ರೇರೇಪಿಸುತ್ತಿದ್ದಾರೆ. ರಾಜಸ್ಥಾನದ ಅರಮನೆಗಳು, ಉತ್ತರಾಖಂಡದ ಬೆಟ್ಟಗಳು ಅಥವಾ ಗೋವಾದ ಕಡಲತೀರಗಳನ್ನು ಮದುವೆಯ ತಾಣಗಳಾಗಿ ಬಳಸುವುದರಿಂದ ಬೃಹತ್ ಮೊತ್ತದ ಹಣ ಭಾರತದ ಮಾರುಕಟ್ಟೆಯಲ್ಲೇ ಉಳಿಯುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಕಾಶಿ ವಿಶ್ವನಾಥ ಕಾರಿಡಾರ್, ಅಯೋಧ್ಯೆ ರಾಮ ಮಂದಿರ, ಉಜ್ಜಯಿನಿ ಮತ್ತು ಕೇದಾರನಾಥದಂಥ ಧಾರ್ಮಿಕ ಕ್ಷೇತ್ರಗಳನ್ನು ಆಧುನಿಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದರ ಪರಿಣಾಮವಾಗಿ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದಿದೆ. ಉದಾಹರಣೆಗೆ, ಉತ್ತರ ಪ್ರದೇಶವು ಈಗ ದೇಶದಲ್ಲೇ ಅತಿ ಹೆಚ್ಚು ದೇಶೀಯ ಪ್ರವಾಸಿಗರನ್ನು ಆಕರ್ಷಿಸುವ ರಾಜ್ಯಗಳಲ್ಲಿ ಒಂದಾಗಿದೆ.

ಭಾರತದ ಗಡಿ ಭಾಗದಲ್ಲಿರುವ ಹಳ್ಳಿಗಳನ್ನು "ಕೊನೆಯ ಹಳ್ಳಿಗಳಲ್ಲ, ದೇಶದ ಮೊದಲ ಹಳ್ಳಿಗಳು" ಎಂದು ಪರಿಗಣಿಸಿ ಅಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್ ಮತ್ತು ಈಶಾನ್ಯ ಭಾರತದ ಗಡಿ ಗ್ರಾಮಗಳಿಗೆ ಪ್ರವಾಸಿಗರು ಭೇಟಿ ನೀಡುವುದರಿಂದ ಆ ಆಯಕಟ್ಟಿನ ಪ್ರದೇಶಗಳಲ್ಲಿ ಜನವಸತಿ ಮತ್ತು ಮೂಲಸೌಕರ್ಯಗಳು ಸುಧಾರಿಸುತ್ತವೆ. ಇದು ರಾಷ್ಟ್ರೀಯ ಭದ್ರತೆಗೂ ಪೂರಕವಾಗಿದೆ.

ವೈವಿಧ್ಯಮಯ ಭೌಗೋಳಿಕತೆ ಅಥವಾ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಹಲವಾರು ದೇಶಗಳಿಗೆ ಪ್ರವಾಸೋದ್ಯಮವೇ ಆರ್ಥಿಕತೆಯ ಬೆನ್ನೆಲುಬಾಗಿದೆ. ಇಂತಹ ದೇಶಗಳ ಜಿಡಿಪಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರವಾಸೋದ್ಯಮವು ಸಿಂಹಪಾಲನ್ನು ಹೊಂದಿರುತ್ತದೆ. ಕೆಲ ಉದಾಹರಣೆಗಳನ್ನು ಈಗ ನೋಡೋಣ.

ಮಾಲ್ಡೀವ್ಸ್ : ಈ ದ್ವೀಪ ರಾಷ್ಟ್ರದ ಜಿಡಿಪಿಗೆ ಶೇ. 28 ಕ್ಕಿಂತ ಹೆಚ್ಚು ಪಾಲು ನೇರವಾಗಿ ಪ್ರವಾಸೋದ್ಯಮದಿಂದಲೇ ಬರುತ್ತದೆ. ದೇಶದ ವಿದೇಶಿ ವಿನಿಮಯ ಗಳಿಕೆಯ ಶೇ. 60 ಕ್ಕಿಂತ ಹೆಚ್ಚು ಭಾಗ ಇಲ್ಲೇ ಸೃಷ್ಟಿಯಾಗುತ್ತದೆ.

ಥಾಯ್ಲೆಂಡ್ : ಆಗ್ನೇಯ ಏಷ್ಯಾದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾದ ಥಾಯ್ಲೆಂಡ್‌ನ ಜಿಡಿಪಿಗೆ ಪ್ರವಾಸೋದ್ಯಮವು ಸುಮಾರು ಶೇ. 12 ರಿಂದ ಶೇ. 20 ಕೊಡುಗೆ ನೀಡುತ್ತದೆ.

ಗ್ರೀಸ್ : ಯುರೋಪಿನ ಈ ಐತಿಹಾಸಿಕ ದೇಶದ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆಯೇ ನಿಂತಿದೆ. ಇಲ್ಲಿನ ಐದರಲ್ಲಿ ಒಂದು ಉದ್ಯೋಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೇರಿದ್ದಾಗಿದೆ.

ಮಾಲ್ಡೀವ್ಸ್‌ನಂತಹ ದೇಶಗಳು ಒಂದು ದ್ವೀಪ, ಒಂದು ರೆಸಾರ್ಟ್ ಎಂಬ ನೀತಿಯನ್ನು ಜಾರಿಗೊಳಿಸಿವೆ. ವಿಶಿಷ್ಟ ಕಾರ್ಯತಂತ್ರವನ್ನು ಬಳಸುತ್ತವೆ. ಪ್ರತಿಯೊಂದು ರೆಸಾರ್ಟ್ ಅನ್ನು ಪ್ರತ್ಯೇಕ ದ್ವೀಪದಲ್ಲೇ ನಿರ್ಮಿಸಲಾಗುತ್ತದೆ. ಇದು ಶ್ರೀಮಂತ ಪ್ರವಾಸಿಗರಿಗೆ ಅತ್ಯುನ್ನತ ಮಟ್ಟದ ಗೌಪ್ಯತೆ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತದೆ. ಜೊತೆಗೆ, ಸ್ಥಳೀಯ ಜನಸಂಖ್ಯೆಯಿಂದ ಪ್ರವಾಸಿಗರನ್ನು ಪ್ರತ್ಯೇಕವಾಗಿಡುವುದರಿಂದ ದೇಶದ ಸಂಸ್ಕೃತಿಗೆ ಧಕ್ಕೆಯಾಗದಂತೆ ಪ್ರವಾಸೋದ್ಯಮವನ್ನು ನಿರ್ವಹಿಸಬಹುದು.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಶಾಪವಾದ ಸುರಕ್ಷತೆಯ ಕ್ರಮಗಳು!

ಕೋವಿಡ್ ಬಂದು ಹೋದ ಬಳಿಕ, ಥಾಯ್ಲೆಂಡ್, ಗ್ರೀಸ್ ಮತ್ತು ಕೆರಿಬಿಯನ್ ದೇಶಗಳು ಇಂಥ ನೀತಿಗಳನ್ನು ಅನುಸರಿಸುತ್ತಿವೆ. ಐಟಿ, ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ದೇಶಗಳು ದೀರ್ಘಾವಧಿಯ ವೀಸಾ ನೀಡುತ್ತವೆ. ಪ್ರವಾಸಿಗರು ಕೇವಲ 1-2 ವಾರ ಇರದೆ, ತಿಂಗಳುಗಟ್ಟಲೆ ಆ ದೇಶದಲ್ಲಿಯೇ ಉಳಿದು ಅಲ್ಲಿನ ಸ್ಥಳೀಯ ಹೊಟೇಲ್, ಇಂಟರ್‌ನೆಟ್, ಆಹಾರಕ್ಕೆ ಖರ್ಚು ಮಾಡುವುದರಿಂದ ಆರ್ಥಿಕತೆಗೆ ನಿರಂತರ ಆದಾಯ ಸಿಗುತ್ತದೆ. ಗ್ರೀಸ್ ದೇಶವು ಕೇವಲ ಕಡಲತೀರಗಳನ್ನಷ್ಟೇ ಬಿಂಬಿಸದೆ, ಚಳಿಗಾಲದಲ್ಲಿ ತನ್ನ ಪ್ರಾಚೀನ ಇತಿಹಾಸ, ಮ್ಯೂಸಿಯಂಗಳು ಮತ್ತು ಪುರಾತತ್ವ ತಾಣಗಳ ಪ್ರವಾಸವನ್ನು ಪ್ರಚಾರ ಮಾಡುತ್ತದೆ. ಭಾರತ ಕೂಡ ತನ್ನ ನಾನಾ ರಾಜ್ಯಗಳಲ್ಲಿ ಇನ್ನಷ್ಟು ವಿನೂತನ ಶೈಲಿ, ಸೃಜನಶೀಲತೆಯಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ನೂರಾರು ಅವಕಾಶಗಳು ಕಾದಿವೆ. ರಾಜ್ಯ ಸರಕಾರಗಳು ಇದಕ್ಕಾಗಿ ಮನಸ್ಸು ಮಾಡಬೇಕಾಗಿದೆ. ಒಂದು ಕಡೆ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಸಂಗ್ರಹ, ರಾಜ್ಯಗಳ ಆರ್ಥಿಕಾಭಿವೃದ್ಧಿ ಮತ್ತು ಆ ಮೂಲಕ ದೇಶದ ಇಕಾನಮಿಗೆ ಕೊಡುಗೆಯೂ ಸಿಕ್ಕಂತಾಗುತ್ತದೆ.